ವೀರ ಯೋಧ ಮಂಡ್ಯದ ಗುರು ಪಾರ್ಥಿವ ಶರೀರ ಬೆಂಗಳೂರಿಗೆ ಆಗಮನ

ಬೆಂಗಳೂರು: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ಸಂಭವಿಸಿದ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಮಂಡ್ಯದ ಗುರು ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಎಚ್​ಎಎಲ್​ ವಿಮಾನ ನಿಲ್ದಾಣಕ್ಕೆ ತರಲಾಯಿತು.

ಗುರು ಅವರ ಶರೀರವನ್ನು ಹೊತ್ತ ವಾಯುಪಡೆಯ ವಿಶೇಷ ವಿಮಾನವು ಮಧ್ಯಾಹ್ನ ಒಂದು ಗಂಟೆಗೆ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಮೊದಲಿಗೆ ಪಾರ್ಥಿವ ಶರೀರಕ್ಕೆ ಗೌರವ ನಮನ ಸಲ್ಲಿಸಿದರು.

ಇದಾದ ನಂತರ ಗುರು ಅವರ ಶರೀರವನ್ನು ರಸ್ತೆ ಮಾರ್ಗವಾಗಿ ಮಂಡ್ಯದ ಹುಟ್ಟೂರು ಗುಡಿಗೆರೆಗೆ ಕೊಂಡೊಯ್ಯಲಾಗುತ್ತದೆ. ಸದ್ಯ ಗುಡಿಗೆರೆಯಲ್ಲಿ ಯೋಧ ಗುರು ಅವರ ಅಂತ್ಯ ಸಂಸ್ಕಾರಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ.