ಬೆಳಗಾವಿ: ‘ಇಲ್ಲಿನ ನ್ಯಾಯಾಲಯ ಬಳಿ ಇರುವ ಎಚ್‌ಡಿಎಫ್‌ಸಿ ಬ್ಯಾಂಕಿನ ಎಟಿಎಂ ಕೇಂದ್ರದಲ್ಲಿನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ, ವ್ಯಕ್ತಿಯೊಬ್ಬನನ್ನು ಬಂಧಿಸಿದ್ದೇವೆ. ಆತನಿಂದ ₹5.74 ಲಕ್ಷ ನಗದು, ₹1.56 ಲಕ್ಷ ಮೌಲ್ಯದ 20 ಗ್ರಾಂ ಚಿನ್ನಾಭರಣ ಸೇರಿ ₹7.30 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆದಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್‌ಐಎಸ್ ಪ್ರೋಸಿಗರ ಹೋಲ್ಡಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಂಗ್ರಾಳಿ ಕೆ.ಎಚ್. ಗ್ರಾಮದ ಕೃಷ್ಣಾ ಸುರೇಶ ದೇಸಾಯಿ(23) ಬಂಧಿತ. ನಿತ್ಯ ಬ್ಯಾಂಕಿನಿಂದ ಹಣ ತಂದು, ಈತ ಎಟಿಎಂಗೆ ಹಾಕುತ್ತಿದ್ದ. ಎಟಿಎಂನ ಪಾಸ್‌ವರ್ಡ್ ದುರುಪಯೋಗ ಪಡಿಸಿಕೊಂಡು ನ.30ರಂದು ₹8.65 ಲಕ್ಷ ಕದ್ದಿದ್ದ. ಆ ಹಣದಲ್ಲೇ ಪತ್ನಿಗೆ ಮಂಗಳಸೂತ್ರ ಖರೀದಿಸಿದ್ದ. ಸಿ.ಸಿ.ಟಿ.ವಿ ದೃಶ್ಯಾವಳಿ ಮತ್ತು ವಿವಿಧ ಸುಳಿವು ಆಧರಿಸಿ, ಆತನನ್ನು ಬಂಧಿಸಿದ್ದೇವೆ. ಬ್ಯಾಂಕಿನ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸುತ್ತೇವೆ’ ಎಂದರು.
ಏಳು ಜನರ ಬಂಧನ:
‘ಮಹಾಂತೇಶ ನಗರದ ಮನೆಯಲ್ಲಿ ಡಿ.ಕೆ.ಪ್ರಣೀತ ಎಂಬ ಯುವಕನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ, ಈವರೆಗೆ ಏಳು ಆರೋಪಿಗಳನ್ನು ಬಂಧಿಸಿದ್ದೇವೆ. ಆರಂಭದಲ್ಲಿ ನಿಧಾ ಕಿತ್ತೂರು, ಜಬೀನ್ ಕಿಣೇಕರ, ಹಾಗೂ ಅಮೀರ್ ಕಿತ್ತೂರು ಅವರನ್ನು ಬಂಧಿಸಲಾಗಿತ್ತು. ಈಗ ಹಜರತ್‌ಅಲಿ ಮುಲ್ತಾನಿ, ಅಪ್ಸರ್ ಪಠಾಣ, ಅರ್ಷದ್ ಖುರೇಶಿ ಮತ್ತು ರೇಹಾನ್ ಶಿಕ್ಕಲಗಾರ ಅವರನ್ನು ಬಂಧಿಸಲಾಗಿದೆ’ ಎಂದು ಅವರು ಹೇಳಿದರು.
‘ಪ್ರಣೀತ ಮತ್ತು ನಿಧಾ ರಿಲೇಷನ್‌ಶಿಪ್‌ನಲ್ಲಿದ್ದರು. ವಿವಿಧ ಕಾರಣಕ್ಕೆ ಬೇರ್ಪಟ್ಟಿದ್ದರು. ನ.27ರಂದು ಪ್ರಣೀತ ತಮ್ಮ ಆಪ್ತರಾದ ಸ್ಮಿತಾ ನಡೇಕರ್ ಮನೆಗೆ ಊಟಕ್ಕೆ ಹೋದಾಗ, ನಿಧಾ ನೆನೆದು ಕಣ್ಣೀರು ಹಾಕಿದ್ದರು. ಇಬ್ಬರ ಮಧ್ಯದ ತಂಟೆ ಬಗೆಹರಿಸಲು ಸ್ಮಿತಾ ಅವರು, ನಿಧಾ ಅವರಿಗೆ ಕರೆ ಮಾಡಿ ತಮ್ಮ ಮನೆಗೆ ಕರೆಯಿಸಿದ್ದರು. ಅಲ್ಲಿಗೆ ತಮ್ಮ ಇಬ್ಬರು ಸ್ನೇಹಿತರಾದ ಅಮೀರ್ ಮತ್ತು ಜುಬೇನ್ ಜತೆಗೆ ನಿಧಾ ಬಂದಾಗ, ಪ್ರಣೀತ ಜತೆ ಜಗಳವಾಗಿತ್ತು. ಮೂವರೂ ಸೇರಿಕೊಂಡು ಪ್ರಣೀತ ಮೇಲೆ ಹಲ್ಲೆ ಮಾಡಿದ್ದರು. ಆಗ, ಪ್ರಣೀತ ಕಾಲಿಗೆ ಒಂದು ಗುಂಡು ತಗುಲಿತ್ತು. ಈಗ ಆರೋಪಿಗಳನ್ನು ಬಂಧಿಸಿದ್ದೇವೆ. ಕೃತ್ಯಕ್ಕೆ ಬಳಸಿದ್ದ ಕಂಟ್ರಿ ಪಿಸ್ತೂಲ್, ಎರಡು ಜೀವಂತ ಗುಂಡು ವಶಪಡಿಸಿಕೊಂಡಿದ್ದೇವೆ. ಇವರೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಶೀಘ್ರವೇ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತೇವೆ’ ಎಂದರು.
ಆರೋಪಿಗಳ ಬಂಧನ
ಬೆಳಗಾವಿ ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣದ ಕಂಪೌಂಡ್ ಬಳಿ ನ.18ರಂದು ಸವದತ್ತಿ ತಾಲ್ಲೂಕಿನ ಆಲದಕಟ್ಟಿಯ ನಿಂಗನಗೌಡ ಸಂಗನಗೌಡ ಸಣ್ಣಗೌಡ್ರ (26) ಅವರನ್ನು ಕೊಲೆ ಮಾಡಲಾಗಿತ್ತು. ಮಾರಿಹಾಳದ ಶಿವಾನಂದ ಕರವಿನಕೊಪ್ಪ, ಆಕಾಶ ಮ್ಯಾಗೋಟಿ (21) ಅವರು, ಮೃತನಿಗೆ ಲಿಫ್ಟ್ ಕೊಡುವುದಾಗಿ ಹೇಳಿ ಮದ್ಯ ಕುಡಿದಿದ್ದರು. ಮದ್ಯದ ಬಿಲ್ ಕೊಡುವ ವಿಚಾರವಾಗಿ ನಡೆದ ಜಗಳದಿಂದ ಕೊಲೆ ನಡೆದಿತ್ತು. ತಾಂತ್ರಿಕ ಸಾಕ್ಷ್ಯಗಳನ್ನು ಪರಿಗಣಿಸಿ, ಇಬ್ಬರನ್ನೂ ಬಂಧಿಸಿದ್ದೇವೆ. ಕೊಲೆಗೈದ ಇಬ್ಬರು ಆರೋಪಿಗಳು ಬೇರೆ ಬೇರೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಗಳಿವೆ. ಆ ಬಗ್ಗೆಯೂ ತನಿಖೆ ನಡೆದಿದೆ’ ಎಂದು ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದರು.
ಒತ್ತಡಕ್ಕೆ ಮಣಿದಿಲ್ಲ:
‘ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆದಿದೆ. ತನಿಖೆಯ ಎಲ್ಲ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ದೋಷಾರೋಪ ಪಟ್ಟಿಯಲ್ಲಿ ದಾಖಲಿಸಿದ್ದೇವೆ. ಪ್ರಕರಣದ ತನಿಖೆ ಸರಿಯಾಗಿ ಸಾಗುತ್ತಿದೆ. ಯಾವುದೇ ಒತ್ತಡಕ್ಕೆ ಮಣಿದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ನಗರದಲ್ಲಿ ಹೆಚ್ಚುತ್ತಿರುವ ಸಂಚಾರದಟ್ಟಣೆ ನೀಗಿಸಲು ಕ್ರಮ ವಹಿಸುತ್ತೇವೆ’ ಎಂದರು.
ನಗರ ಪೊಲೀಸ್ ಉಪ ಆಯುಕ್ತರಾದ ರೋಹನ್ ಜಗದೀಶ, ನಿರಂಜನ್ ರಾಜೇ ಅರಸ್ ಇದ್ದರು.