ಪ್ರಧಾನಿ ನರೇಂದ್ರ ಮೋದಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ: ಎಚ್​ಡಿಕೆ

ಐಟಿ ಕಚೇರಿ ಎದುರು ಜೆಡಿಎಸ್​ ಮತ್ತು ಕಾಂಗ್ರೆಸ್​ ಮುಖಂಡರ ಪ್ರತಿಭಟನೆ

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಐಟಿ ಇಲಾಖೆ ಸೇರಿದಂತೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮೋದಿ ಮತ್ತು ಅಮಿತ್​ ಷಾ ಅವರ ಸೂಚನೆ ಮೇರೆಗೆ ಜೆಡಿಎಸ್​ ಮತ್ತು ಕಾಂಗ್ರೆಸ್​ ನಾಯಕರನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆದಿದೆ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಐಟಿ ಕಚೇರಿ ಎದುರು ಮಾತನಾಡಿದ ಅವರು ಇಲ್ಲಿನ ಓರ್ವ ಬಿಜೆಪಿ ಮುಖಂಡರು ಒಂದು ಲಿಸ್ಟ್​ ಅನ್ನು ಅಮಿತ್​ ಷಾಗೆ ಕಳುಹಿಸುತ್ತಾರೆ. ಅಮಿತ್​ ಷಾ ಅಧಿಕಾರಿಗಳನ್ನು ಕಳುಹಿಸಿ ಆ ಲಿಸ್ಟ್​ನಲ್ಲಿರುವವರ ಮೇಲೆ ದಾಳಿ ಮಾಡಿಸುತ್ತಿದ್ದಾರೆ. ಸೋಮನಹಳ್ಳಿಯಲ್ಲಿ ಬಿಜೆಪಿ ನಾಯಕರೊಬ್ಬರು ಐಟಿ ದಾಳಿ ಆಗುತ್ತೆ ಎಂದು ಹೇಳುತ್ತಾರೆ. ಆ ಮೇಲೆ ದಾಳಿಯಾಗುತ್ತದೆ. ಇದರಿಂದ ನಾನು ಭಯಭೀತನಾಗಿಲ್ಲ. ನನ್ನ ಮನೆ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಐಟಿ ಅಧಿಕಾರಿಗಳು ಯಾವಾಗ ಬೇಕಾದರೂ ಬರಬಹುದು ಎಂದು ಎಚ್​ಡಿಕೆ ಕೇಂದ್ರದ ವಿರುದ್ಧ ಕಿಡಿ ಕಾರಿದರು.

ನಾವು ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ

ಮೋದಿ, ಅಮಿತ್​ ಷಾ ಮತ್ತು ಅರುಣ್​ ಜೇಟ್ಲಿ ಹೇಳದೆ ಐಟಿ ದಾಳಿ ನಡೆಯುವುದಿಲ್ಲ. ನಮ್ಮ ಬಳಿಯೂ ಎಸಿಬಿ ಇದೆ. ಆದರೆ ನಾವು ಯಾವತ್ತೂ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್​ 52 ವರ್ಷ ಅಧಿಕಾರ ನಡೆಸಿದೆ. ಆದರೆ ಚುನಾವಣೆ ವೇಳೆ ಎಂದೂ ಐಟಿ ದಾಳಿ ಮಾಡಿಲ್ಲ. ಪ್ರಧಾನಿಗೆ ಸೋಲಿನ ಭಯ ಶುರುವಾಗಿದೆ. ಹಾಗಾಗಿ ಅವರು ಐಟಿ ದಾಳಿ ಮಾಡಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದರು.

ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ

ಮುಖ್ಯಮಂತ್ರಿಯೊಬ್ಬರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದು ಕಡಿಮೆ. ದೇಶದ ಒಕ್ಕೂಟದ ವ್ಯವಸ್ಥೆಯಲ್ಲಿ ಇದು ಸರಿಯಲ್ಲ. ಕೇಂದ್ರ ಸರ್ಕಾರ ಬಿಜೆಪಿಯೇತರ ರಾಜ್ಯಗಳನ್ನ ಟಾರ್ಗೆಟ್ ಮಾಡುತ್ತಿರುವುದು ಸರಿಯಲ್ಲ. ಇಷ್ಟು ವರ್ಷಗಳಿಂದ ಒಕ್ಕೂಟ ವ್ಯವಸ್ಥೆ ಉತ್ತಮವಾಗಿ ನಡೆದುಕೊಂಡು ಬಂದಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ತನಿಖಾ ಸಂಸ್ಥೆಗಳ ದುರುಪಯೋಗವಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ದಾಳಿ ನಡೆದರೆ ಸಮಸ್ಯೆಯಿಲ್ಲ. ಆದರೆ ರಾಜಕೀಯ ಪ್ರೇರಿತ ದಾಳಿ ಸರಿಯಲ್ಲ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಮೇಲೆ ದಾಳಿ ಮಾಡಿದ್ದಾರೆ. ಕಪ್ಪು ಹಣ ಇಟ್ಟವರನ್ನು ಗುರುತು ಮಾಡಿ ದಾಳಿ ಮಾಡಿಲ್ಲ. ಆಪರೇಷನ್ ಕಮಲ ಮಾಡಿ 20 ಕೋಟಿ, 30 ಕೋಟಿ ಕೊಡುವವರ ಮೇಲೆ ದಾಳಿ ಮಾಡಿಲ್ಲ. ಇದು ಕೇಂದ್ರ ಸರ್ಕಾರದ ಪಕ್ಷಪಾತ ನೀತಿಯನ್ನು ತೋರಿಸುತ್ತದೆ ಎಂದು ಡಿಸಿಎಂ ಜಿ. ಪರಮೇಶ್ವರ್​ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸಿದರು.

ಬಿಗಿ ಭದ್ರತೆ

ಜೆಡಿಎಸ್​ ಮತ್ತು ಕಾಂಗ್ರೆಸ್​ ನಾಯಕರು ಕ್ವೀನ್ಸ್​ ರಸ್ತೆಯಲ್ಲಿರುವ ಐಟಿ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪೂರ್ವ ವಿಭಾಗದ ಡಿಸಿಪಿ ರಾಹುಲ್​ ಕುಮಾರ್​ ನೇತೃತ್ವದಲ್ಲಿ 3 ಎಸಿಪಿ, 13 ಇನ್ಸ್​ಪೆಕ್ಟರ್​ ಮತ್ತು 300 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜತೆಗೆ ನಾಲ್ಕು ಕೆಎಸ್​ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ.