ನೀರೋ ನೆನಪಿಸಿದ ಎಚ್​ಡಿಕೆ

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಹಗ್ಗಜಗ್ಗಾಟದಿಂದ ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯ ಮಾಡುತ್ತಿಲ್ಲ ಎಂಬ ಮಾತಿನ ನಡುವೆಯೇ ಶೇ.70 ತಾಲೂಕುಗಳು ಬರಪೀಡಿತವಾಗಿದೆ. ಇದೆಲ್ಲದರ ಮೇಲುಸ್ತುವಾರಿ ವಹಿಸಿ ಜನರ ಸಂಕಷ್ಟ ಬಗೆಹರಿಸಿ ಹೊಸ ವರ್ಷವನ್ನು ಹರ್ಷದಿಂದ ಸ್ವಾಗತಿಸಬೇಕಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತ್ರ ಹೊಸ ವರ್ಷದ ಸಂಭ್ರಮಾಚರಣೆ ಮೂಡ್​ನಲ್ಲಿ ವಿದೇಶಕ್ಕೆ ಹಾರಿದ್ದಾರೆ.

ಮೇಲ್ನೋಟಕ್ಕೆ ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ ಎನ್ನುವಂತಿದ್ದರೂ, ಅವಧಿಗೆ ಮುನ್ನವೇ ಸುರಿದು ಸುಮ್ಮನಾಗಿರುವ ಮಳೆ ಕಾರಣಕ್ಕೆ ಬರ ತೀವ್ರವಾಗುತ್ತಿದೆ. ಈ ಹಿಂದೆ 100 ತಾಲೂಕುಗಳಲ್ಲಿ ಕಾಣಿಸಿಕೊಂಡಿದ್ದ ಬರ ಈಗ 156ಕ್ಕೆ ವಿಸ್ತರಿಸಿದೆ ಎಂದು ರಾಜ್ಯ ಸರ್ಕಾರವೇ ಒಪ್ಪಿಕೊಂಡಿದೆ. ಇದರಿಂದಾಗಿ ಸುಮಾರು 20 ಸಾವಿರ ಕೋಟಿ ರೂ. ಆಹಾರ ಉತ್ಪಾದನೆ ನಷ್ಟವಾಗಿದೆ. 283 ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರವಾಗಿದ್ದು, 524 ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಸರ್ಕಾರಿ ಬೋರ್​ವೆಲ್​ಗಳ ನೀರು ಸಾಕಾಗದೆ 315 ಗ್ರಾಮಗಳಲ್ಲಿ ಖಾಸಗಿ ಬೋರ್​ವೆಲ್ ಗುತ್ತಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಇನ್ನೂ ಸಭೆ ನಡೆಸಬೇಕಿದೆ. ಕೆಲವು ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರವೇ ಚರ್ಚೆಯಾಗುತ್ತಿದೆ. ಇಷ್ಟೆಲ್ಲದರ ನಡುವೆಯೂ ಸಿಎಂ ಮಾತ್ರ ಕುಟುಂಬದ ಜತೆಗೆ ಹೊಸ ವರ್ಷಾಚರಣೆಗೆ ತೆರಳಿದ್ದಾರೆ. ಸಂಕಷ್ಟದಲ್ಲೇ ಹೊಸ ವರ್ಷಕ್ಕೆ ಕಾಲಿಡುವ ಸ್ಥಿತಿಯಲ್ಲಿ ಜನರಿದ್ದಾರೆ. ಇಡೀ ರೋಮ್ ಹೊತ್ತಿ ಉರಿಯುತ್ತಿರುವಾಗ ಅದರ ರಾಜ ನೀರೋ ಪಿಟೀಲು ಬಾರಿಸುತ್ತಿದ್ದ ಎಂಬ ಸುಪ್ರಸಿದ್ಧ ನಾಣ್ಣುಡಿಯಂತೆ ಸಿಎಂ ನಡೆ ಭಾಸವಾಗುತ್ತಿರುವುದು ಅತಿಶಯೋಕ್ತಿಯಲ್ಲ. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಪ್ರತಿಪಕ್ಷ ಕಿಡಿ

ಸಿಎಂ ಕುಮಾರಸ್ವಾಮಿ ನಡೆಯನ್ನು ಬಿಜೆಪಿ ತೀವ್ರವಾಗಿ ಆಕ್ಷೇಪಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಈ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ 377 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 156 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಸಾಲಮನ್ನಾ ಇನ್ನೂ ಆಗಿಲ್ಲ. ಇಡೀ ರಾಜ್ಯ ಸಾಲದ ಸುಳಿಯಲ್ಲಿ ಸಿಲುಕಿದೆ. ಆದರೆ, ಇಲ್ಲೊಬ್ಬ ತಥಾಕಥಿತ ಮಣ್ಣಿನ ಮಗ ಕುಮಾರಸ್ವಾಮಿ ಅವರು ಸಿಂಗಾಪುರದಲ್ಲಿ ಹೊಸ ವರ್ಷ ಆಚರಿಸಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತು ನಿರ್ವಣವಾಗಿರುವ ‘ಆಕ್ಸಿಡೆಂಟಲ್ ಪ್ರೖೆಮ್ ಮಿನಿಸ್ಟರ್’ ಚಿತ್ರದಂತೆಯೇ ‘ಆಕ್ಸಿಡೆಂಟಲ್ ಚೀಫ್ ಮಿನಿಸ್ಟರ್’ ಸಿನಿಮಾ ನಿರ್ವಿುಸಿದರೆ ಕುಮಾರಸ್ವಾಮಿ ಅವರ ಪಾತ್ರವನ್ನು ಯಾವ ನಟ ನಿರ್ವಹಿಸುತ್ತಾರೆ? ಎಂದು ಕೀಟಲೆ ಮಾಡಿದೆ. ಈ ಕುರಿತು ರಾಜ್ಯ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ, ಹೊಸ ವರ್ಷ ಆಚರಣೆ ಮಾಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ. ರೈತರು ಸಂಕಷ್ಟದಲ್ಲಿರುವಾಗ ಸರ್ಕಾರ ನಿದ್ದೆ ಮಾಡಿದೆ. ಸಿಎಂ, ಮಂತ್ರಿಗಳು ಮೋಜು-ಮಸ್ತಿಯಲ್ಲಿ ಹೊಸ ವರ್ಷ ಆಚರಣೆಗೆ ಹೊರಟಿರುವುದು ರಾಜ್ಯದ ಜನತೆಗೆ ಮಾಡುವ ಮೋಸ ಎಂದಿದ್ದಾರೆ.

ರೇವಣ್ಣ ಮಾತಿಗೆ ದೇಶಪಾಂಡೆ ಆಕ್ರೋಶ

ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಂದ ಗೃಹ ಖಾತೆ ಹಿಂದಕ್ಕೆ ಪಡೆದ ಬಗ್ಗೆ ಸಚಿವ ಎಚ್.ಡಿ. ರೇವಣ್ಣ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಲಿತರೂ ಸೇರಿ ಎಲ್ಲ ವರ್ಗಗಳಿಗೂ ಕಾಂಗ್ರೆಸ್ ಸಮಾನ ಅವಕಾಶ ನೀಡುತ್ತ ಬಂದಿದೆ. ಕಾಂಗ್ರೆಸ್ ಅನ್ನು ಟೀಕಿಸಿರುವ ರೇವಣ್ಣ, ಜೆಡಿಎಸ್​ನಿಂದ ಎಷ್ಟು ಜನ ದಲಿತರನ್ನು ಮಂತ್ರಿಗಳನ್ನಾಗಿ ಮಾಡಿದ್ದಾರೆ? ಎಂದು ಪತ್ರಿಕಾ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ. ಸಮಾನತೆ ತತ್ವದಲ್ಲಿ ನಮ್ಮ ಪಕ್ಷ ನಂಬಿಕೆ ಇಟ್ಟಿದೆ. ಹೀಗಾಗಿ ರೇವಣ್ಣ ಮಾತು ಸತ್ಯಕ್ಕೆ ದೂರವಾದುದು ಎಂದು ಅಭಿಪ್ರಾಯಪಟ್ಟಿದ್ದಾರೆ.

12 ಸ್ಥಾನಕ್ಕೆ ಜೆಡಿಎಸ್ ಬೇಡಿಕೆ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನೊಂದಿಗೆ ಸೀಟು ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲವೆಂದು ಸ್ಪಷ್ಟಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ನಮ್ಮ ಪಕ್ಷ 12 ಸೀಟುಗಳನ್ನು ಕೇಳಲಿದೆ ಎಂದಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 8ರಂದು ಸಂಸತ್ ಅಧಿವೇಶನ ಮುಗಿಯಲಿದೆ. ಜ. 15ರೊಳಗೆ ಎಐಸಿಸಿ ಅಧ್ಯಕ್ಷ ರಾಹುಲ್​ಗಾಂಧಿ ಜತೆ ರ್ಚಚಿಸಿ ಸೀಟು ಹಂಚಿಕೆ ಅಂತಿಮ ಮಾಡುತ್ತೇವೆ. ಕಾಂಗ್ರೆಸ್ ಜತೆ ಹೋದರೆ ಅನುಕೂಲವಾಗುತ್ತದೆ ಎಂದರು. ಲೋಕಸಭಾ ಚುನಾವಣೆಯ ದಿನಾಂಕ ಫೆಬ್ರವರಿ ಅಂತ್ಯ ಇಲ್ಲವೇ ಮಾರ್ಚ್ ಮೊದಲ ವಾರದಲ್ಲಿ ಘೊಷಣೆ ಆಗುವ ಸಾಧ್ಯತೆ ಇದೆ. ಆದ್ದರಿಂದ ನಾವು ಮೈಮರೆತು ಕೂರುವುದಿಲ್ಲ. ನಮ್ಮ ಪಕ್ಷ ಯಾವ ಕ್ಷೇತ್ರಗಳನ್ನು ಕೇಳಬೇಕು ಎಂಬುದನ್ನು ಎಚ್. ವಿಶ್ವನಾಥ್ ಜತೆ ಚರ್ಚೆ ನಡೆಸಿ ನಿರ್ಧಾರ ಮಾಡುತ್ತೇನೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಆಲಿ ಉತ್ತರ ಪ್ರದೇಶದಲ್ಲಿ ಸ್ಪರ್ಧೆ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿಯೂ ನಮ್ಮ ಪಕ್ಷ ಸ್ಪರ್ಧೆ ಮಾಡಲಿದೆ ಎಂದರು.

