ರೈತ ಬಂಧು ಸಾಲಮನ್ನಾ ಯೋಜನೆ ಜಾರಿ

ಬೆಂಗಳೂರು: ಅಂತೂ ಅನ್ನದಾತ ಋಣಮುಕ್ತನಾದ, ಆ ಮೂಲಕ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೊಟ್ಟ ಮಾತನ್ನು ಉಳಿಸಿಕೊಂಡರು. ಆ ಒಂದು ತೀರ್ಮಾನ ಲಕ್ಷಾಂತರ ಜನ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿತು. ಬದುಕಿನ ಭವಿಷ್ಯದ ದಾರಿ ಕಾಣದೇ ಕಂಗಾಲಾಗಿದ್ದವರ ಕಂಗಳಲ್ಲಿ ಹೊಸ ಹೊಳಪು ಮೂಡಿಸಿತು. ಆರ್ಥಿಕ ವಿಶ್ಲೇಷಕರು, ಹುಸಿ ಭರವಸೆ ಎಂದು ಮೂದಲಿಸುತ್ತಿದ್ದವರೂ ಬೆರಗಾಗುವಂತಾಯಿತು. ಯಾವುದು ಸಾಧ್ಯವೇ ಇಲ್ಲ ಎಂದು ಭಾವಿಸಲಾಗಿತ್ತೋ ಅದು ಸಾಧ್ಯವಾಯಿತು. ಅದನ್ನು ಸಾಧ್ಯವಾಗಿಸಿದ್ದು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ.

ರೈತರ ಸಾಲಮನ್ನಾ ಅಸಾಧ್ಯ, ಮಾಡಿದ್ದೇ ಆದರೆ ರಾಜ್ಯದ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗಲಿದೆ ಎಂದು ಹಲವರು ವ್ಯಾಖ್ಯಾನಿಸಿದ್ದರು. ಸರಣಿ ಬರದಿಂದ ಕಂಗೆಟ್ಟಿದ್ದ ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆ ದಾರಿ ಹಿಡಿದಾಗ ದಿಟ್ಟ ತೀರ್ಮಾನ ಕೈಗೊಂಡ ಸಮ್ಮಿಶ್ರ ಸರ್ಕಾರ ಸಾಲಮನ್ನಾ ಘೋಷಣೆ ಮಾಡಿತು. ಅದರಂತೆ ಕೊಟ್ಟ ಮಾತಿನಂತೆ ರೈತರಿಗೆ ಸೇಡಂ ಮತ್ತು ದೊಡ್ಡಬಳ್ಳಾಪುರದಲ್ಲಿ ಶನಿವಾರ ಋಣಮುಕ್ತ ಪತ್ರವನ್ನು ಕೊಟ್ಟು ಮಾತು ಉಳಿಸಿಕೊಂಡಿತು.

ಸಾಲಮನ್ನಾದ ಮೊತ್ತ ಬೃಹತ್ತಾಗಿತ್ತು. ಹಾಗಾಗಿ ಸಹಜವಾಗಿಯೇ ಕೇಂದ್ರ ಸರ್ಕಾರದ ನೆರವು ನಿರೀಕ್ಷಿಸಲಾಗಿತ್ತು. ವಿವಿಧ ಕಾರಣಕ್ಕೆ ಕೇಂದ್ರ ಈ ಕೋರಿಕೆಯನ್ನು ಮಾನ್ಯ ಮಾಡಲಿಲ್ಲ. ಇಷ್ಟಾದರೂ ಸಾಲಮನ್ನಾ ಘೋಷಣೆ ಮಾಡಿ, ಪೂರಕವಾಗಿ ಹಣದ ಹೊಂದಾಣಿಕೆ ಮಾಡಲು ಸಿಎಂ ಪಣ ತೊಟ್ಟಿದ್ದಾರೆ. ಈ ತೀರ್ವನಕ್ಕೆ ಸಚಿವ ಸಂಪುಟ ಸದಸ್ಯರೂ ಬೆನ್ನೆಲುಬಾಗಿ ನಿಂತಿದ್ದಾರೆ. ಸಾಲಮನ್ನಾ ಬರೀ ಘೋಷಣೆ ಎಂದು ಟೀಕಿಸಿದವರಿಗೆ ಉತ್ತರ ಈಗ ಸಿಕ್ಕಂತಾಗಿದೆ.

2019ರ ಮಾರ್ಚ್ ಒಳಗೆ ಪ್ರತಿ ರೈತನ ಸಾಲಮನ್ನಾ ಮಾಡಿ ನುಡಿದಂತೆ ನಡೆಯುವ ಸಂಕಲ್ಪ ಕುಮಾರಸ್ವಾಮಿ ಅವರದ್ದಾಗಿದೆ. ಬೃಹತ್ ಮೊತ್ತದ ಸಾಲಮನ್ನಾ ಮಾಡುವ ಮೂಲಕ ಇತರ ರಾಜ್ಯಗಳು ಕರ್ನಾಟಕದತ್ತ ನೋಡುವಂತೆ ತೀರ್ವನಿಸಿದ್ದು, ಇತಿಹಾಸದಲ್ಲಿ ಒಂದು ಮೈಲಿಗಲ್ಲೇ ಸರಿ.

ಸಾಲಮನ್ನಾ ಯಾರಿಗೆ, ಎಷ್ಟು?

# ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ರೈತರ ಪ್ರತಿ ಕುಟುಂಬಕ್ಕೆ 2 ಲಕ್ಷ ರೂ. ವರೆಗಿನ ಸಾಲಮನ್ನಾ.

# ಸಹಕಾರ ಬ್ಯಾಂಕ್​ಗಳಲ್ಲಿ 1 ಲಕ್ಷ ರೂ. ವರೆಗಿನ ಸಾಲಮನ್ನಾ.

# 2009ರ ಏ.1ರ ನಂತರ 2017ರ ಡಿ. 31ರವರೆಗೆ ರೈತರು ಪಡೆದಿರುವ ಎಲ್ಲ ಸುಸ್ತಿ ಬೆಳೆ ಸಾಲ ಒಂದೇ ಹಂತದಲ್ಲಿ ಮನ್ನಾ.

# ಸಹಕಾರಿ ಬ್ಯಾಂಕ್​ಗಳಲ್ಲಿ 2017ರ ಜುಲೈ ನಂತರ ಪಡೆದ ಸಾಲಮನ್ನಾ.

# ಎಲ್ಲ ರಾಷ್ಟ್ರೀಕೃತ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಖಾಸಗಿ ಬ್ಯಾಂಕ್, ಪ್ರಾಥಮಿಕ ಸಹಕಾರ ಕ್ರೆಡಿಟ್ ಸೊಸೈಟಿ, ರೈತರ ಸೇವೆ ಸಹಕಾರ ಸಂಘಗಳಲ್ಲಿನ ಬೆಳೆ ಸಾಲ, ಕೆಸಿಸಿ ಸಾಲಗಳು.

# 2017ರ ಡಿ. 31ರ ಅಂತ್ಯಕ್ಕೆ ಬ್ಯಾಂಕ್ ದಾಖಲೆಗಳಲ್ಲಿ ಬಾಕಿ ಇದ್ದ ಸಾಲ ಅಥವಾ ಒಂದು ಕುಟುಂಬಕ್ಕೆ 2 ಲಕ್ಷ ರೂ. ಇವುಗಳಲ್ಲಿ ಕಡಿಮೆ ಇರುವ ಮೊತ್ತವು ಸಾಲ ಮನ್ನಾ ಮಾಡುವ ಗರಿಷ್ಠ ಮೊತ್ತವಾಗಿರುತ್ತದೆ.

ಸಾಲ ತೀರಿದ್ದರೂ ಬೆನಿಫಿಟ್

ಅನೇಕ ರೈತರು ನಿಗದಿತ ಕಾಲಮಿತಿಯಲ್ಲಿ ಸಾಲ ಮರುಪಾವತಿ ಮಾಡುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಇನ್ನು ಕೆಲ ರೈತರಿಗೆ ಸಾಲ ಮರುಪಾವತಿ ಮಾಡುವಷ್ಟು ಆದಾಯವೂ ಬಂದಿರುತ್ತದೆ. ಅಂಥವರು ಈಗಾಗಲೇ ಸಾಲ ಮರುಪಾವತಿ ಮಾಡಿದ್ದರೆ ಅವರಿಗೆ ಪ್ರೋತ್ಸಾಹಧನ ನೀಡುವ ಮೂಲಕ ಅವರನ್ನೂ ಉತ್ತೇಜಿಸುವ ಮಹತ್ತರ ನಿರ್ಧಾರವನ್ನೂ ಎಚ್ಡಿಕೆ ಸರ್ಕಾರ ಕೈಗೊಂಡಿದೆ. ಸಕಾಲದಲ್ಲಿ ಸಾಲ ಪಾವತಿ ಮಾಡಿದ ಸುಸ್ತಿದಾರರಲ್ಲದ ರೈತರ ಉತ್ತೇಜನಕ್ಕೆ ಅವರ ಖಾತೆಗೇ ಮರುಪಾವತಿ ಮಾಡಿರುವ ಸಾಲದ ಮೊತ್ತ ಅಥವಾ 25 ಸಾವಿರ ರೂ.ಗಳಲ್ಲಿ ಯಾವುದು ಕಡಿಮೆಯೋ ಅದನ್ನು ತುಂಬಲಾಗುತ್ತದೆ.

ಸಾಲಮನ್ನಾ ಯಾವ ಹಂತದಲ್ಲಿದೆ ಗೊತ್ತೇ?

ವಾಣಿಜ್ಯ ಬ್ಯಾಂಕ್​ಗಳು

# 33 ಬ್ಯಾಂಕ್​ಗಳಿಂದ 21 ಲಕ್ಷ ರೈತರ ಬೆಳೆ ಸಾಲ ಮಾಹಿತಿ ಸಂಗ್ರಹಿಸಲಾಗಿದೆ. ಕಂದಾಯ ಇಲಾಖೆಯ ‘ಭೂಮಿ’ ತಂಡದಿಂದ ಯೋಜನೆಯ ತಂತ್ರಾಂಶ ಅಭಿವೃದ್ಧಿ ಪಡಿಸಿದ್ದು, ಮೇಲ್ವಿಚಾರಣೆ ಹೊಣೆಯನ್ನು ಐಎಎಸ್ ಹಿರಿಯ ಅಧಿಕಾರಿ ಮನೀಷ್ ಮೌದ್ಗಿಲ್ ಅವರಿಗೆ ವಹಿಸಲಾಗಿದೆ.

# ಬ್ಯಾಂಕ್​ಗಳ 6,500 ಶಾಖೆಗಳಲ್ಲಿ ಬೆಳೆ ಸಾಲ ಮಾಹಿತಿ ಪರಿಶೀಲನೆ ಕಾರ್ಯ ನಡೆದಿದ್ದು, 30 ಜಿಲ್ಲೆಗಳಲ್ಲಿ ವಾಣಿಜ್ಯ ಬ್ಯಾಂಕ್​ಗಳ 6,500 ಮ್ಯಾನೇಜರ್​ಗಳು ಹಾಗೂ ಆಪರೇಟರ್​ಗಳು ತರಬೇತಿ ಪಡೆದುಕೊಂಡಿದ್ದಾರೆ. ಸಾಲಮನ್ನಾ ಕಾರ್ಯಾಚರಣೆಗಾಗಿ ಜಿಲ್ಲಾ ಮಟ್ಟದಲ್ಲಿ ಬ್ಯಾಂಕ್​ಗಳು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡ ಜಿಲ್ಲಾ ಕೋಶ ರಚನೆ ಮಾಡಲಾಗಿದೆ.

# ಯೋಜನೆ ಅನುಷ್ಠಾನದ ಬಗ್ಗೆ ಪ್ರಗತಿ ಪರಿಶೀಲನೆಗಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಾಟ್ಸ್​ಆಪ್ ಗುಂಪು ರಚನೆ ಮಾಡಿದ್ದು, ನಿಗಾ ವಹಿಸಲಾಗಿದೆ.

ಸಹಕಾರ ಬ್ಯಾಂಕ್​ಗಳು

# 21.8 ಲಕ್ಷ ರೈತರ ಬೆಳೆ ಸಾಲ ದತ್ತಾಂಶ ದಾಖಲಿಸುವ ಕೆಲಸ ಭರದಿಂದ ನಡೆದಿದೆ. ನಮೂನೆ 52ರ ಸುಮಾರು 11 ಲಕ್ಷ ರೈತರು ಹಾಗೂ 3 ಲಕ್ಷ ರೈತರ ಸ್ವಯಂ ದೃಢೀಕರಣ ಪತ್ರದ ದತ್ತಾಂಶ ದಾಖಲೆ ಪೂರ್ಣಗೊಂಡಿದೆ.

# 1.8 ಲಕ್ಷ ರೈತರ ಆಧಾರ್ ಸಂಖ್ಯೆ, ಪಡಿತರ ಚೀಟಿ ಹಾಗೂ ಸರ್ವೆ ಸಂಖ್ಯೆಗಳ ದೃಢೀಕರಣ ಮಾಡಲಾಗಿದೆ.

# ಅದರಂತೆ ಸೇಡಂ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ಜಾರಿ ಮಾಡಲಾಗಿದ್ದು, ಶನಿವಾರ ರೈತರಿಗೆ ಋಣಮುಕ್ತ ಪತ್ರವನ್ನು ಮುಖ್ಯಮಂತ್ರಿಗಳು ನೀಡಿದರು. ಶೀಘ್ರದಲ್ಲೇ ಎಲ್ಲ ಫಲಾನುಭವಿ ರೈತರಿಗೂ ಋಣಮುಕ್ತ ಪತ್ರ ದೊರೆಯಲಿದೆ.


ಬೆಂಗಳೂರಿನತ್ತ ಮುಖ್ಯಮಂತ್ರಿ ಚಿತ್ತ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಎಷ್ಟು ವೇಗವಾಗಿ ಬೆಳೆಯುತ್ತಿದೆಯೋ, ಅಷ್ಟೇ ಪ್ರಮಾಣದಲ್ಲಿ ಸಮಸ್ಯೆಗಳೂ ಹೆಚ್ಚುತ್ತಿವೆ. ಹೀಗಾಗಿಯೇ ಮೈತ್ರಿ ಸರ್ಕಾರ ನಗರದ ಪ್ರಮುಖ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಪರಿಹಾರ ನೀಡುವ ಕೆಲಸಕ್ಕೆ ಮುಂದಾಗಿದೆ. ಪ್ರಮುಖವಾಗಿ ತ್ಯಾಜ್ಯ ನಿರ್ವಹಣೆ, ಎಲಿವೇಟೆಡ್ ಕಾರಿಡಾರ್​ಗಳ ನಿರ್ವಣ, ಪೆರಿಫೆರಲ್ ರಿಂಗ್​ರಸ್ತೆ, ಬಿಬಿಎಂಪಿ ಶಾಲಾ-ಕಾಲೇಜು ಮಕ್ಕಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಹಲವು ಯೋಜನೆ ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ.

ಶಾಲಾ ಮಕ್ಕಳ ಶಿಕ್ಷಣದಲ್ಲಿ ರೋಶಿನಿ: ಶಿಕ್ಷಣ ವ್ಯವಸ್ಥೆಯಲ್ಲಿ ಹಿಂದುಳಿದಿದ್ದ ಬಿಬಿಎಂಪಿ ಶಾಲೆ ಮತ್ತು ಕಾಲೇಜುಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ನೀಡುವ ಸಲುವಾಗಿ ಮೈತ್ರಿ ಸರ್ಕಾರದ ಆಣತಿಯಂತೆ ಬಿಬಿಎಂಪಿ ರೋಶಿನಿ ಯೋಜನೆ ಜಾರಿಗೆ ತರಲಾಗುತ್ತಿದೆ. ಮೈಕ್ರೋಸಾಫ್ಟ್ ಮತ್ತು ಟೆಕ್ ಅವಾಂತ ಸಂಸ್ಥೆ ಸಹಯೋಗದಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಯೋಜನೆ ಮೂಲಕ ವಿದ್ಯಾರ್ಥಿಗಳು ಸ್ಯಾಟ್​ಲೈಟ್ ಶಿಕ್ಷಣ, ಅತ್ಯಾಧುನಿಕ ಲ್ಯಾಬ್ ವ್ಯವಸ್ಥೆ, ಹೈಟೆಕ್ ಮೂಲಸೌಕರ್ಯಗಳನ್ನು ಪಡೆಯಲಿದ್ದಾರೆ. ಬಿಬಿಎಂಪಿಯಲ್ಲಿನ 156 ಶಾಲೆ ಮತ್ತು ಕಾಲೇಜುಗಳಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಮುಂದಿನ 5 ವರ್ಷದಲ್ಲಿ ಬಿಬಿಎಂಪಿ ಶಿಕ್ಷಣ ವ್ಯವಸ್ಥೆಯನ್ನು ಬದಲಿಸುವ ಪ್ರಯತ್ನ ಇದಾಗಿದೆ.

ತ್ಯಾಜ್ಯ ಸಮಸ್ಯೆ ನಿವಾರಣೆಗೆ ಕ್ರಮ

ಬೆಂಗಳೂರಿನ ತ್ಯಾಜ್ಯ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬಿಬಿಎಂಪಿಗೆ ಸಾಕಷ್ಟು ಸೂಚನೆ ಮತ್ತು ಆದೇಶಗಳನ್ನು ನೀಡಿದೆ. ಅದರಂತೆ ತ್ಯಾಜ್ಯ ನಿರ್ವಹಣೆಯನ್ನು ಸರಿಪಡಿಸಲು ಹೊಸದಾಗಿ ಟೆಂಡರ್ ಆಹ್ವಾನಕ್ಕೂ ಸಿದ್ಧತೆ ನಡೆಸಲಾಗಿದೆ. ಅದರ ಜತೆಗೆ ತ್ಯಾಜ್ಯ ಸಂಸ್ಕರಣೆಗಾಗಿ ನಿರ್ವಿುಸಿ ಸ್ಥಗಿತಗೊಂಡಿದ್ದ 7 ಸಂಸ್ಕರಣಾ ಘಟಕಗಳನ್ನು ಕೂಡ ಪುನರಾರಂಭಿಸಿ, 2,200 ಟನ್ ತ್ಯಾಜ್ಯ ಸಂಸ್ಕರಣೆ ಮಾಡುವಂತೆ ಮಾಡಲಾಗಿದೆ. ಅಲ್ಲದೆ, ಖುದ್ದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಜರ್ಮನಿ ಮತ್ತು ಫ್ರಾನ್ಸ್​ಗೆ ತೆರಳಿ ಅಲ್ಲಿನ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಯನ್ನು ವೀಕ್ಷಿಸಿದ್ದು, ಆ ತಂತ್ರಜ್ಞಾನ ಬೆಂಗಳೂರಿನಲ್ಲೂ ಅಳವಡಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ.

ಸಂಚಾರ ದಟ್ಟಣೆ ನಿವಾರಣೆಗೆ ಎಲಿವೇಟೆಡ್ ಕಾರಿಡಾರ್!

ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಳೆಯ ಬೃಹತ್ ಯೋಜನೆಯಾದ 102.4 ಕಿ.ಮೀ. ಉದ್ದದ 2 ಎಲಿವೇಟೆಡ್ ಹಾಗೂ 4 ಕನೆಕ್ಟೆಡ್ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಚಾಲನೆ ನೀಡಲಾಗಿದೆ. ಯೋಜನೆಗೆ 25 ಸಾವಿರ ಕೋಟಿ ರೂ. ವೆಚ್ಚವಾಗಲಿದ್ದು, ರಾಜ್ಯ ಸರ್ಕಾರ ಪ್ರಾರಂಭಿಕ ಹಂತವಾಗಿ 1 ಸಾವಿರ ಕೋಟಿ ರೂ. ನೀಡುವುದಾಗಿ ಬಜೆಟ್​ನಲ್ಲಿ ಪ್ರಸ್ತಾಪಿಸಿದೆ. ಯೋಜನೆ ಜಾರಿಯಿಂದ ಹೊರಭಾಗದಿಂದ ನಗರದೊಳಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿನ ಸಂಚಾರ ದಟ್ಟಣೆ ತಗ್ಗಲಿದೆ. ಕೆಆರ್​ಐಡಿಎಲ್ ಮೂಲಕ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಯೋಜನೆ ಜಾರಿಗೊಳ್ಳುವ ಮಾರ್ಗದಲ್ಲಿನ ಮಣ್ಣಿನ ಪರೀಕ್ಷೆ ನಡೆಸಲಾಗಿದೆ.

