ವಿಜಯವಾಣಿ ವರ್ಷದ ಮಹಿಳೆ ಪ್ರಶಸ್ತಿ ಪ್ರದಾನ: ಸೀತೆ-ಹನುಮನ ಉಪಮೆಯೊಂದಿಗೆ ಮಹಿಳೆಯ ಗೌರವ ಪ್ರತಿಪಾದಿಸಿದ ಸಿಎಂ

ಬೆಂಗಳೂರು: ಸೀತಾಪಹರಣದ ಸಂದರ್ಭದಲ್ಲಿ ಸೀತೆಯ ಆಭರಣಗಳನ್ನು ಗುರುತಿಸಲು ಲಕ್ಷ್ಮಣನನ್ನು ಕೇಳಿದಾಗ, ಆತ ಸೀತೆಯ ಕಾಲುಂಗುರವೊಂದನ್ನುಳಿದು ಮತ್ತಾವ ಆಭರಣಗಳೂ ತಿಳಿಯವು ಎಂದನಂತೆ. ಆತ ಸೀತೆಯನ್ನು ನೋಡಿಯೇ ಇರಲಿಲ್ಲವಂತೆ ಎನ್ನುವ ಕಥೆ ಕೇಳುತ್ತಾ ಬೆಳೆದವರು ನಾವು. ಕಥೆಯ ಸತ್ಯಾಸತ್ಯತೆ ಒತ್ತಟ್ಟಿಗಿರಲಿ. ಅದು ವ್ಯಕ್ತಪಡಿಸುವ ಮೌಲ್ಯ ಮಾತ್ರ ಬಹುದೊಡ್ಡದು. ರಾಮಾಯಣದ ಆದರ್ಶಗಳನ್ನು ಆಟಪಾಠಗಳಲ್ಲಿ ದಿನನಿತ್ಯದ ಆಚರಣೆಗಳಲ್ಲಿ ಅಳವಡಿಸಿಕೊಂಡವರು ನಾವು…

ವಿಜಯವಾಣಿ-ದಿಗ್ವಿಜಯ ನ್ಯೂಸ್​ನಿಂದ ಕೊಡ ಮಾಡುವ ವರ್ಷದ ಮಹಿಳೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಹೇಳಿದ ಪ್ರಸಂಗವಿದು. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯನ್ನು ಸಮಾಜ ನೋಡುವ ದೃಷ್ಟಿಕೋನವನ್ನು ಅವರು ವಿವರಿಸಿದರು.

ವಿಶ್ವ ಮಹಿಳಾ ದಿನದ ಅಂಗವಾಗಿ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್​ ಇಂದು ಮಹಿಳಾ ಸಮಾನತೆ ಮತ್ತು ಸಬಲೀಕರಣದ ವಾಕಥಾನ್​ ಆಯೋಜಿಸಿತ್ತು. ಇದಾದ ನಂತರ ಸಾಧಕ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿತ್ತು. ಇದರಲ್ಲಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಮಾಡಿದ ಭಾಷಣದ ಪೂರ್ಣ ಪಾಠ ಇಲ್ಲಿದೆ.

“ಜಗತ್ತಿನ ಅತ್ಯುನ್ನತ ಮೌಲ್ಯಗಳಲ್ಲೊಂದಾದ ತಾಯ್ತನ. ಮಾನವೀಯ ಅಂತಃಕರಣದ ಸಾಕ್ಷಿಸ್ವರೂಪವಾದ ಮಹಿಳಾ ಶಕ್ತಿಗೆ ನನ್ನ ಗೌರವಪೂರ್ವಕ ಪ್ರಣಾಮಗಳು.

ಎಲ್ಲಿ ಮಹಿಳೆಯರನ್ನು ಪೂಜ್ಯ ಭಾವದಿಂದ ನೋಡಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ” ಎನ್ನುವೊಂದು ಗೌರವಾನ್ವಿತ ಪರಂಪರೆಯ ವಾರಸುದಾರರು ನಾವು.

ಪುರಾಣ-ಇತಿಹಾಸಗಳ ಕಾಲದಿಂದಲೂ ಮಹಿಳಾ ಸಾಧಕಿಯರು ಕರ್ನಾಟಕ ಪರಂಪರೆಯ ಭಾಗವೇ ಆಗಿಹೋಗಿದ್ದಾರೆ. ನಾಟ್ಯಕಲೆಯನ್ನು-ನಾಡವರ ಪ್ರೀತಿ ಅಭಿಮಾನಗಳನ್ನು ಸಿದ್ಧಿಸಿಕೊಂಡ ನಾಟ್ಯರಾಣಿ ಶಾಂತಲೆ; ತನ್ನ ಅಪರೂಪದ ಸಾಹಿತ್ಯ ಪ್ರೇಮ ಮತ್ತು ಮಾನವೀಯ ಅಂತಃಕರಣದ ದಾನ ಚಿಂತಾಮಣಿ ಅತ್ತಿಮಬ್ಬೆ. ತಮ್ಮ ಶೌರ್ಯ-ಕ್ಷಾತ್ರಗಳಿಂದ ಕನ್ನಡಿಗರಲ್ಲಿ ಆತ್ಮಾಭಿಮಾನದ ಕಿಡಿಹೊತ್ತಿಸುವ ರಾಣಿ ಅಬ್ಬಕ್ಕದೇವಿ, ಕಿತ್ತೂರರಾಣಿ ಚೆನ್ನಮ್ಮ, ವಚನಕಾರ್ತಿ ಅಕ್ಕಮಹಾದೇವಿ, ಪ್ರಾತಃಸ್ಮರಣೀಯರೆನಿಸಿಕೊಂಡ ಮಹಿಳೆಯರ ಭವ್ಯ ಇತಿಹಾಸ ನಮ್ಮದು.

ಸ್ವಾತಂತ್ರ್ಯೋತ್ಸವ ಕಾಲದಲ್ಲಿ ಕೂಡ ನಮ್ಮ ಸಾಧನೆಯ ಪರಂಪರೆಯ ಕೀರ್ತಿ ಮುಕ್ಕಾಗಿಲ್ಲ. ಕನ್ನಡ ಸಾಹಿತ್ಯವನ್ನು ವಿಶ್ವಸಾಹಿತ್ಯದ ಮಟ್ಟಕ್ಕೆ ಕೊಂಡೊಯ್ದ ಮಹಿಳಾ ಲೇಖಕಿಯರಿದ್ದಾರೆ. ವಿಧಾನಸಭಾ ಅಧ್ಯಕ್ಷಗಿರಿಯಿಂದ ಮೊದಲ್ಗೊಂಡು ಸಚಿವ ಸ್ಥಾನವನ್ನೂ ಅತ್ಯುತ್ತಮವಾಗಿ ನಿಭಾಯಿಸಿದ ರಾಜಕೀಯ ಪಟುಗಳಿದ್ದಾರೆ. ವಿಜ್ಞಾನಿಗಳು, ಉದ್ಯಮಿಗಳು, ಕ್ರೀಡಾಳುಗಳು, ಶಿಕ್ಷಣ ತಜ್ಞರು, ಸಂಪಾದಕರು, ಆಡಳಿತ ನಿಪುಣರು, ಹಣಕಾಸು ತಜ್ಞರಾದಿಯಾಗಿ ಯಾವುದೇ ಪರಿಚಿತ ಕ್ಷೇತ್ರದಲ್ಲಿಯಾದರೂ ಅಸಾಧಾರಣ ಪ್ರತಿಭೆ ಮೆರೆದ ಬಹಳಷ್ಟು ಮಹಿಳೆಯರಿದ್ದಾರೆ.

ಇಂದು ವಿಜಯವಾಣಿ ಪತ್ರಿಕೆ ಸಾರ್ಥಕ ಕಾರ್ಯ ಒಂದನ್ನು ಮಾಡುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಕ್ರಿಯಾಶೀಲ ಮಹಿಳೆಯರನ್ನು ಗೌರವಿಸುತ್ತಿದೆ.
“ಮಹಿಳೆ ಮನಸು ಮಾಡಿದರೆ ಯಾವುದೇ ಕೆಲಸವೂ ಅಸಾಧ್ಯವಲ್ಲ”ಎನ್ನುವ ಮಾತನ್ನು ನಿಜ ಮಾಡುವಂತೆ, ಈ ಧೀರ ಮಹಿಳೆಯರು ಕಾರ್ಯ ನಿರ್ವಹಿಸುತ್ತಿರುವುದು ನನ್ನ ನಾಡಿನ ಭಾಗ್ಯ.

