ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಎರಡು ದಿನ ಕಳೆಯುತ್ತೇನೆ: ಸಿಎಂ ಎಚ್​ಡಿಕೆ

ಬೆಂಗಳೂರು: ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಎರಡು ದಿನ ಕಳೆಯುತ್ತೇನೆ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಎರಡನೇ ದಿನದ ಡಿಸಿ, ಸಿಇಒಗಳ ಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬುದನ್ನು ಪ್ರಸ್ತಾಪಿಸಿ, ನನಗೆ ಒಂದು ವರ್ಷ ಸಮಯ ಕೊಡಿ. ಉ.ಕ.ಭಾಗದಲ್ಲಿ ಕೈಗಾರಿಕೆ ಅಭಿವೃದ್ಧಿಗೊಳಿಸುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.

ಪ್ರತಿ ಜಿಲ್ಲೆಗಳಲ್ಲಿಯೂ ಎರಡು ದಿನ ಕಳೆಯುವ ಮೂಲಕ ಸ್ವತಃ ನಾನೆ ಜನರ ಸಮಸ್ಯೆ ಆಲಿಸುತ್ತೇನೆ. ಏನೇ ಸಮಸ್ಯೆಯಿದ್ದರೂ ಉತ್ತರ ಕರ್ನಾಟಕದ ಭಾಗದವರು ನನ್ನನ್ನು ನೇರವಾಗಿ ಭೇಟಿಯಾಗಬಹುದು ಎಂದರು.

ಈ ಭಾಗದ ಅಭಿವೃದ್ಧಿ ಬಗ್ಗೆ ನನ್ನದೇ ಆದ ಕನಸುಗಳಿವ ಎಂದ ಎಚ್​ಡಿಕೆ, ಸುವರ್ಣಸೌಧ ಪ್ರತಿದಿನ ಚಟುವಟಿಕೆಯಿಂದಿರಲು ಏನು ಮಾಡಬೇಕು ಅನ್ನೋ ಬಗ್ಗೆ ಬ್ಲೂ ಪ್ರಿಂಟ್ ರೆಡಿಯಾಗಿದೆ. ಸುವರ್ಣಸೌಧಕ್ಕೆ ಯಾವ ಇಲಾಖೆಯ ಅಧಿಕಾರಿಗಳನ್ನು ಬೆಂಗಳೂರಿನಿಂದ ಕಳುಹಿಸಬೇಕು ಎಂಬ ತೀರ್ಮಾನವಾಗಿದೆ ಎಂದಿದ್ದಾರೆ.

ನಿನ್ನೆ ನಡೆದ ಸಭೆಯಲ್ಲಿ ರೈತರ ಸಾಲಮನ್ನಾ ವಿಚಾರ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಕುರಿತು ಪರಿಶೀಲನೆ ನಡೆಯಿತು. ಇಂದಿನ ಸಭೆಯಲ್ಲಿ ನೆರೆ ಹಾಗೂ ಬರ ಪರಿಸ್ಥಿತಿ ಕುರಿತು ಅವಲೋಕನ ಹಾಗೂ ಪರಿಹಾರ ವಿತರಣೆ ಕುರಿತು ಸಿಎಂ ಪರಿಶೀಲನೆ ನಡೆಸಿದರು.

ರಾಜಕೀಯ ಮಾಡುತ್ತಿದ್ದಾರೆ
ಪ್ರತ್ಯೇಕ ಉತ್ತರ ಕರ್ನಾಟಕದ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಲೋಕಸಭೆ ಚುನಾವಣೆವರೆಗೂ ಬಿಜೆಪಿ ಈ ರೀತಿ ಹೇಳಿಕೊಂಡು ರಾಜಕೀಯ ಮಾಡುತ್ತದೆ. ಉತ್ತರ ಕರ್ನಾಟಕ ಭಾಗಕ್ಕೆ ನಾನು ಎಲ್ಲ ಮಾಡಿದ್ದೇನೆ ಎಂದು ಬಿಎಸ್​ವೈ ಸುಮ್ಮನೆ ಹೇಳಿಕೊಳ್ಳುತ್ತಿದ್ದಾರೆ ಎಂದರು. (ದಿಗ್ವಿಜಯ ನ್ಯೂಸ್​)