ಬೆಂಗಳೂರು: ಮುಂದಿನ ಮೂರು ತಿಂಗಳಲ್ಲಿ ಹೆಚ್ಚಿನ ಶ್ರಮ ವಹಿಸಿ ತೆರಿಗೆ ವಂಚನೆ ಬಗ್ಗೆ ಗಮನ ಕೊಟ್ಟು, ನಿರೀಕ್ಷೆ ಮೀರಿದ ತೆರಿಗೆ ಸಂಗ್ರಹ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಐದು ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸೋಮವಾರ ತೆರಿಗೆ ಸಂಗ್ರಹಣಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ, ಮುಂದಿನ ಅವಧಿಯಲ್ಲಿ ತೆರಿಗೆ ಹೆಚ್ಚಿಸಲು ಶ್ರಮವಹಿಸುವುದು ಮತ್ತು ಗುರಿ ಅಸಾಧ್ಯವೆಂದು ಭಾವಿಸಿರುವ ಇಲಾಖೆಗಳು ಪರ್ಯಾಯ ಮಾರ್ಗದ ಮೂಲಕ ಸಮತೋಲನ ಕಾಯ್ದುಕೊಳ್ಳಲು ಬೇಕಾದ ಮಾರ್ಗದರ್ಶನ ಮಾಡಿದರು.
ಎಚ್ಚರಿಕೆ ಹೆಜ್ಜೆ: 2019-20ನೇ ಸಾಲಿನ ಮೂರು ತ್ರೖೆಮಾಸಿಕದಲ್ಲಿ ಸರಾಸರಿ ಶೇ.70-75 ತೆರಿಗೆ ಸಂಗ್ರಹವಾಗಿದೆ. ಇನ್ನುಳಿದ ಕೊನೇ ಅವಧಿಯಲ್ಲಿ ಶೇ.25 ಸಂಗ್ರಹ ಮಾಡುವುದು ಸವಾಲಿನ ಕೆಲಸ. ಈಗಿನ ವಾತಾವರಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರಿ ಮುಟ್ಟುವುದು ಕಷ್ಟ ಎಂದು ಅಧಿಕಾರಿಗಳು ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಪರ್ಯಾಯ ಮಾರ್ಗಗಳತ್ತ ಸರ್ಕಾರ ಚಿತ್ತ ಹರಿಸಿದೆ.
ದೊಡ್ಡ ಪ್ರಮಾಣದಲ್ಲಿ ಬಸ್ಗಳಲ್ಲಿ ಸರಕು ಸಾಗಣೆ ಮಾಡುವ ಮೂಲಕ ಮತ್ತು ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಮತ್ತಿತರ ವಾಣಿಜ್ಯ ಚಟುವಟಿಕೆಗಳಲ್ಲಿ ಜಿಎಸ್ಟಿ ತೆರಿಗೆ ವಂಚನೆ ನಡೆಯುತ್ತಿರುವ ಕುರಿತೂ ಹಾಗೂ ಅಕ್ರಮ ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸಾರಿಗೆ ಇಲಾಖೆಯಲ್ಲಿ ವರ್ಷಾಂತ್ಯಕ್ಕೆ ಸುಮಾರು 300 ಕೋಟಿ ರೂ. ಕೊರತೆಯಾಗುವ ಸಾಧ್ಯತೆ ಇದೆ. ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಹಾಗೂ ತೆರಿಗೆ ವಂಚನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.
ಮುಂಚೂಣಿಯಲ್ಲಿ ಕರ್ನಾಟಕ ಜಿಎಸ್ಟಿ ಬೆಳವಣಿಗೆ ಶೇ.14.2
ಜಿಎಸ್ಟಿ ಸಂಗ್ರಹದಲ್ಲಿ ಇಲ್ಲಿಯವರೆಗೆ ರಾಜ್ಯದ ಸಾಧನೆ 61,245 ಕೋಟಿ ರೂ. ಇದ್ದು, ರಾಷ್ಟ್ರದಲ್ಲೇ ಎರಡನೇ ಸ್ಥಾನದಲ್ಲಿದ್ದೇವೆ. ರಾಜ್ಯದ ಜಿಎಸ್ಟಿ ಬೆಳವಣಿಗೆ ಶೇ.14.2 ಇದೆ. ಇ-ವೇ ತಪಾಸಣೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಯಡಿಯೂರಪ್ಪ ಹೇಳಿದರು.