ಕ್ಯಾನ್ಸರ್ ಎನ್ನುವ ಮಹಾಮಾರಿಯ ವಿರುದ್ಧ ಸೆಡ್ಡು ಹೊಡೆದು ಸಾವಿರಾರು ಕ್ಯಾನ್ಸರ್ ಪೀಡಿತ ಮಕ್ಕಳ ಬಾಳಿನ ಬೆಳಕಾಗಿರುವ ಡಾ. ಅರುಣಾ ‘ವೈದ್ಯೋ ನಾರಾಯಣೋ ಹರಿ’ ಎಂಬ ಪ್ರಾಚೀನ ಉಕ್ತಿಗೆ ಜೀವ ತುಂಬಿದವರು. ವೈದ್ಯರಲ್ಲಿ ದೇವರನ್ನು ಕಾಣುವ ಜನತೆಗೆ ದೇವತೆಯಾಗಿಯೇ ಕಾಣಿಸಿಕೊಂಡು ಅನೇಕ ಮಕ್ಕಳ ಬದುಕ ಹಣತೆಯನ್ನು ಹಚ್ಚಿಟ್ಟವರು.

ಇನ್ನು ಚಾಮರಾಜನಗರದ ವಲ್ಲಿಯಮ್ಮಾಳ್ ಸಾವಯವ ಕೃಷಿಗೆ ತಮ್ಮದೇ ರೀತಿಯಲ್ಲಿ ಜೀವ ಕೊಟ್ಟವರು. ‘ಹಳೆ ಬೇರು – ಹೊಸ ಚಿಗುರು ಕೂಡಿರಲು ಮರ ಸೊಬಗು’ ಎನ್ನುವ ಮಂಕು ತಿಮ್ಮನ ಉಪದೇಶವನ್ನು ಅಕ್ಷರಶಃ ಜಾರಿಗೆ ತಂದವರು. ಅವರದು ಸಾಂಪ್ರದಾಯಿಕ ಕೃಷಿಯ ಜೊತೆಗೆ ಹೊಸ ವಿಜ್ಞಾನ ಎನಿಸಿಕೊಂಡಿರುವ ಸಾವಯವ ಕೃಷಿಯ ಆಧುನಿಕತೆಯನ್ನು ಹದವಾಗಿ ಬೆರೆಸಿ ರೈತರ ಬದುಕನ್ನು ಇನ್ನಷ್ಟು ಹಸಿರುಗೊಳಿಸಿದವರು.

ತುಮಕೂರಿನ ರೆಹನಾ ಬೇಗಂ ಅವರದ್ದು ಇನ್ನೊಂದು ರೀತಿಯ ಸಾರ್ಥಕ ಬದುಕು. ಹಾವಿನ ಕಡಿತದಿಂದ ಸಾವಿನ ಮನೆಯ ಬಾಗಿಲು ತಟ್ಟಿದವರನ್ನು ತಮ್ಮದೇ ಔಷಧಿಯ ಮೂಲಕ ಮರಳಿ ಸಾವಿರದ ಮನೆಗೆ ಕರೆತರುವ ಸಾಹಸಿ ಅವರು. ತುರುವೇಕರೆಯಲ್ಲಿರುವ ರೆಹನಾ ಬೇಗಂ ಅವರ ಔಷಧಿಯಿಂದ ಮರು ಜನ್ಮ ಪಡೆದವರು 25,000 ಹೆಚ್ಚು ಎನ್ನುವುದು ಅದ್ಭುತ ಎನಿಸುವ ಸಾಧನೆ.

ರಾಯಚೂರಿನ ವಿದ್ಯಾ ಪಾಟೀಲ್ ಅವರದಂತೂ ಅತ್ಯಂತ ಮಾನವೀಯ ಸೇವೆ. ಮದ್ಯ ವ್ಯಸನದಿಂದ ಬಳಲುತ್ತಿರುವ ಸಮಾಜಕ್ಕೆ ಬಹುದೊಡ್ಡ ಚಿಕಿತ್ಸಕಿ ಅವರು. ಮದ್ಯಪಾನ ನಿಷೇಧ ಆಂದೋಲನದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿರುವ ರೀತಿ ಯಾವುದೇ ಸರ್ಕಾರಿ ಸಂಸ್ಥೆಯ ಕಾರ್ಯವೈಖರಿಯನ್ನೂ ನಾಚಿಸುವಂತಹದು.

