ಶಿವಮೊಗ್ಗ: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರವಿಲ್ಲ. ಅನವಶ್ಯಕವಾಗಿ ಬಿಜೆಪಿಯವರು ಸಿದ್ದರಾಮಯ್ಯ ಅವರನ್ನು ಹಗರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಕಿಡಿಕಾರಿದರು.
ಸಿದ್ದರಾಮಯ್ಯ ಯಾವುದೇ ಹಗರಣ ಮಾಡಿಲ್ಲ. ಬಿಜೆಪಿಯವರು ವಿನಾಕಾರಣ ಹೋರಾಟ ಮಾಡುತ್ತಿದ್ದಾರೆ. 40 ವರ್ಷದ ರಾಜಕಾರಣದಲ್ಲಿ ಅವರ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ದೇವರಾಜ ಅರಸು ನಂತರ ಒಬಿಸಿ ಸಮುದಾಯದವರು ಸಿಎಂ ಆಗಿರುವುದು ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ ಎಂದು ದೂರಿದರು.
ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು, ಮುಡಾ ಹಗರಣ ನಡೆದಾಗ ಬಿಜೆಪಿಯವರೇ ಅಧ್ಯಕ್ಷರಾಗಿದ್ದರು. ಅವರ ಪಕ್ಷದ ಶಾಸಕರೇ ಇದ್ದರು. ಮುರುಗೇಶ ನಿರಾಣಿ, ಎಚ್.ಡಿ.ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟಿದ್ದರು. ಆ ಪ್ರಕರಣ ಏನಾಯ್ತು ಎಂದು ಪ್ರಶ್ನಿಸಿದರು.
ಕರೊನಾ ವೇಳೆ 2 ಸಾವಿರ ಕೋಟಿ ರೂ. ಹಗರಣ ಆಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಡಾ. ಸುಧಾಕರ್ ಹಗರಣ ಮಾಡಿದ್ದಾರೆಂದು ಬಿಜೆಪಿ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾರಿಷಸ್‌ಗೆ 10 ಸಾವಿರ ಕೋಟಿ ರೂ. ತೆಗೆದುಕೊಂಡು ಹೋಗಿದ್ದಾರೆಂದು ಯತ್ನಾಳ್ ಆರೋಪಿಸಿದ್ದಾರೆ. ಯತ್ನಾಳ್ ಆರೋಪಕ್ಕೆ ಮೊದಲು ಬಿಜೆಪಿಯವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ನಾವು ಹೋರಾಟ ಮಾಡುತ್ತೇವೆ. ನ್ಯಾಯಾಂಗ ಹೋರಾಟ ಮಾಡಲು ಚಿಂತನೆ ನಡೆಸಿದ್ದೇವೆ. ಬಿಜೆಪಿ ವಿರುದ್ಧ ಜನರ ಬಳಿ ಹೋಗುತ್ತೇವೆ. ಅವರ ಕಾಲದಲ್ಲಿ 25-30 ಹಗರಣ ನಡೆದಿವೆ. ಅದನ್ನು ಜನರ ಮುಂದಿಡುತ್ತೇವೆ ಎಂದರು.