ಆಡಿಯೋ ಕ್ಲಿಪ್​​ ವಿಚಾರಕ್ಕೆ 2 ದಿನ ಬಜೆಟ್​ ಅಧಿವೇಶನ ವ್ಯರ್ಥ: ನಾಳಿನ ಸ್ಪೀಕರ್ ಸಭೆಯಲ್ಲಿ ಅಂತಿಮ ನಿರ್ಣಯ?

ಬೆಂಗಳೂರು: ಬಜೆಟ್​​ ಮೇಲಿನ ಚರ್ಚೆಗೆ ವೇದಿಕೆಯಾಗಬೇಕಿದ್ದ ವಿಧಾನಸಭೆ ಅಧಿವೇಶನ ಎರಡು ದಿನಗಳ ಕಾಲ ಆಪರೇಷನ್​ ಕಮಲಕ್ಕೆ ಸಂಬಂಧಿಸಿದ ಆಡಿಯೋ ಕ್ಲಿಪ್​ ವಿಚಾರವಾಗಿ ನಡೆದ ಗದ್ದಲದಲ್ಲೇ ಮುಗಿದು ಹೋಯಿತು. ಇಷ್ಟಾದರೂ ಅಂತಿಮ ತೀರ್ಮಾನಕ್ಕೆ ಬರದಿರುವುದು ವಿಪರ್ಯಾಸ. ಅಧಿವೇಶನವನ್ನು ಬುಧವಾರಕ್ಕೆ ಮುಂದೂಡಲಾಗಿದ್ದು, ಆಡಿಯೋ ವಿಚಾರದಲ್ಲಿ ಅಂತಿಮ ತೀರ್ಮಾನಕ್ಕೆ ಬರಲು ನಾಳೆ ಸ್ಪೀಕರ್​ ಸಮ್ಮುಖದಲ್ಲಿ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಏನು ತೀರ್ಮಾನವಾಗುತ್ತದೆ ಎಂಬುದರ ಮೇಲೆ ಬಜೆಟ್​ ಮೇಲಿನ ಚರ್ಚೆ ಅವಲಂಬಿಸಿದೆ.

ನಾಳೆ ಬೆಳಗ್ಗೆ 10.30ಕ್ಕೆ ಸ್ಪೀಕರ್​ ಕೆ.ಆರ್​. ರಮೇಶ್ ಕುಮಾರ್​ ಅವರ​ ಕಚೇರಿಯಲ್ಲಿ ಸಭೆ ನಡೆಯಲಿದೆ. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಕರಣದ ಕುರಿತು ಯಾವ ರೀತಿಯ ತನಿಖೆ ನಡೆಸಬೇಕು ಎಂಬುದು ಈ ಸಭೆಯಲ್ಲಿ ಅಂತಿಮವಾಗಲಿದೆ.

ಪರಸ್ಪರ ವಾಗ್ದಾಳಿ: ಆಡಿಯೋ ಕ್ಲಿಪ್​ ವಿಚಾರದಲ್ಲಿ ಎ-1 ನಾನೆ ಎಂದು ನನಗನಿಸುತ್ತಿದೆ. ಬಿಜೆಪಿಯವರು ನನ್ನನ್ನೇ ಅಪರಾಧಿ ಎನ್ನುತ್ತಿದ್ದಾರೆ. ಹೀಗಾಗಿ ನನ್ನ ಮೇಲೆ ನನಗೇ ಅನುಮಾನ ಶುರುವಾಗಿದೆ. ಅಧಿಕಾರಿಗಳ ವಿಚಾರದಲ್ಲಿ ನಾನು ರಾಜಕೀಯ ಮಾಡಲ್ಲ. 2 ನಿಮಿಷದ ಆಡಿಯೋನೇ ಅರಗಿಸಿಕೊಳ್ಳಲು ಆಗಿಲ್ಲ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ಎರಡು ದಿನ ವ್ಯರ್ಥವಾಗುತ್ತಿರಲಿಲ್ಲ: ನಾವು ಬಜೆಟ್​ ಅಧಿವೇಶನಕ್ಕೂ ಮುಂಚೆ ನಡೆಯುವ ಬಿಎಸಿ ಮೀಟಿಂಗ್​ಗೆ ಬರದಿದ್ದಾಗ ತಾವು ಯಾರನ್ನಾದರೂ ಕಳಿಸುತ್ತೀರೆಂದು ಭಾವಿಸಿದ್ದೆವು. ಆದರೆ ಯಾರೂ ಬರಲಿಲ್ಲ. ಹಾಗಾಗಿ ನಾವು ಬಿಎಸಿ ಮೀಟಿಂಗ್ ಬರಲಿಲ್ಲ. ಈಗಲಾದರೂ ತಾವು ಪ್ರತಿಪಕ್ಷದ ನಾಯಕರು ಮತ್ತು ಆಡಳಿತ ಪಕ್ಷದ ನಾಯಕರನ್ನು ಕರೆದು ಸಭೆ ನಡೆಸಿ, ಇಬ್ಬರ ಬಳಿಯೂ ಚರ್ಚಿಸಿ ನಂತರ ಸದನ ಸಮಿತಿ ರಚಿಸಿ, ತಪ್ಪು ಮಾಡಿದವನಿಗೆ ಶಿಕ್ಷೆಯಾಗಲಿ ಎಂದು ಬಿ.ಎಸ್​. ಯಡಿಯೂರಪ್ಪ ಹೇಳಿದರು. ಮಧ್ಯಪ್ರವೇಶಿಸಿದ ಸ್ಪೀಕರ್​ ಆಡಿಯೋ ಕ್ಲಿಪ್​ ವಿವಾದ ಉದ್ಬವಿಸಿದಾಗಲೇ ಇಬ್ಬರನ್ನೂ ಕರೆದು ಮಾತನಾಡಿಸಿದ್ದರೆ ಸದನದಲ್ಲಿ ಎರಡು ದಿನ ಸಮಯ ವ್ಯರ್ಥವಾಗುತ್ತಿರಲಿಲ್ಲ ಎಂದರು. ಅಲ್ಲದೆ, ಬಿಎಸಿ ಮೀಟಿಂಗ್​ಗೆ ಬರುವುದು ನಿಮ್ಮ ಹಕ್ಕಾಗಿತ್ತು. ಆದರೆ ನೀವು ಅದನ್ನೇ ಬಹಿಷ್ಕರಿಸಿದಿರಿ, ಅದು ನನಗೆ ಮಾಡಿದ ಅವಮಾನವಾದಂತೆ. ನಾನು ನನ್ನ ನೋವನ್ನು ಯಾರಿಗೂ ಹೇಳಿಕೊಳ್ಳಲಿಲ್ಲ ಎಂದು ಹೇಳಿದರು.

ನಾವು ಎಸ್ ಐಟಿ ತನಿಖೆಗೆ ಒಪ್ಪಲ್ಲ: ನಿನ್ನೆಯಿಂದ ಸವಿಸ್ತಾರವಾಗಿ ಚರ್ಚೆ ನಡೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಎಸ್​ಐಟಿ ತನಿಖೆ ಆಗಬೇಕು ಎಂದು ಹೇಳಿದ್ದಾರೆ. ನಾವು ಎಸ್ಐಟಿ ತನಿಖೆಗೆ ಒಪ್ಪಲ್ಲ. ಏಕೆಂದರೆ ಎಸ್ಐಟಿ ಸಿಎಂ ವ್ಯಾಪ್ತಿಗೆ ಬರುತ್ತದೆ. ನಾವು ಆ ತನಿಖೆಗೆ ಒಪ್ಪುವುದಿಲ್ಲ. ಸದನ ಸಮಿತಿ ಮಾಡಿ ಎಂಬುದೇ ನಮ್ಮೆಲ್ಲ 104 ಸದಸ್ಯರ ಆಗ್ರಹ. ಸಿಎಂ ಕುಮಾರಸ್ವಾಮಿ ಆಡಿಯೋವನ್ನು ತಿರುಚಿದ್ದಾರೆ 35 ನಿಮಿಷದ ಆಡಿಯೋ ಟೇಪ್ ಅನ್ನು 2 ನಿಮಿಷಕ್ಕೆ ಕಟ್ ಮಾಡಿದ್ದಾರೆ. ಅವರು ರಾಜಕೀಯ ಕುತಂತ್ರ ಮಾಡಿದ್ದಾರೆ. ನಕಲಿ, ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ ಎಂದು ಬಿಎಸ್​ವೈ ಆರೋಪಿಸಿದರು.

ನನ್ನನ್ನು ಬೀದಿಯಲ್ಲಿ ಮಲಗಿಸಿದ್ದೀರಿ
ಸಭಾಧ್ಯಕ್ಷರಾದ ತಮ್ಮ ಬಗ್ಗೆ ಕೆಲವು ವಿಚಾರಗಳು ಪ್ರಸ್ತಾಪವಾದಾಗ ಇಡೀ ಸದನ ನಿಮ್ಮ ಬಗ್ಗೆ ನಂಬಿಕೆ ವ್ಯಕ್ತಪಡಿಸಿದೆ. ನಿಮ್ಮ ವಿಚಾರ ಈಗ ರಾಜಕೀಯಕ್ಕೆ ಬಳಕೆಯಾಗಬಾರದು. ನಾವೆಲ್ಲರೂ ಒಂದಾಗಿ ನಿಮಗೆ ಗೌರವ ಕೊಟ್ಟಿದ್ದೇವೆ. ತನಿಖೆಯ ವಿಚಾರ ಕೇವಲ ನಿಮಗೆ ಮಾತ್ರ ಸೀಮಿತವಾಗಿರಬೇಕು. ಅದರ ವ್ಯಾಪ್ತಿಯನ್ನು ಹೆಚ್ಚಿಸುವ ಪ್ರಯತ್ನಗಳಾಗಬಾರದು. ಖಾಸಗಿಯಾಗಿ ನಿಮ್ಮನ್ನು ಭೇಟಿಮಾಡಿ ನಿಮ್ಮ ಗಮನಕ್ಕೆ ತರಬಹುದಿತ್ತು. ಆದರೆ, ಮುಖ್ಯಮಂತ್ರಿಗಳು ನಿಮ್ಮ ಹೆಸರನ್ನು ಬಹಿರಂಗಪಡಿಸಿದ್ದಾರೆ ಎಂಬ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಹೇಳಿದರು. ಈ ಮಾತಿಗೆ ಸ್ಪೀಕರ್​, ನನ್ನ ಮೇಲೆ ವಿಶ್ವಾಸವಿದೆ ವಿಶ್ವಾಸವಿದೆ ಅಂತಾನೆ ನನ್ನನ್ನು ಬೀದಿಯಲ್ಲಿ ಮಲಗಿಸಿದ್ದೀರಿ ಎಂದು ನಗೆ ಚಟಾಕಿ ಹಾರಿಸಿದರು.

ಮುಂದುವರಿದು ಮಾತನಾಡಿದ ಅವರು ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಗೂ ಒಂದು ಸಾರಿ ಮಾತ್ರ ರೇಪ್ ಆಗಿರುತ್ತದೆ. ಆದರೆ, ಕೋರ್ಟ್​ಗೆ ಹೋದಾಗ ಎಲ್ಲಿ ರೇಪಾಯ್ತು? ಹೇಗೆ ಆಯ್ತು? ಎಷ್ಟೊತ್ತು ರೇಪ್ ಮಾಡಿದರು ಎಂದೆಲ್ಲಾ ಪ್ರಶ್ನೆ ಕೇಳಿ ನೂರು ಸಾರಿ ಮಾನಸಿಕವಾಗಿ ರೇಪ್ ಮಾಡುತ್ತಾರೆ. ನನ್ನ ಸ್ಥಿತಿಯೂ ಹಾಗೇ ಆಗಿದೆ. ಎಲ್ಲರೂ ಹೊಗಳಿ ಹೊಗಳಿ ವಿಶ್ವಾಸವಿದೆ ಎಂದು ನನ್ನ ಬೀದಿಯಲ್ಲಿ ಮಲಗಿಸಿದ್ದೀರಿ ಎಂದ ಸ್ಪೀಕರ್ ಸದನವನ್ನು ನಗೆಗಡಲಲ್ಲಿ ತೇಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆ.ಎಸ್​. ಈಶ್ವರಪ್ಪ ಅವರು ಸಿಎಂ ಕುಮಾರಸ್ವಾಮಿ ಆಡಿಯೋ ಬಿಡುಗಡೆ ಮಾಡಿದ ಮೇಲೆ ಎಷ್ಟು ಬಾರಿ ರೇಪಾಗಿದೆ ಎಂದು ನಿಮಗೆ ಗೊತ್ತಾಗ್ತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಹೀಗೆ ಇಂದು ನಡೆದ ಇಡೀ ಬಜೆಟ್​ ಅಧಿವೇಶನದಲ್ಲಿ ಬರೀ ಆಡಿಯೋ ಕ್ಲಿಪ್​ ವಿಚಾರವಾಗಿ ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ಸರ್ಕಾರ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ವಾಕ್ಸಮರವೇ ನಡೆಯಿತು. ಬಜೆಟ್​ ಮೇಲೆ ಏನಾದರೂ ಚರ್ಚೆ ನಡೆಸುತ್ತಾರೇನೋ ಎಂದು ಕಾದು ಕುಳಿತ್ತಿದ್ದ ಜನ ಸಾಮಾನ್ಯರಿಗೆ ಇಂದಿನ ಕಲಾಪವೂ ಕೂಡ ನಿರಾಸೆಯಾಯಿತು. (ದಿಗ್ವಿಜಯ ನ್ಯೂಸ್​)