ಸರ್ಕಾರವೇನೂ ಬಿದ್ದುಹೋಗಲ್ಲ: 23ರ ಬಳಿಕವೂ ನಮ್ಮದೇ ಆಡಳಿತ

ಮೈಸೂರು: ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮೈತ್ರಿ ಸರ್ಕಾರವೇನೂ ಬಿದ್ದು ಹೋಗಲ್ಲ. ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಸರ್ಕಾರವನ್ನು ಕಿತ್ತುಹಾಕಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ರಾಜಕೀಯ ತಿಕ್ಕಾಟವಿಲ್ಲ. ‘ಮಲ್ಲಿಕಾರ್ಜುನ ಖರ್ಗೆ ಎಂದೋ ಸಿಎಂ ಆಗಬೇಕಿತ್ತು’ ಎಂಬ ನನ್ನ ಹೇಳಿಕೆಗೆ ಅಪಾರ್ಥ ಬೇಡ. ಆದರೆ, ಸಿದ್ದರಾಮಯ್ಯ ವಿರುದ್ಧ ಖರ್ಗೆ ಎತ್ತಿಕಟ್ಟುವ ಮೂಲಕ ‘ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದರು’ ಎಂಬ ವ್ಯಾಖ್ಯಾನವನ್ನು ನಿಲ್ಲಿಸಬೇಕು ಎಂದರು. ಬಸವರಾಜ ಹೊರಟ್ಟಿ ಮತ್ತು ಎಚ್.ವಿಶ್ವನಾಥ್ ಮೂಲಕ ಕುಮಾರಸ್ವಾಮಿ ಮಾತನಾಡಿಸುತ್ತಿದ್ದಾರೆ ಎಂದು ಟೀಕಿಸುತ್ತಿದ್ದಾರೆ. ‘ಸಿಎಂ ಆಗಿರುವ ನನಗೆ ಅಷ್ಟು ತಿಳವಳಿಕೆ ಇಲ್ಲವೇ’ ಎಂದು ಪ್ರಶ್ನಿಸಿದರು. ‘ರಾಜ್ಯದ ಸಿಎಂ ಕುಮಾರಸ್ವಾಮಿ. ಆದರೆ, ಆ ಸ್ಥಾನದಲ್ಲಿ ನಾನು ಸಿದ್ದರಾಮಯ್ಯರನ್ನು ನೋಡಲು ಬಯಸುತ್ತೇನೆ’ ಎಂಬ ಸಚಿವ ಪುಟ್ಟರಂಗಶೆಟ್ಟಿ ಹೇಳಿಕೆಯಲ್ಲಿ ತಪ್ಪೇನಿದೆ? ಅವರು ಸಿದ್ದರಾಮಯ್ಯ ನೆರಳಿನಲ್ಲೇ ಬೆಳೆದು ಬಂದವರು. ಅದಕ್ಕೆ ಈ ಹೇಳಿಕೆ ಕೊಟ್ಟಿದ್ದಾರೆಯಷ್ಟೇ ಎಂದು ವೇದಿಕೆಯಲ್ಲೇ ಪ್ರತಿಕ್ರಿಯೆ ನೀಡಿದರು. ಮಂಡ್ಯ ಲೋಕಸಭಾ ಚುನಾವಣೆ ಕುರಿತು ಗುಪ್ತಚರ ಇಲಾಖೆಯಿಂದ ವರದಿ ತರಿಸಿಕೊಂಡಿಲ್ಲ ಎಂದರು.

ಮಾಧ್ಯಮಗಳ ನಿಯಂತ್ರಣಕ್ಕೆ ಕಾನೂನು ತರುತ್ತೇನೆ

ಪತ್ರಿಕಾ ಮಾಧ್ಯಮದಲ್ಲಿ ಮಾತ್ರ ಇನ್ನೂ ವೃತ್ತಿಧರ್ಮ ಉಳಿದಿದೆ. ಟಿವಿ ಮಾಧ್ಯಮದಲ್ಲಿ ಅದಿಲ್ಲ. ಅವರ ಸಹವಾಸವೇ ಡೇಂಜರ್. ಹೀಗಾಗಿ ಮಾಧ್ಯಮಗಳ ನಿಯಂತ್ರಣಕ್ಕೆ ಕಾನೂನು ತರುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಕೆಲವು ಟಿವಿಯವರು ಇಷ್ಟ ಬಂದಂತೆ ಸುದ್ದಿ ಮಾಡ್ತಾರೆ. ಪ್ಯಾನಲ್ ಚರ್ಚೆ ಬೇರೆ ಮಾಡ್ತಾರೆ. ರಾಜಕಾರಣಿಗಳು ಅಂದರೆ ಏನು ತಿಳಿದುಕೊಂಡಿದ್ದಾರೆ ಇವರು? ನಾವುಗಳೇನು ಬಿಟ್ಟಿ ಸಿಕ್ಕಿದ್ದೀವಾ. ನಾವೇನು ಹಾಸ್ಯ ಕಲಾವಿದರಾ? ಪ್ರತಿ ವಿಷಯಕ್ಕೂ ಲೇವಡಿ, ವ್ಯಂಗ್ಯ ಮಾಡಲು ನಿಮಗೆ ಅಧಿಕಾರ ಕೊಟ್ಟವರ್ಯಾರು? ವಿಶ್ರಾಂತಿಗಾಗಿ ರೆಸಾರ್ಟ್​ಗೆ ಹೋದರೆ ಬೆಳಗ್ಗೆಯಿಂದ ಸಂಜೆವರೆಗೆ ಅದನ್ನೇ ತೋರಿಸ್ತಾರೆ. ಇದರಲ್ಲೇನು ತಪ್ಪಿದೆ. ಟಿಆರ್​ಪಿಗಾಗಿ ಮತ್ತು ಚಾನಲ್ ನಡೆಸಲು ನಾನೇ ಬೇಕಾ? ಎಂದು ಬೇಸರಿಸಿದರು. ‘ನಿಖಿಲ್ ಎಲ್ಲಿದ್ದಿಯಪ್ಪಾ’ ಹೆಸರಿನ ಮೇಲೆ ದಿನವಿಡೀ ಕಾರ್ಯಕ್ರಮ ಮಾಡ್ತಾರೆ. ಮಾಧ್ಯಮದವರನ್ನು ಮೆಚ್ಚಿಸಲು ಸಿಎಂ ಆಗಿಲ್ಲ. ಜನರಿಗಾಗಿ ಸಿಎಂ ಆಗಿದ್ದೇನೆ ಎಂದ ಕುಮಾರಸ್ವಾಮಿ, ಇಂಥ ಕಾನೂನು ತಂದರೆ ಮಾಧ್ಯಮ ಸ್ವಾತಂತ್ರ್ಯ ಕತ್ತು ಹಿಸುಕಿದೆವೆಂಬ ಮಾತುಗಳು ಬರುತ್ತವೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದರು.

ನಿನ್ನಿಂದಲೇ ಇಷ್ಟೆಲ್ಲ ಆಗಿದೆ!

ಸುದ್ದಿವಾಹಿನಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಸಿಎಂಗೆ ‘ಸಾಕು’ ಎಂದು ಸಚಿವ ಜಿ.ಟಿ.ದೇವೇಗೌಡ ಸನ್ನೆ ಮಾಡಿದರು. ಆಗ ಅವರತ್ತ ತಿರುಗಿದ ಕುಮಾರಸ್ವಾಮಿ, ‘ನಾನು ನಿನ್ನಷ್ಟು ಮಾತನಾಡಿಲ್ಲ. ನೀನು ಮಾತನಾಡಿದ ಅದ್ಯಾವ್ದೋ ಒಂದು ಸಣ್ಣ ಹೇಳಿಕೆ ದೊಡ್ಡದಾಗಿತ್ತು. ನಿನ್ನಿಂದಲೇ ಇಷ್ಟೆಲ್ಲ ಆಗಿದೆ’ ಎಂದು ನಗುತ್ತಲೇ ಚುಚ್ಚಿದರು.

ಹೊರಟ್ಟಿ ಹೇಳಿಕೆಗೆ ಕೈ ಸಚಿವರ ತಪರಾಕಿ

ಬೆಂಗಳೂರು: ‘ಗೊಂದಲದಲ್ಲಿ ಸರ್ಕಾರ ನಡೆಸುವುದಕ್ಕಿಂತ ವಿಧಾನಸಭೆ ವಿಸರ್ಜಿಸುವುದು ಉತ್ತಮ’ ಎಂಬ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಹೇಳಿಕೆಗೆ ಮೈತ್ರಿ ಪಕ್ಷಗಳಲ್ಲಿ ಆಕ್ರೋಶ ಮಡುಗಟ್ಟಿದೆ. ಹಿಂದುಳಿದ ವರ್ಗಗಳ ಸಚಿವ ಸಿ. ಪುಟ್ಟರಂಗಶೆಟ್ಟಿ, ‘ಹೊರಟ್ಟಿ ಹೇಳಿಕೆಗೆ ಯಾವುದೇ ಕಿಮ್ಮತ್ತೂ ಇಲ್ಲ. ರಾಜ್ಯದ ಜನತೆ ಅವರ ಮಾತನ್ನು ಕೇಳುವ ಸ್ಥಿತಿಯಲ್ಲೂ ಇಲ್ಲ. ಅವರು ಹಿಂಬಾಗಿಲಿನ ಮೂಲಕ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಅವರಿಗೆ ಚುನಾವಣೆ ಎದುರಿಸುವ ಶಕ್ತಿಯಿಲ್ಲ. ಚುನಾವಣೆ ಎದುರಿಸಿದ್ದರೆ ಅದರ ಮಹತ್ವ ತಿಳಿಯುತ್ತಿತ್ತು’ ಎಂದಿದ್ದಾರೆ. ಇನ್ನೊಂದೆಡೆ ಸತೀಶ್ ಜಾರಕಿಹೊಳಿ ಕೂಡ ಹೊರಟ್ಟಿ ಹೇಳಿಕೆಯನ್ನು ಖಂಡಿಸಿದ್ದಾರೆ.

ನನಗೀಗಲೂ ಸಿದ್ದುನೇ ಸಿಎಂ

ಮೈಸೂರು: ರಾಜ್ಯದ ಸಿಎಂ ಕುಮಾರಸ್ವಾಮಿ ಆಗಿದ್ದಾರೆ. ಆದರೆ, ಆ ಸ್ಥಾನದಲ್ಲಿ ನಾನು ಸಿದ್ದರಾಮಯ್ಯ ಅವರನ್ನು ನೋಡಲು ಬಯಸುತ್ತೇನೆ. ‘ಸಿದ್ದರಾಮಯ್ಯ ಅವರೇ ನಮ್ಮ ಸಿಎಂ’. ಈ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಸಚಿವ ಸಿ.ಪುಟ್ಟರಂಗಶೆಟ್ಟಿ ಪುನರುಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *