ಶಾಸಕ ಆನಂದ್​ ಸಿಂಗ್​ ಆರೋಗ್ಯ ವಿಚಾರಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸದೇ ಹೊರಟ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಶಾಸಕರ ಮಾರಾಮಾರಿ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡು ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಆನಂದ್​ ಸಿಂಗ್​ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಆರೋಗ್ಯ ವಿಚಾರಿಸಿದ್ದಾರೆ.

ಶನಿವಾರ ಶೇಷಾದ್ರಿಪುರಂನಲ್ಲಿರುವ ಅಪೋಲೊ ಆಸ್ಪತ್ರೆಗೆ ಶಾಸಕ ಮುನಿರತ್ನ ಅವರೊಂದಿಗೆ ಆಗಮಿಸಿ ಆರೋಗ್ಯ ವಿಚಾರಿಸಿದ್ದಾರೆ. ಸುಮಾರು ಅರ್ಧಗಂಟೆ ಆನಂದ್​ ಸಿಂಗ್​ ಜತೆ ಮಾತುಕತೆ ನಡೆಸಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸದೇ ಹೊರಟ ಸಿಎಂ
ಈಗಲ್ಟನ್​ ರೆಸಾರ್ಟ್​ನಲ್ಲಿ ನಡೆದ ಶಾಸಕರ ಮಾರಾಮಾರಿ ಪ್ರಕರಣ ಬಳಿಕ ಇದೇ ಮೊದಲ ಬಾರಿಗೆ ಆನಂದ್ ಸಿಂಗ್ ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ ಪ್ರಕರಣ ಕುರಿತು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಘಟನೆ ನಡೆದು 6 ದಿನವಾದರೂ ಆರೋಪಿ ಶಾಸಕ ಗಣೇಶ್​ನನ್ನು ಪೊಲೀಸರು ಬಂಧಿಸದಿರುವುದರಿಂದ ಮುಜುಗರಕ್ಕೊಳಗಾಗುವ ಭೀತಿಯಲ್ಲಿ ಪ್ರತಿಕ್ರಿಯಿಸಲು ಸಿಎಂ ನಿರಾಕರಿಸಿದ್ದಾರೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)