ಬಿಎಸ್​ವೈ, ಸಿದ್ದು ಕ್ಷೇತ್ರಗಳಿಗೆ ಎಚ್​ಡಿಕೆ ಉದಾರ ಕೊಡುಗೆ: ಏತ ನೀರಾವರಿಗೆ ಹರಿದ ಹಣ

ಬೆಂಗಳೂರು: ಬಜೆಟ್​ ಮಂಡನೆಗೂ ಮೊದಲು ಸುದ್ದಿಗೋಷ್ಠಿ ನಡೆಸಿ ಆಪರೇಷನ್​ ಕಮಲದ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಸಿಎಂ ಎಚ್​.ಡಿ ಕುಮಾರಸ್ವಾಮಿ ಬಜೆಟ್​ನಲ್ಲಿ ಶಿಕಾರಿಪುರಕ್ಕೆ ಉದಾರ ದೇಣಿಗೆ ನೀಡಿದರು.

ಶಿಕಾರಿಪುರ ತಾಲೂಕಿನ ಕೆರೆಗಳನ್ನು ತುಂಬಿಸುವ ಉಡುಗಣಿ, ತಾಳಗುಂದ ಹೊಸೂರು ಏತ ನೀರಾವರಿ ಯೋಜನೆಗಳಿಗೆ ಬರೋಬ್ಬರಿ 200 ಕೋಟಿ ರೂ.ಗಳ ಅನುದಾನ ನೀಡುತ್ತಿರುವುದಾಗಿ ಸಿಎಂ ತಮ್ಮ ಬಜೆಟ್​ ಭಾಷಣದ ವೇಳೆ ತಿಳಿಸಿದರು.

ಇದರ ಜತೆಗೇ, 250 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಮದ ಹತ್ತಿರದ ತುಂಗಾ ನದಿಯಿಂದ ನೀರನ್ನೆತ್ತಿ ಹಲವು ತಾಲೂಕು, ಹೋಬಳಿಗಳ ಕೆರೆಗಳಿಗೆ ನೀರು ತುಂಬುವ ಯೋಜನೆಯಲ್ಲೂ ಶಿಕಾರಿಪುರ ಪಟ್ಟಣವನ್ನು ಕುಮಾರಸ್ವಾಮಿ ಸೇರಿಸಿರುವುದಾಗಿ ತಿಳಿಸಿದರು.
ಬಾದಾಮಿಗೂ 300 ಕೋಟಿ ರೂ.

ಇನ್ನು ರಾಜ್ಯದ ಸಮ್ಮಿಶ್ರ ಸರ್ಕಾರದ ಸೂತ್ರದಾರ ಏನಿಸಿಕೊಂಡಿರುವ ಸಿದ್ದರಾಮಯ್ಯ ಅವರ ಬಾದಾಮಿ ಕ್ಷೇತ್ರಕ್ಕೂ ಸಿಎಂ ಹೆಚ್ಚಿನ ಅನುದಾನ ನೀಡಿದ್ದಾರೆ. ಬಾದಾಮಿ ತಾಲೂಕಿನ 16,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಕೆರೂರ ಏತ ನೀರಾವರಿ ಯೋಜನೆಗೆ ಸಿಎಂ ಬಜೆಟ್​ನಲ್ಲಿ 300 ಕೋಟಿ ರೂ. ಮೀಸಲಿಟ್ಟಿದ್ದಾರೆ.

ಚಾಲುಕ್ಯರ ಶ್ರೀಮಂತ ಪರಂಪರೆಯನ್ನು ಪರಿಚಯಿಸಲು ಬಾದಾಮಿಯನ್ನು ವಿಶ್ವವಿಖ್ಯಾತ ಪ್ರವಾಸಿ ತಾಣವನ್ನಾಗಿ ಮತ್ತು ಕರಕುಶಲ ಮಾರುಕಟ್ಟೆಯನ್ನಾಗಿ ಅಭಿವೃದ್ಧಿ ಪಡಿಸಲು ಸರ್ಕಾರ ನಿರ್ಧರಿಸಿದ್ದು, 25 ಕೋಟಿ ರೂ.ಗಳನ್ನು ಒದಗಿಸಿದೆ.

ಇದರ ಜತೆಗೇ ಬಾದಾಮಿ ತಾಲೂಕಿನ ಸೋಮನಕೊಪ್ಪದ ಶ್ರೀ ಪೂರ್ಣಾನಂದಸ್ವಾಮಿ ಸೋಲ್ ಟ್ರಸ್ಟ್ (ರಿ) ಗೆ 1 ಕೋಟಿ ರೂ.ಗಳ ದೇಣಿಗೆ ನೀಡಲಾಗಿದೆ.