ಬಿಜೆಪಿ ಶಾಸಕರನ್ನು ಸಂಪರ್ಕಿಸಿದ್ದಾರೆ ಎಚ್ಡಿಕೆ

ದೆಹಲಿ: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಕಲಬುರಗಿಯ ಒಬ್ಬ ಶಾಸಕನನ್ನು ಸಂಪರ್ಕಿಸಿ ಮಂತ್ರಿ ಸ್ಥಾನ ನೀಡುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ಶಾಸಕರ ಸಭೆಯ ನಂತರ ಮಾತನಾಡಿರುವ ಬಿಎಸ್​ವೈ, ” 104 ಸ್ಥಾನಗಳನ್ನು ಗಳಿಸಿರುವ ನಾವು ವಿರೋಧ ಪಕ್ಷದಲ್ಲಿರಲು ಸಿದ್ಧವಿದ್ದೇವೆ. ಆದರೆ, ಕಾಂಗ್ರೆಸ್​ ಜೆಡಿಎಸ್​ನ ಮೈತ್ರಿ ಸರ್ಕಾರ ಸೂಕ್ತ ರೀತಿಯಲ್ಲಿ ಆಡಳಿತ ನಡೆಸುತ್ತಿಲ್ಲ. ಯಾವುದೇ ಸಚಿವರು ಬರಗಾಲ, ಅಭಿವೃದ್ಧಿ ಕಡೆ ದೃಷ್ಟಿ ಹಾಯಿಸಿಲ್ಲ. ಸರ್ಕಾರದಲ್ಲಿ ಒಮ್ಮತವಿಲ್ಲ. ಸ್ವತಃ ಮುಖ್ಯಮಂತ್ರಿಗಳೇ ಸರ್ಕಾರದಲ್ಲಿ ತಮಗೆ ಸ್ವಾತಂತ್ರ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದರ ನಡುವೆ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಆರಂಭಿಸಿದ್ದಾರೆ,” ಎಂದು ಆರೋಪಿಸಿದರು.

ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ತಮಗೆ ಬಿಜೆಪಿ ಶಾಸಕರ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದಾರೆ.

ಕಲಬುರಗಿಯ ನಮ್ಮ ಒಬ್ಬ ಶಾಸಕರಿಗೆ ಮಂತ್ರಿ ಸ್ಥಾನದ ಆಮಿಷ ಒಡ್ಡಲಾಗಿದೆ. ಕಾಂಗ್ರೆಸ್​ ಜೆಡಿಎಸ್​ ಕುದುರೆ ವ್ಯಾಪಾರಕ್ಕೆ ಕೈ ಹಾಕಿದೆ. ರಾಜ್ಯದ ಸಮ್ಮಿಶ್ರ ಸರ್ಕಾರ ಅಭಿವೃದ್ಧಿ ಕಡೆ ಗಮನಹರಿಸಲಿ ಎಂದು ಅವರು ಹೇಳಿದರು.

ಚುನಾವಣೆ ಕುರಿತು ಚರ್ಚಿಸಲು ಶಾಸಕರು ದೆಹಲಿಯಲ್ಲಿ

ಬಿಜೆಪಿಯ ಶಾಸಕರೆಲ್ಲರೂ ದೆಹಲಿಯಲ್ಲೇ ಉಳಿದುಕೊಂಡಿರುವುದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, “ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಶಾಸಕರ ಸಭೆ ನಡೆಯುತ್ತಿದೆ. ನಾಳೆ ಕೂಡ ನಾವು ದೆಹಲಿಯಲ್ಲೇ ಇರುತ್ತೇವೆ. ಕೆಲ ಶಾಸಕರು ಗುರುಗಾವ್​ಗೆ ತೆರಳಲಿದ್ದಾರೆ. ಮಿಕ್ಕವರು ಇಲ್ಲಿಯೇ ಉಳಿಯಲಿದ್ದಾರೆ. ಇನ್ನೆರಡು ದಿನಗಳಲ್ಲಿ ಬೆಂಗಳೂರಿಗೆ ತೆರಳುತ್ತೇವೆ,” ಎಂದರು.

ಕಾಂಗ್ರೆಸ್​-ಜೆಡಿಎಸ್​ನಿಂದ ಬಿಜೆಪಿ ಶಾಸಕರ ಖರೀದಿ ಪ್ರಯತ್ನ
ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಆದರೆ, ಅವರ ಈ ಹೇಳಿಕೆಯನ್ನು ಅಲ್ಲಗೆಳೆದು ನಾವು ನಿಮ್ಮ ಜತೆಗಿರುತ್ತೇವೆ ಎಂದು ಯಡಿಯೂರಪ್ಪ ಅವರಿಗೆ ಬಿಜೆಪಿಯ ಶಾಸಕರೆಲ್ಲರೂ ತಿಳಿಸಿದ್ದಾರೆ. ನಾವು ಯಾರೊಂದಿಗೂ ಸಂಪರ್ಕದಲ್ಲಿಲ್ಲ. ಅಲ್ಲದೆ ಬಿಜೆಪಿ ಕೂಡ ಯಾವ ಶಾಸಕರನ್ನು ಸಂಪರ್ಕಿಸಿಲ್ಲ. ಅವರಲ್ಲಿ ಒಗಟ್ಟಿಲ್ಲದೇ ಇರುವುದು ಅವರ ಆಂತರಿಕ ಭಿನ್ನಮತ. ಅವರ ಶಾಸಕರನ್ನು ಅವರೇ ಹುಡುಕಿಕೊಳ್ಳಲಿ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಅಲ್ಲದೆ, ಕುಮಾರಸ್ವಾಮಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ನಾವು ನಮ್ಮ ಶಾಸಕರನ್ನು ಹಿಡಿದುಕೊಳ್ಳುವ ಸಲುವಾಗಿ ದೆಹಲಿಯಲ್ಲಿ ಉಳಿದಿಕೊಂಡಿದ್ದೇವೆ. ಇದರ ಜತೆಗೆ ಪಕ್ಷದ ಸಭೆ ಇರುವ ಕಾರಣಕ್ಕೆ ನಾವು ಒಟ್ಟಾಗಿ ದೆಹಲಿಯಲ್ಲೇ ಇರಲಿದ್ದೇವೆ ಎಂದರು.