Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

60 ಲಕ್ಷ ಜನರಿಗೆ ಧೋಖಾ!

Monday, 24.09.2018, 3:05 AM       No Comments

| ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಬೆಳಕಿಗೆ ಬಂದಿದ್ದ ‘ಫ್ಯೂಚರ್ ಮೇಕರ್ ಲೈಫ್​ಕೇರ್’ ಚೈನ್​ಲಿಂಕ್ ದಂಧೆಯ ವಂಚನೆ ಜಾಲ ಅಗೆದಷ್ಟೂ ಆಳಕ್ಕೆ ವಿಸ್ತರಿಸುತ್ತಿದೆ. ಪ್ರಕರಣ ಬೆಳಕಿಗೆ ಬಂದಾಗ ಅಂದಾಜಿಸಲಾಗಿದ್ದ 1200 ಕೋಟಿ ರೂ.ವಂಚನೆ ಮೊತ್ತ ಇದೀಗ 3 ಸಾವಿರ ಕೋಟಿ ರೂ. ದಾಟಿದ್ದು, ಇದು ದೇಶದ ಅತಿ ದೊಡ್ಡ ಮಲ್ಟಿ ಲೆವೆಲ್ ಮಾರ್ಕೆಟಿಂಗ್ ವಂಚನೆ ಪ್ರಕರಣ ಎಂಬ ಕುಖ್ಯಾತಿ ಪಡೆದುಕೊಂಡಿದೆ. ತನಿಖೆ ತೀವ್ರಗೊಂಡಂತೆ ಸುಮಾರು 60 ಲಕ್ಷ ಜನರು ಹಣ ಕಳೆದುಕೊಂಡಿರು ವುದನ್ನು ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ ವಿ.ಸಿ. ಸಜ್ಜನರ್ ನೇತೃತ್ವದ ತೆಲಂಗಾಣ ಸೈಬರಾ ಬಾದ್ ಪೊಲೀಸ್ ತಂಡ ಖಚಿತಪಡಿಸಿದೆ. ಹರಿಯಾಣ ಮೂಲದ ಫ್ಯೂಚರ್ ಮೇಕರ್ ಲೈಫ್ ಕೇರ್ ಗ್ಲೋಬಲ್ ಮಾರ್ಕೆಟಿಂಗ್ ಪ್ರೖೆ.ಲಿ. ಕಂಪನಿಯ ಅಧ್ಯಕ್ಷ, ಮುಖ್ಯ ವ್ಯವಸ್ಥಾಪಕ ನಿರ್ದೇಶಕ ರಾಧೆ ಶ್ಯಾಂ ಮತ್ತು ನಿರ್ದೇಶಕ ಸುರೇಂದ್ರ ಸಿಂಗ್​ರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಈ ವೇಳೆ ಕರ್ನಾಟಕ, ತೆಲಂಗಾಣ, ದೆಹಲಿ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ 60 ಲಕ್ಷ ಜನರಿಂದ 3 ಸಾವಿರ ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆಂದು ಸೈಬರಾಬಾದ್ ಕಮಿಷನರ್ ವಿ.ಸಿ.ಸಜ್ಜನರ್ ವಿಜಯವಾಣಿಗೆ ತಿಳಿಸಿದ್ದಾರೆ.

ಟಾರ್ಗೆಟ್ ಯಾರು?: ಕಮಿಷನ್ ಆಸೆಗೆ ಬೀಳುವ ಕಾರ್ವಿುಕರು, ಸರ್ಕಾರಿ, ಖಾಸಗಿ ನೌಕರರು, ಗೃಹಿಣಿಯರು, ನಿರುದ್ಯೋಗಿಗಳು, ನಿವೃತ್ತ ಸರ್ಕಾರಿ ನೌಕರರೇ ಈ ವಂಚಕರ ಟಾರ್ಗೆಟ್. 7,500 ರೂ. ಪಾವತಿಸಿ ಸದಸ್ಯತ್ವ ಪಡೆಯುವ ಇವರು ಮೊದಲು ಇಬ್ಬರನ್ನು ಸದಸ್ಯರನ್ನಾಗಿಸಿ 500 ರೂ. ಕಮಿಷನ್ ಪಡೆಯುತ್ತಿದ್ದರು. ಕಮಿಷನ್ ಸಿಕ್ಕ ಖುಷಿಗೆ ಇನ್ನಷ್ಟು ಜನರನ್ನು ಸದಸ್ಯತ್ವಕ್ಕೆ ನೋಂದಣಿ ಮಾಡಿಸುತ್ತಿದ್ದರು. ಆರಂಭದಲ್ಲಿ ಹಣ ಕೊಡುತ್ತಿದ್ದ ಕಂಪನಿಯವರು ಸದಸ್ಯತ್ವ ಹೆಚ್ಚಿದಂತೆ ಕೈಕೊಡುತ್ತಿದ್ದರು.

200 ಕೋಟಿ ರೂ. ಜಪ್ತಿ

ಎಫ್​ಎಂಎಲ್​ಸಿ ಕಂಪನಿ ಕಚೇರಿಗಳ ಮೇಲೆ ದಾಳಿ ನಡೆಸಿದ ಪೊಲೀಸರು ಬಳಿಕ ವಿವಿಧ ಬ್ಯಾಂಕ್ ಖಾತೆಗಳಿಂದ ಈವರೆಗೆ 200 ಕೋಟಿ ರೂ. ಜಪ್ತಿ ಮಾಡಿದ್ದಾರೆ. ಮನೆ, ಕಚೇರಿ, ಗೋದಾಮಿನ ಪರಿಶೀಲನೆ ನಡೆಸಿ 4 ಲ್ಯಾಪ್​ಟಾಪ್, 6 ಮೊಬೈಲ್, 1 ರಿವಾಲ್ವರ್, 10 ಗುಂಡುಗಳು, 3 ದುಬಾರಿ ಕಾರು ಮತ್ತು 60 ಲಕ್ಷ ರೂ. ಜಪ್ತಿ ಮಾಡಿದ್ದಾರೆ.

ಪ್ರಕರಣ ಪತ್ತೆಯಲ್ಲಿ ಕನ್ನಡಿಗನ ಪಾತ್ರ

ಈ ವಂಚನೆ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಕರ್ನಾಟಕದ ಐಪಿಎಸ್ ಅಧಿಕಾರಿ ಪಾತ್ರ ಪ್ರಮುಖವಾಗಿದೆ. ಮೂಲತಃ ಕರ್ನಾಟಕದ ವಿ.ಸಿ.ಸಜ್ಜನರ್, 1996ರಲ್ಲಿ ಆಂಧ್ರಪ್ರದೇಶದ ಐಪಿಎಸ್ ಕೇಡರ್ ಆಗಿದ್ದು, ಸದ್ಯ ಸೈಬರಾಬಾದ್ ಪೊಲೀಸ್ ಕಮಿಷನರ್ ಆಗಿದ್ದಾರೆ. ಎಫ್​ಎಂಎಲ್​ಸಿ ಕಂಪನಿಯಿಂದ ಕರ್ನಾಟಕದ ಜನರು ಮೋಸಕ್ಕೆ ಒಳಗಾಗಿರುವುದು ತಿಳಿದು ಎಚ್ಚೆತ್ತುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಲಕ್ಷದಿಂದ 3 ಸಾವಿರ ಕೋಟಿವರೆಗೆ…

ಹರಿಯಾಣ ಮೂಲದವನಾದ ರಾಧೆ ಶ್ಯಾಂ ಗುಡ್​ವೇ, ರೈಟ್ ಕಾನ್ಸೆಪ್ಟ್ ಮಾರ್ಕೆಟಿಂಗ್ ಸೇರಿ ವಿವಿಧ ವಂಚನೆ ಪ್ರಕರಣಗಳಲ್ಲಿ ಸಿಲುಕಿರುವ ಚೈನ್​ಲಿಂಕ್ ಕಂಪನಿಗಳಲ್ಲಿ ಕೆಲಸ ಮಾಡಿದ್ದ. 6 ವರ್ಷಗಳ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿ ಹರಿಯಾಣದ ಹಿಸ್ಸಾರ್ ಎಂಬಲ್ಲಿ ಸಣ್ಣ ಕೊಠಡಿಯಲ್ಲಿ ಕಚೇರಿ ತೆರೆದಿದ್ದ. ದೆಹಲಿಯಲ್ಲಿ ಎಫ್​ಎಂಎಲ್​ಸಿ ಕಂಪನಿ ನೋಂದಣಿ ಮಾಡಿಸಿ ತಾನೇ ಅಧ್ಯಕ್ಷ ಮತ್ತು ಮುಖ್ಯ ವ್ಯವಸ್ಥಾಪಕ ನಿರ್ದೇಶಕನಾಗಿದ್ದ. ಜತೆಗೆ ವ್ಯವಸ್ಥಾಪಕನಾಗಿ ಬನ್ಸಿಲಾಲ್, ನಿರ್ದೇಶಕರಾಗಿ ಸುರೇಂದ್ರ ಸಿಂಗ್, ಮನೋಜ್ ಮತ್ತು ಸಬ್ಬಿರ್ ಸಿಂಗ್ ಎಂಬುವರನ್ನು ನೇಮಕ ಮಾಡಿಕೊಂಡಿದ್ದ. ಆನ್​ಲೈನ್, ಸಾಮಾಜಿಕ ಜಾಲತಾಣದಲ್ಲಿ ಮಲ್ಟಿಲೆವೆಲ್ ಮಾರ್ಕೆಟಿಂಗ್ ಕಂಪನಿಯಾಗಿ ಎಫ್​ಎಂಎಲ್​ಸಿ ಜಾಹೀರಾತು ನೀಡಿ ಜನರನ್ನು ಆಕರ್ಷಿಸುತ್ತಿದ್ದ. ಸದ್ಯ ರಾಧೆ ಶ್ಯಾಂ ಮತ್ತು ಸುರೇಂದ್ರ ಸಿಂಗ್ ಪೊಲೀಸರಿಗೆ ಸಿಕ್ಕಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ.

ಹೇಗೆ ವಂಚನೆ?

ವಂಚಕರು ಮೊದಲು ಜನರನ್ನು ಆಕರ್ಷಿಸಲು ಗಿಫ್ಟ್ ಆಫರ್ ನೀಡುತ್ತಿದ್ದರು. 7,500 ರೂ. ಪಾವತಿಸಿ ಸದಸ್ಯತ್ವ ಪಡೆದವರಿಗೆ 2,500 ರೂ.ಕಡಿತ ಮಾಡಿಕೊಂಡು ಉಳಿದ ಹಣಕ್ಕೆ ಬಟ್ಟೆ, ಔಷಧ ನೀಡುತ್ತಿದ್ದರು. ಸದಸ್ಯತ್ವ ಪಡೆದ ವ್ಯಕ್ತಿ, ಕನಿಷ್ಠ ಇಬ್ಬರನ್ನು ನೋಂದಣಿ ಮಾಡಿಸಿದರೆ 500 ರೂ.ಕಮಿಷನ್ ಕೊಡುತ್ತಿದ್ದರು. ಆ ಇಬ್ಬರು ತಲಾ ಇಬ್ಬರನ್ನು ನೋಂದಣಿ ಮಾಡಿಸಿದರೆ ಕಮಿಷನ್ ದ್ವಿಗುಣ ಆಗುತ್ತದೆ. ಇದೇ ರೀತಿ ಸದಸ್ಯತ್ವ ಮುಂದುವರಿಸಿದಲ್ಲಿ ಮುಂದೊಂದು ದಿನ ತಿಂಗಳಿಗೆ 60 ಸಾವಿರ ರೂ.ಸಿಗಲಿದೆ. ಒಟ್ಟು 10 ಹಂತಗಳಲ್ಲಿ ಸದಸ್ಯತ್ವ ಮುಂದುವರಿಸಿದರೆ ಹಂತ ಹಂತಕ್ಕೂ ಕಮಿಷನ್ ದ್ವಿಗುಣವಾಗಿ ಕೊನೆಯ ಹಂತದಲ್ಲಿ ತಿಂಗಳಿಗೆ 1 ಕೋಟಿ ರೂ. ಕಮಿಷನ್ ಸಿಗುತ್ತದೆ ಎಂದು ಆಮಿಷವೊಡ್ಡುತ್ತಿದ್ದರು. ಇದನ್ನು ನಂಬಿ ಜನ ಹಣ ಹೂಡಿಕೆ ಮಾಡುತ್ತಿದ್ದರು.

ವಿಜಯವಾಣಿ ಕಳಕಳಿ

  • ಅಧಿಕ ಬಡ್ಡಿ, ಆಕರ್ಷಕ ಕಮಿಷನ್ ಆಸೆಗೆ ಬಿದ್ದು ಮೋಸಹೋಗಬೇಡಿ
  • ರಾತ್ರೋರಾತ್ರಿ ಶ್ರೀಮಂತರಾಗಬೇಕೆಂಬ ನಿಮ್ಮ ಕನಸೇ ವಂಚಕರಿಗೆ ಬಂಡವಾಳ
  • ಹೂಡಿಕೆಗೂ ಮೊದಲು ಕಂಪನಿ ಕುರಿತ ಅಧಿಕೃತ ಮಾಹಿತಿ ಕಲೆ ಹಾಕಿ
  • ಈಗಾಗಲೇ ಮೋಸ ಹೋಗಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಕೊಡಿ
  • ಆಮಿಷ ತೋರುವವರು ಕಂಡುಬಂದರೂ ಪೊಲೀಸರಿಗೆ ಮಾಹಿತಿ ನೀಡಿ

 

ಇಂಥ ವಂಚಕ ಕಂಪನಿಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರ ಬೇಕು. ಮೋಸ ಹೋಗಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಕೊಡಬೇಕು.

| ವಿ.ಸಿ.ಸಜ್ಜನರ್, ಕಮಿಷನರ್, ಸೈಬರಾಬಾದ್

 

ಮೋಜು ಮಸ್ತಿ

ಎಫ್​ಎಂಎಲ್​ಸಿ ಸಿಎಂಡಿ ರಾಧೆ ಶ್ಯಾಂ ಮತ್ತು ಎಂ. ಬನ್ಸಿಲಾಲ್ ಜನರಿಗೆ ವಂಚಿಸಿದ್ದ ಹಣದಲ್ಲಿ ದುಬಾರಿ ಬೆಲೆಯ ಎಸ್​ಯುುವಿ, ಫಾರ್ಚ್ಯೂನರ್, ಫೋರ್ಡ್ ಎಂಡೆವೋರ್, ಜಾಗ್ವಾರ್ ಕಾರುಗಳನ್ನು ಖರೀದಿಸಿ ಓಡಾಡುತ್ತಿದ್ದರು. ಹೆಚ್ಚಾಗಿ ವಿದೇಶ ಪ್ರವಾಸದಲ್ಲೇ ಕಾಲ ಕಳೆಯುತ್ತಿದ್ದರು.

Leave a Reply

Your email address will not be published. Required fields are marked *

Back To Top