ಸಿಎಂ ಎಚ್​.ಡಿ.ಕುಮಾರಸ್ವಾಮಿಗೆ ರಾಜ್ಯದ ಬರಗಾಲ ಸಮಸ್ಯೆ ನಿವಾರಣೆಗಿಂತ, ಮಗನ ಗೆಲುವಿನದ್ದೇ ಚಿಂತೆ: ಸಂಸದ ಪ್ರಹ್ಲಾದ್​ ಜೋಷಿ ಟೀಕೆ

ಹುಬ್ಬಳ್ಳಿ: ಸಿಎಂ ಕುಮಾರಸ್ವಾಮಿಗೆ ರಾಜ್ಯದ ಬರಗಾಲ ಸಮಸ್ಯೆ ಪರಿಹರಿಸುವುದಕ್ಕಿಂತ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗನ ಗೆಲುವಿನದ್ದೇ ಚಿಂತೆಯಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಅದರ ಕಡೆ ಗಮನಹರಿಸುವುದನ್ನು ಬಿಟ್ಟು ಮಗನ ಗೆಲುವಿಗಾಗಿ ಹರಕೆ ಹೊತ್ತು ದೇವಸ್ಥಾನಗಳನ್ನು ತಿರುಗುತ್ತಿದ್ದಾರೆ ಎಂದು ಸಂಸದ ಪ್ರಹ್ಲಾದ್​ ಜೋಷಿ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನವರು ದೇಶದ ಪ್ರಧಾನಿಯನ್ನು ಕಳ್ಳ ಎಂದರೆ ಸಿಎಂ ಎಚ್​.ಡಿ.ಕುಮಾರಸ್ವಾಮಿಗೆ ಕೋಪ ಬರುವುದಿಲ್ಲ. ಆದರೆ ಕಾಂಗ್ರೆಸ್​ನವರು ಮಾಡಿದಂತಹ ದೊಡ್ಡ ದೊಡ್ಡ ಹಗರಣಗಳ ಬಗ್ಗೆ ಮಾತನಾಡಿದರೆ ಸಿಟ್ಟುಬರುತ್ತದೆ. ಕುಮಾರಸ್ವಾಮಿ ಅವರಿಗೆ ಜನತೆಯ ಹಿತದೃಷ್ಟಿಗಿಂತ ಸರ್ಕಾರ ಉಳಿಸಿಕೊಳ್ಳುವ ಚಿಂತೆಯೇ ಹೆಚ್ಚಾಗಿದೆ ಎಂದು ಕಿಡಿಕಾರಿದರು.

ರಾಜೀವ್​ ಗಾಂಧಿ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆ ಕುರಿತು ಮಾತನಾಡಿದ ಅವರು ಪ್ರಧಾನಿ ರಾಜೀವ್​ ಗಾಂಧಿಯವರ ಕುರಿತು ಮಾತನಾಡಿದರೆ ಕಾಂಗ್ರೆಸ್​ನವರು ಮೈ ಎಲ್ಲಾ ಪರಚಿಕೊಳ್ಳುತ್ತಾರೆ. ದೇಶದಲ್ಲಿ ನಡೆದಿರುವ ಹಗರಣಗಳು ನಕಲಿ ಗಾಂಧಿ ಕುಟುಂಬದಿಂದಲೇ ನಡೆದಿವೆ ಎಂದು ವ್ಯಂಗ್ಯವಾಡಿದರು.

ಮಾಜಿ ಸಿಎಂ ಸಿದ್ದರಾಮಯ್ಯನವರ ಮೇಲೆ ಕಿಡಿಕಾರುತ್ತಾ, ಮೋದಿಯವರ ಕುರಿತು ಪಾಗಲ್ ಚೋರ್ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದಕ್ಕಾಗಿ ಕಾಂಗ್ರೆಸ್​ನವರ ಗುಲಾಮರಂತೆ ಅವರ ಪಾದ ನೆಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಹಿಂದೆ ಕಾಂಗ್ರೆಸ್​ನವರ ಮೇಲೆ ಸಿದ್ದರಾಮಯ್ಯ ಆರೋಪ ಮಾಡಿಕೊಂಡು ಓಡಾಡುತ್ತಿದ್ದರು. ಆದರೆ ಈಗ ಅವರ ಗುಲಾಮರಂತೆ ವರ್ತಿಸುತ್ತಿದ್ದಾರೆ. ಸಿದ್ಧರಾಮಯ್ಯ ಅವರು ತಮ್ಮ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)