ಬೆಂಗಳೂರು: ಕಳಸಾ ಬಂಡೂರಿ ಯೋಜನೆಗೆ ಉಂಟಾಗಿರುವ ತೊಡಕು ನಿವಾರಿಸಲು ಹಾಗೂ ಕೇಂದ್ರ ಸರ್ಕಾರದಿಂದ ಬರಬೇಕಾದ ಬಾಕಿ ಅನುದಾನ ಬಿಡುಗಡೆಗೆ ಒತ್ತಾಯಿಸಲು ಸಿಎಂ ಯಡಿಯೂರಪ್ಪ ಶೀಘ್ರವೇ ದೆಹಲಿಗೆ ಪ್ರಯಾಣ ಬೆಳಸುವರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಮಹದಾಯಿ ಸಂಬಂಧ ಕೇಂದ್ರ ಸಚಿವರನ್ನು ಇನ್ನು 4-5 ದಿನದಲ್ಲೇ ಭೇಟಿಯಾಗಲಿದ್ದೇನೆ. ಯೋಜನೆ ಕಾರ್ಯಗತಕ್ಕೆ ಸರ್ಕಾರ ಉತ್ಸುಕವಾಗಿದೆ. ಅಡೆ ತಡೆ ನಿವಾರಿಸಿಕೊಡುವಂತೆ ಕೇಂದ್ರವನ್ನು ಒತ್ತಾಯಿಸುವೆ. ಗೋವಾ, ಮಹಾರಾಷ್ಟ್ರ ಜತೆ ಮಾತುಕತೆ ನಡೆಸಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಮಾಡಲಾಗುತ್ತದೆ ಎಂದರು.
ಜಿಎಸ್ಟಿ ನಷ್ಟ ಭರ್ತಿ ಬಾಬ್ತು ಎರಡು ಕಂತು ಬರಬೇಕಾಗಿದೆ. ಅಕ್ಟೋಬರ್-ನವೆಂಬರ್ ತಿಂಗಳ ಕಂತು ಬಂದಿದೆ. ನವೆಂಬರ್-ಡಿಸೆಂಬರ್ನ ಕಂತು ಜನವರಿಯಲ್ಲಿ ಬರಬಹುದು. ಮಾರ್ಚ್ ವೇಳೆಗೆ ಕೊನೆಯ ಕಂತು ಬರಲಿದೆ. ತಡ ಮಾಡದೆ ಬಿಡುಗಡೆ ಮಾಡುವಂತೆ ಕೇಂದ್ರವನ್ನು ಕೋರಿದ್ದೇವೆ, ಅವರೂ ಹಣ ಬಿಡುಗಡೆಗೆ ಒಪ್ಪಿದ್ದಾರೆ ಎಂದು ಹೇಳಿದರು. ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದಿದ್ದಾಗ ಹಣ ಬಿಡುಗಡೆಗೆ ಒತ್ತಾಯಿದ್ದೆವು, ತಕ್ಷಣದಲ್ಲೇ ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದಂತೆ 155 ಕೋಟಿ ರೂಪಾಯಿ ಬಿಡುಗಡೆಯಾಯಿತು ಎಂದು ತಿಳಿಸಿದರು.