ಬೆಂಗಳೂರು: ಗಾಲಿಗಳ ಮೇಲೆ ಆಸ್ಪತ್ರೆ, ಸಂಚಾರಿ ಆರೋಗ್ಯ ಸೌಲಭ್ಯವನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವ ಚಿಂತನೆಯಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿಧಾನಸೌಧ ಮಹಾಮೆಟ್ಟಿಲು ಬಳಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೋಟರಿ ಹೈಗ್ರೌಂಡ್ಸ್, ಇನ್ಪೋಸಿಸ್ ಫೌಂಡೇಷನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಸಿಎಸ್ಆರ್ ಯೋಜನೆಯಡಿ ಒದಗಿಸಿರುವ ನಾಲ್ಕು ಸಂಚಾರಿ ಕ್ಲಿನಿಕ್-ಗಾಲಿ ಮೇಲೆ ನಿರ್ವಿುಸಿದ ಪ್ರಯೋಗಾಲಯಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಈ ಬಾರಿಯ ಆಯವ್ಯಯದಲ್ಲಿ ಗಾಲಿಗಳ ಮೇಲೆ ಆಸ್ಪತ್ರೆಗೆ ಅನುದಾನ ಮೀಸಲಿರಿಸಿದೆ. ಬಸ್ನಲ್ಲಿ ಪ್ರಯೋಗಾಲಯ ಹಾಗೂ ಆರೋಗ್ಯ ಸೇವಾ ಸೌಲಭ್ಯಗಳನ್ನು ಪ್ರಾಯೋಗಿಕವಾಗಿ ನಾಲ್ಕು ಜಿಲ್ಲೆ ಗಳಲ್ಲಿ ಅನುಷ್ಠಾನಕ್ಕೆ ತಂದಿದ್ದು, ಯಶಸ್ವಿಯಾದರೆ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸುವ ಉದ್ದೇಶವಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರಿ ಕ್ಲಿನಿಕ್ ಉಪಯೋಗವನ್ನು ಮನಗಂಡು ಮೈಸೂರು, ಹುಬ್ಬಳ್ಳಿ- ಧಾರವಾಡ, ಮಂಗಳೂರು ಮಹಾನಗರ ಪಾಲಿಕೆಗಳಿಗೆ ಇವುಗಳನ್ನು ಆರೋಗ್ಯ ಇಲಾಖೆ ಹಸ್ತಾಂತರ ಮಾಡುತ್ತಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ದೊಡ್ಡ ಪಾತ್ರವನ್ನು ಇನ್ಪೋಸಿಸ್ ಪ್ರತಿಷ್ಠಾನ ವಹಿಸಿದೆ. ಜಯದೇವ ಸಂಸ್ಥೆಯಲ್ಲಿ 500 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನು ಒದಗಿಸಿದ್ದಾರೆ. ಕಿದ್ವಾಯಿ, ನಿಮ್ಹಾನ್ಸ್ ಸಂಸ್ಥೆಗಳಿಗೆ ಧರ್ಮ ಛತ್ರ ನಿರ್ವಿುಸಿ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಅನುಕೂಲ ಕಲ್ಪಿಸಿದ್ದಾರೆಂದು ಶ್ಲಾಘಿಸಿದರು.
ಸಂಚಾರಿ ಕ್ಲಿನಿಕ್ ವಿಶೇಷತೆ: ಕ್ಲಿನಿಕ್, ಟೆಲಿಮೆಡಿಸಿನ್, ಫಾರ್ಮಸಿ, ವ್ಯಾಕ್ಸಿನ್ ಇತರ ಔಷಧಗಳನ್ನು ಕೊಂಡೊಯ್ಯಲು ರೆಫ್ರಿಜರೇಟರ್, ತುರ್ತು ಚಿಕಿತ್ಸೆಗೆ ಆಮ್ಲಜನಕ ನೀಡಿ ಕನಿಷ್ಠ ಶಸ್ತ್ರ ಚಿಕಿತ್ಸಾ ವಿಧಾನಗಳನ್ನು ಅನುಸರಿಸಲು ಎರಡು ಪ್ರತ್ಯೇಕ ಹಾಸಿಗೆಯುಳ್ಳ ಕೋಣೆಗಳು, ಏಳು ಕೆವಿ ಜನರೇಟರ್ ಮತ್ತು ಯುಪಿಎಸ್. ಇನ್ಪೋಸಿಸ್ ಪ್ರತಿಷ್ಠಾನವು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಯೋಜನೆಯಡಿ ನಾಲ್ಕು ಕೋಟಿ ರೂ. ನೀಡಿದೆ. ನಾಲ್ಕು ಸಂಚಾರಿ ಕ್ಲಿನಿಲ್- ಗಾಲಿಗಳ ಮೇಲೆ ಅತ್ಯಾಧುನಿಕ ಪ್ರಯೋಗಾಲಯಗಳ ನಿರ್ವಣದ ವೆಚ್ಚ ಭರಿಸಲಾಗಿದೆ.
