ಉಮೇಶ್​ ಜಾದವ್​ಗೆ ನೀಡಿದ್ದ ಉಗ್ರಾಣ ನಿಗಮ ಹಿಂದಕ್ಕೆ, ಮೂವರು ಹೊಸದಾಗಿ ನೇಮಕ: ಎಚ್ಡಿಕೆ ಆದೇಶ

ಬೆಂಗಳೂರು: ಭಿನ್ನಮತೀಯ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ ಚಿಂಚೋಳಿ ಶಾಸಕ ಉಮೇಶ್​ ಜಾದವ್​ ಅವರಿಗೆ ನೀಡಲಾಗಿದ್ದ ಉಗ್ರಾಣ ನಿಗಮವನ್ನು ರಾಜ್ಯ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಹಿಂದಕ್ಕೆ ಪಡೆದಿದೆ. ಅಲ್ಲದೆ, ಮೂವರನ್ನು ಹೊಸದಾಗಿ ನಿಗಮ ಮತ್ತು ಮಂಡಳಿಗಳಿಗೆ ನೇಮಕ ಮಾಡಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಗುರುವಾರ ರಾತ್ರಿ ಆದೇಶ ಹೊರಡಿಸಿದ್ದಾರೆ.

ಉಮೇಶ್​ ಜಾದವ್​ ಅವರಿಗೆ ಈ ಮೊದಲು ಉಗ್ರಾಣ ನಿಗಮವನ್ನು ನೀಡಲಾಗಿತ್ತು. ಆದರೆ ಅವರು ಆ ಸ್ಥಾನವನ್ನು ವಹಿಸಿಕೊಂಡಿರಲಿಲ್ಲ. ಅಲ್ಲದೆ, ಭಿನ್ನಮತೀಯ ಚಟವಟಿಕೆಯಲ್ಲಿ ಅವರು ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗಿದ್ದ ಸ್ಥಾನವನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದು ಮಾಡಲಾಗಿದೆ.

ಜಾದವ್​ ಅವರಿಂದ ಹಿಂಪಡೆದ ಉಗ್ರಾಣ ನಿಗಮವನ್ನು ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಪ್ರತಾಪ್​ ಗೌಡ ಪಾಟೀಲ್​ಗೆ, ಬಸವನಗೌಡ ದದ್ದಲ್​ ಅವರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಶಾಸಕ ಎಂ.ಎ ಗೋಪಾಲಸ್ವಾಮಿ ಅವರನ್ನು ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಜಲಸಂಪನ್ಮೂಲ ಸಚಿವರ ಸಂಸದೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.