ಮದುವಣಗಿತ್ತಿಯಂತೆ ಚಂಡರಕಿ ಸಿಂಗಾರ

ಯಾದಗಿರಿ: ಕಳೆದೊಂದು ದಶಕದ ಹಿಂದೆ ಸಿಎಂ ಆಗಿದ್ದ ವೇಳೆ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯದಿಂದ ದೇಶಾದ್ಯಂತ ಸುದ್ದಿಯಲ್ಲಿದ್ದ ಎಚ್.ಡಿ. ಕುಮಾರಸ್ವಾಮಿ ಇದೀಗ ಮತ್ತೊಮ್ಮೆ ಸಿಎಂ. ತಮಗೆ ಕ್ಲೀನ್ ಇಮೇಜ್ ತಂದುಕೊಟ್ಟಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ರಾಜ್ಯದ ಕೊನೆಯ ಜಿಲ್ಲೆ ಯಾದಗಿರಿಯಿಂದ ಆರಂಭಿಸುತ್ತಿರುವುದು ಜನರಲ್ಲಿ ಸಂತಸ ಮೂಡಿಸಿದೆ.

ಗಡಿ ಭಾಗದ ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ 21ರಂದು ವಾಸ್ತವ್ಯ ಹೂಡುತ್ತಿರುವುದರಿಂದ ಮದುವಣಗಿತ್ತಿಯಂತೆ ಸಿಂಗಾರಗೊಳಿಸಲಾಗುತ್ತಿದ್ದು, ಕಣ್ಣು ಹಾಯಿಸಿದಲೆಲ್ಲ ಭರದಿಂದ ಸಾಗುತ್ತಿರುವ ಕಾಮಗಾರಿಗಳೇ ಕಾಣಿಸುತ್ತಿವೆ.

ಸಿಎಂ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಹೈಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 25 ಲಕ್ಷ, ಸಮಾಜ ಕಲ್ಯಾಣ ಇಲಾಖೆಯಿಂದ 1.50 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಗ್ರಾಮದಲ್ಲಿ ಚರಂಡಿ, ರಸ್ತೆ ಸೇರಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಕೆಲಸ ಜೋರಾಗಿ ನಡೆದಿದ್ದು, ತಮ್ಮೂರಿನ ಅದೃಷ್ಟ ಖುಲಾಯಿಸಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಕುಮಾರಸ್ವಾಮಿ ರಾತ್ರಿ ಠಿಕಾಣಿ ಹೂಡುವ ಸಕರ್ಾರಿ ಶಾಲೆ ಸುಣ್ಣಬಣ್ಣ ಮತ್ತು ತಳಿರು ತೋರಣಗಳಿಂದ ಸಿಂಗಾರಗೊಳ್ಳುತ್ತಿದೆ. ನಾಡ ದೊರೆಗೆ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ಹಮ್ಮಿಕೊಳ್ಳಲಾಗಿದೆ. ಬಾಜಾ, ಭಜಂತ್ರಿ, ಡೊಳ್ಳು ಮೇಳಗಳ ಕಲರವ ಕೇಳಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಚಂಡರಕಿ ಸರ್ಕಾರಿ ಶಾಲೆ ಶತಮಾನ ಪೂರೈಸಿದ್ದು, ಮೂರು ವರ್ಷದ ನಂತರ ಸುಣ್ಣಬಣ್ಣ ಕಂಡಿದೆ. ಕುಮಾರಸ್ವಾಮಿ ಅವರಿಗಾಗಿಯೇ ಪ್ರತ್ಯೇಕ ಶೌಚಗೃಹ ನಿರ್ಮಿಸಲಾಗುತ್ತಿದ್ದು, ರಸ್ತೆಯಲ್ಲಿ ಆಳೆತ್ತರ ಬಿದ್ದಿದ್ದ ತಗ್ಗುದಿನ್ನೆಗಳನ್ನು ಮುಚ್ಚಲಾಗಿದೆ. ರಸ್ತೆಗಳು ಫುಲ್ ಡಾಂಬಾರ್ ಮತ್ತು ಸಿಮೆಂಟ್ನಿಂದ ಫಳಪಳ ಹೊಳೆಯುತ್ತಿದ್ದು, ಇಡೀ ಗ್ರಾಮ ಚಕಾಚಕ್ ಎನ್ನುತ್ತಿದೆ.

21ರಂದು ಬೆಳಗ್ಗಿನ ಜಾವ 3.30ಕ್ಕೆ ಕೆಕೆ ಎಕ್ಸ್ಪ್ರೆಸ್ ರೈಲಿನ ಮೂಲಕ ಸಿಎಂ ಕುಮಾರಸ್ವಾಮಿ ಯಾದಗಿರಿಗೆ ಆಗಮಿಸಲಿದ್ದು, 7.50ಕ್ಕೆ ರಸ್ತೆ ಮೂಲಕ ಚಂಡರಕಿಗೆ ತೆರಳಲಿದ್ದಾರೆ. ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಜನತಾದರ್ಶನ ನಡೆಸಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸುತ್ತಿದೆ.

ಒಟ್ಟಾರೆ, ಕುಮಾರಸ್ವಾಮಿ ಆಗಮನದಿಂದ ಹಿಂದುಳಿದ ಯಾದಗಿರಿ ಜಿಲ್ಲೆಗೆ ಬಂಪರ್ ಗಿಫ್ಟ್ ಸಿಗಲಿದೆಯೇ ಎಂಬ ಜನರ ನಿರೀಕ್ಷೆಗೆ 21ರಂದೇ ಉತ್ತರ ಸಿಗಲಿದೆ.