ತಡವಾಗಿ ಜಿಎಸ್ಟಿ ರಿಟರ್ನ್ ಫೈಲ್ ಮಾಡುವ ಮತ್ತು ರಿಟರ್ನ್ ಫೈಲ್ ಮಾಡದೆ ಇರುವವರ ವ್ಯಾಪಾರ ಸ್ಥಳಗಳಿಗೆ ಭೇಟಿ ನೀಡಿ, 551.44 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ ಎಂದ ಅವರು, ಕಳೆದ ಬಾರಿಗೆ ಹೋಲಿಸಿದರೆ ಅಬಕಾರಿ ತೆರಿಗೆ ಸಂಗ್ರಹ ಶೇ.7.76 ಹೆಚ್ಚಳವಾಗಿದೆ. ವಾಹನ ಮಾರಾಟ ಇಳಿಕೆಯಿಂದ ಸಾರಿಗೆ ಇಲಾಖೆಯಲ್ಲಿ 460.20 ಕೋಟಿ ರೂ. ಕೊರತೆಯಾಗಿದೆ ಎಂದು ವಿವರಿಸಿದರು.
ಮದ್ಯದ ಬೆಲೆ ಹೆಚ್ಚಿಸದೆ ಗುರಿ ಸಾಧನೆ
ಆರ್ಥಿಕ ವರ್ಷದ ಮೂರು ತ್ರೖೆಮಾಸಿಕಗಳು ಪೂರ್ಣಗೊಂಡಿ ರುವ ಹಿನ್ನೆಲೆ ಹಾಗೂ ಆಯವ್ಯಯ ಸಿದ್ಧತೆಗೆ ಪೂರ್ವಭಾವಿ ಯಾಗಿ ವಾಣಿಜ್ಯ ತೆರಿಗೆ, ಅಬಕಾರಿ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ನಿರೀಕ್ಷೆ ಇಟ್ಟಷ್ಟು ತೆರಿಗೆ ಸಂಗ್ರಹ ಮಾಡುವ ವಿಶ್ವಾಸವಿದೆ.
ಒಂದು ಪೈಸೆಯೂ ಕಡಿಮೆ ಇಲ್ಲದಂತೆ ತೆರಿಗೆ ಸಂಗ್ರಹ ಆಗಲಿದೆ ಎಂದು ಸಿಎಂ ಯಡಿಯೂರಪ್ಪ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. 2020ರ ಏಪ್ರಿಲ್ 1ರಿಂದ ಹೊಸ ಜಿಎಸ್ಟಿ ರಿಟರ್ನ್ ನಮೂನೆ ಜಾರಿಗೆ ಬರಲಿದೆ. ಈ ನಮೂನೆಯನ್ನು ತೆರಿಗೆದಾರರಲ್ಲಿ ಜನಪ್ರಿಯಗೊಳಿಸಲು ಕ್ರಮ ವಹಿಸಲಾಗುತ್ತಿದೆ. ನಮೂನೆ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಈ ಬಾರಿ ಮದ್ಯದ ಬೆಲೆ ಹೆಚ್ಚಳ ಮಾಡದೆ ಗುರಿ ಸಾಧನೆ ಆಗಿದೆ ಎಂಬುದು ವಿಶೇಷ ಎಂದರು.
ಈ ಆರ್ಥಿಕ ವರ್ಷದಲ್ಲಿ 1,17,044 ಕೋಟಿ ರೂಪಾಯಿ ತೆರಿಗೆ ಸಂಗ್ರಹ ಆಗಬೇಕು. ಶೇ.100ಕ್ಕೆ ನೂರು ಗುರಿ ಮುಟ್ಟುತ್ತೇವೆ. ಎಲ್ಲ ಇಲಾಖೆಯವರೂ ಒಪ್ಪಿದ್ದಾರೆ.
| ಯಡಿಯೂರಪ್ಪ ಮುಖ್ಯಮಂತ್ರಿ