ಸಂತ್ರಸ್ತರ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ

ಜಂಬೂರು (ಕೊಡಗು): ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡಿರುವ 840 ಕುಟುಂಬಗಳಿಗೆ ಮನೆ ಕಟ್ಟಿಕೊಡಲು ಶುಕ್ರವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು.

ಮಾದಾಪುರ ತೋಟಗಾರಿಕಾ ಫಾರಂನಲ್ಲಿರುವ 50 ಎಕರೆ ಜಾಗದಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಡಿಸಿಎಂ ಡಾ.ಜಿ.ಪರಮೇಶ್ವರ್, ಸಚಿವರಾದ ಯು.ಟಿ. ಖಾದರ್, ಸಾ.ರಾ.ಮಹೇಶ್, ಮಡಿಕೇರಿ ಶಾಸಕ, ಶಾಸಕ ಕೆ.ಜಿ.ಬೋಪಯ್ಯ, ಎಂಎಲ್ಸಿಗಳಾದ ವೀಣಾ ಅಚ್ಚಯ್ಯ, ಎಂ.ಪಿ.ಸುನೀಲ್ ಸುಬ್ರಮಣಿ, ಎಸ್.ಎಲ್. ಭೋಜೇಗೌಡ ಕೈ ಜೋಡಿಸಿದರು.

ರಾಜ್ಯ ಸರ್ಕಾರ ಸಂತ್ರಸ್ತರ ಸಂಕಷ್ಟ ಪರಿಹಾರಕ್ಕೆ ವೇಗವಾಗಿ ಸ್ಪಂದಿಸಿದ್ದು, ಪಕ್ಷಗಳ ಪ್ರಶ್ನೆ ಇಲ್ಲದೆ ಜನಪ್ರತಿನಿಧಿಗಳು ಸ್ಪಂದಿಸಿದ್ದಾರೆ. ಸರ್ಕಾರದ ಮೇಲೆ ಜನರ ನಿರೀಕ್ಷೆ ಬೆಟ್ಟದಷ್ಟಿದೆ. ನಿರೀಕ್ಷೆ ಮುಟ್ಟಲಾಗದಿದ್ದರೂ, ಉತ್ತಮ ಬದುಕು ಕಟ್ಟಿಕೊಡಲಾಗುವುದು. ಮನೆ ಕಟ್ಟಿಕೊಡಲು ಮುಂದೆ ಬರುವವರ ಹಣ ಬಳಸಿಕೊಳ್ಳಲಾಗುವುದು. ಸರ್ಕಾರ ಮನೆ ಕಟ್ಟಲು ನೀಡಲು ಉದ್ದೇಶಿಸಿರುವ ಅನುದಾನ ಉಳಿಕೆಯಾದಲ್ಲಿ ಅದನ್ನು ಪರಿಹಾರ ನೀಡಲು ಬಳಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ಕೊಡಗಿನ ಶಾಸಕದ್ವಯರ ಕೋರಿಕೆಯಂತೆ ಕೊಡಗು ಪುನರ್​ನಿರ್ವಣ ಪ್ರಾಧಿಕಾರ ರಚಿಸಲಾಗಿದೆ. ಸಂತ್ರಸ್ತರಿಗೆ 10 ಸಾವಿರ ರೂ. ಮಾಸಿಕ ಬಾಡಿಗೆ ನೀಡಲು ಆದೇಶ ಹೊರಡಿಸಲಾಗಿದೆ. ಧೈರ್ಯದಲ್ಲಿ ಕೊಡಗಿನವರು ದೇಶಕ್ಕೆ ಪ್ರಖ್ಯಾತಿ ಹೊಂದಿದ್ದಾರೆ. ನಿಮ್ಮ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ವಸತಿ ಸಚಿವ ಯು.ಟಿ.ಖಾದರ್ ಮಾತನಾಡಿ, ತಕ್ಷಣ ಮನೆ ನಿರ್ವಣಕ್ಕೆ ಚಾಲನೆ ನೀಡಲಾಗುವುದು. ಸಿಎಂ ತಿಂಗಳಿಗೆ 50 ಮನೆ ನಿರ್ವಿುಸುವಂತೆ ಹೇಳಿದ್ದು, ನಾವು 55 ಮನೆಗಳನ್ನು ನಿರ್ವಿುಸಿಕೊಡುತ್ತೇವೆ ಎಂದರು.


ಪ್ರತಾಪ್ ಮಾತಿಗೆ ಕುಮಾರ ಸಿಡಿಮಿಡಿ

ಕೊಡಗು: ಮನೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿಎಂ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದರು. ಪ್ರಕೃತಿ ವಿಕೋಪ ಪರಿಹಾರ ಕ್ರಮಕ್ಕೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡು ಹೇಳಿದ ಮಾತಿಗೆ ಸಿಎಂ ಸಿಡಿಮಿಡಿಗೊಂಡರು. ಕೇಂದ್ರ ಬಿಡುಗಡೆ ಮಾಡಿರುವ 546 ಕೋಟಿ ರೂ. ಅನುದಾನದಲ್ಲಿ ಬಹುತೇಕ ಕೊಡಗಿಗೆ ಬರಲಿದೆ. ಎಸ್​ಡಿಆರ್​ಎಫ್ ನೀಡಿರುವ ಪರಿಹಾರದಲ್ಲಿ ಶೇ.75 ಕೇಂದ್ರ ಸರ್ಕಾರದ್ದಾಗಿದ್ದು, ಕೇವಲ ಶೇ.25 ರಾಜ್ಯ ಸರ್ಕಾರದೆಂದು ಪ್ರತಾಪ್​ಸಿಂಹ ಹೇಳಿದರು. ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಸಿಎಂ, ಅಂತಿಮವಾಗಿ ಭಾಷಣ ನಿಲ್ಲಿಸುವಂತೆ ಕೈ ಸನ್ನೆ ಮೂಲಕ ತಿಳಿಸಿದರು. ಆದರೂ ಸಂಸದರು ಮಾತು ಮುಂದುವರಿಸಿದರು. ಸಂಸದರ ಭಾಷಣ ಮುಗಿದ ಬಳಿಕವೂ ಸಿಎಂ ವಾಗ್ವಾದ ನಡೆಸಿದರು. ಈ ವೇಳೆ ಶಾಸಕ ಕೆ.ಜಿ.ಬೋಪಯ್ಯ ಸಿಎಂ ಬಳಿಗೆ ಆಗಮಿಸಿ ಸಮಾಧಾನಪಡಿಸಿದರು.


ನನ್ನ ಆಡಳಿತದ ಅವಧಿಯನ್ನು ನಿರ್ಧರಿಸೋದು ಶಾರದಾಂಬೆ

ಚಿಕ್ಕಮಗಳೂರು: ನನ್ನ ಆಡಳಿತದ ಕಾಲಾವಧಿಯನ್ನು ಶೃಂಗೇರಿ ಶಾರದಾಂಬೆ ತೀರ್ವನಿಸಲಿದ್ದಾಳೆ. ಮನುಷ್ಯರಿಂದ ಅಧಿಕಾರ ಕಳೆದುಕೊಳ್ಳುತ್ತೇನೆಂಬ ಭಯ ನನಗಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಪದಚ್ಯುತಿಗೊಳಿಸಲು ಯಾರ್ಯಾರು ಏನೇನು ಮಾಡುತ್ತಿದ್ದಾರೆಂಬ ಮಾಹಿತಿ ಇದೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಶಾರದಾಂಬೆ ಆಶೀರ್ವಾದ ಇರುವವರೆಗೆ ಯಾವುದೇ ತೊಂದರೆ ಆಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುಡ್ಡೆ ತೋಟದಲ್ಲಿ ವಾಸ್ತವ್ಯ

ಕೊಪ್ಪ ತಾಲೂಕು ಗುಡ್ಡೆತೋಟದ ತಲವಾನಿ ರಂಗನಾಥ್ ಗೆಸ್ಟ್​ಹೌಸ್​ನಲ್ಲಿ ಕುಮಾರಸ್ವಾಮಿ ಗುರುವಾರ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ 5.30ಕ್ಕೆ ಗೆಸ್ಟ್​ಹೌಸ್​ಗೆ ಆಗಮಿಸಿದ ಸಚಿವ ಎಚ್.ಡಿ. ರೇವಣ್ಣ, ಸಿಎಂ ಜತೆಗೂಡಿ ಯಾಗದಲ್ಲಿ ಭಾಗಿಯಾದರು.

ಮಾಧ್ಯಮಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಅಡ್ಡಿ

ಯಾಗದ ಮಾಹಿತಿ ಹಾಗೂ ಚಿತ್ರೀಕರಣಕ್ಕಾಗಿ ಪತ್ರಕರ್ತರು ಪ್ರಯತ್ನಿಸಿದಾಗ ಮುಖ್ಯಮಂತ್ರಿಗಳ ಗುಪ್ತಚರ ರಕ್ಷಣಾ ಎಸ್ಪಿ ಯೋಗೀಶ್ ಪದೇಪದೆ ಅಡ್ಡಿಪಡಿಸಿದರು. ಯಾಗ ಪೂರ್ಣಗೊಳಿಸಿ ಹೊರಬರುವ ವೇಳೆ ಪತ್ರಕರ್ತರೊಬ್ಬರಿಗೆ ಅವಾಚ್ಯ ಶಬ್ದ ಬಳಸಿದರು. ಇದನ್ನು ಖಂಡಿಸಿ ಅವರ ಕಾರನ್ನು ತಡೆಯಲು ಹೋದಾಗ ಪೊಲೀಸರ ಸಹಾಯದಿಂದ ತಪ್ಪಿಸಿಕೊಂಡರು. ಅವರ ಕಾರಿನ ಹಿಂದೆ ಬರುತ್ತಿದ್ದ ಜಿಲ್ಲಾಧಿಕಾರಿಯನ್ನು ತಡೆದ ಪತ್ರಕರ್ತರು ಪ್ರತಿಭಟಿಸಿದರು. ಈ ವೇಳೆ ಸ್ಥಳೀಯ ಇಬ್ಬರು ಜೆಡಿಎಸ್ ಕಾರ್ಯಕರ್ತರು ಪತ್ರಕರ್ತರನ್ನು ತಳ್ಳಾಡಿ ಡಿಸಿ ಮುಂದೆ ಹೋಗಲು ಅನುವು ಮಾಡಿದರು. ಆಗ ಜೆಡಿಎಸ್ ಮತ್ತು ಮಾಧ್ಯಮದವರ ನಡುವೆ ಮಾತಿನ ಚಕಮಕಿ ನಡೆಯಿತು. ಇದನ್ನು ಖಂಡಿಸಿ ಹೆಲಿಪ್ಯಾಡ್​ನಲ್ಲಿ ಮಾಧ್ಯಮದವರು ಪ್ರತಿಭಟನೆಗೆ ಮುಂದಾದರು.

ಯಾಗದ ರಹಸ್ಯ ನಿಗೂಢ

ಶೃಂಗೇರಿ ದೇವಸ್ಥಾನ ಆವರಣದಲ್ಲಿ ಸಿಎಂ ಕುಮಾರಸ್ವಾಮಿ ನಡೆಸಿದ ರಹಸ್ಯ ಹೋಮದ ಬಗ್ಗೆ ನಾನಾ ಅರ್ಥ ಕಲ್ಪಿಸಲಾಗುತ್ತಿದೆ. ಗುರುವಾರ ರಾತ್ರಿ ಶೃಂಗೇರಿಗೆ ಆಗಮಿಸಿದ್ದ ಕುಮಾರಸ್ವಾಮಿ, ಯಾಗದ ಸಂಕಲ್ಪ ಮಾಡಿ ಪೂಜೆಗೆ ಚಾಲನೆ ನೀಡಿದ್ದರು. 30 ಋತ್ವಿಜರು ರಾತ್ರಿಯಿಂದ ವಿಶೇಷ ಪೂಜೆ, ಹೋಮ, ಹವನ ಮಾಡಿದರು. ಶುಕ್ರವಾರ ಬೆಳಗ್ಗೆ 9.25ಕ್ಕೆ ದೇವಸ್ಥಾನಕ್ಕೆ ಆಗಮಿಸಿದ ಸಿಎಂ, ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಪೂರ್ಣಾಹುತಿಯಲ್ಲಿ ಭಾಗಿಯಾದರು. ದೇವೇಗೌಡರ ಕುಟುಂಬ ಯಾಗಾದಿ ಪೂಜಾ ಕಾರ್ಯಗಳನ್ನು ಶ್ರೀ ಶಂಕರ ಸಭಾಂಗಣದಲ್ಲಿ ಮಾಡುತ್ತಿತ್ತು. ಇದನ್ನು ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ವೀಕ್ಷಣೆ ಮಾಡುತ್ತಿದ್ದರು. ಈ ಬಾರಿ ದೇವಸ್ಥಾನ ಪಕ್ಕದ ಶ್ರೀಶಕ್ತಿಗಣಪತಿ ಪ್ರದೋಷ ಕಾರ್ಯಾಲಯ ಸಭಾಂಗಣದಲ್ಲಿ ಕಿಟಕಿ, ಬಾಗಿಲು ಮುಚ್ಚಿ ಗೌಪ್ಯವಾಗಿ ಮಾಡಲಾಯಿತು. ಯಾಗದ ಬಗ್ಗೆ ಮಠದ ಆಡಳಿತ ಮಂಡಳಿ ಸ್ಪಷ್ಟ ಮಾಹಿತಿ ನೀಡಲಿಲ್ಲ. ಯಾಗದಲ್ಲಿ ಭಾಗವಹಿಸಿದ್ದ ಋತ್ವಿಜರಲ್ಲಿ ಪ್ರಶ್ನಿಸಿದಾಗ ಒಬ್ಬೊಬ್ಬರು ಒಂದೊಂದು ಯಾಗದ ಹೆಸರು ಹೇಳಿ ಪತ್ರಕರ್ತರ ದಾರಿ ತಪ್ಪಿಸಿದರು. ಇಲ್ಲಿ ಪ್ರತ್ಯಂಗಿರ, ಸಪ್ತದ್ರವ್ಯ, ಚಂಡಿಕಾ ಯಾಗ ನಡೆದಿರುವುದಾಗಿ ಹೇಳಲಾಗುತ್ತಿದೆ. ಪ್ರತ್ಯಂಗಿರ ಶತ್ರುಗಳ ನಾಶಕ್ಕಾಗಿ ಮಾಡುವ ಯಾಗ ಎನ್ನಲಾಗಿದೆ. ಯಾಗದಲ್ಲಿ ಮೆಣಸಿನಕಾಯಿ ಬಳಸಲಾಗಿದ್ದು, ಅದು ಸುಟ್ಟರೂ ಘಾಟು ಬರುವುದಿಲ್ಲ. ಇದು ನಿಶ್ಚಿತವಾಗಿಯೂ ಶತ್ರುಗಳ ನಾಶ ಮಾಡುವ ಯಾಗ ಎಂದು ಹೇಳಲಾಗಿದೆ.


ಕೊಡಗಿಗೆ ಸಿಗದ ವಿಶೇಷ ಅನುದಾನ

ಮಡಿಕೇರಿ: ಕೇಂದ್ರ ಸರ್ಕಾರ ಕೊಡಗಿಗೆ ವಿಶೇಷ ಅನುದಾನ ನೀಡಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಸಿಎಂ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿರುವ 546 ಕೋಟಿ ರೂ. ಕೊಡಗಿಗೆ ಮಾತ್ರ ಅಲ್ಲ. ರಾಜ್ಯದ 8 ಜಿಲ್ಲೆಗಳಿಗೂ ಎಂದು ಸ್ಪಷ್ಟಪಡಿಸಿದರು. ಕೇಂದ್ರದ ಅನುದಾನ ವಿಚಾರದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ನಿಯಮದನ್ವಯ ರಾಜ್ಯಕ್ಕೆ ಏನು ಪಾಲು ಬರಬೇಕಿತ್ತು ಅಷ್ಟು ಬಂದಿದೆ. ವಿಶೇಷ ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೆವು. ಇದುವರೆಗೂ ನಮ್ಮ ಮನವಿ ಪುರಸ್ಕೃತವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಉಪಮುಖ್ಯಮಂತ್ರಿ ಮಾತನಾಡಿ, ಕೊಡಗಿಗೆ 2,000 ಕೋಟಿ ರೂ. ಅನುದಾನ ನೀಡುವಂತೆ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಗಿತ್ತು. ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಹಾಯಧನದ ಚೆಕ್ ಹಸ್ತಾಂತರ

ರಾಜ್ಯ ಸರ್ಕಾರಿ ನೌಕರರು ಒಂದು ದಿನದ ವೇತನ ರೂಪದಲ್ಲಿ ಕೊಡಗಿನ ಪ್ರಕೃತಿ ವಿಕೋಪ ಪರಿಹಾರಕ್ಕೆ ನೀಡಿರುವ 100 ಕೋಟಿ ರೂ. ಸಹಾಯಧನದ ಚೆಕ್ ಅನ್ನು ಸರ್ಕಾರಿ ನೌಕರರ ಸಂಘದ ಪ್ರಮುಖರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಹಸ್ತಾಂತರಿಸಿದರು.