ಹೈ-ಕಕ್ಕೆ ಪ್ರತ್ಯೇಕ ಸಚಿವಾಲಯಕ್ಕೆ ಮನವಿ

ಕಲಬುರಗಿ: ಸಂವಿಧಾನದ 371(ಜೆ) ಕಡ್ಡಾಯ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಚಿವರನ್ನು ನೇಮಿಸುವುದು ಸೇರಿ ಪ್ರಮುಖ ಬೇಡಿಕೆಗಳ ಕುರಿತಂತೆ ಹೈದರಾಬಾದ್-ಕರ್ನಾಟಕ ವಾಣಿಜ್ಯೋದ್ಯಮಿ ಮಂಡಳಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರೊಡನೆ ಗುರುವಾರ ಚರ್ಚೆ ನಡೆಸಿತು.

ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ್ ಮತ್ತು ಗೌರವ ಕಾರ್ಯದರ್ಶಿ ಶಶಿಕಾಂತ್ ಬಿ. ಪಾಟೀಲ್ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿದ ನಿಯೋಗವು ಅಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿತು. ಡಾ. ನಂಜುಂಡಪ್ಪ ಸಮಿತಿಯ ಶಿಫಾರಸ್ಸುಗಳನ್ವಯ ಹಾಗೂ ಸಂವಿಧಾನದ 371(ಜೆ) ಅನುಚ್ಛೇದದಡಿಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ನೀತಿಗಳನ್ನು ಹಾಗೂ ಕ್ರಮಗಳನ್ನು ಕೈಕೊಳ್ಳುವಂತೆ ಕೋರಲಾಯಿತು.

ಹೈ-ಕಕ್ಕೆ ಸಂವಿಧಾನದ 371(ಜೆ) ಅನುಚ್ಛೇದದಡಿ ವಿಶೇಷ ಸ್ಥಾನಮಾನ ದೊರೆತು 5 ವರ್ಷ ಕಳೆದಿವೆ. ಸರ್ಕಾರ ವಾರ್ಷಿಕವಾಗಿ ರೂ. 1000/ 1500 ಕೋಟಿ ಅನುದಾನವನ್ನು ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿಗೆ ನೀಡುತ್ತಿದೆ. ಆದರೆ ಮಂಡಳಿ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಂಡಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯೂ ಆಗಿಲ್ಲ. ಇದೇ ಸ್ಥಿತಿ ಮುಂದುವರಿದರೆ ನಮ್ಮ ಪ್ರದೇಶ ಪ್ರಗತಿ ಕಾಣುವುದಿಲ್ಲವೆಂಬ ಆತಂಕ ವ್ಯಕ್ತಪಡಿಸಲಾಯಿತು.

371(ಜೆ) ಅನುಚ್ಛೇದದ ಪರಿಣಾಮಕಾರಿ ಅನುಷ್ಠಾನವಾಗಲು ಪ್ರತ್ಯೇಕ ಸಚಿವಾಲಯ ಇರಬೇಕು ಎಂಬುದು ನಮ್ಮ ಬೇಡಿಕೆ. ತುಮಕೂರು ಜತೆಗೆ ಕಲಬುರಗಿಯಲ್ಲಿ ರಾಷ್ಟ್ರೀಯ ಬಂಡವಾಳ ಹಾಗೂ ಉತ್ಪಾದನಾ ವಲಯವನ್ನು ಸ್ಥಾಪಿಸಬೇಕೆಂದು ಕೇಂದ್ರ ಸಕರ್ಾರವು 2013ರಲ್ಲಿ ತಾತ್ವಿಕ ಅನುಮೋದನೆ ನೀಡಿದೆ. ತುಮಕೂರಲ್ಲಿ ಇದು ಆರಂಭವಾಗಿದ್ದು, ಕಲಬುರಗಿಗೆ ಇನ್ನೂ ಇದು ಕನಸಾಗಿದೆ. ಚಿತ್ತಾಪುರ ತಾಲೂಕಿನ ಮಾಡಬೂಳ, ಮತ್ತಿಮಡು, ಇಂಗನಕಲ್, ಹದನೂರು ಹಾಗೂ ವಚ್ಛಾ ಗ್ರಾಮಗಳಲ್ಲಿ 12500 ಎಕರೆ ಭೂಮಿಯನ್ನು ಈ ಯೋಜನೆಗೆ ಗುರುತಿಸಲಾಗಿದೆ. ಇದಕ್ಕೆ ಪ್ರಮಾಣೀಕರಣವೂ ಸಿಕ್ಕಿದೆ ಎಂದು ಮಂಡಳಿ ನಿಯೋಗ ಸಿಎಂಗೆ ಮನವರಿಕೆ ಮಾಡಿತು.

ಕೃಷಿ ಉತ್ಪನ್ನಗಳಿಗೆ ಭಾವಾಂತರ ಯೋಜನೆ: ಕೃಷಿ ಉತ್ಪನ್ನಗಳಿಗೆ ಸದ್ಯ ಚಾಲ್ತಿಯಲ್ಲಿರುವ ಕನಿಷ್ಟ ಬೆಂಬಲ ಬೆಲೆ ನೀತಿಯು ಬೆಲೆಗಳನ್ನು ಸದೃಡಗೊಳಿಸುವಲ್ಲಿ ಹಾಗೂ ರೈತರಿಗೆ ಸಹಾಯ ಹಸ್ತ ನೀಡುವುದರಲ್ಲಿ ವಿಫಲವಾಗಿದೆ. ಅದಲ್ಲದೆ ಸದರಿ ಕನಿಷ್ಟ ಬೆಂಬಲ ಬೆಲೆಯ ಅಡಿಯಲ್ಲಿ ರೈತರಿಂದ ನೇರವಾಗಿ ಕೊಂಡುಕೊಳ್ಳಲಾಗುವ ಉತ್ಪನವು 20 ಕ್ವಿಂಟಾಲ್ಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಸದರಿ ನೇರ ಖರೀದಿಯು ಬಹಳಷ್ಟು ಸಣ್ಣ ರೈತರ ಕೈಗಳಿಗೆ ಎಟುಕುವುದಿಲ್ಲ. ಆದ್ದರಿಂದ ಭಾವಾಂತರ ಯೋಜನೆಯನ್ನು ಅಳವಡಿಸಿಕೊಂಡು ಅದರಡಿಯಲ್ಲಿ ಮಾರಲಾದ ದರ ಹಾಗೂ ಕನಿಷ್ಟ ಬೆಂಬಲ ಬೆಲೆಯ ವ್ಯತ್ಯಾಸದ ಹಣವನ್ನು ರೈತರ ಬ್ಯಾಂಕು ಖಾತೆಗಳಿಗೆ ನೇರವಾಗಿ ವರ್ಗಾಯಿಸುವ ವ್ಯವಸ್ತೆಯನ್ನು ಮಾಡುವ ಅಗತ್ಯತೆ ಇರುತ್ತದೆ. ಇದರಿಂದಾಗಿ ಎಲ್ಲಾ ರೈತರು ಈ ಯೋಜನೆಯಲ್ಲಿ ಸೇರಿಕೊಂಡು ಅದ್ದರಿಂದ ಅವರುಗಳಿಗೆ ಬಹಳಷ್ಟು ಲಾಭವಾಗುವುದು ಅಲ್ಲದೆ ಎ.ಪಿ.ಎಂ.ಸಿ.ಯ ವರ್ತಕರಿಗೆ ಹಾಗೂ ದಾಲ್ ಮಿಲ್ಲುಗಳಿಗೆ ಕೃಷಿ ಉತ್ಪನ್ನಗಳು ಲಭ್ಯವಾಗವಂತೆ ಮಾಡಲು ಮನವಿಯಲ್ಲಿ ಕೋರಲಾಗಿದೆ.

ಕರ್ನಾಟಕ ತೊಗರಿ ಬೋರ್ಡಗೆ ಕೆ.ಎಂ.ಎಫ್ ಹಾಗೂ ಕಾಫಿ ಬೋರ್ಡನಿ ಮಾದರಿಯಲ್ಲಿ ಸ್ವಾಯತ್ತತೆಯನ್ನು ನೀಡಿ ಸಬಲಗೊಳಿಸಬೇಕು. ಯಾದಗಿರಿಯಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಗೊಳಿಸಬೇಕು. ಕಲಬುರಗಿ ದಾಲ್ ಮಿಲ್ಗಳ ಪುನಃಶ್ಚೇತನಕ್ಕೆ ವಿಶೇಷ ಆರ್ಥಿಕ ಯೋಜನೆ ಮಂಜೂರಿ ಮಾಡಬೇಕು. ಕಲಬುರಗಿ ವಿಮಾನ ನಿಲ್ದಾಣವನ್ನು ಕೇಂದ್ರದ ಉಡಾನ್ ಯೋಜನೆಯಲ್ಲಿ ಸೇರಿಸಬೇಕೆಂದು ಕೋರಲಾಗಿದೆ.

ಕಲಬುರಗಿಯಲ್ಲಿ ಈಗಾಗಲೇ ಲಭ್ಯವಿರುವ ಇ.ಎಸ್.ಐ.ಸಿ. ಮೆಡಿಕಲ್ ಸಂಕೀರ್ಣವನ್ನು ಉಪಯೋಗಿಸಿಕೊಂಡು ಎ.ಐ.ಐ,ಎಂ.ಎಸ್ ಸಂಸ್ಥೆ ಸ್ಥಾಪಿಸಬೇಕು. ನ್ಯಾಯಮೂರ್ತಿ ಎಚ್. ಸಿ. ಸರೀನ್ ಸಮಿತಿ ಶಿಫಾರಸ್ಸಿನಂತೆ ಕಲಬುರಗಿಯಲ್ಲಿ ರೈಲು ವಿಭಾಗ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಲಾಯಿತು. ಮಂಡಳಿಯ ಉಪಾಧ್ಯಕ್ಷ ಶರಣು ಪಪ್ಪಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.