ನೋಂದಣಿ ಅಡೆತಡೆ ನಿವಾರಣೆಗೆ ಬಂದ ಕಾವೇರಿ

ಬೆಂಗಳೂರು: ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಎದುರಿಸುತ್ತಿದ್ದ ತೊಡಕು ನಿವಾರಣೆಗೆ ಮೈತ್ರಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಇನ್ನು ಮುಂದೆ ಜನಸಾಮಾನ್ಯರೂ ನಿರಾಳರಾಗುವ ವಾತಾವರಣ ಸೃಷ್ಟಿಸಿದೆ.

ಆಸ್ತಿ ಹಸ್ತಾಂತರ, ಅಡಮಾನ, ಭೋಗ್ಯ, ಅಧಿಕಾರ ಪತ್ರಗಳ ನೋಂದಣಿ ವ್ಯವಸ್ಥೆಯಲ್ಲಿನ ತೊಡಕುಗಳನ್ನು ತೊಡೆದುಹಾಕಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ‘ಕಾವೇರಿ’ ಹೆಸರಿನಲ್ಲಿ ಆನ್​ಲೈನ್ ಸೇವೆ ಆರಂಭಿಸಿದೆ.

ಸ್ಥಿರಾಸ್ತಿ ಋಣಭಾರ ಪ್ರಮಾಣಪತ್ರ (ಇಸಿ) ಮತ್ತು ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲುಪ್ರತಿಗಳನ್ನು ಆನ್​ಲೈನ್ ಮುಖಾಂತರವೇ ಪಡೆಯಬಹುದಾಗಿದೆ.

ಒಂದು ವೇಳೆ ನಿರ್ದಿಷ್ಟ ಆಸ್ತಿಗಳ ಕುರಿತು ಋಣಭಾರಗಳನ್ನು ಪರಿಶೀಲಿಸಬೇಕಾದಲ್ಲಿ ಆಸ್ತಿ ವಿವರ ಪಡೆಯಬಹುದು. ಡಿಜಿಟಲ್ ಸಹಿ ಮಾಡಿದ ಋಣಭಾರ ಪ್ರಮಾಣಪತ್ರಗಳನ್ನು ಸಾರ್ವಜನಿಕರು ಆನ್​ಲೈನ್ ಮೂಲಕ ಸೂಕ್ತ ಶುಲ್ಕ ಪಾವತಿಸಿಯೂ ಪಡೆಯಬಹುದು. ಅಲ್ಲದೆ, ಸಾರ್ವಜನಿಕರು ಆಸ್ತಿಯ ವಿವರಗಳನ್ನು ತಂತ್ರಾಂಶದಲ್ಲಿ ನಮೂದಿಸಿ, ಆಸ್ತಿಯ ಮಾರ್ಗಸೂಚಿ ಮೌಲ್ಯವನ್ನು ಅವರೇ ಲೆಕ್ಕ ಮಾಡಬಹುದು ಹಾಗೂ ಪಾವತಿಸಬೇಕಾದ ಮುದ್ರಾಂಕ ಶುಲ್ಕವನ್ನು ಸರಳ ಮತ್ತು ಸುಲಭ ಹಂತಗಳಲ್ಲಿ ತಂತ್ರಾಂಶದಲ್ಲಿ ಲೆಕ್ಕ ಹಾಕಬಹುದು.

ಕಾವೇರಿ ಸೇವೆ ಸಾರ್ವಜನಿಕರಿಂದ ಉಪ ನೋಂದಣಿ ಕಚೇರಿಗೆ ಅನೇಕ ಬಾರಿ ಅಲೆದಾಡುವುದನ್ನು ತಪ್ಪಿಸುತ್ತದೆ. ಆನ್​ಲೈನ್ ಮೂಲಕವೇ ದಸ್ತಾವೇಜನ್ನು ನೋಂದಣಿಗೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ನೋಂದಾಯಿಸಬೇಕಾದ ಆಸ್ತಿಯ ಎಲ್ಲ ವಿವರಗಳನ್ನು ನೋಂದಣಿ ಪೂರ್ವದಲ್ಲಿ ಆನ್​ಲೈನ್ ಮೂಲಕ ನಮೂದಿಸಿ, ಮಾಹಿತಿಗಳನ್ನು ವೀಕ್ಷಿಸಿದ ನಂತರ ಅವಶ್ಯವಿದ್ದಲ್ಲಿ ಸರಿಪಡಿಸಿ ಸಂಬಂಧಪಟ್ಟ ದಾಖಲೆಗಳನ್ನು ಅಪ್​ಲೋಡ್ ಮಾಡಿ ಆನ್​ಲೈನ್​ನಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ನಿಗದಿಪಡಿಸಿದ ಆಸ್ತಿಯ ಮಾರ್ಗಸೂಚಿ ದರಗಳನ್ನು ತಂತ್ರಾಂಶದಲ್ಲಿ ಪಡೆದು, ದಸ್ತಾವೇಜಿಗೆ ಸಂಬಂಧಿಸಿದ ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಿಕೊಳ್ಳಬಹುದು. ನಂತರ ನಿರ್ಧರಿಸಿದ ಮಾರುಕಟ್ಟೆ ಮೌಲ್ಯದ ಮಂಜೂರು ಅರ್ಜಿಯನ್ನು ಉಪ ನೋಂದಣಿ ಅಧಿಕಾರಿಗಳಿಗೆ ನೀಡಬೇಕು.

ಹೊಸ ಸೇವೆಯಿಂದ ಸಾರ್ವಜನಿಕರು ಸುಲಭವಾಗಿ ಒಂಭತ್ತು ಸೇವೆಗಳ ಮಾಹಿತಿ ಪಡೆದುಕೊಳ್ಳಬಹುದು. ಮನೆಯಲ್ಲಿದ್ದುಕೊಂಡೇ ನೋಂದಣಿ ತಯಾರಿ ಮಾಡಿಕೊಳ್ಳಬಹುದಾಗಿದ್ದು, ಮಧ್ಯವರ್ತಿಗಳ ಹಾವಳಿ ನಿಲ್ಲುವ ಸಾಧ್ಯತೆ ಹೆಚ್ಚು. ಇದರಿಂದ ನೋಂದಣಿಪೂರ್ವ ಪ್ರಕ್ರಿಯೆ ಅಲೆದಾಟ ತಪ್ಪಲಿದೆ. ಮುದ್ರಾಂಕ ಶುಲ್ಕವನ್ನು ನಿಖರವಾಗಿ ಲೆಕ್ಕ ಹಾಕಬಹುದು. ಋಣ ಪ್ರಮಾಣ ಪತ್ರಕ್ಕಾಗಿ ಕಚೇರಿಗೆ ಹೋಗುವ ಅಗತ್ಯವಿಲ್ಲ.

| ಆರ್.ವಿ.ದೇಶಪಾಂಡೆ ಕಂದಾಯ ಸಚಿವ

ಏನೇನು ಸೇವೆ ಲಭ್ಯ?

ರಾಜ್ಯದ ಎಲ್ಲ 250 ಉಪ ನೋಂದಣಿ ಕಚೇರಿಗಳ ವಿಳಾಸದ ಮಾಹಿತಿ ಆನ್​ಲೈನ್ ಪೋರ್ಟಲ್​ನಲ್ಲಿ ಅಡಕಗೊಳಿಸಲಾಗಿದೆ. ಸಂಬಂಧಿಸಿದ ಕಾರ್ಯವ್ಯಾಪ್ತಿಯ ಉಪ ನೋಂದಣಿ ಕಚೇರಿಯಲ್ಲಿ ವಿವರವನ್ನು ತಂತ್ರಾಂಶದಲ್ಲಿ ಪಡೆಯಬಹುದು.

ವಧು ಮತ್ತು ವರನ ವಿಳಾಸ ಹಾಗೂ ವಿವಾಹ ನೆರವೇರಿಸುವ ಸ್ಥಳ ಆಧರಿಸಿ ವಿವಾಹ ನೋಂದಾಯಿಸಿಕೊಳ್ಳಬೇಕಾದ ಕಚೇರಿ ವಿವರವನ್ನು ದೃಢೀಕರಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಸಾರ್ವಜನಿಕರು ಯಾವುದೇ ಸ್ಥಿರಾಸ್ತಿ ಮಾರ್ಗಸೂಚಿ ಮೌಲ್ಯ ತಿಳಿಯಲು ಅನುಕೂಲವಾಗುವಂತೆ ಜಿಐಎಸ್ ಆಧಾರಿತ ‘ಮೌಲ್ಯ’ ಎಂಬ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ.


ಕಡುಬಡವ ವ್ಯಾಪಾರಿಗಳಿಗೆ ಕಿರುಸಾಲ

ಬೆಂಗಳೂರು: ಜನಸಾಮಾನ್ಯರಿಗೆ ನಿತ್ಯೋಪಯೋಗಿ ಹಣ್ಣು-ಹಂಪಲು, ತರಕಾರಿ, ಹೂ ಮಾರುತ್ತ ನಗುಮೊಗದಿಂದಲೇ ಇದ್ದರೂ ಬೀದಿಬದಿ ವ್ಯಾಪಾರಿಗಳ ಪ್ರತಿದಿನದ ಗೋಳು ಎಲ್ಲರಿಗೂ ಕಾಣುವುದಿಲ್ಲ. ಬೆಳಗ್ಗೆ 900 ರೂ. ಸಾಲ ಪಡೆದು ಸಂಜೆ 1,000 ರೂ. ನೀಡುವ, ಅಂದರೆ ಕೇವಲ 10 ಗಂಟೆ ಅವಧಿಗೆ ಶೇ.10 ಬಡ್ಡಿ ನೀಡುವ ಬೀದಿಬದಿ ಬಡ ವ್ಯಾಪಾರಿಗಳನ್ನು, ಹಣ ನೀಡದಿದ್ದರೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುವ ಮೀಟರ್ ಬಡ್ಡಿ ದಂಧೆಕೋರರಿಂದ ಮುಕ್ತಿಗೊಳಿಸಲು ಜೆಡಿಎಸ್-ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯೇ ‘ಬಡವರ ಬಂಧು’.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯೊಂದರಲ್ಲೇ ಬರೊಬ್ಬರಿ 80 ಸಾವಿರದಷ್ಟಿರುವ ಬೀದಿಬದಿ ವ್ಯಾಪಾರಿಗಳ ಸಂಖ್ಯೆ ರಾಜ್ಯಾದ್ಯಂತ ಇನ್ನೂ ಹೆಚ್ಚಿದೆ. ನಗರೀಕರಣ ಹೆಚ್ಚಿದಂತೆ ಹೊಸ ಬಡಾವಣೆಗಳಿಗೆ ತಳ್ಳು ಗಾಡಿ ಅಥವಾ ಬೀದಿಬದಿ ವ್ಯಾಪಾರ ಮಾಡುವವರ ಸಂಖೆ್ಯೆಯೂ ದ್ವಿಗುಣಗೊಳ್ಳುತ್ತಿದೆ. ಇಂಥವರಿಗಾಗಿ ಸರ್ಕಾರದ ಹೊಸ ಯೋಜನೆ ವರದಾನವಾಗುವ ಸಾಧ್ಯತೆಯಿದೆ. ಸಿಎಂ ಎಚ್.ಡಿ. ಕುಮಾರಸ್ವಾಮಿ, ಡಿಸಿಎಂ ಡಾ. ಜಿ. ಪರಮೇಶ್ವರ್ ಹಾಗೂ ಸಹಕಾರಿ ಸಚಿವ ಬಂಡೆಪ್ಪ ಖಾಶೆಂಪುರ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಯಶವಂತಪುರದ ಎಪಿಎಂಸಿ ಆವರಣದಲ್ಲಿ ನ.22ರಂದು ಯೋಜನೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಮಾತನಾಡಿದ್ದ ಕುಮಾರಸ್ವಾಮಿ, ಬೀದಿಬದಿ ವ್ಯಾಪಾರಿಗಳನ್ನು ಮೀಟರ್ ದಂಧೆಕೋರರಿಂದ ಪಾರು ಮಾಡುವ ಸಲುವಾಗಿ ರೂಪಿಸಿರುವ ಮಹತ್ವಾಕಾಂಕ್ಷಿ ‘ಬಡವರ ಬಂಧು’ ಯೋಜನೆ ಯಶಸ್ಸು ಕಾಣಬೇಕಿದೆ. ಬೀದಿಬದಿ ವ್ಯಾಪಾರಿಗಳ ಬದುಕಿಗೆ ಬೆಳಕು ನೀಡಲು ನಿರೀಕ್ಷೆಯಿಂದ ಇದನ್ನು ಜಾರಿ ಮಾಡುತ್ತಿದ್ದೇವೆ. ಮಕ್ಕಳನ್ನು ಗಾಡಿ ಕೆಳಗೆ ಮಲಗಿಸಿಕೊಂಡು ಬೆಳಗಿನ ಜಾವವೇ ಮಾರುಕಟ್ಟೆಗೆ ಬರುವ ಮಹಿಳೆಯರನ್ನು ಚಿಕ್ಕಂದಿನಿಂದ ನೋಡಿದ್ದೇನೆ. ಅಂಥವರಿಗಾಗಿ ಏನಾದರೂ ಯೋಜನೆ ರೂಪಿಸಬೇಕು ಎಂಬ ತುಡಿತದಿಂದ ‘ಬಡವರ ಬಂಧು’ ರೂಪಿಸಲಾಗಿದೆ. ಶೇ.10ರ ಬಡ್ಡಿ ದರದಲ್ಲಿ ಸಾಲ ನೀಡುವವರು ಕೈಗೆ ಚಿನ್ನದ ಖಡಗ ಹಾಕಿರುತ್ತಾರೆ, ಕೆಜಿಗಟ್ಟಲೆ ಸರ ಹಾಕಿಕೊಂಡಿರುತ್ತಾರೆ. ಕೆಲ ಗೂಂಡಾಗಳ ಜತೆ ಸಂಜೆ ಬಂದು ಹಣ ವಸೂಲಿ ಮಾಡುತ್ತಾರೆ. ಅಂಥವರಿಂದ ಬೀದಿಬದಿ ವ್ಯಾಪಾರಿಗಳನ್ನು ರಕ್ಷಿಸಲು ಇದು ಸಹಕಾರಿಯಾಗಲಿದೆ ಎಂದಿದ್ದರು.

