ಸಿಂಧನೂರು: ಹೊಸದಾಗಿ ರಚನೆಯಾದ ನಗರಾಭಿವೃದ್ಧಿ ಪ್ರಾಧಿಕಾರ (ಸುಡಾ)ವನ್ನು ಫೆ.23ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ನಗರದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಸಿಂಧನೂರು ನಗರ ಯೋಜನಾ ಪ್ರಾಧಿಕಾರವನ್ನು ಮೇಲ್ದರ್ಜೆಗೇರಿ ಜ.10 ರಂದು ನಗರಾಭಿವೃದ್ಧಿ ಪ್ರಾಧಿಕಾರ ರಚಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ಹಲವು ವರ್ಷಗಳ ಬೇಡಿಕೆ ಈಡೇರಿಸಿದೆ. ಸದ್ಯ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಅವರಿಗೆ ಪ್ರಭಾರ ವಹಿಸಲಾಗಿದೆ. ಸರ್ಕಾರದಿಂದ ಅಧ್ಯಕ್ಷ, ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಲು ಅವಕಾಶವಿದ್ದು, ಈ ಕುರಿತು ಪ್ರಕ್ರಿಯೆ ನಡೆದಿದೆ. ಪ್ರಾಧಿಕಾರ ರಚನೆಯಿಂದ ನಗರಾಭಿವೃದ್ಧಿಗೆ ಅನುಕೂಲವಾಗಲಿದೆ. ಹೊಸ ಬಡವಾಣೆಗಳನ್ನು ರಚನೆ ಮಾಡಲು ಅವಕಾಶವಿದೆ. 22 ಗ್ರಾಮಗಳು ಸುಡಾ ವ್ಯಾಪ್ತಿಗೆ ಒಳಪಟ್ಟಿವೆ ಎಂದರು.
ಫೆ.19 ರಂದು ತಾಲೂಕಿನ ಜಾಲಿಹಾಳ, ಗೊರೇಬಾಳ, ಸಿಎಸ್‌ಎಫ್ ಕ್ಯಾಂಪ್ ಹತ್ತಿರ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯಗಳ ಚಾಲನೆ ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಆಗಮಿಸಲಿದ್ದಾರೆ ಎಂದು ತಿಳಿಸಿದರು. ಪ್ರಭಾರ ಆಯುಕ್ತ ಮಂಜುನಾಥ ಗುಂಡೂರು, ತಹಸೀಲ್ದಾರ್ ಅರುಣ್ ಎಚ್.ದೇಸಾಯಿ ಇತರರಿದ್ದರು.