ದಲ್ಲಾಳಿಗಳಿಗೆ ಮೂಗುದಾರ

ಆಸ್ತಿ ಹಸ್ತಾಂತರ, ಅಡಮಾನ, ಭೋಗ್ಯ, ಅಧಿಕಾರ ಪತ್ರಗಳ ನೋಂದಣಿ ವ್ಯವಸ್ಥೆಗಾಗಿ ಜನರಿನ್ನು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಿಲ್ಲ. ಸಬ್​ರಿಜಿಸ್ಟ್ರಾರ್ ಕಚೇರಿಗಳಲ್ಲಿ ಬೇರೂರಿರುವ ಮಧ್ಯವರ್ತಿಗಳ ಹಾವಳಿಗೆ ತಿಲಾಂಜಲಿ ಇಡುವ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ‘ಕಾವೇರಿ’ ಹೆಸರಿನ 9 ಆನ್​ಲೈನ್ ಸೇವೆಗಳನ್ನು ರೂಪಿಸಿದೆ. ಜನಸಾಮಾನ್ಯರಿಗೆ ಬೆರಳ ತುದಿಯಲ್ಲೇ ಸೌಲಭ್ಯ ಕಲ್ಪಿಸಿಕೊಡುವ ಈ ಸುಲಲಿತ ಸೇವೆಗಳಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಶುಕ್ರವಾರ ವಿಧಾನಸೌಧದಲ್ಲಿ ಚಾಲನೆ ನೀಡಿದರು..

ಇಸಿ ಪ್ರತಿ ಸಲೀಸು

ಸ್ಥಿರಾಸ್ತಿ ಋಣಭಾರ ಪ್ರಮಾಣಪತ್ರ (ಇಸಿ) ಮತ್ತು ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿಗಳನ್ನು ಆನ್​ಲೈನ್ ಮುಖಾಂತರ ಪಡೆಯಬಹುದು. ಒಂದು ವೇಳೆ ನಿರ್ದಿಷ್ಟ ಆಸ್ತಿಗಳ ಕುರಿತು ಋಣಭಾರಗಳನ್ನು ಪರಿಶೀಲಿಸಬೇಕಾದಲ್ಲಿ ಆಸ್ತಿಯ ವಿವರವೂ ಸಿಗಲಿದೆ. ಡಿಜಿಟಲ್ ಸಹಿ ಮಾಡಿದ ಋಣಭಾರ ಪ್ರಮಾಣಪತ್ರಗಳನ್ನು ಸಾರ್ವಜನಿಕರು ಆನ್​ಲೈನ್ ಮೂಲಕ ಶುಲ್ಕ ಪಾವತಿಸಿ ಪಡೆಯಬಹುದು. ನೋಂದಾಯಿಸಿದ ದಸ್ತಾವೇಜಿನ ದೃಢೀಕೃತ ನಕಲನ್ನು ಆನ್​ಲೈನ್​ನಲ್ಲಿ ದಸ್ತಾವೇಜಿನ ಸಂಖ್ಯೆ ನಮೂದಿಸಿ ಸೂಕ್ತ ಶುಲ್ಕವನ್ನು ಆನ್​ಲೈನ್ ಮೂಲಕ ಪಾವತಿಸಿ ಪಡೆಯಬಹುದು.

ನೀವೇ ಸ್ಥಿರಾಸ್ತಿ ಮೌಲ್ಯ ಲೆಕ್ಕಹಾಕಿ

ಸಾರ್ವಜನಿಕರು ತಮ್ಮ ಆಸ್ತಿಯ ವಿವರಗಳನ್ನು ತಂತ್ರಾಂಶದಲ್ಲಿ ನಮೂದಿಸಿ, ಆಸ್ತಿಯ ಮಾರ್ಗ ಸೂಚಿ ಮೌಲ್ಯವನ್ನು ಸ್ವತಃ ಲೆಕ್ಕ ಮಾಡಬಹುದು. ಹಾಗೂ ಪಾವತಿಸಬೇಕಾದ ಮುದ್ರಾಂಕ ಶುಲ್ಕವನ್ನು ಸರಳ ಮತ್ತು ಸುಲಭ ಹಂತಗಳಲ್ಲಿ ತಂತ್ರಾಂಶದಲ್ಲಿ ಲೆಕ್ಕ ಮಾಡಬಹುದಾಗಿದೆ.

