ಸಹಕಾರ ಸಾಲ ತಕ್ಷಣ ಮನ್ನಾ

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್​ಗಳ ಸಾಲಮನ್ನಾ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕುಗಳಲ್ಲಿರುವ 1 ಲಕ್ಷ ರೂ.ವರೆಗಿನ ಚಾಲ್ತಿ ಬೆಳೆ ಸಾಲ ಮನ್ನಾ ಮಾಡಿದೆ.

ರೈತರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳ ಬಾರದೆಂಬ ಎಚ್ಚರಿಕೆಯಿಂದ ಗುರುವಾರ ಸಚಿವ ಸಂಪುಟ ಈ ತೀರ್ಮಾನ ಕೈಗೊಂಡಿದೆ. ಇದರಿಂದಾಗಿ 20.38 ಲಕ್ಷ ರೈತರ 9448 ಕೋಟಿ ರೂ. ಚಾಲ್ತಿ ಸಾಲ ಮನ್ನಾ ಆಗಲಿದೆ.

ತಕ್ಷಣದಿಂದಲೇ ಸಾಲಮನ್ನಾ ಆದೇಶ ಜಾರಿಗೆ ಬರಲಿದ್ದು, 2018ರ ಜು.10ರೊಳಗಿನ ಕೃಷಿ ಸಾಲಗಳಿಗೆ ಈ ಆದೇಶ ಅನ್ವಯವಾಗಲಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಕೃಷಿ ಸಾಲ ಮನ್ನಾ ಮಾಡುವ ತೀರ್ವನವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲೇ ಕೈಗೊಳ್ಳುವುದಕ್ಕೂ ನಿರ್ಧರಿಸಲಾಗಿದೆ.

ಗುರುವಾರ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸಾಲ ಮನ್ನಾ ರೂಪುರೇಷೆಯ ಮಾನದಂಡದಲ್ಲಿ ಸಣ್ಣ ಬದಲಾವಣೆ ಬಗ್ಗೆ ಪ್ರಸ್ತಾಪಿಸಿದರು. ಸಾಲಮನ್ನಾ ವಿಚಾರದಲ್ಲಿ ಒಂದು ಜವಾಬ್ದಾರಿ ಇತ್ತು. ಸಾಲಮನ್ನಾ ಮಾಡುವುದಾಗಿ ಜನಗಳಿಗೆ ಮಾತುಕೊಟ್ಟಿದ್ದೆ, ಏನೋ ಹುಡುಗಾಟ ಆಡುತ್ತಾನೆ ಎಂದು ಚರ್ಚೆ ಮಾಡುತ್ತಿದ್ದರು. ಆದರೀಗ ಅನುಷ್ಠಾನ ಮಾಡಿ ತೋರಿಸಿದ್ದೇನೆ ಎಂದರು.

ರೈತರ ಸಾಲಮನ್ನಾ ರಾಜ್ಯದಲ್ಲಿ ಪ್ರಮುಖ ಹಾಗೂ ಸೂಕ್ಷ್ಮ ವಿಚಾರವಾಗಿತ್ತು ಹೀಗಾಗಿ ಸಹಕಾರ ಬ್ಯಾಂಕಿನಲ್ಲಿರುವ ರೈತರ ಚಾಲ್ತಿ ಸಾಲ ಮನ್ನಾ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದಾಗಿ ಹೇಳಿದರು.

10.07.2018 ರವರೆಗಿನ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡುವ ಬಗ್ಗೆ ಸಂಪುಟದಲ್ಲಿ ಒಪ್ಪಿಗೆ ಕೊಡಲಾಗಿದೆ. ಸಾಲ ಮನ್ನಾಗೆ ಹಣದ ಕೊರತೆ ಇಲ್ಲ. ಪ್ರತಿ ತಿಂಗಳು ನವೀಕರಣ ಮಾಡುವ ಮಾಹಿತಿ ತರಿಸಿ ಹಣಕಾಸು ಇಲಾಖೆ ಸಹಕಾರ ಸಂಘಗಳಿಗೆ ಹಣ ವರ್ಗಾಯಿಸಲಿದೆ ಎಂದು ಎಚ್ಡಿಕೆ ತಿಳಿಸಿದರು.

ಮುಂದಿನ ಸಂಪುಟದಲ್ಲೇ ರಾಷ್ಟ್ರೀಕೃತ ಬ್ಯಾಂಕ್ ಸಾಲಮನ್ನಾ ಮಾಡುತ್ತೇವೆ. ಮೊದಲ ಹಂತದಲ್ಲಿ 6500 ಕೋಟಿ ಸಾಲ ನಿಗದಿ ಮಾಡಲಾಗಿದೆ. ಬ್ಯಾಂಕರುಗಳ ಜತೆ ಚರ್ಚೆ ಮಾಡುತ್ತಿದ್ದೇನೆ, ರೈತರು ಗಾಬರಿ ಪಡಬೇಕಿಲ್ಲ ಎಂದು ಭರವಸೆ ನೀಡಿದರು.

ಒಂದು ಕುಟುಂಬ ಮಾತ್ರವಲ್ಲ: ರೈತರ ಸಾಲಮನ್ನಾ ಬಗ್ಗೆ ಈ ಹಿಂದಿನ ಮಾರ್ಗಸೂಚಿಯಲ್ಲಿದ್ದಂತೆ ’ಒಂದು ಕುಟುಂಬ’ ಎಂಬ ಪದ ಕೈಬಿಡಲಾಗಿದೆ. ಒಂದೇ ಕುಟುಂಬದಲ್ಲಿನ ಇತರರ ಕೃಷಿ ಸಾಲವನ್ನೂ ಮಾಡಲಾಗುತ್ತದೆ. ಉಳಿದಂತೆ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ಮುಂದಿನ ವರ್ಷದ ಜುಲೈ ಅಥವಾ ಆಗಸ್ಟ್ ಒಳಗೆ ರಾಷ್ಟ್ರೀಕೃತ ಬ್ಯಾಂಕಿನ ಸಾಲ ತೀರಿಸುತ್ತೇವೆ, ಅದಕ್ಕಾಗಿ ಯೋಜನೆ ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ. ನಾಲ್ಕು ವರ್ಷದಲ್ಲಿ ತೀರಿಸಬೇಕಾಗಿದ್ದನ್ನು ಒಂದೇ ವರ್ಷದಲ್ಲಿ ತೀರಿಸುವ ಗುರಿ ಹಾಕಿಕೊಂಡಿದ್ದೇವೆ. ಒಂದು ವೇಳೆ ರೈತರು ಮರುಪಾವತಿ ಮಾಡಿದ್ದರೆ ಸಾಲದ ಮೊತ್ತ ಅಥವಾ ಗರಿಷ್ಠ ಒಂದು ಲಕ್ಷ. ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ದುಡ್ಡಿನ ಗಿಡ ಬೆಳೆಸಿಲ್ಲ

‘ಸಾಲ ಮನ್ನಾ ಮಾಡಿದರೂ ಕೆಲವರು ಹಣ ಬಂದಿಲ್ಲ ಎಂದು ಟೀಕಿಸುತ್ತಿದ್ದಾರೆ. ರಾತ್ರೋರಾತ್ರಿ ಅಷ್ಟು ಹಣ ನೀಡಲು ನಾವೇನು ದುಡ್ಡಿನ ಗಿಡ ಬೆಳೆಸಿಲ್ಲ’… ಇದು ಕುಮಾರಸ್ವಾಮಿ ಅವರ ಆಕ್ರೋಶದ ನುಡಿ. ಗುರುವಾರ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಿಎಂ, ಸಾಲಮನ್ನಾ ವಿಚಾರ ಪ್ರಸ್ತಾಪಿಸುತ್ತಲೇ ಮತ್ತೊಮ್ಮೆ ತಾಳ್ಮೆ ಕಳೆದುಕೊಂಡರು. ಬಳಿಕ ಕೊಂಚ ಸಮಾಧಾನಗೊಂಡ ಅವರು ಸಾಲಮನ್ನಾದಿಂದ ಆಗುವ ಆರ್ಥಿಕ ಹೊರೆ ತಗ್ಗಿಸಲು ಮತ್ತು ಬ್ಯಾಂಕ್​ಗಳಿಗೆ ಹಣ ಪಾವತಿಸಲು ಆರ್ಥಿಕ ಕ್ರೋಡೀಕರಣಕ್ಕೆ ಕ್ರಮ ಕೈಗೊಳ್ಳುತ್ತಿರುವುದಾಗಿ ಹೇಳಿದರು.