ಗುರುತಿನ ಚೀಟಿ

ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್​ಗಳು ಮತ್ತು ಪಟ್ಟಣ ಸಹಕಾರಿ ಬ್ಯಾಂಕ್​ಗಳು ಯೋಜನೆಯಲ್ಲಿ ಸಾಲ ನೀಡಲಿವೆ. ಸ್ಥಳೀಯ ಸಂಸ್ಥೆಗಳು ಗುರುತಿನಚೀಟಿ ನೀಡದಿದ್ದರೆ, ಡಿಸಿಸಿ ಬ್ಯಾಂಕ್​ಗಳೇ ಗುರುತಿನ ಚೀಟಿ ವಿತರಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಆ ಮೂಲಕ, ಅರ್ಹ ಫಲಾನುಭವಿಗಳು ಸೌಲಭ್ಯ ವಂಚಿತರಾಗಬಾರದು ಎನ್ನುವುದು ಸರ್ಕಾರದ ಆಶಯ. ಬೆಂಗಳೂರಿನಲ್ಲಿರುವ ಅಂದಾಜು 80 ಸಾವಿರ ಬೀದಿಬದಿ ವ್ಯಾಪಾರಿಗಳ ಪೈಕಿ 24 ಸಾವಿರಕ್ಕೂ ಹೆಚ್ಚು ಮಂದಿಗೆ ಗುರುತಿನ ಚೀಟಿ ನೀಡಲಾಗಿದೆ. ಸಾಲ ಪಡೆಯಲು ಗುರುತಿನ ಚೀಟಿ ಕಡ್ಡಾಯವಾದ್ದರಿಂದ ತ್ವರಿತಗತಿಯಲ್ಲಿ ಚೀಟಿ ನೀಡುವಂತೆ ಸರ್ಕಾರದಿಂದ ಬಿಬಿಎಂಪಿಗೂ ಸೂಚನೆ ನೀಡಲಾಗಿದೆ. ಯೋಜನೆ ಜಾರಿ ಹೊಣೆಯನ್ನು ನಗರ, ಪಟ್ಟಣ ಸಹಕಾರ ಸಂಘಗಳಿಗೆ ವಹಿಸಲಾಗಿದೆ. ಬೆಂಗಳೂರಿನಲ್ಲಿ ತ್ಯಾಗರಾಜ ಕೋ-ಆಪರೇಟಿವ್ ಸಂಘ, ಸ್ವರ್ಣಭಾರತಿ ಕೋ-ಆಪರೇಟಿವ್ ಸಂಘ, ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಸಂಘ ಸಹಿತ ಒಂಬತ್ತು ಸಹಕಾರ ಸಂಘಗಳನ್ನು ಆಯ್ಕೆ ಮಾಡಲಾಗಿದೆ. ಈ ಸಹಕಾರ ಸಂಘಗಳನ್ನು ಸಂರ್ಪಸಿ ವಿವರ ತಿಳಿದು ಸೌಲಭ್ಯ ಪಡೆದುಕೊಳ್ಳಬಹುದು.

ರಾಜ್ಯದಲ್ಲಿರುವ ಸುಮಾರು 4.50 ಲಕ್ಷ ಬೀದಿಬದಿ ವ್ಯಾಪಾರಿಗಳು ಮೀಟರ್ ಬಡ್ಡಿ ನಂಬಿ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಇಂಥವರಿಗೆ ರಕ್ಷಣೆ ಕೊಡಲು ಕಿರುಸಾಲ ಕೊಡಬೇಕೆಂಬ ನಮ್ಮ ಕಲ್ಪನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಬಲ ನೀಡಿದರು. ಬಡವರ ಬಂಧು ಯೋಜನೆಯ ಮೊದಲ ಹಂತದಲ್ಲಿ 53 ಸಾವಿರ ಮಂದಿಗೆ ಅನುಕೂಲವಾಗುತ್ತಿದೆ. ಮುಂದೆ ಯೋಜನೆ ವಿಸ್ತರಿಸಿ ಮೀಟರ್ ಬಡ್ಡಿಯಿಂದ ಬೀದಿಬದಿ ವ್ಯಾಪಾರಿಗಳನ್ನು ರಕ್ಷಿಸುವ ಗುರಿ ನಮ್ಮದು.

| ಬಂಡೆಪ್ಪ ಖಾಶೆಂಪುರ ಸಹಕಾರ ಸಚಿವ

ಕಿರುಕುಳ ನೀಡದಂತೆ ಸೂಚನೆ

ಬೀದಿಬದಿ ವ್ಯಾಪಾರಿಗಳಿಗೆ ಕಿರುಕುಳ ನೀಡದಂತೆ ಪೊಲೀಸರಿಗೆ ಸರ್ಕಾರದಿಂದ ಸೂಚನೆ ನೀಡಲಾಗಿದೆ. ರಸ್ತೆ ಸಂಚಾರಕ್ಕೆ ತೊಂದರೆ ಆಗದಂತೆ ಒಂದು ಸ್ಥಳ ನಿಗದಿಪಡಿಸಿ ವ್ಯಾಪಾರಕ್ಕೆ ಅವಕಾಶ ನೀಡಿ. ಅಂಥವರ ಮೇಲೆ ಗದಾಪ್ರಹಾರ ಮಾಡಿ ಎತ್ತಂಗಡಿ ಮಾಡಲು ಹೋಗಬೇಡಿ ಎಂದು ಎಲ್ಲ ಸರ್ಕಾರಿ ಸಂಸ್ಥೆಗಳಿಗೆ ತಿಳಿಸಲಾಗಿದೆ.