ಏನೆಲ್ಲ ಸೌಲಭ್ಯ ಲಭ್ಯ: ಕ್ಯಾನ್ಸರ್, ರಕ್ತದೊತ್ತಡ, ಮಧುಮೇಹ, ಕರೊನಾ, ಕ್ಷಯ, ಮಲೇರಿಯಾ, ಡೆಂಘ ಮತ್ತಿತರ ಸಾಂಕ್ರಾಮಿಕ ರೋಗಗಳ ಪತ್ತೆ. ಹಿರಿಯರ ಆರೈಕೆ ಮತ್ತು ಉಪಶಮನ ಚಿಕಿತ್ಸೆ ಸೌಲಭ್ಯ ಲಭ್ಯವಿದ್ದು, ಒಂದೇ ಸೂರಿನಡಿ ಹಲವು ವೈದ್ಯಕೀಯ ಪರಿಹಾರಗಳನ್ನು ಹಳ್ಳಿಗರ ಮನೆ ಬಾಗಿಲಿಗೆ ತಲುಪಿಸಲಿದೆ.
ಆರೋಗ್ಯ ಸೇವೆಗಳು ತಲುಪದೆ ಇರುವವರಿಗೆ ಸಂಚಾರಿ ಕ್ಲಿನಿಕ್ಗಳ ಸೇವೆಯನ್ನು ತಲುಪಿಸಲು ರೋಟರಿ ಮತ್ತು ಇನ್ಪೋಸಿಸ್ ಸಂಸ್ಥೆಗಳು ಕೈಜೋಡಿಸಿವೆ. ಎರಡೂ ಸಂಸ್ಥೆಗಳು ಒದಗಿಸಿದ ಅತ್ಯಾಧುನಿಕ ಸಂಚಾರಿ ಕ್ಲಿನಿಕ್ಗಳ ಸೌಲಭ್ಯವನ್ನು ಸರ್ಕಾರ ಸದ್ಬಳಕೆ ಮಾಡಿಕೊಳ್ಳಲಿದೆ.
| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಗ್ರಾಮೀಣ ಭಾಗದ ಜನರಿಗೆ ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ಸಕಾಲದಲ್ಲಿ ನಿರಂತರವಾಗಿ ನೀಡಿದರೆ ಆಸ್ಪತ್ರೆಗಳ ಮೇಲಿನ ಒತ್ತಡ ತಗ್ಗುತ್ತದೆ. ಕನಿಷ್ಠ 20 ಮೊಬೈಲ್ ಕ್ಲಿನಿಕ್- ಲ್ಯಾಬ್ ಬಿಲ್ಟ್ ಆನ್ ವ್ಹೀಲ್ಸ್ಗಳನ್ನು ಸಿಎಸ್ಆರ್ ಅಡಿ ಒದಗಿಸುವ ಯೋಜನೆಯನ್ನು ಸಂಸ್ಥೆ ರೂಪಿಸಿದೆ.
| ಬಿ.ಎಸ್.ಲಿಂಗದೇವರು ನಿರ್ದೇಶಕ, ಲ್ಯಾಬ್ ಬಿಲ್ಟ್ ಆನ್ ವ್ಹೀಲ್ಸ್, ರೋಟರಿ ಬೆಂಗಳೂರು ಹೈಗ್ರೌಂಡ್ಸ್
ಪುನೀತ್, ಸಂಚಾರಿ ವಿಜಯ್ ನೆನಪಲ್ಲಿ ಅತ್ಯಾಧುನಿಕ ಪರಿಕರ, ಸುಸಜ್ಜಿತ ಸೌಲಭ್ಯವುಳ್ಳ ನಾಲ್ಕು ಸಂಚಾರಿ ಚಿಕಿತ್ಸೆ- ಗಾಲಿ ಮೇಲೆ ನಿರ್ವಿುಸಿದ ಪ್ರಯೋಗಾಲಯಗಳು ಗ್ರಾಮೀಣ ಜನರ ಸೇವೆಗೆ ಸನ್ನದ್ಧವಾಗಿದೆ. ಅಕಾಲಿಕವಾಗಿ ಅಗಲಿದ ನಟರಾದ ಪುನೀತ್ ರಾಜ್ಕುಮಾರ್ ಹಾಗೂ ಸಂಚಾರಿ ವಿಜಯ್ ನೆನಪಲ್ಲಿ ರೋಟರಿ ಸಂಸ್ಥೆ ಅರ್ಪಿಸಿದೆ.