ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗೆ ಚಾಲನೆ

ಬೆಂಗಳೂರು: ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಅಡಿಯಲ್ಲಿ ರಾಜ್ಯದ 30 ಲಕ್ಷ ಫಲಾನುಭವಿಗಳಿಗೆ ಅನಿಲ ಸಂಪರ್ಕ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬ್ಯಾಂಕ್ವೆಟ್ ಹಾಲ್​ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮೊದಲ ಹಂತದಲ್ಲಿ 10 ಲಕ್ಷ, 2ನೇ ಹಂತದಲ್ಲಿ ಇನ್ನುಳಿದ ಫಲಾನುಭವಿಗಳಿಗೆ ಈ ಯೋಜನೆ ಲಭ್ಯವಾಗಲಿದೆ ಎಂದರು.

ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಕೇವಲ 1600 ರೂ. ನೆರವು ನೀಡಿ ಅನಿಲ ಸಂಪರ್ಕ ಕಲ್ಪಿಸಿಕೊಡಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ಗ್ಯಾಸ್ ಸ್ಟವ್, ಭರ್ತಿಯಾದ 2 ಸಿಲಿಂಡರ್​ಗಳು ಸೇರಿ 4254 ರೂ ವೆಚ್ಚ ಮಾಡುತ್ತಿದೆ ಎಂದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಲಾಭ ನಾಡಿನ ಶೇ.90 ಜನರಿಗೆ ಒಂದಿಲ್ಲೊಂದು ರೂಪದಲ್ಲಿ ತಲುಪಿದ್ದು, ಈಗ ಅನಿಲ ಭಾಗ್ಯವೂ ಸೇರಿದೆ. ಈ ಯೋಜನೆಯಿಂದ ಒಲೆಯಲ್ಲಿ ಹೊಗೆ ನಡುವೆ ಅಡುಗೆ ಮಾಡುವ ಸಂಕಷ್ಟ ಮಹಿಳೆಯರಿಗೆ ತಪ್ಪಿದಂತಾಗಿದೆ ಎಂದರು.

ನಗರಾಭಿವೃದ್ಧಿ ಸಚಿವ ಆರ್.ರೋಷನ್​ಬೇಗ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಮೇಯರ್ ಸಂಪತ್​ರಾಜ್, ಶಾಸಕರಾದ ರಾಜಣ್ಣ ಮತ್ತಿತರರು ಹಾಜರಿದ್ದರು.

ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದ್ದೆ ಅಕ್ಕಿ ಎಂದು ಬೊಬ್ಬೆ ಹೊಡೆಯಲಾಗುತ್ತಿದೆ. ಆದರೆ, ಇವರ ಸರ್ಕಾರವೇ ಇರುವ ಗುಜರಾತ್, ರಾಜಸ್ಥಾನ, ಉತ್ತರಪ್ರದೇಶ, ಹರಿಯಾಣ, ಮಧ್ಯಪ್ರದೇಶ ರಾಜ್ಯಗಳಲ್ಲಿ ಅನ್ನಭಾಗ್ಯ ಯೋಜನೆ ಯಾಕೆ ಜಾರಿಯಾಗಿಲ್ಲ ಎಂದು ಪ್ರಶ್ನಿಸಿ ಮೋದಿ ಹೆಸರು ಹೇಳದೆ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 1.40 ಕೋಟಿ ಬಿಪಿಎಲ್ ಕಾರ್ಡ್​ದಾರರಿಗೆ ಅನ್ನ ಭಾಗ್ಯ ಯೋಜನೆ ತಲುಪಿದೆ ಎಂದರು. ಆಹಾರ ಸಚಿವ ಯು.ಟಿ.ಖಾದರ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಕಟ್ಟಡ ಕಾರ್ವಿುಕರು ಸೌಲಭ್ಯ ಪಡೆದುಕೊಳ್ಳಬಹುದು ಎಂದರು.

Leave a Reply

Your email address will not be published. Required fields are marked *