ಡಾ. ಭುವನೇಶ್ವರಿ ಮೇಲಿನಮಠ ಅವರದು ಭಗೀರಥನ ಸಾಹಸಕ್ಕಿಂತ ಮಿಗಿಲಾದ ಸಾಹಸ. ಕನ್ನಡದ ಕುರಿತು ಅವಜ್ಷೆ ವ್ಯಾಪಕವಾಗುತ್ತಿರುವ ಇಂದಿನ ಸಂದರ್ಭದಲ್ಲಿ ತಾಂತ್ರಿಕ ಪರಿಣಿತರಿಗೆ ಸವಾಲು ಹಾಕಿ ಕಂಪ್ಯೂಟರ್ ಗೆ ಕನ್ನಡವನ್ನು ಅಳವಡಿಸುವ ಮಹಾನ್ ಸಾಹಸದಲ್ಲಿ ಯಶಸ್ವಿಯಾದವರು ಇವರು. 30 ಸಾವಿರಕ್ಕೂ ಹೆಚ್ಚು ಪದಗಳ ಮಾರ್ಫಲಾಜಿಕಲ್ ಡಿಕ್ಷನರಿ ರಚಿಸಿರುವ ಇವರನ್ನು ಆಧುನಿಕ ಪದ ಬ್ರಹ್ಮ ಎಂದರೂ ತಪ್ಪಾಗಲಾರದು.

ಎಂತಹ ವೈವಿಧ್ಯಮಯ ಕ್ಷೇತ್ರಗಳು! ಎಷ್ಟು ಕಠಿಣ ಸವಾಲುಗಳು! ಸಾಮಾನ್ಯರಾಗಿದ್ದರೆ ಬೆಚ್ಚಿ ಓಡುತ್ತಿದ್ದರೇನೋ? ಆದರೆ, ಇವರಿಗೆ ಅದು ಸವಾಲೇ ಅಲ್ಲ. ಅಲ್ಲಿರುವುದೆಲ್ಲ ಸಾಧಿಸಬೇಕೆನ್ನುವ ಛಲ ಮತ್ತು ಏಕಾಗ್ರ ಚಿತ್ತವಷ್ಟೇ.

ವೈದ್ಯಕೀಯವೋ, ಕೃಷಿಯೋ, ಇಂಜಿನಿಯರಿಂಗ್ ಕ್ಷೇತ್ರವೋ ಇದಾವುದೂ ಮಹತ್ವವಲ್ಲ. ಸಮಾಜಕ್ಕೆ ಏನಾದರೂ ಮರಳಿ ಕೊಡಬೇಕೆನ್ನುವ ಹಂಬಲ. ಮನುಕುಲಕ್ಕೆ ಒಂದಿಷ್ಟು ಒಳಿತುಮಾಡಬೇಕು ಎನ್ನುವ ಅಂತಃಕರಣ ಮಾತ್ರ ಇವರನ್ನು ಪ್ರೇರೇಪಿಸುವ ಧ್ಯೇಯಗಳು.

ನಾನು ಮೊದಲೇ ಹೇಳಿದಂತೆ ಮಾತೃ ಹೃದಯ ಮತ್ತು ಮಾನವೀಯ ಅಂತಃಕರಣಗಳ ಸಾಕ್ಷಿಪ್ರಜ್ಞೆ ನಮ್ಮ ಈ ಹಿರಿಯಕ್ಕಂದಿರು. ಇವರ ಸಾಧನೆಗೆ ನನ್ನ ವಿನಮ್ರ ಪ್ರಣಾಮಗಳು. ಇವರ ಸಾಧನೆಯ ಮುಂದೆ ನಾವೆಷ್ಟು ಅಲ್ಪರು ಎಂಬ ಭಾವ ಮೂಡುವುದು ಸುಳ್ಳಲ್ಲ.

ಕನ್ನಡದ ನಂಬರ್ 1 ದಿನ ಪತ್ರಿಕೆ ವಿಜಯವಾಣಿ ಅತ್ಯಂತ ಸಾರ್ಥಕವಾದ ಕೆಲಸ ಒಂದನ್ನು ಮಾಡಿದೆ. ಕನ್ನಡ ಸಂಸ್ಕೃತಿಯ ಸಮುದ್ರದ ಆಳದಿಂದ ಈ ಮುತ್ತುಗಳನ್ನು ಹೆಕ್ಕಿ ತೆಗೆದಿದೆ. ವಿಜಯವಾಣಿಗೂ ಅಭಿನಂದನೆಗಳು ಸಲ್ಲಬೇಕು.

ನನಗೆ ತುಂಬ ಇಷ್ಟವಾದ ಕಾರ್ಯಕ್ರಮದಲ್ಲಿ ಮನಸಾರೆಯಾಗಿ ಭಾಗವಹಿಸುತ್ತಿದ್ದೇನೆ. ಈ ಅಪ್ರತಿಮ ಸಾಧಕಿಯರನ್ನು ಗೌರವಿಸುವ ಧನ್ಯಭಾವವನ್ನು ಹೊಂದಿದ್ದೇನೆ.