ಟೆಂಪಲ್ ರನ್ ಅಧಿಕಾರ ರಕ್ಷಣೆಗಲ್ಲ, ಭೇಟಿ ಹೊಸತೇನಲ್ಲ

ಚಿಕ್ಕಮಗಳೂರು/ಶೃಂಗೇರಿ: ಅಧಿಕಾರ ಬರುತ್ತೆ, ಹೋಗುತ್ತೆ. ಸಿಎಂ ಕುರ್ಚಿ ಉಳಿಸಿಕೊಳ್ಳಲು ದೇವಸ್ಥಾನಗಳಿಗೆ ಭೇಟಿ ನೀಡುತ್ತಿಲ್ಲ. ಇದನ್ನೇ ಹೆಚ್ಚು ಪ್ರಚಾರ ಮಾಡಿ ಹಿಂಸೆ ಕೊಡಬೇಡಿ ಎಂದು ಸಿಎಂ ಕುಮಾರಸ್ವಾಮಿ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

ಶೃಂಗೇರಿ ಶ್ರೀ ಶಾರದಾಂಬೆಗೆ ಶನಿವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದೇವಸ್ಥಾನಗಳಿಗೆ ಭೇಟಿ ನೀಡುವುದಕ್ಕೆ ಸಿಗುವ ಪ್ರಚಾರ ನಾನು ಮಾಡಿರುವ ಒಳ್ಳೆಯ ಕೆಲಸಗಳಿಗೆ ಸಿಗುತ್ತಿಲ್ಲ. ರೈತರ ಸಾಲ ಮನ್ನಾ ಮಾಡಲು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಆದೇಶ ಮಾಡಿರುವ ಬಗ್ಗೆ ಯಾಕೆ ಹೆಚ್ಚಿನ ಪ್ರಚಾರ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಧಿಕಾರ ಸಿಕ್ಕ ನಂತರ ದೇವಾಲಯಗಳಿಗೆ ಭೇಟಿ ನೀಡುತ್ತಿಲ್ಲ, ಅಧಿಕಾರ ಇಲ್ಲದಿದ್ದಾಗಲೂ ದೇವಸ್ಥಾನಗಳಿಗೆ ಹೋಗಿದ್ದೇನೆ. ಇದು ನನಗೆ ಹೊಸತೇನಲ್ಲ. ದೇವರು, ಗುರುಗಳ ಅನುಗ್ರಹ ಪಡೆಯುವ ಉದ್ದೇಶದ ಭೇಟಿ ತಪ್ಪಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಕಷ್ಟು ಮುಖ್ಯಮಂತ್ರಿಗಳು ಬಂದುಹೋಗಿದ್ದಾರೆ. ನಾನು ಕುರ್ಚಿಗೆ ಅಂಟಿಕೊಂಡು ಕುಳಿತಿಲ್ಲ. ಕುರ್ಚಿ ಉಳಿಸಿಕೊಳ್ಳಲೂ ಶೃಂಗೇರಿಗೆ ಬಂದಿಲ್ಲ ಎಂದರು.

ಈಡುಗಾಯಿ ಒಡೆಯಲಿಲ್ಲ!

ಇಷ್ಟಾರ್ಥ ಸಿದ್ಧಿಗೆ ಶೃಂಗೇರಿ ತೋರಣಗಣಪತಿಗೆ ಕುಮಾರಸ್ವಾಮಿ ಒಡೆದ 9 ಈಡುಗಾಯಿಯಲ್ಲಿ 2 ಹೋಳಾಗಲಿಲ್ಲ. ಎರಡನೇ ಪ್ರಯತ್ನದಲ್ಲಿ ಅದನ್ನು ಒಡೆಯಲಾಯಿತು. ರೇವಣ್ಣಗೆ ಕೊಟ್ಟ ಐದರಲ್ಲಿ 2, ಅನಿತಾಗೆ ನೀಡಿದ ಐದರಲ್ಲಿ 1 ಈಡುಗಾಯಿ ಒಡೆಯಲಿಲ್ಲ.