ಶೀಘ್ರದಲ್ಲೇ ‘ಕಾಯಕ’

ಬಡವರ ಬಂಧು ಯೋಜನೆ ಜಾರಿಯಾದ ಬೆನ್ನಲ್ಲೇ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸಹಕರಿಸುವ ‘ಕಾಯಕ’ ಯೋಜನೆಗೂ ಸರ್ಕಾರ ಸದ್ಯದಲ್ಲೇ ಚಾಲನೆ ನೀಡಲಿದೆ. ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮಹಿಳೆಯರ ಸ್ವಾವಲಂಬಿ ಬದುಕಿಗೆ 5 ಲಕ್ಷ ರೂ. ಸಾಲ ನೀಡುವುದು ‘ಕಾಯಕ’ ಯೋಜನೆಯ ಮುಖ್ಯ ಉದ್ದೇಶ.

ರಾಜ್ಯಾದ್ಯಂತ ಸದ್ಯದಲ್ಲೇ ವಿಸ್ತರಣೆ

ರಾಜ್ಯದಲ್ಲಿರುವ ಬೀದಿಬದಿ ವ್ಯಾಪಾರಿಗಳ ಪೈಕಿ ಅತಿ ಹೆಚ್ಚು ಮಂದಿ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದಾರೆ. ಯೋಜನೆಯ ಮೊದಲ ಹಂತದಲ್ಲಿ ಈ ವ್ಯಾಪ್ತಿಯಲ್ಲಿರುವ ಹೆಚ್ಚಿನ ಸಂಖ್ಯೆಯ ವ್ಯಾಪಾರಿಗಳಿಗೆ ಸಾಲ ನೀಡಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಬಳ್ಳಾರಿ, ಬೆಳಗಾವಿ, ದಾವಣಗೆರೆ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ವಿಜಯಪುರ, ತುಮಕೂರು, ಹುಬ್ಬಳ್ಳಿ-ಧಾರವಾಡಗಳಲ್ಲಿ ಜಾರಿಗೆ ಮುಂದಾಗಲಾಗಿದೆ. ನಂತರದಲ್ಲಿ ರಾಜ್ಯಾದ್ಯಂತ ಯೋಜನೆ ವಿಸ್ತರಣೆ ಮಾಡಿ, ಬೀದಿಬದಿ ವ್ಯಾಪಾರಿಗಳಿಗೆ ಸಹಾಯಹಸ್ತ ಚಾಚಲಾಗುತ್ತದೆ.

ಯಾರಿಗೆ, ಏನು ಸಿಗಲಿದೆ?

‘ಬಡವರ ಬಂಧು’ ಯೋಜನೆ ಅನ್ವಯ ಬೀದಿಬದಿ ವ್ಯಾಪಾರಿಗಳಿಗೆ 2 ಸಾವಿರ ರೂ.ನಿಂದ 10 ಸಾವಿರ ರೂ.ವರೆಗೆ ಬಡ್ಡಿರಹಿತ ಸಾಲ ದೊರಕಲಿದೆ. ಹಾಗೆಂದು ಸಾಲ ಪಡೆಯಲು ಬೀದಿಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಬ್ಯಾಂಕ್​ಗಳನ್ನು ಹುಡುಕಿಕೊಂಡು ಹೋಗಬೇಕಿಲ್ಲ. ಅಲ್ಲದೆ ಬ್ಯಾಂಕ್​ಗಳ ವ್ಯವಸ್ಥಾಪಕರು, ಸಿಬ್ಬಂದಿ ಭೇಟಿ ಮಾಡಿ ಅಂಗಲಾಚುವ ಅನಿವಾರ್ಯತೆಯೂ ಇಲ್ಲ. ಅವರಿದ್ದಲ್ಲಿಗೆ, ಸಂಚಾರಿ ಸೇವಾ ಬ್ಯಾಂಕ್​ಗಳು ಬರಲಿವೆ. ಗುರುತಿನ ಚೀಟಿ ಇದ್ದರೆ ಸಾಕು, ಸಾಲ ಪಡೆದು ನಿಶ್ಚಿಂತೆಯಿಂದ ವ್ಯಾಪಾರ ನಡೆಸಬಹುದು. ತಳ್ಳುವ ಗಾಡಿ ವ್ಯಾಪಾರಿಗಳು, ಮೋಟಾರು ವಾಹನಗಳಲ್ಲಿ ಪಾನೀಯ, ಊಟ, ತಿಂಡಿ, ಸಿಹಿ ಪದಾರ್ಥ ಮಾರಾಟ ಮಾಡುವವರು, ಹೂವು-ಹಣ್ಣು, ತರಕಾರಿ ಮಾರುವವರು, ರಸ್ತೆಬದಿಯ ಬುಟ್ಟಿ ವ್ಯಾಪಾರಿಗಳು, ಪಾದರಕ್ಷೆ ಚರ್ಮದ ಉತ್ಪನ್ನಗಳ ರಿಪೇರಿ ಮತ್ತು ಮಾರಾಟ ಮಾಡುವವರು, ಆಟದ ಸಾಮಾನುಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರು ಯೋಜನೆಯಲ್ಲಿ ಸಾಲ ಪಡೆದುಕೊಳ್ಳಬಹುದು.


ರಸ್ತೆ ಅಭಿವೃದ್ಧಿಯಲ್ಲಿ ಲೋಕೋಪಯೋಗಿ ಕ್ರಾಂತಿ

ಬೆಂಗಳೂರು: ರಾಜ್ಯವೊಂದರ ಇಮೇಜ್ ಹೆಚ್ಚಿಸುವಲ್ಲಿ ರಸ್ತೆ ಜಾಲ ಪ್ರಮುಖ ಪಾತ್ರ ವಹಿಸುತ್ತದೆ. ಹತ್ತು ಹಲವು ಸವಾಲುಗಳಿಗೆ ಪರಿಹಾರ ನೀಡುವುದು ಉತ್ತಮ ರಸ್ತೆಗಳೇ ಎಂಬ ಮಾತಿದೆ. ರಸ್ತೆ ಸರಿ ಇರಬೇಕೆಂದು ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ ಇತ್ಯಾದಿ ಹತ್ತಾರು ಕ್ಷೇತ್ರಗಳು ನಿರೀಕ್ಷಿಸುವುದು ಸಹಜ. ಈ ನಿರೀಕ್ಷೆಗೆ ತಕ್ಕಂತೆ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ರಸ್ತೆ ಜಾಲದ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ.

ಎಸ್​ಎಚ್​ಡಿಪಿ ಫೇಸ್-4 ಯೋಜನೆಯಲ್ಲಿ 10 ಸಾವಿರ ಕೋಟಿ ರೂ. ಅಂದಾಜು ವೆಚ್ಚದಲ್ಲಿ 7,800 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕೆ ಸಮಗ್ರ ಯೋಜನಾ ವರದಿ ತಯಾರಿಸಲಾಗುತ್ತಿದ್ದು, ಕಾಮಗಾರಿಯನ್ನು ಮೂರು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಅಕ್ಟೋಬರ್ ಅಂತ್ಯಕ್ಕೆ ವಿವಿಧ ಯೋಜನೆಯಂತೆ 531 ಕಿ.ಮೀ. ರಾಜ್ಯ ಹೆದ್ದಾರಿ, 2,935 ಕಿ.ಮೀ. ಜಿಲ್ಲಾ ಮುಖ್ಯರಸ್ತೆ ಅಭಿವೃದ್ಧಿ, 65 ಸೇತುವೆ ನಿರ್ಮಾಣ ಮತ್ತು 32 ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ವಿಶ್ವ ಬ್ಯಾಂಕ್ ಸಹಯೋಗದಲ್ಲಿ ಕೆಆರ್​ಡಿಸಿಎಲ್ ಮೂಲಕ 1,095 ಕೋಟಿ ರೂ. ವೆಚ್ಚದಲ್ಲಿ 361 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿ ಪೂರ್ಣಗೊಳ್ಳುವ ಹಂತ ತಲುಪಿದೆ. ಎಸ್​ಎಚ್​ಡಿಪಿ ಫೇಸ್-3 ಯೋಜನೆಯಂತೆ 3,831 ಕಿ.ಮೀ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕೊನೆಯ ಹಂತ ತಲುಪಿದೆ.

ರಸ್ತೆ ಸುರಕ್ಷತೆಗೂ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ರಸ್ತೆ ಸುರಕ್ಷತಾ ಕಾಮಗಾರಿ ಯೋಜನೆ ಮತ್ತು ರಸ್ತೆ ಸ್ವತ್ತು ನಿರ್ವಹಣಾ ಕೇಂದ್ರ ವತಿಯಿಂದ 234.88 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಕೆಶಿಪ್-3 ಪ್ರಕಾರ 5,334 ಕೋಟಿ ರೂ. ವೆಚ್ಚದಲ್ಲಿ 418.60 ಕಿ.ಮೀ. ರಾಜ್ಯ ಹೆದ್ದಾರಿಗಳ ಅಭಿವೃದ್ಧಿ, ಎಸ್​ಸಿಪಿ ಟಿಎಸ್​ಪಿ ಯೋಜನೆಯಲ್ಲಿ 1,043.91 ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಲನಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ವಣ, ಅಪೆಂಡಿಕ್ಸ್ ಇ ಮೂಲಕ 1,764.32 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಅನುಮೋದನೆ, 5,690 ಕೋಟಿ ರೂ. ಹೊಸ ಪ್ರಸ್ತಾವನೆ ತಯಾರಿಕೆ ಇತರ ಪ್ರಮುಖ ತೀರ್ವನಗಳು.

ಇಲಾಖೆ ಹೊಸದಾಗಿ 6,962 ಕಿ.ಮೀ. ರಸ್ತೆ ಮತ್ತು 160 ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಇದರ ಒಟ್ಟು ಅಂದಾಜು ವೆಚ್ಚ 5,690.20 ಕೋಟಿ ರೂ. ಈಗಾಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಅಲ್ಲಿಂದ ಒಪ್ಪಿಗೆ ಬಂದ ಕೂಡಲೇ ಕಾಮಗಾರಿಯ ಪ್ರಾಥಮಿಕ ಪ್ರಕ್ರಿಯೆ ಶುರುವಾಗಲಿದೆ.

ಗುಣಮಟ್ಟದಲ್ಲಿ ರಾಜಿ ಇಲ್ಲ

ಇಲಾಖೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಕಳಪೆ ಕಾಮಗಾರಿ ಮಾಡಿದ್ದೇವೆ ಎಂದು ಜನರಿಂದ ದೂರುಗಳು ಬರದಂತೆ ಕೆಲಸ ಮಾಡುತ್ತೇವೆ. ರಸ್ತೆ, ಸೇತುವೆ ಮತ್ತು ಕಟ್ಟಡ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ಮಲೆನಾಡು ಭಾಗದಲ್ಲಿ ಶಾಲೆಗೆ ಓಡಾಡಲು ಪರದಾಡುವ ಮಕ್ಕಳಿಗೆ ಅನುಕೂಲ ಮಾಡಿಕೊಡಲು ಸಂಪರ್ಕ ಸೇತು ಯೋಜನೆ ಜಾರಿ ಮಾಡಲಾಗುತ್ತಿದೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಮುಂದಾಗಿರುವ ಸರ್ಕಾರ ತೋಡು, ಹಳ್ಳ-ಕೊಳ್ಳಗಳಿಗೆ ಆಧುನಿಕ ರೀತಿಯ ಕಾಲು ಸಂಕ (ಸೇತುವೆ) ನಿರ್ವಿುಸಲು ಉದ್ದೇಶಿಸಿದ್ದು, ನಾಲ್ಕು ಜಿಲ್ಲೆಗಳಲ್ಲಿ ಕಾಲು ಸಂಕಗಳು ಇದ್ದ ಜಾಗದಲ್ಲಿ 122 ಕೋಟಿ ರೂ. ವೆಚ್ಚದಲ್ಲಿ 144 ಕಿರುಸೇತುವೆಗಳನ್ನು ನಿರ್ವಿುಸಲು ಅನುಮೋದನೆ ನೀಡಲಾಗಿದೆ. ಶಾಲೆ, ಕಾಲೇಜು, ಪಾಲಿಟೆಕ್ನಿಕ್ ಮುಂತಾದ ಕಟ್ಟಡಗಳ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯೇ ಕೈಗೆತ್ತಿಕೊಳ್ಳಲಿದ್ದು, ಇದರ ಅಂದಾಜು ವೆಚ್ಚ 1400 ಕೋಟಿ ರೂ. ಆಗಿದೆ.


ರಿಜಿಸ್ಟ್ರೇಷನ್​ಗೂ ಸಮಯ ನಿಗದಿ

ಬೆಂಗಳೂರು: ಪಾಸ್​ಪೋರ್ಟ್ ಕಚೇರಿಯಲ್ಲಿರುವಂತೆ ಇನ್ಮುಂದೆ ನೋಂದಣಿಗೆ ಸ್ಲಾಟ್ ಬುಕ್ ಮಾಡಿಕೊಳ್ಳಬಹುದು. ಉಪ ನೋಂದಣಾಧಿಕಾರಿ ಸಾರ್ವಜನಿಕರಿಂದ ಆನ್​ಲೈನ್ ಮೂಲಕ ಅರ್ಜಿ ಮತ್ತು ಮೌಲ್ಯ ಮಾನ್ಯಗೊಳಿಸಿದ ನಂತರ ದಸ್ತಾವೇಜಿಗೆ ತಗಲುವ ಶುಲ್ಕಗಳನ್ನು ಸಾರ್ವಜನಿಕರು ಪಾವತಿಸಲು ಸಿದ್ಧರಿದ್ದಲ್ಲಿ ಆನ್​ಲೈನ್ ಮೂಲಕ ಪಾವತಿಸಿ, ಅವಕಾಶವಿದ್ದಲ್ಲಿ ಮುಂದಿನ ದಿನಾಂಕಗಳಂದು ನೋಂದಣಿ ಪ್ರಕ್ರಿಯೆಗೆ ಮುಂಚಿತವಾಗಿ ಕಾಲ ನಿಗದಿಪಡಿಸಿಕೊಳ್ಳಬಹುದು.

 

ಆನ್​ಲೈನ್​ನಲ್ಲೇ ಇ-ಸ್ಟ್ಯಾಂಪ್

ಸಾರ್ವಜನಿಕರು ತಾವು ಪಡೆದುಕೊಳ್ಳುವ ಕರಾರುಪತ್ರ ಮತ್ತು ಪ್ರಮಾಣಪತ್ರಗಳಿಗೆ ಮುದ್ರಾಂಕ ಶುಲ್ಕವನ್ನು ಆನ್​ಲೈನ್ ಮೂಲಕ ಪಾವತಿಸಿ ಇ-ಸ್ಟ್ಯಾಂಪ್ ಕಾಗದವನ್ನು ಮನೆಯಲೇ ಪ್ರಿಂಟ್ ಔಟ್ ತೆಗೆದುಕೊಳ್ಳುವ ಸೌಲಭ್ಯ ಸ್ಟಾಕ್ ಹೋಲ್ಡಿಂಗ್ಸ್ ಕಾರ್ಪೆರೇಷನ್ ಸಹಯೋಗದಲ್ಲಿ ಕಲ್ಪಿಸಲಾಗಿದೆ. ಇದರಿಂದ ಇ-ಸ್ಟ್ಯಾಂಪ್ ಪತ್ರಕ್ಕಾಗಿ ಅಲೆದಾಟ ತಪ್ಪಲಿದೆ.

 


ಲಕ್ಷ ಮನೆ ನಿರ್ಮಾಣ ಯೋಜನೆ

ಬೆಂಗಳೂರು: ಈ ಹಿಂದಿನ ಸರ್ಕಾರ ರೂಪಿಸಿದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ವಸತಿ ಯೋಜನೆಯೂ ಒಂದು. ಬೆಂಗಳೂರಿನಲ್ಲಿ ಭೂಮಿಯ ಬೆಲೆ ಬಂಗಾರವನ್ನೂ ಮೀರಿಸಿರುವುದರಿಂದ ಬಡವರು ಸ್ವಂತ ಸೂರು ಹೊಂದುವ ಕನಸು ನನಸಾಗುವ ಲಕ್ಷಣಗಳಿಲ್ಲ. ಹೀಗಾಗಿ ಸರ್ಕಾರದ ವಸತಿ ಇಲಾಖೆಯಿಂದ ಮಹತ್ವದ ಯೋಜನೆ ಜಾರಿ ಮಾಡಲಾಗುತ್ತಿದೆ. ಅತ್ಯಂತ ಕಡಿಮೆ ದರದಲ್ಲಿ ಎಲ್ಲ ವರ್ಗಗಳ ಬಡಜನರಿಗೆ ಸುಸಜ್ಜಿತ ಮನೆ ನಿರ್ವಿುಸುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಬೆಂಗಳೂರಿನಲ್ಲಿ ಅನೇಕ ವರ್ಷಗಳಿಂದ ಅಕ್ರಮವಾಗಿ ಸ್ವಾಧೀನದಲ್ಲಿಟ್ಟುಕೊಂಡಿದ್ದ ನೂರಾರು ಎಕರೆಯನ್ನು ಸರ್ಕಾರ ಪುನಃ ಪಡೆದು ಸುಪರ್ದಿಯಲ್ಲಿಟ್ಟುಕೊಂಡಿದೆ. ಈ ಜಮೀನಿನಲ್ಲಿ ನೆಲಮಹಡಿ ಹಾಗೂ ಮೇಲೆ ಮೂರಂತಸ್ತಿನ ಕಟ್ಟಡಗಳನ್ನು ಕಟ್ಟಿ ಸಬ್ಸಿಡಿ ದರದಲ್ಲಿ ನೀಡುವ ಯೋಜನೆ ಘೋಷಿಸಲಾಗಿತ್ತು. ಆದರೆ, 1 ಲಕ್ಷ ಮನೆ ನಿರ್ವಿುಸಲು ಸಾಕಷ್ಟು ಜಾಗದ ಕೊರತೆ ಇರುವ ಕಾರಣ ಸದ್ಯದ ಮೈತ್ರಿ ಸರ್ಕಾರ ಯೋಜನೆಗೆ ಬೇರೆ ಸ್ವರೂಪ ನೀಡಿದೆ. ಈ ಹಿಂದೆ ಇದ್ದಂತಹ ನೆಲಮಹಡಿ, ಮೇಲೆ ಮೂರಂತಸ್ತಿನ ಕಟ್ಟಡವನ್ನು 14 ಅಂತಸ್ತಿಗೆ ಬದಲಾಯಿಸಿದೆ. ಆಧುನಿಕ ತಂತ್ರಜ್ಞಾನ ಬಳಸಿ ನಿರ್ವಿುಸಲಾಗುತ್ತಿರುವ ಅಪಾರ್ಟ್​ವೆುಂಟ್ ರೀತಿಯಲ್ಲಿ ಲಿಫ್ಟ್ ಸೌಲಭ್ಯವನ್ನೂ ಒಳಗೊಂಡಂತೆ ಯೋಜನೆ ರೂಪಿಸಲು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಈಗಾಗಲೇ ಅನೇಕರು ಅರ್ಜಿ ಸಲ್ಲಿಸಿದ್ದು, 50 ಸಾವಿರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಮನೆ ನಿರ್ವಣಕ್ಕೆ ವೆಚ್ಚವಾಗುವ ಹಣದಲ್ಲಿ ಕೇಂದ್ರ ಸರ್ಕಾರ 1.5 ಲಕ್ಷ ರೂ. ನೀಡಲಿದೆ. ರಾಜ್ಯ ಸರ್ಕಾರ ಮತ್ತಷ್ಟು ಜನಸ್ನೇಹಿಯಾಗಿಸುವ ಸಲುವಾಗಿ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ 2 ಲಕ್ಷ ರೂ. ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 1.2 ಲಕ್ಷ ರೂ. ಸಹಾಯಧನ ಒದಗಿಸುತ್ತದೆ. ಉಳಿದ ಹಣವನ್ನು ಫಲಾನುಭವಿಗಳು ನೀಡಿ ವಸತಿ ಹೊಂದುವ ಕನಸನ್ನು ನನಸು ಮಾಡಿಕೊಳ್ಳಬಹುದು.


ಸಂಪೂರ್ಣ ಆರೋಗ್ಯಯುತ ಆಗುವತ್ತ ಕರ್ನಾಟಕ

ಬೆಂಗಳೂರು: ಬಡವರಿಗೆ ಉಚಿತವಾಗಿ, ಇತರ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಸೇವೆ ಕಲ್ಪಿಸುವ ಉದ್ದೇಶದ ಆರೋಗ್ಯ ಕರ್ನಾಟಕ ಯೋಜನೆ ಯಲ್ಲಿ ಈವರೆಗೆ 1.5 ಲಕ್ಷಕ್ಕೂ ಹೆಚ್ಚು ಜನರು ಸೌಲಭ್ಯ ಪಡೆದಿದ್ದಾರೆ.

ಸಾರ್ವತ್ರಿಕ ಆರೋಗ್ಯ ರಕ್ಷಣೆ (ಯುಎಚ್​ಡಿ) ಯೋಜನೆಯಲ್ಲಿ 2018ರ ಮಾ.2ರಿಂದ ಜಾರಿಯಾದ ಆರೋಗ್ಯ ಕರ್ನಾಟಕ ರಾಜ್ಯದ ಎಲ್ಲ ನಿವಾಸಿಗಳಿಗೆ 1,530 ಚಿಕಿತ್ಸೆಗಳಿಗೆ ಸೇವೆ ಒದಗಿಸುವ ಭರವಸೆ ನೀಡಿದೆ. 2018ರ ಜೂನ್​ನಿಂದ 51,296 ರೋಗಿಗಳು ರೆಫರಲ್ ಆಧಾರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಪೈಕಿ 7,585 ತುರ್ತು ಚಿಕಿತ್ಸೆಗಳು ಸೇರಿವೆ. ತುರ್ತು ಸಂದರ್ಭ ಹೊರತುಪಡಿಸಿದಂತೆ ರೋಗಿಯ ಬಿಪಿಎಲ್ ಕಾರ್ಡ್ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ರೋಗಿಯು ಫಲಾನುಭವಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಂತ್ರಾಂಶ ರೂಪಿಸಲಾಗಿದ್ದು, ಬಿಪಿಎಲ್ ಕಾರ್ಡ್ ಸಂಖ್ಯೆ ಆಧಾರದಲ್ಲಿ ದೃಢೀಕರಿಸಲಾಗುತ್ತದೆ. ಸರ್ಕಾರದಿಂದ ಯೋಜನೆ ಒಪ್ಪಿಗೆ ಪಡೆದ ನಂತರ ಆಸ್ಪತ್ರೆಗೆ ದಾಖಲಾಗುವ ರೋಗಿಗೆ ಆಯಾ ಚಿಕಿತ್ಸೆ ಮಿತಿಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಆಧಾರದಲ್ಲಿ 4 ಕೋಟಿಗೂ ಹೆಚ್ಚು ಜನರು ಯೋಜನೆಗೆ ಒಳಪಡುತ್ತಾರೆ. ಬಿಪಿಎಲ್ ಕುಟುಂಬಕ್ಕೆ ಗರಿಷ್ಠ 2 ಲಕ್ಷ ರೂ.ವರೆಗೆ ಪೂರ್ಣ ಪ್ರಮಾಣದಲ್ಲಿ ಹಾಗೂ ಸಾಮಾನ್ಯ ಕುಟುಂಬಗಳಿಗೆ ಗರಿಷ್ಠ 1.5 ಲಕ್ಷ ರೂ.ವರೆಗೆ ಒಟ್ಟು ಚಿಕಿತ್ಸೆ ವೆಚ್ಚದ ಶೇ.30 ವೆಚ್ಚವನ್ನು ಸರ್ಕಾರ ಭರಿಸುತ್ತಿದೆ. ಸಾರ್ವಜನಿಕರ ಆರೋಗ್ಯ ವೃದ್ಧಿಗಾಗಿ ಕೇಂದ್ರ ಸರ್ಕಾರವೂ ಇತ್ತೀಚೆಗೆ ‘ಆಯುಷ್ಮಾನ್ ಭಾರತ’ ಯೋಜನೆಯನ್ನು ಜಾರಿ ಮಾಡಿದೆ. ಆದರೆ ಬಡ ಕುಟುಂಬಗಳನ್ನು ಗುರುತಿಸಲು ಕೇಂದ್ರ ಸರ್ಕಾರದ 2011ರ ಜನಗಣತಿಯನ್ನು ಮಾನದಂಡವಾಗಿಸಿಕೊಂಡಿದೆ. ಎರಡೂ ಯೋಜನೆಗಳ ಒಟ್ಟು ಗುರಿ, ವ್ಯಾಪ್ತಿ ಒಂದೇ ಆಗಿರುವ ಕಾರಣ ಹೆಚ್ಚು ಜನರಿಗೆ ಉಪಯೋಗ ಕಲ್ಪಿಸುವ ಸಲುವಾಗಿ ಎರಡೂ ಯೋಜನೆಗಳನ್ನು ಕರ್ನಾಟಕ ಸರ್ಕಾರ ಕೋ ಬ್ರಾ್ಯಂಡಿಂಗ್ ಅಡಿಯಲ್ಲಿ ಸಂಯೋಜನೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಕುರಿತು ಅಕ್ಟೋಬರ್ 30ಕ್ಕೆ ಕೇಂದ್ರ ಸರ್ಕಾರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಗಿದ್ದು, ಎರಡೂ ಯೋಜನೆಗಳನ್ನು ಸೇರಿಸಿ ‘ಆರೋಗ್ಯ ಕರ್ನಾಟಕ- ಆಯುಷ್ಮಾನ್ ಭಾರತ’ ಎಂಬ ಹೊಸ ಹೆಸರನ್ನು ಜಾರಿಗೆ ತರಲಾಗಿದೆ. ಆರೋಗ್ಯ ಕರ್ನಾಟಕದ 1,516 