ಮೆಗಾ ಡೇರಿ ಉದ್ಘಾಟಿಸದೆ ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರು ಏರಿದ ಸಿಎಂ

ಚಿಕ್ಕಬಳ್ಳಾಪುರ: ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸುತ್ತಿದ್ದಂತೆ ಜಿಲ್ಲೆಯಲ್ಲಿ ಮೆಗಾ ಡೇರಿ ಉದ್ಘಾಟನೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ತೆರಳದೆ ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲಿ ತೆರಳಿದರು.

ಜಿಲ್ಲೆಯ ನಂದಿ ಕ್ರಾಸ್​ ಬಳಿ ಸುಮಾರು 160 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣ ಮಾಡಲಾಗಿದೆ. ಇಂದು ಡೇರಿಯ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಅಷ್ಟರೊಳಗೆ ಚುನಾವಣಾ ದಿನಾಂಕ ಪ್ರಕಟವಾಗದ ಹಿನ್ನೆಲೆಯಲ್ಲಿ, ತಕ್ಷಣದಿಂದ ನೀತಿ ಸಂಹಿತೆ ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಮೆಗಾ ಡೇರಿ ಉದ್ಘಾಟನೆ ಮಾಡಲಿಲ್ಲ. ಡೇರಿಯನ್ನು ವೀಕ್ಷಿಸಿ ಅಲ್ಲಿಂದ ತೆರಳಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಬಿಜೆಪಿಯವರಿಗೆ ಸೋಲು ಎಂಬುದು ಖಾತ್ರಿಯಾಗಿದೆ. ಹಾಗಾಗಿ ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ. ನಾವು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇವೆ. ಜೆಡಿಎಸ್​ನವರೂ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ. ಆದರೆ, ಜೆಡಿಎಸ್​ನವರು ಬಿಜೆಪಿಯೊಂದಿಗೆ ಸಂಬಂಧವಿರಿಸಿಕೊಂಡಿದ್ದಾರೆ. ಈ ಬಾರಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *