ಜೇಬಿಗೂ ಕತ್ತರಿ, ಹೊಸ ಸಾಲಕ್ಕಿಲ್ಲ ಖಾತರಿ

ಸಿಎಂ ಕುಮಾರಸ್ವಾಮಿ ಮಂಡಿಸಿದ ಚೊಚ್ಚಲ ಬಜೆಟ್​ನ ಬಿಸಿ ಮತ್ತು ಖುಷಿಯ ‘ಸಮ್ಮಿಶ್ರ’ ಉಡುಗೊರೆ ಇಂದಿನಿಂದ ಜನಸಾಮಾನ್ಯರನ್ನು ತಲುಪಲಿದೆ. ಒಂದೆಡೆ, ರಾಜ್ಯದ ಅನ್ನದಾತರಿಗೆ ಸಾಲಮನ್ನಾದ ಸಿಹಿ, ಮತ್ತೊಂದೆಡೆ ಸಾಲಮನ್ನಾಕ್ಕೆ ಸಂಪನ್ಮೂಲ ಕ್ರೋಡೀಕರಣದ ಕಸರತ್ತು ತೈಲ ಮತ್ತು ವಿದ್ಯುತ್ ದರದ ತೆರಿಗೆ ಏರಿಕೆ ರೂಪದಲ್ಲಿ ಜನರನ್ನು ತಾಕಲಿದೆ. ಆದರೆ ರೈತರಿಗೆ ಕಳವಳದ ಮತ್ತೊಂದು ವಿಷಯವೂ ಇದೆ. ಸಾಲದ ಹೊರೆ ಸಡಿಲಗೊಂಡು ಕೃಷಿ ಬಿತ್ತನೆಗಾಗಿ ಹೊಸ ಸಾಲದ ನಿರೀಕ್ಷೆಯಲ್ಲಿದ್ದ ರೈತರ ಆಸೆಗೆ ಬ್ಯಾಂಕ್​ಗಳು ತಣ್ಣೀರೆರಚಿವೆ. ಆರ್​ಬಿಐ ಸಮ್ಮತಿಸಿದರಷ್ಟೇ ಹೊಸ ಸಾಲಕ್ಕೆ ಋಣಮುಕ್ತ ಪತ್ರ ಕೊಡುವ ಷರತ್ತು ವಿಧಿಸಿರುವುದು ಸರ್ಕಾರಕ್ಕೂ ತಲೆನೋವು ತಂದಿದೆ.

ಇಂದಿನಿಂದಲೇ ತೆರಿಗೆ ಬರೆ

ರೈತರ ಬೆನ್ನಿಂದ ಇಳಿಸಿದ ಸಾಲದ ಹೊರೆಯನ್ನು ತೆರಿಗೆಯಾಗಿ ಹೊರಿಸಿರುವ ಸರ್ಕಾರದ ಕ್ರಮ ಶನಿವಾರದಿಂದಲೇ ಜಾರಿಯಾಗಲಿದೆ. ಇದರಿಂದಾಗಿ ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಹೆಚ್ಚಳದಿಂದ ದುನಿಯಾ ದುಬಾರಿ ಆಗಲಿದೆ.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಜೆಟ್​ನಲ್ಲಿ ಘೋಷಣೆ ಮಾಡಿದ್ದ 34 ಸಾವಿರ ಕೋಟಿ ರೂ. ಸಾಲಮನ್ನಾ ಮೊತ್ತಕ್ಕೆ ಹಣ ಹೊಂದಿಸಲು ಈ ಮೇಲಿನ ವಸ್ತುಗಳ ಮೇಲೆ ವಿಧಿಸಿರುವ ಸೆಸ್ ಜಾರಿಗೆ ಶುಕ್ರವಾರ ಅಧಿಸೂಚನೆ ಹೊರಬಿದ್ದಿದೆ.

ಧನವಿನಿಯೋಗ ವಿಧೇಯಕ ಗುರುವಾರವೇ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರವಾಯಿತಾದರೂ ಶುಕ್ರವಾರ ರಾಜ್ಯಪಾಲರಿಂದ ಅಂಗೀಕಾರ ಪಡೆದು ಸಂಜೆ ಅಧಿಸೂಚನೆ ಹೊರಡಿಸಲಾಗಿದೆ. ಶನಿವಾರದಿಂದ ಹೊಸ ದರ ಜಾರಿ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪರಿಣಾಮಗಳೇನು?

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಜನಸಾಮಾನ್ಯರ ನಿತ್ಯದ ಬದುಕಿಗೆ ಹಲವು ರೀತಿಯಲ್ಲಿ ಹೊರೆ ಆಗಲಿದೆ. ಸರಕು ಸಾಗಣೆ ದರ ಹೆಚ್ಚಾಗುವುದರಿಂದ ದಿನಸಿ, ತರಕಾರಿ, ಹಾಲಿನ ಬೆಲೆಯೂ ತುಟ್ಟಿಯಾಗುವ ಸಾಧ್ಯತೆ ಇದೆ. ಬಸ್, ಆಟೋ ಟ್ಯಾಕ್ಸಿ ಪ್ರಯಾಣ ದರವೂ ಹೆಚ್ಚಾಗಬಹುದು.

ಮದ್ಯ ಘಾಟು

ಮದ್ಯದ ಮೇಲೆ ಶೇ. 4 ತೆರಿಗೆ ಹೆಚ್ಚಳ ವಾಗಲಿದೆ. 3000 ರೂ. ಬೆಲೆಯ ಮದ್ಯ ಖರೀದಿ ಮಾಡಿದರೆ 120 ರೂ. ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಮದ್ಯ ಬೆಲೆ ಹೆಚ್ಚಳ ಆಗಸ್ಟ್ 1ರಿಂದ ಜಾರಿಗೆ ಬರಲಿದೆ.

ಎಷ್ಟು ತೆರಿಗೆ ಸಂಗ್ರಹ?

ವಿದ್ಯುತ್, ಇಂಧನ ಹಾಗೂ ಮದ್ಯದ ಮೇಲೆ ಸೆಸ್ ಹಾಕುವ ನಿರ್ಧಾರದಿಂದ ಸುಮಾರು 3000 ಕೋಟಿ ರೂ.ಗಳ ಹೆಚ್ಚುವರಿ ತೆರಿಗೆ ಸಂಗ್ರಹದ ಅಂದಾಜು ಮಾಡಲಾಗಿದೆ.

ಕರೆಂಟ್ ಶಾಕ್

ವಿದ್ಯುತ್ ಮೇಲೆ ಶೆ.3 ಸೆಸ್ ಹಾಕಿರುವುದರಿಂದ ಪ್ರತಿ ತಿಂಗಳು 500 ರೂ. ಬಿಲ್ ಬರುವ ಕಡೆ 15 ರೂ. ಹೆಚ್ಚಿನ ಮೊತ್ತ ಸೇರ್ಪಡೆ ಆಗಲಿದೆ.

ತೈಲದರ ಲೆಕ್ಕಾಚಾರ

ಪೆಟ್ರೋಲ್ ಮೇಲಿನ ಸೆಸ್ ಶೇ.30ರಿಂದ 32ಕ್ಕೆ ಹೆಚ್ಚಿಸಿರು ವುದರಿಂದ ಪ್ರತಿ ಲೀಟರ್ ಬೆಲೆ 1.14 ರೂ. ಹೆಚ್ಚಾಗುತ್ತದೆ. 100 ಲೀಟರ್ ಬಳಕೆ ಮಾಡಿದರೆ 114 ರೂ. ಹೆಚ್ಚುವರಿ ಖರ್ಚಾಗುತ್ತದೆ. ಡೀಸೆಲ್ ಮೇಲಿನ ಸೆಸ್ ಶೆ. 19 ರಿಂದ 21ಕ್ಕೆ ಹೆಚ್ಚಳಗೊಂಡು, ಪ್ರತಿ ಲೀಟರ್ ಮೇಲೆ 1.12 ರೂ. ತುಟ್ಟಿ ಆಗಲಿದೆ.


ರೈತರಿಗೆ ಋಣಮುಕ್ತಿ ಸವಾಲು

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಚಾಲ್ತಿಸಾಲವೂ ಮನ್ನಾ ಆಯ್ತೆಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ರಾಜ್ಯದ ಅನ್ನದಾತರಿಗೆ ‘ಋಣಮುಕ್ತ’ದ ಹೊಸ ಸಂಕಷ್ಟ ಬೆನ್ನೇರಿದೆ. ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ) ಸಮ್ಮತಿಸಿದರಷ್ಟೇ ರೈತರಿಗೆ ಋಣಮುಕ್ತ ಪತ್ರ ಸಿಗಲಿದ್ದು, ಅದರಿಂದಷ್ಟೇ ಹೊಸ ಸಾಲಕ್ಕೆ ಅರ್ಹತೆ ಪಡೆಯಬೇಕಾಗುತ್ತದೆ ಎಂದು ಬ್ಯಾಂಕ್​ಗಳು ಹೊಸ ಷರತ್ತು ಹಾಕಿವೆ. ಸಾಲಮನ್ನಾಕ್ಕೆ ಸಂಪನ್ಮೂಲ ಹೊಂದಿಸಲು ಸರ್ಕಾರ ಪರದಾಡುತ್ತಿರುವಾಗಲೇ ಈ ಸನ್ನಿವೇಶ ಎದುರಾಗಿರುವುದು ಅನ್ನದಾತರನ್ನೂ ಕಂಗಾಲಾಗಿಸಿದೆ. ರಾಜ್ಯ ಸರ್ಕಾರ ರೈತರ ಸುಸ್ತಿಸಾಲ 34 ಸಾವಿರ ಕೋಟಿ ರೂ. ಹಾಗೂ ಸಹಕಾರ ವಲಯದ 10,700 ಕೋಟಿ ರೂ. ಚಾಲ್ತಿ ಸಾಲವನ್ನು ಮನ್ನಾ ಮಾಡಿದೆ.

ಬಡ್ಡಿ ಮೊತ್ತ ಬಿಡದೆ ಕಂತುಗಳ ಪಾವತಿಗೆ ಕೆಲ ಬ್ಯಾಂಕ್​ಗಳು ಸಮ್ಮತಿಸಿವೆಯಾದರೂ ಋಣಮುಕ್ತ ಪತ್ರ ನೀಡಬೇಕಾದರೆ ಆರ್​ಬಿಐ ಒಪ್ಪಿಗೆ ಬೇಕೆಂದು ಪಟ್ಟು ಹಿಡಿದಿವೆ.

ಉ.ಪ್ರ.ದಲ್ಲಿ ಏನಾಗಿದೆ?

ಉತ್ತರ ಪ್ರದೇಶ ಸರ್ಕಾರ ರೈತರ ಸಾಲದ ಖಾತೆಗೆ ಹಣ ತುಂಬಿದೆ. ಆ ಬ್ಯಾಂಕ್​ಗಳು ರೈತರಿಗೆ ‘ನಿಮ್ಮ ಸಾಲ ಇಷ್ಟು ಮೊತ್ತ ತೀರಿದೆ. ಇಂತಿಷ್ಟು ಬಾಕಿ ಇದೆ’ ಎಂಬ ಮಾಹಿತಿ ನೀಡಿವೆ. ಪೂರ್ಣ ಸಾಲ ತೀರಿದವವರಿಗೆ ಋಣಮುಕ್ತ ಪತ್ರ ನೀಡುತ್ತಿವೆ.