ಹಾಗೂ ಆಯುಷ್ಮಾನ್ ಭಾರತದ 1,349 ಪ್ಯಾಕೇಜ್​ಗಳನ್ನು ವಿಲೀನಗೊಳಿಸಿ ಒಟ್ಟು 1,614 ಪ್ಯಾಕೇಜ್​ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಪ್ರಾಥಮಿಕ ಮತ್ತು ದ್ವಿತೀಯ ಸಾಮಾನ್ಯ ಹಂತದ ಚಿಕಿತ್ಸೆಗಳಿಗೆ ಸಂಬಂಧಿಸಿದ 291 ಪ್ಯಾಕೇಜ್​ಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಸೀಮಿತಗೊಳಿಸಲಾಗಿದೆ. 254 ದ್ವಿತೀಯ ಕ್ಲಿಷ್ಟಕರ ಹಾಗೂ 900 ತೃತೀಯ ಹಂತದ ಪ್ಯಾಕೇಜ್​ಗಳನ್ನು ಸರ್ಕಾರಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲೂ ಪಡೆಯಬಹುದು. ನಿರ್ದಿಷ್ಟ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲದಿದ್ದಲ್ಲಿ ಅಲ್ಲಿಂದ ರೆಫರಲ್ ಆಧಾರದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಆದರೆ ಅಪಘಾತ, ಹೃದಯಾಘಾತ ಸೇರಿ ತುರ್ತು ಸಂದರ್ಭದ 169 ಚಿಕಿತ್ಸೆಗಳಿಗೆ ರೆಫರಲ್ ಅಗತ್ಯವಿಲ್ಲ. ಇಂತಹ ವೇಳೆ ಸಾರ್ವಜನಿಕರು ಹತ್ತಿರದ/ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲೂ ನಿಗದಿತ ಮೊತ್ತದ ಚಿಕಿತ್ಸೆ ಪಡೆಯಬಹುದು.

ಒನ್ ಕೇಂದ್ರಗಳಲ್ಲೂ ಕಾರ್ಡ್

ರಾಜ್ಯದಲ್ಲಿ ಕಾರ್ಡ್ ನೀಡಲು 11 ಆಸ್ಪತ್ರೆಗಳನ್ನು ನಿಯುಕ್ತಿ ಮಾಡಲಾಗಿದ್ದು, 4,52,860 ಕಾರ್ಡ್ ವಿತರಣೆ ಮಾಡಲಾಗಿದೆ. ಹೆಚ್ಚುತ್ತಿರುವ ಆರೋಗ್ಯ ಕಾರ್ಡ್​ಗಳ ಬೇಡಿಕೆ ಪೂರೈಸುವ ಸಲುವಾಗಿ ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲೂ ಕಾರ್ಡ್ ವಿತರಣೆ ಮಾಡಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಬಡವರಿಗೆ -ಠಿ;5 ಲಕ್ಷದವರೆಗೆ ಉಚಿತ ಚಿಕಿತ್ಸೆ

ಬಡವರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಬೇಕೆಂಬ ಧ್ಯೇಯದೊಂದಿಗೆ ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್ ಭಾರತ ಎರಡನ್ನೂ ವಿಲೀನಗೊಳಿಸಿ ಸರ್ಕಾರ 5 ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚ ಭರಿಸುವ ಯೋಜನೆ ಅನುಷ್ಠಾನಗೊಳಿಸಿದೆ. ರಾಜ್ಯದ 1.30 ಕೋಟಿ ಕುಟುಂಬಗಳು ಪ್ರಯೋಜನ ಪಡೆಯಲಿವೆ. 14 ಮೆಡಿಕಲ್ ಕಾಲೇಜು ಹಾಗೂ 16 ಸರ್ಕಾರಿ ಆಸ್ಪತ್ರೆಗಳನ್ನು ಉನ್ನತೀಕರಿಸಿ ಅಲ್ಲಿ ಪ್ರಾಥಮಿಕ ಹಂತದಿಂದ ತೃತೀಯ ಹಾಗೂ ತುರ್ತು ಚಿಕಿತ್ಸಾ ಸೌಲಭ್ಯ ದೊರಕಿಸಿಕೊಡುವ ಪ್ರಯತ್ನ ನಡೆದಿದೆ. ಆರೋಗ್ಯ ಇಲಾಖೆಯಲ್ಲಿ 25 ಸಾವಿರ ಹುದ್ದೆ ಭರ್ತಿಗೆ ಕ್ರಮ ವಹಿಸಲಾಗುತ್ತಿದೆ. 300 ಆಂಬುಲೆನ್ಸ್​ಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.

| ಶಿವಾನಂದ ಪಾಟೀಲ ಆರೋಗ್ಯ ಸಚಿವ