ಇವರಿಗುಂಟು

# ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್, ಡಿಸಿಸಿ ಬ್ಯಾಂಕ್​ಗಳು ಹಾಗೂ ಪಿಕಾರ್ಡ್ ಬ್ಯಾಂಕ್​ಗಳು ವಿತರಿಸಿದ ಅಲ್ಪಾವಧಿ ಬೆಳೆಸಾಲದ ಪೈಕಿ ಜು.10ಕ್ಕೆ ಇರುವ ಹೊರಬಾಕಿ ಸಾಲಕ್ಕೆ ಮಾತ್ರ ಅನ್ವಯ

# ಈ ಅವಧಿಯಲ್ಲಿ ಸಾಲ ಪಡೆದು ರೈತರು ಮೃತಪಟ್ಟಿದ್ದಲ್ಲಿ, ಅಂತಹ ವಾರಸುದಾರರಿಗೂ ಸಹ ಈ ಸೌಲಭ್ಯ ದೊರೆಯುತ್ತದೆ.

# ಮನ್ನಾ ಮಾಡುವ ಸಾಲವು, ರೈತರು ಸಾಲ ಮರುಪಾವತಿ ಮಾಡುವ ಗಡುವು ದಿನಾಂಕಕ್ಕೆ ಜಾರಿಗೆ ಬರುತ್ತದೆ.

# ಜುಲೈ 10ಕ್ಕೆ ಹೊರಬಾಕಿ ಇರುವ ಮೊತ್ತವನ್ನು ಸರ್ಕಾರದ ಆದೇಶ ಜಾರಿಯಾಗುವ ದಿನಾಂಕಕ್ಕೆ ಪೂರ್ಣವಾಗಿ ಮರು ಪಾವತಿಸಿದ್ದಲ್ಲಿ ಮನ್ನಾ ಆಗಬೇಕಾದ ಮೊತ್ತ ರೈತರ ಉಳಿತಾಯ ಖಾತೆಗೆ ಜಮೆ.

# ಯೋಜನೆಯಲ್ಲಿ ಸಾಲಮನ್ನಾ ಆಗುವ ಅನುದಾನವನ್ನು ಡಿಬಿಟಿ ಮೂಲಕ ರೈತರ ಉಳಿತಾಯ ಖಾತೆಗೆ ಬಿಡುಗಡೆ ಮಾಡಲಾಗುವುದು.

ಇವರಿಗಿಲ್ಲ

# ಬೆಳೆಸಾಲ ಪಡೆದ ರೈತರು ಸರ್ಕಾರಿ, ಸಹಕಾರಿ ಮತ್ತು ಇತರೆ ಕ್ಷೇತ್ರದ ನೌಕರರಾಗಿದ್ದು, ಪ್ರತಿ ತಿಂಗಳು 20 ಸಾವಿರ ರೂ.ಗಿಂತ ಹೆಚ್ಚಿನ ವೇತನ ಅಥವಾ ಪಿಂಚಣಿ ಪಡೆಯುತ್ತಿದ್ದಲ್ಲಿ ಅಂತಹ ರೈತರಿಗೆ ಯೋಜನೆ ಅನ್ವಯಿಸುವುದಿಲ್ಲ.