ವಿರುದ್ಧ ದಿಕ್ಕುಗಳ ಸಂಪರ್ಕಕ್ಕೆ ಪಿಆರ್​ಆರ್

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪೆರಿಫೆರಲ್ ರಿಂಗ್​ರಸ್ತೆ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡುತ್ತಿದೆ. ಅದಕ್ಕಾಗಿ ಹೊಸದಾಗಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಬೆಂಗಳೂರಿನ ಹೊಸೂರು ರಸ್ತೆಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದ್ದು, ಒಟ್ಟು 66 ಕಿ.ಮೀ. ಉದ್ದದ ಎಲಿವೇಟೆಡ್ ರಸ್ತೆ ನಿರ್ವಣಕ್ಕೆ 12 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತಿದೆ. ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಡಿಪಿಆರ್ ಸಿದ್ಧಗೊಂಡ ನಂತರ ಮಣ್ಣಿನ ಪರೀಕ್ಷೆ ನಡೆಸಲಾಗುತ್ತದೆ.


ಆಯ-ವ್ಯಯದಲ್ಲಿ ಮೈತ್ರಿಧರ್ಮ ಪಾಲನೆ

ಬೆಂಗಳೂರು: ಮೈತ್ರಿಧರ್ಮ ಪಾಲನೆಗೆ ಬಜೆಟ್​ನಲ್ಲಿಯೂ ಆದ್ಯತೆ ನೀಡಿದ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು, ರೈತರ ಸಾಲ ಮನ್ನಾ ಯೋಜನೆಯ ಜತೆಗೆ ಹತ್ತು ಹಲವು ಹೊಸ ಯೋಜನೆಗಳನ್ನು ಪ್ರಕಟಿಸುವ ಮೂಲಕ ನಾಡಿನ ಜನರ ಆಶೋತ್ತರಗಳಿಗೆ ಸ್ಪಂದಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದು ವಿಶೇಷ.

ಹಿಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಯಿಂದ ಹಿಡಿದು ಇಂದಿರಾ ಕ್ಯಾಂಟೀನ್ ತನಕ ಎಲ್ಲ ಯೋಜನೆಗಳನ್ನು ಯಥಾವತ್ತಾಗಿ ಮುಂದುವರಿಸುವ ನಿರ್ಣಯ ಕೈಗೊಂಡದ್ದು ಮೈತ್ರಿ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿ.

ಕುಮಾರಸ್ವಾಮಿ ಅವರ ಚೊಚ್ಚಲ ಬಜೆಟ್​ನಲ್ಲಿ ಸಾಲ ಮನ್ನಾ ಯೋಜನೆಗೆ ಹೆಚ್ಚು ಆದ್ಯತೆ ನೀಡಲಾಗಿತ್ತು. ಇಲ್ಲಿಯ ತನಕ ಕೇವಲ ಸಹಕಾರ ವಲಯದ ಸಾಲ ಮನ್ನಾ ಮಾಡುತ್ತ ಬಂದಿದ್ದ ಸಂಪ್ರದಾಯ ಮುರಿದ ಮುಖ್ಯಮಂತ್ರಿ, ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿಯೂ ರೈತರ ಸಾಲ ಮನ್ನಾ ಮಾಡುವ ಮೂಲಕ ಋಣಮುಕ್ತರನ್ನಾಗಿ ಮಾಡುವ ನಿರ್ಧಾರ ಕೈಗೊಂಡರು.

ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ ಸಿಎಂ ಬಜೆಟ್​ನಲ್ಲಿ ಇಸ್ರೇಲ್ ಮಾದರಿ ಕೃಷಿ ನೀತಿಗೆ ಒತ್ತು ನೀಡಿದರು. ಅಲ್ಲದೆ 5 ಸಾವಿರ ಹೆಕ್ಟೇರ್ ಭೂಮಿಯನ್ನು ಮೊದಲ ಹಂತದಲ್ಲೇ ಇಸ್ರೇಲ್ ಮಾದರಿ ನೀರಾವರಿಗೆ ಒಳಪಡಿಸಲು 150 ಕೋಟಿ ರೂ. ತೆಗೆದಿರಿಸಿದರು.

ವೈದ್ಯಕೀಯ ಕ್ಷೇತ್ರಕ್ಕೂ ಆದ್ಯತೆ ನೀಡಿದ ಅವರು ಪ್ರತಿ ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ರಾಮನಗರ ಜಿಲ್ಲೆಯ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮಂಜೂರಾತಿ ನೀಡಿದರು. ಗಂಗಾ ಕಲ್ಯಾಣ ಯೋಜನೆಗೆ ಪುನಶ್ಚೇತನ ನೀಡಲು ಕ್ರಮ, ಪ್ರವಾಸೋದ್ಯಮಕ್ಕೆ ಒತ್ತು, ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಹತ್ತು-ಹಲವು ಕ್ರಮ, ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಆರ್ಥಿಕ ನೆರವು ಸೇರಿ ಹತ್ತಾರು ವಿಭಿನ್ನ ಪ್ರಯತ್ನಗಳ ಮೂಲಕ ಕರ್ನಾಟಕ ಅಭಿವೃದ್ಧಿ ಪಥದ ರಥ ಎಳೆಯಲು ಮುಂದಾದ ಸಿಎಂ ಕುಮಾರಸ್ವಾಮಿ ಅವರಿಗೆ ನಾಡಿನ ಸರ್ವಾಂಗೀಣ ಅಭಿವೃದ್ಧಿಯೇ ಕನಸಾಗಿದೆ. ಅದನ್ನು ನನಸು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಅವರ ಅವಿರತ ಪ್ರಯತ್ನ ನಡೆದಿದೆ. ನಡೆಯುತ್ತಲೇ ಇದೆ.

ಅಭಿವೃದ್ಧಿ ಹಾದಿಯಲ್ಲಿ ಸರ್ಕಾರ

ಜೆಡಿಎಸ್-ಕಾಂಗ್ರೆಸ್ ಸರ್ಕಾರ ಆರು ತಿಂಗಳಿನಲ್ಲಿ ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ನಮ್ಮ ಸರ್ಕಾರ ಬಜೆಟ್​ನಲ್ಲಿ ಘೋಷಣೆ ಮಾಡಿದ್ದ ಜನಪರವಾದ ಎಲ್ಲ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಸಿಎಂ ಕುಮಾರಸ್ವಾಮಿ ಸಹ ಬಜೆಟ್​ನಲ್ಲಿ ಕೆಲ ಉತ್ತಮ ಯೋಜನೆಗಳನ್ನು ಘೋಷಣೆ ಮಾಡಿ ಅನುಷ್ಠಾನ ಮಾಡುತ್ತಿದ್ದಾರೆ. ಸರ್ಕಾರ ಐದು ವರ್ಷಗಳ ಕಾಲ ಸುಭದ್ರವಾಗಿರುತ್ತದೆ.

| ಸಿದ್ದರಾಮಯ್ಯ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ

 

ಸ್ವಾವಲಂಬಿ ಜೀವನಕ್ಕಾಗಿ ಯೋಜನೆ

ದುರ್ಬಲ ಸಮಾಜಕ್ಕಾಗಿ ವಿನೂತನ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ. ಉದ್ಯಮಶೀಲತೆ, ಕೌಶಲ ಕಲಿಸಲು ಉನ್ನತಿ, ಉದ್ಯೋಗಾವಕಾಶ ದೃಷ್ಟಿಯಿಂದ ಸಮೃದ್ಧಿ ಯೋಜನೆ ಜಾರಿಗೆ ತರಲಾಗಿದೆ. ಕಾಪೋರೇಟ್ ಕಂಪನಿಗಳ ಸಹಯೋಗದಲ್ಲಿ ದೇಶದಲ್ಲೇ ಬೃಹತ್ ಯೋಜನೆ ಇದಾಗಿದೆ. ಸರ್ಕಾರಿ ವಸತಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸಮಿತಿ ರಚಿಸಲಾಗಿದ್ದು, ಇನ್ನೆರಡು ವರ್ಷದಲ್ಲಿ ಹಾಸ್ಟೆಲ್​ಗಳ ಚಿತ್ರಣ ಬದಲು ಮಾಡುವ ವಿಶ್ವಾಸವಿದೆ. ಪರಿಶಿಷ್ಟ ಜಾತಿ, ಪಂಗಡದ ಜನರು ಸ್ವಾವಲಂಬಿಯಾಗಿ ಗೌರವಯುತ ಜೀವನ ನಡೆಸಲು ಬೇಕಾದಂಥ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಪ್ರಯತ್ನ ನಡೆಸುತ್ತಿದ್ದೇವೆ.

| ಪ್ರಿಯಾಂಕ್ ಖರ್ಗೆ ಸಮಾಜ ಕಲ್ಯಾಣ ಸಚಿವ


ಪಿಂಚಣಿ ಮೊತ್ತ ಹೆಚ್ಚಳ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಮಾಸಾಶನಗಳ ಮೊತ್ತ ಪರಿಷ್ಕರಿಸುವ ನಿರ್ಣಯವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಥಮ ಬಜೆಟ್​ನಲ್ಲೇ ಘೋಷಿಸಿದ್ದರಲ್ಲದೆ ನವೆಂಬರ್ 1ರಿಂದ ಅನುಷ್ಠಾನಗೊಂಡಿದೆ. ಸಂಧ್ಯಾ ಸುರಕ್ಷಾ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆಗಳಡಿ 65 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ನೀಡುತ್ತಿರುವ ಮಾಸಾಶನವನ್ನು 600 ರೂ.ಗಳಿಂದ 1000 ರೂ.ಗಳಿಗೆ ಹೆಚ್ಚಿಸಲಾಗಿದೆ. ಮಾಸಾಶನ ಮೊತ್ತ ವಿತರಿಸಲು ಖಜಾನೆ ನಿರ್ದೇಶನಾಲಯದ ನಿರ್ದೇಶಕರು, ಜಿಲ್ಲಾ ಮತ್ತು ಉಪ ಖಜಾನೆ ಅಧಿಕಾರಿಗಳಿಗೆ ಆದೇಶ ಕೂಡ ಹೊರಬಿದ್ದಿದೆ. ಇದರಿಂದಾಗಿ 65 ವರ್ಷ ಮೇಲ್ಪಟ್ಟ 32.92 ಲಕ್ಷ ವೃದ್ಧರು ಪ್ರಯೋಜನ ಪಡೆಯುತ್ತಿದ್ದಾರೆ. ಈ ಉದ್ದೇಶಕ್ಕಾಗಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಹೆಚ್ಚುವರಿಯಾಗಿ 660 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ. ಈ ಮೊತ್ತವನ್ನು ಮುಂದಿನ 5 ವರ್ಷಗಳಲ್ಲಿ ಹಂತ ಹಂತವಾಗಿ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ.

‘ನಮ್ಮ ಮೆಟ್ರೋ’ ಬಲು ಆರಾಮ

ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ದಿನೇದಿನೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ 3 ಬೋಗಿ ರೈಲಿಗೆ ಹೆಚ್ಚುವರಿ 3 ಬೋಗಿ ಅಳವಡಿಸುವ ಪ್ರಕ್ರಿಯೆ ಚುರುಕು ನೀಡಲಾಗಿದೆ. ಜೂ.22ರಂದು ಮೊದಲನೇ, ಅ.4ರಂದು 2ನೇ 6 ಬೋಗಿ ರೈಲಿಗೆ ಹಾಗೂ ನ.22ರಂದು 3ನೇ 6 ಬೋಗಿ ರೈಲಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದ್ದಾರೆ. 2019ರ ಮಾರ್ಚ್ ವೇಳೆಗೆ ನಮ್ಮ ಮೆಟ್ರೋದ 25 ರೈಲುಗಳಲ್ಲಿ ಹೆಚ್ಚುವರಿ 3 ಬೋಗಿ ಅಳವಡಿಕೆ ಆಗಲಿದೆ. 2019ರ ಆಗಸ್ಟ್ ಅಥವಾ ಸೆಪ್ಟೆಂಬರ್ ಒಳಗೆ ನಮ್ಮ ಮೆಟ್ರೋದ ಎಲ್ಲ 50 ರೈಲುಗಳನ್ನು 6 ಬೋಗಿ ರೈಲಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಮೆಟ್ರೋ ರೈಲು ಪ್ರಯಾಣ ಆರಾಮದಾಯಕವಾಗಿರಲಿದೆ.

ಸರ್ಕಾರದ ಗಡುವು: ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಗೆ ಚುರುಕು ನೀಡಲು ಬಿಎಂಆರ್​ಸಿಎಲ್​ಗೆ ಸರ್ಕಾರ ಸೂಚಿಸಿದೆ. ಮೈಸೂರು ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆಯಲ್ಲಿ 2020ಕ್ಕೆ ಮೆಟ್ರೋ ರೈಲು ಸಂಚಾರ ಆರಂಭ ಅಗಲಿದೆ. ಬೈಯಪ್ಪನಹಳ್ಳಿ- ವೈಟ್​ಫೀಲ್ಡ್ ಮಾರ್ಗ 2021ಕ್ಕೆ ಪೂರ್ಣಗೊಳ್ಳಲಿದೆ. 2 ಹೊಸ ಮಾರ್ಗಗಳಾದ ಆರ್.ವಿ.ರಸ್ತೆ- ಬೊಮ್ಮಸಂದ್ರ 2021ಕ್ಕೆ ಹಾಗೂ ಗೊಟ್ಟಿಗೆರೆ ನಾಗವಾರ 2023ಕ್ಕೆ ಪೂರ್ಣಗೊಳಿಲಿಸಲು ಗಡುವು ನೀಡಲಾಗಿದೆ. ತಿಂಗಳ ಹಿಂದಷ್ಟೇ ಬೆಂಗಳೂರು ನಗರಾಭಿವೃದ್ಧಿ ಸಚಿವ, ಡಿಸಿಎಂ ಡಾ.ಜಿ. ಪರಮೇಶ್ವರ್ ನಿಗಮದ ಪ್ರಗತಿ ಪರಿಶೀಲನೆ ಸಭೆ ನಡೆಸಿ ಪ್ರಯಾಣಿಕರಿಗೆ ಸೂಕ್ತ ಸೇವೆ ಒದಗಿಸಲು ಸೂಚಿಸಿದ್ದಾರೆ.

ಏಕೀಕೃತ ಸ್ಮಾರ್ಟ್​ಕಾರ್ಡ್: ನನೆಗುದಿಗೆ ಬಿದ್ದಿರುವ ಮೆಟ್ರೋ- ಬಿಎಂಟಿಸಿ ಏಕೀಕೃತ ಸ್ಮಾರ್ಟ್​ಕಾರ್ಡ್ ಯೋಜನೆ ಪುನಃ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ, ಬಿಎಂಟಿಸಿ ಜತೆ ಸಭೆ ನಡೆಸಲು ಪರಮೇಶ್ವರ್ ಬಿಎಂಆರ್​ಸಿಎಲ್​ಗೆ ಸೂಚಿಸಿದ್ದಾರೆ.


ಬೆಳಗುತ್ತಿದೆ ಕರ್ನಾಟಕ ಉತ್ಪಾದನೆ ಅಧಿಕ

ಬೆಂಗಳೂರು: ಕರ್ನಾಟಕವೀಗ ‘ಪವರ್’ ಹೆಚ್ಚಿಸಿಕೊಂಡು ಬೆಳಗಲಾರಂಭಿಸಿದೆ!

ಎಲ್ಲ ಮೂಲಗಳಿಂದಲೂ ವಿದ್ಯುತ್ ಉತ್ಪಾದನೆ ಹೆಚ್ಚಾಗಿರುವ ಪರಿಣಾಮ ರಾಜ್ಯವೇ ಒಂದು ತಿಂಗಳ ಅವಧಿಯಲ್ಲಿ 717 ದಶಲಕ್ಷ ಯೂನಿಟ್ ವಿದ್ಯುತ್ ಮಾರಾಟ ಮಾಡಿ ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿದೆ. ಈ ಬೆಳವಣಿಗೆ ಜತೆಯಲ್ಲೇ ರೈತರ ಬೇಡಿಕೆಯಂತೆ ಹಗಲಿನ ವೇಳೆಯೂ ಸತತ 7 ಗಂಟೆ ವಿದ್ಯುತ್ ನೀಡಬೇಕೆಂಬ ಯೋಜನೆಗೂ ಪ್ರಾಯೋಗಿಕ ಚಾಲನೆ ದೊರೆತಿದೆ.

ಕಳೆದ ತಿಂಗಳು ತೀವ್ರ ಕಲ್ಲಿದ್ದಲು ಕೊರತೆ ಎದುರಿಸಿದ್ದ ರಾಯಚೂರು ಶಾಖೋತ್ಪನ್ನ ಘಟಕದಲ್ಲೀಗ ಸಮಸ್ಯೆ ಸ್ಪಲ್ಪ ಮಟ್ಟಿಗೆ ಬಗೆಹರಿದಿದೆ. ನವೀಕರಣದೊಟ್ಟಿಗೆ ಕೇಂದ್ರ ಗ್ರಿಡ್​ನಿಂದಲೂ ವಿದ್ಯುತ್ ಕೊರತೆ ನೀಗಿದೆ. ಹಿಂದಿನ ವರ್ಷಗಳಲ್ಲಿ ನವೆಂಬರ್​ನಲ್ಲೇ ವಿದ್ಯುತ್ ಕೊರತೆ ಕಾಡಿತ್ತು. ಆಗೆಲ್ಲ 500ರಿಂದ 1,000 ಮೆ.ವಾ. ತನಕ ವಿದ್ಯುತ್ ಖರೀದಿಸಲಾಗಿತ್ತು. ಆದರೀಗ, ಯೋಜನೆಗಳು ಒಂದೊಂದೇ ಅನುಷ್ಠಾನವಾಗುತ್ತಿರುವ ಹಿನ್ನೆಲೆಯಲ್ಲಿ ಕೊರತೆ ನೀಗಿದೆ.

ರಾಜ್ಯದಲ್ಲಿ ಬೇಡಿಕೆಗಿಂತಲೂ ಹೆಚ್ಚಿನ ಉತ್ಪಾದನೆ ಆಗುತ್ತಿರುವ ಪರಿಣಾಮ ಕಳೆದ ಒಂದೂವರೆ ತಿಂಗಳಿನಿಂದ ಸಣ್ಣ ಪ್ರಮಾಣದಲ್ಲಿ ಅಧಿಕ ವಿದ್ಯುತ್ ಅನ್ನು ಎಕ್ಸ್​ಚೇಂಜ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಅಕ್ಟೋಬರ್​ನಿಂದಲೇ ಪ್ರಕ್ರಿಯೆ ಆರಂಭವಾಗಿದ್ದರೂ ನವೆಂಬರ್​ನಲ್ಲಿ ಪ್ರತಿನಿತ್ಯ ಮಾರಾಟ ನಡೆದಿದೆ. ಎಕ್ಸ್​ಚೇಂಜ್​ನಲ್ಲಿ ಬಿಡ್​ಗೆ ಹೋದಾಗ 1,310 ದಶಲಕ್ಷ ಯೂನಿಟ್​ಗಳಿಗೆ ಬೇಡಿಕೆ ಬಂದಿದ್ದರೂ ರಾಜ್ಯದ ಬೇಡಿಕೆ ಪೂರೈಸಿ 717 ದಶಲಕ್ಷ ಯೂನಿಟ್ ಮಾರಾಟವಾಗಿದೆ.

ಸರಾಸರಿ ದರ ಯುನಿಟ್​ಗೆ 4.65 ರೂ.ಗಳಿದೆ. ಒಟ್ಟಾರೆ 333.81 ಕೋಟಿ ರೂ. ಬಂದಿದ್ದರೂ ಜಿಎಸ್​ಟಿ 25.07 ಕೋಟಿ ರೂ. ಕಳೆದು 308.73 ಕೋಟಿ ರೂ. ನಿವ್ವಳ ಆದಾಯ ಬಂದಿದೆ.

ಹೆಚ್ಚಲಿದೆ ಉತ್ಪಾದನೆ

ಪಾವಗಡದ ಸೋಲಾರ್ ಘಟಕದಲ್ಲಿ ಮುಂದಿನ ಮೂರು ತಿಂಗಳಿನಲ್ಲಿ ಹೆಚ್ಚುವರಿ 600 ಮೆ.ವಾ. ಉತ್ಪಾದನೆ ಆಗಲಿದೆ. 100 ತಾಲೂಕುಗಳಲ್ಲಿ ತಲಾ 20 ಮೆ.ವಾ. ಸಾಮರ್ಥ್ಯದ ಸೋಲಾರ್ ಘಟಕಗಳು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿವೆ.