ಕುಟುಂಬದ ಅಧಿಕಾರ ದಾಹಕ್ಕಾಗಿ ರಾಜ್ಯ ಒಡೆಯುವ ಹುನ್ನಾರ: ಬಿಎಸ್​ವೈ

ಬೆಳಗಾವಿ: ತ್ಯಾಗ, ಬಲಿದಾನ ಹಾಗೂ ಹೋರಾಟದ ಮೂಲಕ ಕರ್ನಾಟಕದ ಏಕೀಕರಣವಾಗಿದೆ. ಅದಕ್ಕೆ ಧಕ್ಕೆ ತರುವ ಕೆಲಸವನ್ನ ಯಾರು ಮಾಡಬಾರದು. ಪ್ರತ್ಯೇಕ ಕರ್ನಾಟಕದ ಬಗ್ಗೆ ಹೋರಾಟ ಮಾಡೋದು ಬೇಡ. ಈ ಅನ್ಯಾಯದ ಬಗ್ಗೆ ಚರ್ಚಿಸೋಣ, ಸದನದ ಹೊರಗೂ-ಒಳಗೂ ಹೋರಾಡಲು ನಾವು ಸಿದ್ಧರಿದ್ದೇವೆ ಎಂದು ವಿಪಕ್ಷ ನಾಯಕ ಬಿ.ಎಸ್​. ಯಡಿಯೂರಪ್ಪ ಅವರು ತಿಳಿಸಿದರು.

ಪ್ರತ್ಯೇಕ ರಾಜ್ಯದ ಕೂಗು ಹಿನ್ನೆಲೆ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಹೋರಾಟ ಕೈಬಿಡುವಂತೆ ಮನವಿ ಮಾಡಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲು ನಮ್ಮ 104 ಶಾಸಕರು ಬಿಡುವುದಿಲ್ಲ. ನಮ್ಮ 5 ವರ್ಷದ ಅವಧಿಯಲ್ಲಿ ಎಲ್ಲರಿಗೂ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದೇವೆ. ಆದರೆ, ಉತ್ತರ ಕರ್ನಾಟಕದ ಬಗ್ಗೆ ಸಿಎಂ ಕುಮಾರಸ್ವಾಮಿ ಆಡಿರುವ ದುರಹಂಕಾರದ ಮಾತುಗಳು ಪ್ರಜಾಪ್ರಭುತ್ವಕ್ಕೆ ಅವಮಾನ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅಧಿಕಾರ ದಾಹಕ್ಕಾಗಿ ರಾಜ್ಯ ಒಡೆಯುವ ಹುನ್ನಾರ
ಉ.ಕ. ಅಭಿವೃದ್ಧಿ ಬಗ್ಗೆ ಪತ್ರ ಬರೆದು ತಿಳಿಸಿದರೂ ಸರ್ಕಾರ ಸ್ಪಂದಿಸಿಲ್ಲ. ಬೊಮ್ಮಾಯಿ, ನಿಜಲಿಂಗಪ್ಪ ಹಾಗೂ ಪಾಟೀಲ್ ಕೊಡುಗೆಯನ್ನ ಪ್ರಶ್ನಿಸಿದ್ದಾರೆ. ಪ್ರಧಾನಿಯಾಗಿ ದೇವೇಗೌಡರ ಕೊಡುಗೆ ಏನಿದೆ ಎಂದು ಪ್ರಶ್ನಿಸಿದ ಬಿಎಸ್​ವೈ, ಕುಮಾರಸ್ವಾಮಿ ಕ್ಷಮೆ ಕೇಳುವ ಬದಲು, ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಜನತಾದಳವನ್ನು ಒಡೆದಿದ್ದಾರೆ. ಕೈಹಿಡಿದವರಿಗೆ ದ್ರೋಹ ಮಾಡಿದ್ದಾರೆ. ಈಗ ಕುಟುಂಬದ ಅಧಿಕಾರ ದಾಹಕ್ಕಾಗಿ ರಾಜ್ಯ ಒಡೆಯುವ ಹುನ್ನಾರ ಮಾಡುತ್ತಿದ್ದಾರೆ. ಅಪ್ಪ-ಮಕ್ಕಳ ಹೇಳಿಕೆಗಳು ಬಾಯಿ ತಪ್ಪಿನಿಂದ ಬಂದ ಮಾತುಗಳಲ್ಲ. ಇದರ ಹಿಂದೆ ಪೂರ್ವ ನಿಯೋಜಿತ ತಂತ್ರ ಅಡಗಿದೆ ಎಂದು ಆರೋಪಿಸಿದರು.

ಪ್ರತಿಭಟನೆ ಕೈಬಿಡುವಂತೆ ಮನವಿ
ಹಿಂದೆಂದೂ ಸ್ವಾಮೀಜಿಗಳು ಪ್ರತಿಭಟನೆ ಮಾಡುವ ಸ್ಥಿತಿ ಬಂದಿರಲಿಲ್ಲ. ಇದಕ್ಕೆ ಕುಮಾರಸ್ವಾಮಿಯವರ ಬೇಜವಾಬ್ದಾರಿ ಹೇಳಿಕೆ ಕಾರಣ. ಹೋರಾಟಗಾರಲ್ಲಿ‌ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಅನೇಕ ಮಹನೀಯರ ಪ್ರಯತ್ನದಿಂದ ಕರ್ನಾಟಕ ಏಕೀಕರಣ ಆಗಿದೆ. ಅಲೂರ ವೆಂಕಟರಾಯರು, ಫಗು ಹಳಕಟ್ಟಿ, ಕುವೆಂಪು, ಬೇಂದ್ರೆ ಹಾಗೂ ಶಿವರಾಮ ಕಾರಂತರು ಹೋರಾಟ ಮಾಡಿ ಕರ್ನಾಟಕ ಏಕೀಕರಣವಾಗಿದೆ. ಈ ಭಾಗಕ್ಕೆ ಕೊರತೆ ಆಗಿರುವ ಎಲ್ಲಾ ಅಭಿವೃದ್ಧಿದ್ದಿ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ. ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಿ, ಅಲ್ಲದೆ, ಆಗಸ್ಟ್​ 2 ರಂದು ಕರೆಕೊಟ್ಟಿರುವ 13 ಜಿಲ್ಲೆ ಬಂದ್​ ಮಾಡದಂತೆ ಮನವಿ ಮಾಡಿದರು.

ಕಚೇರಿಯನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸುತ್ತೇನೆ
ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ನನ್ನ ಕಚೇರಿಯನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸುತ್ತೇನೆ. ಅದಕ್ಕೂ ಮುನ್ನ ಎಚ್​ಡಿಕೆಯಿಂದ ಕೆಲಸ ಮಾಡಿಸಲು ಪ್ರಯತ್ನ ಮಾಡುತ್ತೇನೆ. 13 ಜಿಲ್ಲೆಯಲ್ಲೂ ನಾನು ಸಹ ಪ್ರವಾಸ ಮಾಡುತ್ತೇನೆ. ಅವರ ಬೇಡಿಕೆ ಅರಿತು ಸದನದ ಹೊರಗೆ, ಒಳಗೆ ಹೋರಾಡುತ್ತೇನೆ ಎಂದು ತಿಳಿಸಿದರು.

ಬಿಎಸ್​ವೈ ಜತೆ ಶಾಸಕರಾದ ಉಮೇಶ ಕತ್ತಿ, ಅಭಯ ಪಾಟೀಲ, ಮಹಾದೇವಪ್ಪ ಯಾದವಾಡ, ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಎ.ಎಸ್.ಪಾಟೀಲ‌ ನಡಹಳ್ಳಿ ಮತ್ತಿರರು ಇದ್ದರು.