ಸಿದ್ಧಗಂಗಾ ಶ್ರೀ, ಚುಂಚಶ್ರೀ ಹುಟ್ಟೂರುಗಳ ಅಭಿವೃದ್ಧಿಗೆ ತಲಾ 25 ಕೋಟಿ ರೂಪಾಯಿ ಅನುದಾನ

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶುಕ್ರವಾರ ಮಂಡಿಸಿದ ಎರಡನೇ ಬಜೆಟ್​ನಲ್ಲಿ ಲಿಂಗೈಕ್ಯರಾದ ಡಾ. ಶಿವಕುಮಾರ ಸ್ವಾಮೀಜಿ ಮತ್ತು ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟೂರುಗಳನ್ನು ಅಭಿವೃದ್ಧಿ ಮಾಡಲು ಮತ್ತು ಅಲ್ಲಿ ಸಾಂಸ್ಕೃತಿಕ ಕೇಂದ್ರಗಳನ್ನು ಆರಂಭಿಸಲು ಅನುದಾನ ಒದಗಿಸಿದ್ದಾರೆ.

ಶಿವಕುಮಾರಸ್ವಾಮೀಜಿ ಅವರು ಮಾಗಡಿ ತಾಲೂಕಿನ ವೀರಾಪುರದವರಾಗಿದ್ದು, ಅಲ್ಲಿ ಜಾಗತಿಕ ಮಟ್ಟದ ಸಾಂಸ್ಕೃತಿಕ ಕೇಂದ್ರ ಆರಂಭಿಸಿ, ಗ್ರಾಮವನ್ನು ಅಭಿವೃದ್ಧಿಗೊಳಿಸಲು 25 ಕೋಟಿ ರೂ.ಗಳನ್ನು ನೀಡಿದ್ದಾರೆ.

ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ಅವರು ಬಿಡದಿ ಬಳಿಯ ಬಾನಂದೂರಿನವರು. ಅವರ ಸ್ಮರಣಾರ್ಥ ಹುಟ್ಟೂರು ಬಾನಂದೂರನ್ನು ಮಾದರಿ ಗ್ರಾಮವಾಗಿಸಿ, ಅದನ್ನು ಜಾಗತಿಕ ಸಾಂಸ್ಕೃತಿಕ ಮತ್ತು ಪಾರಂಪರಿಕ ಗ್ರಾಮವನ್ನಾಗಿ ಮಾಡಲು 25 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಮೀಸಲಿಟ್ಟಿದ್ದಾರೆ.

ಇದರ ಜತೆಗೆ ನಾಡಪ್ರಭು ಕೆಂಪೇಗೌಡ ಪ್ರಾಧಿಕಾರಕ್ಕೆ 5 ಕೋಟಿ ರೂ. ಅನುದಾನವನ್ನು ಸಿಎಂ ಒದಗಿಸಿದ್ದಾರೆ.