ರಾಜ್ಯದ ಹಲವೆಡೆ ಬರ ಇದೆ. ಜನರ ಸಮಸ್ಯೆ ಪರಿಹರಿಸಿ ಸರ್ವರಿಗೂ ಒಳಿತು ಮಾಡು ಎಂದು ಶಾರದಾಂಬೆಗೆ ಪ್ರಾರ್ಥನೆ ಮಾಡಿದ್ದೇನೆ. ಉಭಯ ಜಗದ್ಗುರುಗಳಿಗೂ ಇದನ್ನೇ ಮನವಿ ಮಾಡಿ ರಾಜ್ಯದ ಜನರನ್ನು ಆಶೀರ್ವದಿಸಿ ಎಂದು ಕೋರಿದ್ದೇನೆ.

| ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

ಗಣಪತಿ ಹೋಮ, ಮೃತ್ಯಂಜಯ ಹೋಮ ಮಾಡಿಸಿದ್ದೇವೆ. ಕುಮಾರಸ್ವಾಮಿ ಹಾಗೂ ಕುಟುಂಬದ ಆರೋಗ್ಯ ವೃದ್ಧಿಗೆ ಈ ಯಾಗ ಮಾಡಿಸಿದ್ದೇವೆ.

| ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ

ಗೌರ್ನರ್​ಗೆ ಉತ್ತರಿಸುವೆ

ಪ್ರತಿಭಟನೆ ಅರ್ಥದಲ್ಲಿ ದಂಗೆ ಪದ ಬಳಕೆ ಮಾಡಿರುವುದನ್ನೇ ದೊಡ್ಡ ಅಪರಾಧ ಎನ್ನುವಂತೆ ಬಿಜೆಪಿ ನಾಯಕರು ರಾಜಭವನಕ್ಕೆ ತೆರಳಿ ದೂರು ಸಲ್ಲಿಸಿದ್ದಾರೆ. ರಾಜಭವನದಿಂದ ಏನಾದರೂ ವಿವರಣೆ ಕೇಳಿದರೆ ಉತ್ತರ ಕೊಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ದಂಗೆ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಎಂದರ್ಥ. ಯಡಿಯೂರಪ್ಪ ರಾಜ್ಯಕ್ಕೆ ಬೆಂಕಿ ಇಡುತ್ತೇವೆ ಎಂದು ಪದೇಪದೆ ಹೇಳುತ್ತಿದ್ದುದು ಪ್ರಜಾಪ್ರಭುತ್ವ ವಿರೋಧಿಯಲ್ಲ, ದಂಗೆ ಎಂದರೆ ಪ್ರಜಾಪ್ರಭುತ್ವ ವಿರೋಧಿ ಹೌದಾ? ಯಾವುದು ಪ್ರಜಾಪ್ರಭುತ್ವ, ಯಾವುದು ಪ್ರಜಾಪ್ರಭುತ್ವ ವಿರೋಧಿ ಎಂಬುದನ್ನು ರಾಜ್ಯದ ಜನ ತೀರ್ಮಾನ ಮಾಡುತ್ತಾರೆ ಬಿಡಿ ಎಂದರು.

ದೇವಿಗೆ ವಿಶೇಷ ಪೂಜೆ

ಶೃಂಗೇರಿ ಶ್ರೀ ಶಾರದಾಂಬೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಸದಸ್ಯರು ಶನಿವಾರ ವಿಶೇಷ ಪೂಜೆ ಸಲ್ಲಿಸಿದರು. ಕುಮಾರಸ್ವಾಮಿ ಆರೋಗ್ಯದ ಒಳಿತಿಗಾಗಿ ಗಣಹೋಮ, ಆಯುಷ್ಯಹೋಮ, ನವಗ್ರಹ ಹೋಮ ಮತ್ತು ಪ್ರತಿಕ್ರಿಯಾಶೂಲಿ ಯಾಗ ಮಾಡಿಸಲಾಯಿತು. ಚನ್ನಮ್ಮ ದೇವೇಗೌಡ, ಸಿಎಂ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಸಚಿವ ಎಚ್.ಡಿ.ರೇವಣ್ಣ ಪಾಲ್ಗೊಂಡಿದ್ದರು. ಶುಕ್ರವಾರವೇ ಆಗಮಿಸಿದ ಕುಮಾರಸ್ವಾಮಿ ಕೊಪ್ಪ ತಾಲೂಕಿನ ಗುಡ್ಡೇತೋಟದ ತಲವಾನೆ ರಂಗನಾಥ್ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿ ಸಭಾಂಗಣದ ಯಾಗ ಮಂಟಪದಲ್ಲಿ ಗಣಪತಿಗೆ ಸಂಕಲ್ಪ ಪೂಜೆ ನೆರವೇರಿಸಿ ನರಸಿಂಹವನದ ಗುರು ನಿವಾಸದಲ್ಲಿ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಮಠಕ್ಕೆ ಆಗಮಿಸಿದ ದೇವೇಗೌಡ ಕುಟುಂಬ ಸದಸ್ಯರನ್ನು ಆಡಳಿತಾಧಿಕಾರಿ ಡಾ.ವಿ.ಆರ್.ಗೌರಿಶಂಕರ್ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು.