ಅಂಬರೀಷ್​ ಹುಟ್ಟಹಬ್ಬಕ್ಕೆ ಟ್ವೀಟ್​ ಮಾಡಿ ಗೆಳೆಯನ ನೆನೆದು ಆದರ್ಶ ಬಣ್ಣಿಸಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಇಂದು ರೆಬಲ್ ಸ್ಟಾರ್ ಅಂಬರೀಷ್ ಅವರ 67ನೇ ಹುಟ್ಟುಹಬ್ಬ. ಇದರ ನಿಮಿತ್ತ ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಲಾಗಿದೆ. ಹಾಗೆಯೇ ಅಂಬರೀಷ್​ ಅಭಿಮಾನಿಗಳು ಅವರ ನೆನಪಿನಲ್ಲಿ ಸಿಹಿ ಹಂಚಿಕೆ, ರಕ್ತದಾನದಂತಹ ಕಾರ್ಯಕ್ರಮಗಳನ್ನು ನಡೆಸಿ ಅಂಬರೀಷ್​ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ರೆಬಲ್​ಸ್ಟಾರ್​ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅನೇಕ ಗಣ್ಯರು ಕರ್ಣನನ್ನು ನೆನಪಿಸಿಕೊಂಡಿದ್ದು, ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು ಸಹ ತಮ್ಮ ಗೆಳೆಯನನ್ನು ನೆನೆದು ಟ್ವೀಟ್​ ಮಾಡಿದ್ದಾರೆ.

ಅಂಬರೀಷ್​ ಹಾಗೂ ನನ್ನ ಸ್ನೇಹ ಮರೆಯಲಾಗದಂತಹುದು ಎಂದಿರುವ ಸಿಎಂ ಅವರು ಸದಾ ಜನರ ಜೊತೆ ಬೆರೆತು, ಸಮುದಾಯದ ಏಳಿಗೆಯ ಬಗ್ಗೆ ಚಿಂತಿಸಿದ ಗೆಳೆಯನ ಜನ್ಮ ದಿನ ಇಂದು. ಅಂಬರೀಷ್​ ಅವರ ಉದಾತ್ತ ಮನಸ್ಸು ಎಲ್ಲರಿಗೂ ದಕ್ಕಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ಸ್ಪರ್ಧಿಸಿ ವಿಜಯಿಯಾಗಿದ್ದಾರೆ. ತಮ್ಮ ಗೆಲುವಿನ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಷ್​ ಅವರು ಇಂದು ಮಂಡ್ಯದಲ್ಲಿ ಸ್ವಾಭಿಮಾನಿಗಳ ವಿಜಯೋತ್ಸವ ಸಮಾವೇಶವನ್ನು ಆಯೋಜಿಸಿದ್ದು, ಮತದಾರರಿಗೆ ಕೃತಜ್ಞ ತೆ ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್​ನ ನಿಖಿಲ್​ ಕುಮಾರಸ್ವಾಮಿ ಸುಮಲತಾಗೆ ಪ್ರತಿಸ್ಪರ್ಧಿಯಾಗಿ ಪರಾಭವಗೊಂಡಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರ ಪ್ರಚಾರದ ವೈಖರಿಯಿಂದ ದೇಶದಾದ್ಯಂತ ಗಮನ ಸೆಳೆದು ಸದ್ದು ಮಾಡಿತ್ತು.

Leave a Reply

Your email address will not be published. Required fields are marked *