ಅಲೆದಾಟ ಇನ್ನಿರಲ್ಲ

ಈ ಸೇವೆ ಉಪ ನೋಂದಣಿ ಕಚೇರಿಗೆ ಜನರು ಅನೇಕ ಬಾರಿ ಅಲೆದಾಡುವುದನ್ನು ತಪ್ಪಿಸುತ್ತದೆ. ಆನ್​ಲೈನ್ ಮೂಲಕವೇ ದಸ್ತಾವೇಜನ್ನು ನೋಂದಣಿಗೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ನೋಂದಾಯಿಸಬೇಕಾದ ಆಸ್ತಿಯ ಎಲ್ಲ ವಿವರಗಳನ್ನು ನೋಂದಣಿ ಪೂರ್ವದಲ್ಲಿ ಆನ್​ಲೈನ್ ಮೂಲಕ ನಮೂದಿಸಿ, ಮಾಹಿತಿಗಳನ್ನು ವೀಕ್ಷಿಸಿದ ನಂತರ ಅವಶ್ಯವಿದ್ದಲ್ಲಿ ಸರಿಪಡಿಸಿ ಸಂಬಂಧಪಟ್ಟ ದಾಖಲೆಗಳನ್ನು ಅಪ್​ಲೋಡ್ ಮಾಡಿ ಆನ್​ಲೈನ್​ನಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ನಿಗದಿಪಡಿಸಿದ ಆಸ್ತಿಯ ಮಾರ್ಗಸೂಚಿ ದರಗಳನ್ನು ತಂತ್ರಾಂಶದಲ್ಲಿ ಪಡೆದು, ದಸ್ತಾವೇಜಿಗೆ ಸಂಬಂಧಿಸಿದ ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಿಕೊಳ್ಳಬಹುದು. ನಂತರ ನಿರ್ಧರಿಸಿದ ಮಾರುಕಟ್ಟೆ ಮೌಲ್ಯದ ಮಂಜೂರು ಅರ್ಜಿಯನ್ನು ಉಪ ನೋಂದಣಿ ಅಧಿಕಾರಿಗಳಿಗೆ ಸಲ್ಲಿಸಬಹುದು.

ನೋಂದಣಿಗೆ ಸಮಯ ಬುಕಿಂಗ್

ಪಾಸ್​ಪೋರ್ಟ್ ಕಚೇರಿಯಲ್ಲಿರುವಂತೆ ಇನ್ನು ನೋಂದಣಿಗೂ ಸ್ಲಾಟ್ ಬುಕ್ ಮಾಡಿಕೊಳ್ಳಬಹುದು. ಉಪ ನೋಂದಣಾಧಿಕಾರಿ ಆನ್​ಲೈನ್ ಮೂಲಕ ಅರ್ಜಿ ಮತ್ತು ಮೌಲ್ಯ ಮಾನ್ಯಗೊಳಿಸಿದ ನಂತರ ದಸ್ತಾವೇಜಿಗೆ ತಗಲುವ ಶುಲ್ಕಗಳನ್ನು ಸಾರ್ವಜನಿಕರು ಪಾವತಿಸಲು ಸಿದ್ಧರಿದ್ದಲ್ಲಿ ಆನ್​ಲೈನ್​ನಲ್ಲಿ ಪಾವತಿಸಿ, ಅವಕಾಶವಿದ್ದಲ್ಲಿ ಮುಂದಿನ ದಿನಾಂಕಗಳಂದು ನೋಂದಣಿ ಪ್ರಕ್ರಿಯೆಗೆ ಸಮಯ ನಿಗದಿಪಡಿಸಿಕೊಳ್ಳಬಹುದು.

ಆನ್​ಲೈನ್​ನಲ್ಲೇ ಇ-ಸ್ಟಾಂಪ್

ಸಾರ್ವಜನಿಕರು ಪಡೆದುಕೊಳ್ಳುವ ಕರಾರು, ಪ್ರಮಾಣಪತ್ರಗಳಿಗೆ ಮುದ್ರಾಂಕ ಶುಲ್ಕವನ್ನು ಆನ್​ಲೈನ್​ನಿಂದ ಪಾವತಿಸಿ ಇ-ಸ್ಟಾಂಪ್ ಕಾಗದವನ್ನು ಮನೆಯಿಂದಲೇ ಪ್ರಿಂಟ್ ಪಡೆವ ಸೌಲಭ್ಯವನ್ನು ಸ್ಟಾಕ್ ಹೋಲ್ಡಿಂಗ್ಸ್ ಕಾರ್ಪೆರೇಶನ್ ಸಹಯೋಗದಲ್ಲಿ ಕಲ್ಪಿಸಲಾಗಿದೆ.

ಡಿಕ್ಲರೇಷನ್ ಸುಲಭ

ರೈತರಿಗೆ ಕೃಷಿ ಸಾಲ ನೀಡುವ ಸಂದರ್ಭದಲ್ಲಿ ಪಡೆಯುವ ಡಿಕ್ಲರೇಷನ್ ಮತ್ತು ಸಾಲ ತೀರುವಳಿ ಪತ್ರಗಳನ್ನು ಆನ್​ಲೈನ್ ಮೂಲಕ ಫೈಲಿಂಗ್ ಮಾಡುವ ಸೌಲಭ್ಯಗಳನ್ನು ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಒದಗಿಸಲಿವೆ.

ಮೌಲ್ಯ ಮೊಬೈಲ್ ಆಪ್

ಸಾರ್ವಜನಿಕರು ಯಾವುದೇ ಸ್ಥಿರಾಸ್ತಿ ಮಾರ್ಗಸೂಚಿ ಮೌಲ್ಯ ತಿಳಿಯಲು ಅನುಕೂಲವಾಗುವಂತೆ ಜಿಐಎಸ್ ಆಧಾರಿತ ‘ಮೌಲ್ಯ’ ಎಂಬ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ.

ವಿವಾಹ ನೋಂದಣಿ ಎಲ್ಲಿ ನಡೆಯುತ್ತೆ ಗೊತ್ತಾ?

ವಧು ಮತ್ತು ವರನ ವಿಳಾಸ ಹಾಗೂ ವಿವಾಹ ನೆರವೇರಿಸುವ ಸ್ಥಳ ಆಧರಿಸಿ ವಿವಾಹ ನೋಂದಾಯಿಸಿಕೊಳ್ಳಬೇಕಾದ ಕಚೇರಿ ವಿವರವನ್ನು ದೃಢೀಕರಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ವಿವಾಹ ನೋಂದಣಿ ಮಾಡಿಕೊಳ್ಳಲು ಆಯಾ ಕಾರ್ಯವ್ಯಾಪ್ತಿಯ ಕಚೇರಿಗಳ ವಿವರವನ್ನು ಆನ್​ಲೈನ್ ಪೋರ್ಟಲ್​ನಿಂದ ಪಡೆಯಬಹುದು.

ಕಚೇರಿ ಎಲ್ಲಿದೆ ಗೊತ್ತಿಲ್ಲವೇ?

ರಾಜ್ಯಾದ್ಯಂತ ನೋಂದಣಿ ಕಚೇರಿ ಹುಡುಕಾಟ ಸಾಮಾನ್ಯ. ಹೀಗಾಗಿ ರಾಜ್ಯದ ಎಲ್ಲ 250 ಉಪ ನೋಂದಣಿ ಕಚೇರಿಗಳ ವಿಳಾಸದ ಮಾಹಿತಿಯನ್ನು ಆನ್​ಲೈನ್ ಪೋರ್ಟಲ್​ನಲ್ಲಿ ಅಡಕಗೊಳಿಸಲಾಗಿದೆ. ಸಂಬಂಧಿಸಿದ ಕಾರ್ಯವ್ಯಾಪ್ತಿಯ ಉಪ ನೋಂದಣಿ ಕಚೇರಿಯಲ್ಲಿ ವಿವರವನ್ನು ತಂತ್ರಾಂಶದಲ್ಲಿ ಪಡೆಯಬಹುದು.

ಕಚೇರಿ ಎಲ್ಲಿದೆ ಗೊತ್ತಿಲ್ಲವೇ?

ರಾಜ್ಯಾದ್ಯಂತ ನೋಂದಣಿ ಕಚೇರಿ ಹುಡುಕಾಟ ಸಾಮಾನ್ಯ. ಹೀಗಾಗಿ ರಾಜ್ಯದ ಎಲ್ಲ 250 ಉಪ ನೋಂದಣಿ ಕಚೇರಿಗಳ ವಿಳಾಸದ ಮಾಹಿತಿಯನ್ನು ಆನ್​ಲೈನ್ ಪೋರ್ಟಲ್​ನಲ್ಲಿ ಅಡಕಗೊಳಿಸಲಾಗಿದೆ. ಸಂಬಂಧಿಸಿದ ಕಾರ್ಯವ್ಯಾಪ್ತಿಯ ಉಪ ನೋಂದಣಿ ಕಚೇರಿಯಲ್ಲಿ ವಿವರವನ್ನು ತಂತ್ರಾಂಶದಲ್ಲಿ ಪಡೆಯಬಹುದು.

ಲಾಭಗಳೇನು?

*ಮಧ್ಯವರ್ತಿಗಳ ಹಾವಳಿ ನಿಲ್ಲುವ ಸಾಧ್ಯತೆ ಹೆಚ್ಚು

*ನೋಂದಣಿ ಪೂರ್ವ ಪ್ರಕ್ರಿಯೆ ಅಲೆದಾಟ ತಪ್ಪಲಿದೆ

*ಮುದ್ರಾಂಕ ಶುಲ್ಕವನ್ನು ನಿಖರವಾಗಿ ಲೆಕ್ಕಹಾಕಬಹುದು

*ಋಣಭಾರ ಪ್ರಮಾಣಪತ್ರಕ್ಕಾಗಿ ಕಚೇರಿಗೆ ಹೋಗುವ ಅಗತ್ಯವಿಲ್ಲ

ಜನರಿಗೆ ಸುಲಲಿತ ಆಡಳಿತ ನೀಡಬೇಕೆಂಬ ಸಮ್ಮಿಶ್ರ ಸರ್ಕಾರದ ಆಶಯದಂತೆ ಈ ಸೇವೆ ಆರಂಭಿಸುತ್ತಿದ್ದೇವೆ. ಇಂದಿನಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ.

– ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಸಾರ್ವಜನಿಕರು ಒಂಭತ್ತು ಸೇವೆಗಳ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಮನೆಯಲ್ಲಿದ್ದೇ ನೋಂದಣಿ ತಯಾರಿ ಮಾಡಿಕೊಳ್ಳಬಹುದು.

– ಆರ್.ವಿ. ದೇಶಪಾಂಡೆ, ಕಂದಾಯ ಸಚಿವ

ನೋಂದಣಿಗೆ ಸಂಬಂಧಿಸಿದ ಸೇವೆಗಳನ್ನು ಸುಲಭವಾಗಿ ಜನರಿಗೆ ತಲುಪಿಸುವ ಒಂದೇ ಹಂತದ ಕ್ರಮವಾಗಿ ಇಲಾಖೆಯು ‘ಕಾವೇರಿ’ ಆನ್​ಲೈನ್ ಸೇವೆ ಅಭಿವೃದ್ಧಿಪಡಿಸಿದೆ.

-ಡಾ.ಕೆ.ವಿ. ತ್ರಿಲೋಕ್​ಚಂದ್ರ, ನೋಂದಣಿ ಮಹಾ ಪರಿವೀಕ್ಷಕ, ಮುದ್ರಾಂಕ ಆಯುಕ್ತ