ಸಿಎಂ ಸಭೆ ವಿಫಲ

ಬೆಂಗಳೂರು: ರೈತರ ಬೆಳೆ ಸಾಲಮನ್ನಾ, ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ ಕುರಿತಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ರೈತ ಮುಖಂಡರೊಂದಿಗೆ ನಡೆಸಿದ ಸಭೆ ವಿಫಲವಾಗಿದೆ. ಸಭೆ ಬಳಿಕ ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ಖಚಿತ ಫಲಿತಾಂಶ ನೀಡುವಲ್ಲಿ ವಿಫಲವಾಗಿದ್ದು ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ಡಿ.9ರಂದು ಬೆಳಗಾವಿ ಡಿಸಿ ಕಚೇರಿ ಎದುರು ಚಳವಳಿ ನಡೆಸುತ್ತೇವೆ. ಸರ್ಕಾರ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯವಾಗುತ್ತದೆ ಎಂದರು. ಮತ್ತೊಂದೆಡೆ ಸಿಎಂ ಕುಮಾರಸ್ವಾಮಿ, ‘ನಾನು ಬೇರೆಯವರ ಹಂಗಿನಲ್ಲಿ ಇದ್ದೇನೆ. ಹಾಗಂತ ರೈತರು ಸಾಲಮನ್ನಾ ವಿಚಾರದಲ್ಲಿ ಅನುಮಾನ ಪಡುವುದು ಬೇಡ. ಸ್ವಲ್ಪ ಸಮಯ ಕೊಡಿ. ರೈತರೊಂದಿಗೆ ಕಾಟಾಚಾರಕ್ಕೆ ಸಭೆ ನಡೆಸುತ್ತಿಲ್ಲ’ ಎಂದು ಅಸಹಾಯಕತೆಯ ಮಾತುಗಳನ್ನಾಡಿದ್ದಾರೆ.

ರೈತರ ಮುಗ್ಧತೆ ದುರುಪಯೋಗ: ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಬಹುತೇಕ ರಾಜಕಾರಣಿಗಳೇ. ಕಬ್ಬು ಬೆಳೆಗಾರರ ವಿಚಾರದಲ್ಲಿ ಇದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ರೈತರ ಮುಗ್ಧತೆಯನ್ನು ಕಾರ್ಖಾನೆಗಳ ಮಾಲೀಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ‘ಸಕ್ಕರೆ ಕಾರ್ಖಾನೆಗಳ ಮಾಲೀಕರು ನೀವು ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ’ ಎಂದು ನನಗೆ ಬುದ್ಧಿವಾದ ಹೇಳುತ್ತಾರೆ. ಕಬ್ಬು ಬೆಳೆಗಾರರಿಗೆ ಎಫ್​ಆರ್​ಪಿ ದರವನ್ನೇ ಕೊಡಬೇಕು ಎಂದು ಮಾಲೀಕರಿಗೆ ಹೇಳಿದ್ದೇನೆ. ಹೊಸ ಕಾನೂನು ತರಲು ಸೂಚನೆ ನೀಡಿದ್ದೇನೆ. ತೂಕದಲ್ಲಿ ಮೋಸ ಮಾಡುವ ವಿಚಾರದಲ್ಲೂ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು

ಸಾಲಮನ್ನಾ ಯೋಜನೆಯಲ್ಲಿ ಕಾನೂನು ಲೋಪ ಉಂಟಾದರೆ ನಾಳೆ ನಾನು ವೈಯಕ್ತಿಕವಾಗಿ ನ್ಯಾಯಾಲಯದಲ್ಲಿ ಕೈ ಕಟ್ಟಿ ನಿಲ್ಲಬೇಕಾಗುತ್ತದೆ. ರೈತರಿಗೆ ವಿಧಾನಸೌಧದ ಗೇಟ್ 24 ಗಂಟೆ ತೆರೆದಿರುತ್ತದೆ. ಸರ್ಕಾರಕ್ಕೆ ದುಡ್ಡಿನ ಕೊರತೆ ಇಲ್ಲ. ಯಾವುದೇ ಆಸ್ತಿ ಮಾರಾಟ ಮಾಡದೆ ಸಾಲಮನ್ನಾ ಮಾಡಿಯೇ ತೀರುತ್ತೇನೆ. ಈ ಬಗ್ಗೆ ಯಾರೂ ಯಾರಲ್ಲೂ ಸಂಶಯ ಬಿತ್ತಬಾರದು.

| ಎಚ್.ಡಿ.ಕುಮಾರಸ್ವಾಮಿ ಸಿಎಂ

Leave a Reply

Your email address will not be published. Required fields are marked *