ಬೆಳಗಾವಿ: ಸಿಎಂ ಪರಿಹಾರ ನಿಗೆ 34 ಲಕ್ಷ ರೂ.

ಬೆಳಗಾವಿ: ರಾಜ್ಯದಲ್ಲಿ ಪ್ರವಾಹದಿಂದ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ. ಸಂತ್ರಸ್ತರಿಗೆ ನೆರವಾಗುವ ದೃಷ್ಟಿಯಿಂದ ಕನ್ನಡ ಸಾಹಿತ್ಯ ಪರಿಷತ್ ಮುಖ್ಯ ಮಂತ್ರಿಗಳ ಪರಿಹಾರ ನಿಗೆ 34 ಲಕ್ಷ ರೂ. ನೆರವು ನೀಡಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ ತಿಳಿಸಿದ್ದಾರೆ.

ಇಲ್ಲಿನ ಕನ್ನಡ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವಾಹದಿಂದ ರಾಜ್ಯದ 22 ಜಿಲ್ಲೆ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅಪಾರ ಹಾನಿಯಾಗಿದೆ. ಸಂತ್ರಸ್ತರಿಗೆ ನೆರವಾಗಲು ಕನ್ನಡ ಸಾಹಿತ್ಯ ಪರಿಷತ್‌ನಿಂದ 30 ಲಕ್ಷ ರೂ.ನೀಡುತ್ತಿದ್ದು, ಪರಿಷತ್‌ನ ಎಲ್ಲ ಜಿಲ್ಲೆಗಳ ಪದಾಕಾರಿಗಳು ಸೇರಿ 4 ಲಕ್ಷ ರೂ. ಕೊಡುಗೆ ನೀಡಿದ್ದಾರೆ. ವೈಯಕ್ತಿಕವಾಗಿ ನಾನು 20 ಸಾವಿರ ರೂ. ನೀಡುತ್ತಿದ್ದೇನೆ. ಎಲ್ಲ ಸೇರಿಸಿ ಶೀಘ್ರ ಮುಖ್ಯಮಂತ್ರಿಗಳ ಪರಿಹಾರ ನಿಗೆ ನೀಡಲಾಗುವುದು ಎಂದರು.

ಕನ್ನಡ ಸಾಹಿತ್ಯ ಪರಿಷತ್‌ನ 105 ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಗೆ 30 ಲಕ್ಷ ರೂ.ನೀಡಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್‌ಗೆ ಸರ್ಕಾರ 3.5 ಕೋಟಿ ರೂ.ನೀಡಿದೆ. ಕನ್ನಡ ಭವನ ನಿರ್ಮಾಣಕ್ಕೆ ಅಪೆಕ್ಸ್ ಬ್ಯಾಂಕ್‌ನವರು 2 ಕೋಟಿ ರೂ. ನೀಡಿದ್ದಾರೆ. ವಿವಿಧ ಸಂಘ-ಸಂಸ್ಥೆಗಳು ಕನ್ನಡ ಸಾಹಿತ್ಯ ಪರಿಷತ್‌ಗೆ ನೆರವು ನೀಡಿದ್ದಾರೆ ಎಂದರು.

10 ವರ್ಷಗಳ ಹಿಂದೆ ಪರಿಷತ್‌ನ ಸಿಬ್ಬಂದಿಗೆ ಸಂಬಳ ನೀಡಲು ಹಣ ಇರಲಿಲ್ಲ. ನಂತರ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಕನ್ನಡ ಸಾಹಿತ್ಯ ಪರಿಷತ್‌ಗೆ ಹೆಚ್ಚಿನ ಅನುದಾನ ನೀಡಿದರು. ನಂತರ ಎಲ್ಲ ಮುಖ್ಯಮಂತ್ರಿಗಳು ಇದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಸದ್ಯಕ್ಕೆ ಪರಿಷತ್‌ಗೆ ಅನುದಾನದ ಕೊರತೆ ಇಲ್ಲ ಎಂದರು.

