VIDEO| ಮೋದಿಗೆ ವೋಟ್​​​​ ಹಾಕಿ ನನ್ನ ಮುಂದೆ ಪ್ರತಿಭಟನೆ ಮಾಡ್ತಿರಾ? ನಿಮಗೆ ