ಸೀತಾರಾಮ ಕಲ್ಯಾಣ ಟ್ರೇಲರ್ ಬಿಡುಗಡೆ

ಮೈಸೂರು: ನಿಖಿಲ್ ಕುಮಾರಸ್ವಾಮಿ ಮತ್ತು ರಚಿತಾ ರಾಮ್ ನಟನೆಯ ‘ಸೀತಾರಾಮ ಕಲ್ಯಾಣ’ ಚಲನಚಿತ್ರದ ಟ್ರೇಲರ್ ಅನ್ನು ಸಾವಿರಾರು ಜನರ ಸಮ್ಮುಖದಲ್ಲಿ ಶನಿವಾರ ಬಿಡುಗಡೆಗೊಳಿಸಲಾಯಿತು.

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸಂಜೆ ಆಯೋಜಿಸಿದ್ದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟ್ರೇಲರ್ ಬಿಡುಗಡೆ ಮಾಡಿದರು. ಮೈಸೂರು, ಮಂಡ್ಯ, ಹಾಸನ ಮುಂತಾದ ಜಿಲ್ಲೆಗಳಿಂದ ಬಂದಿದ್ದ ಸಹಸ್ರಾರು ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಸಾಕ್ಷಿಯಾದರು.

ರೈತರಿಗೆ ಆತ್ಮಸ್ಥೈರ್ಯ ತುಂಬುವ ಸಂದೇಶ: ಸಂಕಷ್ಟದಲ್ಲಿರುವ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕಾಗಿದೆ. ಈ ಭಾವನೆ ಅರಿತುಕೊಂಡಿರುವ ನನ್ನ ಮಗ ನಿಖಿಲ್, ಸಿನಿಮಾದಲ್ಲಿ ಆ ಸಂದೇಶವನ್ನು ಕೊಟ್ಟಿದ್ದಾನೆ. ರೈತರು ನೆಮ್ಮದಿಯ ಜೀವನ ನಡೆಸಬೇಕು. ರಾಜಕೀಯದಲ್ಲಿ ನನಗೆ ಅನೇಕ ಅಡೆತಡೆಗಳು ಎದುರಾಗುತ್ತಿವೆ. ಆದರೆ ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಕೃಷಿಕರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಕೆಲಸ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ಆಡಳಿತ ನಿರ್ವಹಣೆ ಜವಾಬ್ದಾರಿಯಿಂದಾಗಿ ಈ ಸಿನಿಮಾದ ನಿರ್ವಣದ ವೇಳೆ ಹೆಚ್ಚಿನ ಸಮಯ ಕೊಡಲು ಆಗಲಿಲ್ಲ. ನಿಖಿಲ್ ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾನೆ ಎಂದು ಶ್ಲಾಘಿಸಿದರು.

‘ಜಾಗ್ವಾರ್’ಗಿಂತ ಭಿನ್ನ: ಇದು ಕೌಟುಂಬಿಕ ಮತ್ತು ಭಾವನಾತ್ಮಕ ಸಿನಿಮಾ. ರೈತರಿಗೆ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ಇದೆ. ನನ್ನ ಮೊದಲ ‘ಜಾಗ್ವಾರ್’ ಗಿಂತ ಭಿನ್ನವಾಗಿದೆ ಎಂದು ನಾಯಕ ನಿಖಿಲ್ ಹೇಳಿದರು. ಟ್ರೇಲರ್ ಬಿಡುಗಡೆ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಗಾಯಕ ವಿಜಯಪ್ರಕಾಶ್ ಹಾಡಿ ಸಭಿಕರನ್ನು ರಂಜಿಸಿದರು. ನಾಯಕಿ ರಚಿತಾ ರಾಮ್ ನಿರ್ದೇಶಕ ಹರ್ಷ ಸೇರಿ ‘ಸೀತಾರಾಮ ಕಲ್ಯಾಣ’ ಚಿತ್ರತಂಡ ಭಾಗವಹಿಸಿತ್ತು.

ನೂರಾರು ವರ್ಷ ಜತೆಗಿರುತ್ತಾರೆ

ನನ್ನ ತಂದೆಯವರಿಗೆ ಅನಾರೋಗ್ಯ ಕಾಡುತ್ತಿಲ್ಲ ಆ ಕುರಿತ ಸುದ್ದಿಗಳೆಲ್ಲವೂ ಸುಳ್ಳು. ಅವರು ಇನ್ನೂ ನೂರಾರು ವರ್ಷ ನಮಗೆ ಜತೆಯಾಗಿ ಇರಲಿದ್ದಾರೆ.ಅವರು ನನ್ನ ಪಾಲಿನ ದೇವರು. ಸಿನಿಮಾ ಸೇರಿ ಎಲ್ಲ ವಿಷಯದಲ್ಲಿ ಅವರ ಸಲಹೆ ಪಡೆದುಕೊಂಡು ಮುನ್ನಡೆಯುತ್ತಿದ್ದೇನೆ. ಸರಳವಾಗಿ ಇರಲು ಬಯಸುವ ಅವರಿಗೆ ಇಂಥ ಅದ್ದೂರಿ ಸಮಾರಂಭ ಇಷ್ಟವಾಗುವುದಿಲ್ಲ. ಇದಕ್ಕಾಗಿ ಅವರಲ್ಲಿ ಕ್ಷಮೆ ಕೇಳುತ್ತೇನೆ ಎಂದು ನಿಖಿಲ್ ಹೇಳಿದರು.

ಸಿನಿಮಾ ರಂಗ ಪ್ರವೇಶಿಸುವ ಮುನ್ನ ನಿಖಿಲ್ ಹುಡುಗಾಟದ ಹುಡುಗನಾಗಿದ್ದ. ಅವನಲ್ಲಿ ಇಷ್ಟೊಂದು ಪ್ರತಿಭೆ ಇರುವುದು ನನಗೆ ಗೊತ್ತಿರಲಿಲ್ಲ. ‘ಜಾಗ್ವಾರ್’ ಸಿನಿಮಾದಲ್ಲಿ ಅವನ ಡಾನ್ಸ್, ನಟನೆ ಜನರಿಗೆ ಇಷ್ಟವಾದವು. ‘ಸೀತಾರಾಮ ಕಲ್ಯಾಣ’ ಕೂಡ ಉತ್ತಮವಾಗಿ ಮೂಡಿಬಂದಿದೆ.

| ಅನಿತಾ ಕುಮಾರಸ್ವಾಮಿ ನಿರ್ಮಾಪಕಿ