# ಕಳೆದ 3 ವರ್ಷಗಳಲ್ಲಿ ಒಂದು ವರ್ಷ ಆದಾಯ ತೆರಿಗೆ ಪಾವತಿಸಿದ್ದರೆ ಅಂತಹ ರೈತರಿಗೆ ಅನ್ವಯ ಆಗುವುದಿಲ್ಲ.

# ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಒತ್ತೆ ಇಟ್ಟುಕೊಂಡು ನೀಡುವ ಅಡುವು ಸಾಲ, ಚಿನ್ನಾಭರಣ ಅಡವಿಟ್ಟುಕೊಂಡು ನೀಡುವ ಚಿನ್ನಾಭರಣ ಸಾಲ, ವಾಹನ ಖರೀದಿ ಸಾಲ, ಪಶುಭಾಗ್ಯ ಯೋಜನೆಯಡಿ ಪಶು ಆಹಾರ ಕೊಳ್ಳಲು ಸಾಲ, ಮೀನುಗಾರಿಕೆ ಉದ್ದೇಶಗಳಿಗೆ ನೀಡುವ ಸಾಲ, ಸ್ವಸಹಾಯ ಗುಂಪು ಮತ್ತು ಜಂಟಿ ಬಾದ್ಯತಾ ಗುಂಪುಗಳಿಗೆ ನೀಡುವ ಸಾಲಗಳಿಗೆ ಯೋಜನೆ ಅನ್ವಯ ಆಗುವುದಿಲ್ಲ.

ಇತರ ನಿಬಂಧನೆ

# ರೈತರ ಹೆಸರಿನಲ್ಲಿ ಜುಲೈ 10ಕ್ಕೆ ಡಿಸಿಸಿ ಬ್ಯಾಂಕ್ ಅಥವಾ ಪ್ಯಾಕ್ಸ್ ನಲ್ಲಿ ಮತ್ತು ಠೇವಣಿ ಇದ್ದಲ್ಲಿ ಅಂತಹ ಮೊತ್ತ ಹೊರಬಾಕಿಯಲ್ಲಿ ಕಳೆಯತಕ್ಕದ್ದು, ಈ ಯೋಜನೆಯಡಿ 1 ಲಕ್ಷ ರೂ. ಅಸಲು, ಸಂಪೂರ್ಣ ಚಾಲ್ತಿ ಸಾಲಕ್ಕೆ ಬಡ್ಡಿಯನ್ನು ಬಡ್ಡಿ ಸಹಾಯಧನ ಯೋಜನೆ ಅಡಿ ಭರಿಸಲಾಗುವುದು. ಸುಸ್ತಿ ಪ್ರಕರಣಗಳಲ್ಲಿ ರೈತರೇ ಬಡ್ಡಿ ಭರಿಸತಕ್ಕದ್ದು.

# ಯಾವುದೇ ರೈತರು ಒಂದಕ್ಕಿಂತ ಹೆಚ್ಚಿನ ಸಹಕಾರ ಸಂಘ, ಸಹಕಾರ ಬ್ಯಾಂಕ್​ಗಳಲ್ಲಿ ಸಾಲ ಪಡೆದಿದ್ದಲ್ಲಿ ಒಂದು ಸಂಸ್ಥೆಯಿಂದ ಮಾತ್ರ ಸಾಲ ಮನ್ನಾ ಸೌಲಭ್ಯ ಪಡೆಯತಕ್ಕದ್ದು.

#  ಯೋಜನೆಯಡಿ 20 ಲಕ್ಷ ರೈತರಿಗೆ -ಠಿ;9,448.61 ಕೋಟಿ ಸೌಲಭ್ಯ.

ರಾಜ್ಯದ ರೈತ ಸಮುದಾಯಕ್ಕೆ ನನ್ನದೊಂದು ಮನವಿ, ನಿಮ್ಮನ್ನು ನಾವು ಉಳಿಸುತ್ತೇವೆ. ಅದೇ ರಾಜ್ಯ ಸರ್ಕಾರದ ಮೊದಲ ಆದ್ಯತೆ.ಯಾವುದೇ ಕಾರಣಕ್ಕೂ ಆತ್ಮಹತ್ಯೆಯ ಹಾದಿ ಹಿಡಿಯಬೇಡಿ. ನಿಮ್ಮ ಕುಟುಂಬವನ್ನು ಬೀದಿಗೆ ತಳ್ಳಬೇಡಿ.

| ಕುಮಾರಸ್ವಾಮಿ ಮುಖ್ಯಮಂತ್ರಿ

Leave a Reply

Your email address will not be published. Required fields are marked *