ಕನ್ನಡದ 51 ಹಿರಿಯ ಸಾಹಿತಿಗಳ ಕವನಗಳನ್ನು ಈಗಾಗಲೇ ನೇಪಾಳಿ ಭಾಷೆಗೆ ಭಾಷಾಂತರಿಸಿ ಭಾರತ ಶಾಶ್ವತ ಆವಾಜ್ ಹೆಸರಲ್ಲಿ ಪ್ರಕಟಿಸಲಾಗಿದೆ. ಉಪರಾಷ್ಟ್ರಪತಿ ಅವರು ಈ ಕವನ ಸಂಕಲನ ಬಿಡುಗಡೆ ಮಾಡಿದ್ದಾರೆ. ನೇಪಾಳಿ ಸಾಹಿತಿಗಳ 50 ಕವನಗಳನ್ನು ಕನ್ನಡಕ್ಕೆ ಅನುವಾದಿಸಿ ಮುದ್ರಿಸಲಾಗಿದೆ. ಶೀಘ್ರದಲ್ಲಿ ಈ ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಲಿದೆ ಎಂದರು.

ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಪ್ರೊ. ಚಂದ್ರಶೇಖರ ಕಂಬಾರ ಹೆಸರಲ್ಲಿ ನಿರ್ಮಿಸುತ್ತಿರುವ ಕನ್ನಡ ಭವನ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಅಕ್ಟೋಬರ್ ಅಂತ್ಯದವರೆಗೆ ಉದ್ಘಾಟನೆಗೆ ಸಿದ್ಧಗೊಳ್ಳಲಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ ಚಂದ್ರಶೇಖರ ಕಂಬಾರ ಅವರನ್ನು ಆಹ್ವಾನಿಸಲಾಗುವುದು ಎಂದರು.

ಕನ್ನಡ ಭವನ ನಿರ್ಮಾಣದಲ್ಲಿ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ರಾಜ್ಯದ ವಿವಿಧೆಡೆ ಕನ್ನಡ ಭವನ ನಿರ್ಮಾಣಗೊಳ್ಳುತ್ತಿವೆ ಎಂದು ತಿಳಿಸಿದರು.

ಬೆಳಗಾವಿಯ ವಡಗಾವಿಯಲ್ಲಿರುವ ಪಾಲಿಕೆಗೆ ಸೇರಿದ ಕನ್ನಡ ಭವನವನ್ನು ಕನ್ನಡ ಸಾಹಿತ್ಯ ಪರಿಷತ್‌ಗೆ ಹಸ್ತಾಂತರಿಸುವಂತೆ ಮನವಿ ಮಾಡಲಾಗುವುದು. ಈ ಬಗ್ಗೆ ಪಾಲಿಕೆ ಆಯುಕ್ತರು ಹಾಗೂ ಪ್ರಾದೇಶಿಕ ಆಯುಕ್ತರೊಂದಿಗೆ ಚರ್ಚಿಸಲಾಗುವುದು. ಈ ಬಗ್ಗೆ ಚರ್ಚಿಸಲು ಮುಂದಿನ ಬಾರಿ ಬೆಳಗಾವಿಗೆ ಬರುತ್ತೇನೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್, ತಾಲೂಕು ಅಧ್ಯಕ್ಷ ಬಸವರಾಜ ಸಸಾಲಟ್ಟಿ, ಯ.ರು.ಪಾಟೀಲ, ಜ್ಯೋತಿ ಬದಾಮಿ, ಸುಲಭಾ ಹಾವನೂರ ಮತ್ತು ಇತರರು ಇದ್ದರು.
ಬೆಳಗಾವಿ ಜಿಲ್ಲಾ ಕಸಾಪ ಘಟಕದಿಂದ 10 ಸಾವಿರ ರೂ.

ಪ್ರವಾಹ ಪೀಡಿತರಿಗೆ ನೆರವಾಗುವ ಉದ್ದೇಶದಿಂದ ಮುಖ್ಯಮಂತ್ರಿಗಳ ಪರಿಹಾರ ನಿಗೆ ನೀಡಲು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಪದಾಕಾರಿಗಳು 10 ಸಾವಿರ ರೂ. ಕೊಡುಗೆ ನೀಡಿದ್ದು, ಈ ಚೆಕ್ ಅನ್ನು ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ ಅವರು ಡಾ.ಮನು ಬಳಿಗಾರ ಅವರಿಗೆ ಹಸ್ತಾಂತರಿಸಿದರು.

Leave a Reply

Your email address will not be published. Required fields are marked *