ಹಿಂದೆ ವ್ಯಕ್ತವಾಗಿದ್ದ ಆಕ್ಷೇಪ: ಹಿಂದಿನ ಸರ್ಕಾರಗಳು ಸಾಲಮನ್ನಾ ಮಾಡಿದ ಸಂದರ್ಭದಲ್ಲಿ ನಬಾರ್ಡ್ ಹಾಗೂ ಆರ್​ಬಿಐ ಆಕ್ಷೇಪ ವ್ಯಕ್ತಪಡಿಸಿದ್ದವು. ಸಾಲಮನ್ನಾದ ಮೊತ್ತವನ್ನು ಸಕಾಲದಲ್ಲಿ ಸಹಕಾರಿ ಸಂಸ್ಥೆಗಳಿಗೆ ತುಂಬದಿದ್ದರೆ ಅವು ನಷ್ಟಕ್ಕೆ ಒಳಗಾಗುತ್ತವೆ ಎಂದು ಎಚ್ಚರಿಸಿದ್ದವು. ಈಗ ಮತ್ತೆ ಅಂತಹ ಎಚ್ಚರಿಕೆಗೆ ಒಳಗಾಗಬೇಕಾಗುತ್ತದೆ ಎಂಬ ಅಸಮಾಧಾನವೂ ಅಧಿಕಾರಿ ವಲಯದಲ್ಲಿದೆ.

ಪಾವತಿ ಹೇಗೆ

ಬಜೆಟ್​ನಲ್ಲಿ ಘೋಷಣೆ ಮಾಡಿರುವ 34 ಸಾವಿರ ಕೋಟಿ ರೂ.ಗಳನ್ನು ಕಂತಿನಲ್ಲಿ ಪಾವತಿ ಮಾಡಲಾಗುತ್ತದೆ. ಮೊದಲ ಕಂತಿಗೆ ಬೇಕಾದ 6500 ಕೋಟಿ ರೂ.ಗಳು ಹಾಗೂ ಹಿಂದಿನ ಸರ್ಕಾರ ಸಾಲಮನ್ನಾದ ಬಾಕಿ 4000 ಕೋಟಿ ರೂ.ಗಳ ಪಾವತಿಗೆ ಹಣ ಹೊಂದಾಣಿಕೆ ಮಾಡಲಾಗಿದೆ. ಆದರೆ ಇದೀಗ ಹೊಸದಾಗಿ ಘೋಷಣೆ ಮಾಡಿರುವ 10,700 ಕೋಟಿ ರೂ.ಗಳ ಮೊದಲ ಕಂತು 2000 ಕೋಟಿ ರೂ.ಗಳು, ಅನ್ನಭಾಗ್ಯದ 2,500 ಕೋಟಿ ರೂ.ಗಳ ಹೊಂದಾಣಿಕೆಗೆ ಪ್ರಯತ್ನ ಮಾಡಬೇಕಾಗಿದೆ. ಮುಂದಿನ ವರ್ಷ ಬಡ್ಡಿಯ ಮೊತ್ತವೂ ಬರುವುದರಿಂದ ಇನ್ನಷ್ಟು ಸಮಸ್ಯೆಯಾಗುತ್ತದೆ.

ಉಳಿಯುವ ಹಣ

ವಿವಿಧ ಇಲಾಖೆಗಳಲ್ಲಿ ಖರ್ಚಾಗದೆ ಉಳಿಯುವ ಮೊತ್ತವನ್ನು ವರ್ಷದ ಕೊನೆಯಲ್ಲಿ ಸಾಲಮನ್ನಾಕ್ಕೆ ಬಳಕೆ ಮಾಡಲು ನಿರ್ಧರಿಸಲಾಗಿದೆ. ಆದರೆ ಎಷ್ಟು ಮೊತ್ತ ಉಳಿಯಲಿದೆ ಎಂಬ ಬಗ್ಗೆ ಖಚಿತತೆ ಇಲ್ಲ.

ಬ್ಯಾಂಕ್​ಗಳೊಂದಿಗೆ ಚರ್ಚೆ ನಡೆದಿದೆ. ಮುಖ್ಯಮಂತ್ರಿಗಳು ಆರ್​ಬಿಐ ಜತೆ ಚರ್ಚೆ ನಡೆಸಲಿದ್ದಾರೆ. ಸರ್ಕಾರವೇ ಗ್ಯಾರಂಟಿ ನೀಡುವುದರಿಂದ ಸಮಸ್ಯೆ ಆಗುವುದಿಲ್ಲವೆಂಬ ವಿಶ್ವಾಸವಿದೆ.

-ಹೆಸರು ಬಹಿರಂಗಕ್ಕೆ ಒಪ್ಪದ ಹಣಕಾಸು ಇಲಾಖೆ ಹಿರಿಯ ಅಧಿಕಾರಿ

ಸಂಪನ್ಮೂಲ ಕ್ರೋಡೀಕರಣ ಹೇಗೆ ಮಾಡುತ್ತಾರೆ, ರೈತರಿಗೆ ಸಮಸ್ಯೆಯಾಗದಂತೆ ಹೊಸ ಸಾಲ ಹೇಗೆ ಕೊಡಿಸಲಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.

-ಮಾರುತಿ ಮಾನ್ಪಡೆ ಅಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ

ಸಂಪನ್ಮೂಲಕ್ಕೆ ಸರ್ಕಸ್

ಸರ್ಕಾರದ ಮೇಲೆ ಹೊರೆ ಮಿತಿಮೀರಿ ಹೆಚ್ಚಾಗುತ್ತಿದ್ದು ಸಂಪನ್ಮೂಲ ಕ್ರೋಡೀಕರಣಕ್ಕೆ ಪರದಾಡುವ ಸ್ಥಿತಿ ನಿರ್ವಣವಾಗಿದೆ. ಚಾಲ್ತಿ ಸಾಲ 10,700 ಕೋಟಿ ರೂ.ಗಳ ಜತೆಗೆ, ಅನ್ನಭಾಗ್ಯ ಅಕ್ಕಿ 2 ಕೆಜಿ ಹೆಚ್ಚಿಸಿದ್ದರಿಂದ ಹೊರೆ 1,500 ಕೋಟಿ ರೂ.ಗಳಿಗೆ ತಲುಪುತ್ತಿದೆ. ಅದರ ಜತೆಗೆ ಲೋಕೋಪಯೋಗಿ, ಜಲ ಸಂಪನ್ಮೂಲ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಬಿಲ್​ಗಳು 10 ಸಾವಿರ ಕೋಟಿ ರೂ.ಗಳಷ್ಟಿದೆ. ಬಡ್ಡಿ ಮನ್ನಾಕ್ಕೆ ಬ್ಯಾಂಕ್​ಗಳು ಒಪ್ಪಿಲ್ಲದ ಕಾರಣ ಅದು 2,500 ಕೋಟಿ ರೂ.ಗಳಾಗುತ್ತದೆ. ಇಷ್ಟು ಹಣವನ್ನು ಹೊಂದಾಣಿಕೆ ಮಾಡುವುದು ಸುಲಭವಲ್ಲ.

ಬ್ಯಾಂಕ್​ಗಳ ಪ್ರಶ್ನೆ

ಸಾಲ ಸಂಪೂರ್ಣ ಮನ್ನಾ ಆಗಿದ್ದರಷ್ಟೇ ಋಣಮುಕ್ತ ಪತ್ರ ದೊರೆಯಲಿದೆ. ಸರ್ಕಾರ ಪೂರ್ಣ ಪ್ರಮಾಣದ ಸಾಲ ಮನ್ನಾ ಮಾಡುತ್ತಿಲ್ಲ ವಾದ್ದರಿಂದ ಋಣಮುಕ್ತ ಪತ್ರ ಕೊಟ್ಟು, ಹೊಸ ಸಾಲ ನೀಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಸರ್ಕಾರ ಸಂರ್ಪಸಿರುವ ಬ್ಯಾಂಕ್​ಗಳ ಅಧಿಕಾರಿಗಳು ಮುಂದಿಟ್ಟಿದ್ದಾರೆ.

ಆರ್​ಬಿಐಗೆ ಆಹ್ವಾನ

ಸರ್ಕಾರ ನಡೆಸಿರುವ ಮಾತುಕತೆಯ ಪ್ರಕಾರ, ಮುಂದಿನ ಬ್ಯಾಂಕರ್​ಗಳ ಸಮಿತಿ ಸಭೆಗೆ ಆರ್​ಬಿಐನ ಅಧಿಕಾರಿಗಳನ್ನು ಕರೆಸಿ ಕಂತುಗಳ ಪಾವತಿಗೆ ಋಣಮುಕ್ತ ಪತ್ರ ಕೊಡಲು ಒಪ್ಪಿಸಿ. ನಂತರ ನಮ್ಮ ಆಡಳಿತ ಮಂಡಳಿಗಳಲ್ಲಿ ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬ್ಯಾಂಕ್​ಗಳು ತಿಳಿಸಿವೆ. ಆದ್ದರಿಂದ ಸರ್ಕಾರ ಮುಂದಿನ ಸಭೆಗೆ ಆರ್​ಬಿಐ ಅಧಿಕಾರಿಗಳನ್ನು ಆಹ್ವಾನಿಸಲು ನಿರ್ಧರಿಸಿದ್ದು, ಈ ಕಾರಣವನ್ನು ನೀಡಿ ಪತ್ರ ಬರೆಯಲು ಉದ್ದೇಶಿಸಿದೆ ಎಂದು ಮೂಲಗಳು ಹೇಳುತ್ತವೆ.

ಗೊಂದಲ, ಗೋಜಲು

ರಾಜ್ಯ ಸರ್ಕಾರ ಸಾಕಷ್ಟು ಪೂರ್ವಸಿದ್ಧತೆ ಇಲ್ಲದೆ ಸಾಲಮನ್ನಾ ಘೋಷಣೆ ಮಾಡಿರುವುದರಿಂದ ದಿನಕ್ಕೊಂದು ಗೊಂದಲ, ಗೋಜಲು ಸೃಷ್ಟಿಯಾಗುತ್ತಿದೆ. ಸಾಲದ ಹೊರೆ ಇಳಿದ ಹುಮ್ಮಸ್ಸಿನಲ್ಲೇ ಹೊಸ ಸಾಲದ ನಿರೀಕ್ಷೆಯಲ್ಲಿದ್ದ ರೈತರು ನಿರಾಸೆಗೆ ಒಳಗಾಗುವ ಪರಿಸ್ಥಿತಿ ನಿರ್ವಣವಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.

ಬ್ಯಾಂಕ್​ಗೆ ಕಂತುಗಳಲ್ಲಿ ಪಾವತಿ, ಋಣ ಮುಕ್ತ ಪತ್ರ ನೀಡುವ ವಿಚಾರದಲ್ಲಿ ಗೊಂದಲಗಳಿವೆ. ಸಿಎಂ ಸ್ಪಷ್ಟ ಉತ್ತರ ನೀಡಿಲ್ಲ. ರೈತರು ಹೊಸ ಸಾಲಕ್ಕೆ ಮತ್ತಷ್ಟು ವರ್ಷ ಕಾಯಬೇಕಾಗುವುದೇ ಎಂಬುದು ನಮಗಿರುವ ಆತಂಕವಾಗಿದೆ.

| ಬಸವರಾಜ ಬೊಮ್ಮಾಯಿ ಮಾಜಿ ಸಚಿವ