ತೆರಿಗೆ ಹೊರೆ, ಗಾಯದ ಮೇಲೆ ಬರೆ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಸಾಲಮನ್ನಾ ಹಾಗೂ ಇತರ ಯೋಜನೆಗಳಿಗೆ ಸಂಪನ್ಮೂಲ ಸಂಗ್ರಹಿಸಲು ಹರಸಾಹಸ ಪಡುತ್ತಿರುವ ರಾಜ್ಯ ಸರ್ಕಾರಕ್ಕೀಗ ತೆರಿಗೆ ಸಂಗ್ರಹಣೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ಮತ್ತೊಂದು ಆತಂಕದ ಸುದ್ದಿ ಬೆನ್ನೇರಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳ ಸಂಗ್ರಹಣೆಯ ವಿವರಗಳು ಇದೀಗ ಅಧಿಕೃತವಾಗಿ ಬಹಿರಂಗವಾಗಿದೆ. ತೆರಿಗೆ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದಿದ್ದರೂ ಕೇಂದ್ರದ ತೆರಿಗೆ ಪಾಲು ಹಾಗೂ ಸಹಾಯಧನ ಹೆಚ್ಚಿನ ಪ್ರಮಾಣದಲ್ಲಿ ದೊರಕಿರುವುದರಿಂದ ಕೇಂದ್ರ ಸರ್ಕಾರದ ಮೇಲೆ ಹೆಚ್ಚು ಅವಲಂಬಿತವಾಗುವ ಅನಿವಾರ್ಯತೆ ಎದುರಾಗಿದೆ. ಸಾಲಮನ್ನಾಕ್ಕೆ 44,700 ಕೋಟಿ ರೂ., 2 ಕೆಜಿ ಹೆಚ್ಚಳ ನಿರ್ಧಾರದಿಂದ 1,500 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಸೇರಿದಂತೆ ಪ್ರಮುಖ ಯೋಜನೆಗಳಿಗಾಗಿ ಹಣಕಾಸಿನ ಅಗತ್ಯ ಹೆಚ್ಚಾಗಿದೆ. ಆದರೆ ಸಂಪನ್ಮೂಲ ಕ್ರೋಡೀಕರಣ ಇದೇ ಹಾದಿಯಲ್ಲಿ ಸಾಗಿದರೆ ಕಷ್ಟವೆಂಬ ಪರಿಸ್ಥಿತಿ ಇದೆ.

ಮೊದಲ ತ್ರೖೆಮಾಸಿಕದ ಎರಡು ತಿಂಗಳ ಅವಧಿಯಲ್ಲಿ ಒಟ್ಟಾರೆ ರಾಜ್ಯದ ಸ್ವಂತ ಸಂಪನ್ಮೂಲ ಸಂಗ್ರಹ ಕಳೆದ ವರ್ಷದ ಇದೇ ಅವಧಿಗಿಂತ ಶೇ. 6.9 ಕಡಿಮೆ ಇದೆ. ವಾಣಿಜ್ಯ ತೆರಿಗೆ, ಮೋಟಾರ್ ವಾಹನ, ಇತರೆ ತೆರಿಗೆ ಹಾಗೂ ತೆರಿಗೆಯೇತರ ಸಂಪನ್ಮೂಲಗಳೆಲ್ಲವೂ ಋಣಾತ್ಮಕ ಬೆಳವಣಿಗೆ ದಾಖಲಿಸಿವೆ.

ರಾಜ್ಯದ ಸ್ವಂತ ಸಂಪನ್ಮೂಲಕ್ಕೆ ಹೆಚ್ಚಿನ ಆದಾಯ ತರುವ ವಾಣಿಜ್ಯ ತೆರಿಗೆ ಶೇ. 13.7 ಕಡಿಮೆಯಾಗಿದ್ದರೆ, ಮೋಟಾರ್ ವಾಹನ ಶೇ. 1.1 ಇಳಿದಿದೆ. ವಿದ್ಯುತ್, ಗಣಿ, ಕಂದಾಯದಂತಹ ಇತರೆ ತೆರಿಗೆಗಳ ಸಂಗ್ರಹಣೆಯ ಪ್ರಮಾಣ ಶೇ. 79.1 ಕುಸಿದಿದೆ. ತೆರಿಗೆಯೇತರ ಆದಾಯದ ಸಂಗ್ರಹಣೆ ಶೆ. 11.8ರಷ್ಟು ಇಳಿಕೆ ಕಂಡಿದೆ.

ಚುನಾವಣೆ ಕಾರಣ?

ಜಿಎಸ್​ಟಿ ಜಾರಿ ಕಾರಣ ಹೊಂದಾಣಿಕೆಗೆ ಇನ್ನೂ ಸಮಯ ಬೇಕಾಗುತ್ತದೆ ಎನ್ನುವ ಅಧಿಕಾರಿಗಳು ಮತ್ತೊಂದೆಡೆ ಚುನಾವಣೆಯ ಕಾರಣವನ್ನೂ ನೀಡುತ್ತಾರೆ. ರಾಜ್ಯ ವಿಧಾನಸಭೆಗೆ ಚುನಾವಣೆ ಇದ್ದುದರಿಂದ ಸರ್ಕಾರವೇ ಇರಲಿಲ್ಲ. ಅಧಿಕಾರಿಗಳು ಜಿಎಸ್​ಟಿ ಜಾರಿಗೆ ಇನ್ನಷ್ಟು ಪ್ರಯತ್ನ ನಡೆಸಬೇಕಾಗಿತ್ತು, ಅನೇಕ ಕಡೆ ಇನ್ನೂ ಬಿಲ್ ಹಾಕುತ್ತಿಲ್ಲ, ಅಧಿಕಾರಿಗಳು ಗೊತ್ತಿದ್ದರೂ ಮೌನವಾಗಿದ್ದಾರೆ ಎಂಬ ದೂರುಗಳಿವೆ.

ಕೇಂದ್ರದ ಮೇಲೆ ಅವಲಂಬನೆ

ಜಿಎಸ್​ಟಿಯಿಂದ ಹೆಚ್ಚುವರಿ ತೆರಿಗೆ ಸಂಗ್ರಹವಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಆ ರೀತಿ ಆಗುತ್ತಿಲ್ಲ. ಆದ್ದರಿಂದ ಈ ವರ್ಷ 10,600 ಕೋಟಿ ರೂ.ಗಳ ಪರಿಹಾರದ ನಿರೀಕ್ಷೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಆದಷ್ಟು ಬೇಗ ಪರಿಹಾರದ ಮೊತ್ತ ಬಿಡುಗಡೆ ಮಾಡಿದರೆ ಸಮಸ್ಯೆಯಾಗುವುದಿಲ್ಲ. ಇಲ್ಲದಿದ್ದರೆ ಕಷ್ಟವಾಗುತ್ತದೆ ಎಂಬ ಅಭಿಪ್ರಾಯ ಇದೆ.

ಕೇಂದ್ರದ ಮೇಲೆ ಹೆಚ್ಚು ಅವಲಂಬನೆಯಾಗುವ ಸ್ಥಿತಿ ರಾಜ್ಯಕ್ಕೆ ಇದೆ. ಕೇಂದ್ರ ಸರ್ಕಾರ ತೆರಿಗೆ ಹಂಚಿಕೆ ಹಾಗೂ ಸಹಾಯಧನದಲ್ಲಿ ನಿರೀಕ್ಷೆಯಂತೆ ಹಣ ಬಿಡುಗಡೆ ಮಾಡಿದೆ. ಆದ್ದರಿಂದ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾದರೂ ಸುಧಾರಿಸುವ ಸ್ಥಿತಿ ಇರುತ್ತದೆ. ತೆರಿಗೆ ಹಂಚಿಕೆ ಈ ವರ್ಷ 36,215 ಕೋಟಿ ರೂ.ಗಳ ನಿರೀಕ್ಷೆ ಇದ್ದು, ಎರಡು ತಿಂಗಳಲ್ಲಿ 5190 ಕೋಟಿ ರೂ. ಬಿಡುಗಡೆಯಾಗಿದೆ. ಸಹಾಯಧನ 25,742 ಕೋಟಿ ರೂ.ಗಳ ನಿರೀಕ್ಷೆ ಇದ್ದು ಈಗಾಗಲೇ 4204 ಕೋಟಿ ರೂ.ಗಳಷ್ಟು ನೀಡಿದೆ.

ಸದ್ಯ ನಮ್ಮಲ್ಲಿ ಈಗ ಶೇ.82 ಅನುದಾನ ಆಯವ್ಯಯದಲ್ಲಿ ಘೋಷಣೆ ಮಾಡಿರುವ ಕಾರ್ಯಕ್ರಮಗಳಿಗೆ ಅಗತ್ಯವಿದೆ. ಆದರೆ ಪರಿಸ್ಥಿತಿ ಸುಧಾರಣೆಯಾಗದಿದ್ದರೆ ಕಷ್ಟವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

29 ಲಕ್ಷದ ಕಾರ್ಯಕ್ರಮಕ್ಕೆ 49 ಲಕ್ಷ ರೂ.ವೇತನ

ಸರ್ಕಾರದ ಕಾರ್ಯಕ್ರಮಗಳು ಮೂಗಿಗಿಂತ ಮೂಗುತಿ ಭಾರ ಎಂಬಂತಾಗಿದೆ ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ. ಇಲಾಖೆಯೊಂದರಲ್ಲಿ 29 ಲಕ್ಷ ರೂ.ಗಳ ಯೋಜನೆಯೊಂದಿದೆ. ಅದರ ಜಾರಿಗೆ ಇರುವ ಸಿಬ್ಬಂದಿಯ ವೇತನವೇ 49 ಲಕ್ಷ ರೂ.ಗಳಾಗುತ್ತದೆ. ಇಂತಹ ಯೋಜನೆಗಳ ಅಗತ್ಯತೆಯನ್ನು ಆರ್ಥಿಕ ತಜ್ಞರು ಪ್ರಶ್ನಿಸುತ್ತಾರೆ.

ಕಾರ್ಯಕ್ರಮಗಳ ಶುದ್ಧೀಕರಣವಾಗಬೇಕಾಗಿದೆ. ನಮ್ಮ ಸಂಪನ್ಮೂಲ ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು. ಜಿಎಸ್​ಟಿಯಿಂದ ಪರಿಹಾರ ಎಷ್ಟು ಸಿಗುತ್ತದೆ ಎಂಬ ಗೊಂದಲ ಇದೆ. ತೆರಿಗೆ ಸಂಗ್ರಹಣೆ ಇದೇ ರೀತಿ ಮುಂದುವರೆದರೆ ಕಷ್ಟವಾಗುತ್ತದೆ.

-ಮಧುಸೂದನರಾವ್ ಬಿ.ವಿ. ಆರ್ಥಿಕ ತಜ್ಞರು

ಇಳಿಕೆ ಯಾವುದು?

ವಾಣಿಜ್ಯ ತೆರಿಗೆ, ಮೋಟಾರು ವಾಹನ, ವಿದ್ಯುತ್, ಗಣಿ, ಕಂದಾಯ

ಎಷ್ಟು ಕಡಿಮೆ?

ಈ ವರ್ಷ 92,644 ಕೋಟಿ ರೂ. ಸ್ವಂತ ಸಂಪನ್ಮೂಲ ಸಂಗ್ರಹಣೆಯ ಗುರಿ ಹೊಂದಿದೆ. ಅದರಲ್ಲಿ ಮೊದಲ ಎರಡು ತಿಂಗಳು 13,891 ಕೋಟಿ ರೂ. ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 14,922 ಕೋಟಿ ರೂ. ಸಂಗ್ರಹವಾಗಿತ್ತು. ಗುರಿ ಇದ್ದದ್ದು 89,957 ಕೋಟಿ ರೂ. ಅಂದರೆ ಕಳೆದ ವರ್ಷಕ್ಕಿಂತ ಈ ವರ್ಷ ಎರಡು ತಿಂಗಳ ಅವಧಿಯಲ್ಲಿ 1031 ಕೋಟಿ ರೂ. ಕಡಿಮೆ ಸಂಗ್ರಹವಾಗಿದೆ.

ಜಿಎಸ್​ಟಿ ಇನ್ನಷ್ಟು ಸುಧಾರಣೆಯಾದರೆ ತೆರಿಗೆ ಸಂಗ್ರಹಣೆ ಹೆಚ್ಚಾಗುತ್ತದೆ. ನಾಗರಿಕರೂ ಈ ಹೊಸ ಪದ್ಧತಿಗೆ ಹೊಂದಿ ಕೊಳ್ಳಬೇಕಾಗಿದೆ.

| ಬಿ.ಟಿ. ಮನೋಹರ್ ತೆರಿಗೆ ಸಲಹೆಗಾರರು