ನಿಗಮ ಮಂಡಳಿ ಸಮಸ್ಯೆ ಇಲ್ಲ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊರತುಪಡಿಸಿ ಇನ್ನುಳಿದ ನಿಗಮ ಮತ್ತು ಮಂಡಳಿಗಳ ಯಾವುದೇ ಸಮಸ್ಯೆ ಇಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾತ್ರ ಸುಪ್ರೀಂಕೋರ್ಟ್ ಮಾರ್ಗಸೂಚಿ ಪ್ರಕಾರವೇ ನಡೆಯಬೇಕಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ಜತೆ ಮತ್ತೊಮ್ಮೆ ಚರ್ಚೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು. ವಿಧಾನ ಪರಿಷತ್​ನ ಸಭಾಪತಿ ಸ್ಥಾನಕ್ಕೆ ಕೊನೆಯ ತನಕ ಪ್ರಯತ್ನ ಮಾಡಲಾಯಿತು. ಆದರೆ, ಕಾಂಗ್ರೆಸ್ ಒಪ್ಪಲಿಲ್ಲ. ನಮಗೆ ಉಪಸಭಾಪತಿ ಹಾಗೂ ಮುಖ್ಯ ಸಚೇತಕ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಕೇವಲ ಒಂದು ಹುದ್ದೆಗಾಗಿ ಸರ್ಕಾರಕ್ಕೆ ಸಂಚಕಾರ ತಂದುಕೊಳ್ಳಲು ಆಗುವುದಿಲ್ಲ ಎಂದು ದೇವೇಗೌಡ ತಿಳಿಸಿದರು.

ಕಾಂಗ್ರೆಸ್ ನಿರ್ಧಾರ: ಪರಮೇಶ್ವರ್ ಅವರಿಗೆ ಗೃಹ ಖಾತೆ ಕೈ ತಪ್ಪಿದ್ದಕ್ಕೆ ಸಚಿವ ರೇವಣ್ಣ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್​ಗೆ ಹೋಗಿರುವ ಖಾತೆಗಳನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ನಮ್ಮ ಪಕ್ಷದಿಂದ ತುಂಬಬೇಕಾಗಿರುವ ಎರಡು ಸ್ಥಾನಗಳನ್ನು ತುಂಬುವುದು ಸ್ವಲ್ಪ ತಡವಾಗಬಹುದು ಎಂದರು.

ಹಾಸನಕ್ಕೆ ಪ್ರಜ್ವಲ್

ಹಾಸನದಲ್ಲಿ ಕಳೆದ ಎಂಟು ವರ್ಷದಿಂದ ಪ್ರಜ್ವಲ್ ರೇವಣ್ಣ ಪಕ್ಷ ಸಂಘಟನೆ ಮಾಡುತ್ತಿದ್ದಾನೆ. ಅವನಿಗೆ ಸ್ಪರ್ಧೆ ಮಾಡು ವಂತೆ ತಿಳಿಸಿದ್ದೇನೆ. ನನಗೂ ಆರೋಗ್ಯ ಸರಿ ಇಲ್ಲ ಎಂದು ದೇವೇಗೌಡ ತಿಳಿಸಿದರು.

ಮೋದಿಗೆ ಈಗ ಜ್ಞಾನೋದಯ

ಚುನಾವಣೆ ಸೋತ ನಂತರ ಪ್ರಧಾನಿ ನರೇಂದ್ರ ಮೋದಿಗೆ ರೈತರ ಬಗ್ಗೆ ನೆನಪಾಗಿದೆ. ಅದಕ್ಕೆ ಸಾಲಮನ್ನಾದ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡುವ ವಿಚಾರಕ್ಕೆ ಸರ್ಕಾರ ಬದ್ಧವಾಗಿದ್ದು, ಅನುಮಾನ ಬೇಡ ಎಂದು ದೇವೇಗೌಡ ಹೇಳಿದರು.

ಕಾರ್ಯಕಾರಿಣಿ

ಪಕ್ಷದ ಕಾರ್ಯಕಾರಿಣಿ ಸಭೆ ಜ. 29,30 ರಂದು ನಡೆಯಲಿದೆ. ಲೋಕಸಭಾ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಜತೆ ಸರ್ಕಾರ ಮಾಡಿದ್ದೇವೆ. ರಾಷ್ಟ್ರಮಟ್ಟದಲ್ಲಿ ಎಡಪಂಥೀಯ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ದೇವೇಗೌಡ ತಿಳಿಸಿದರು.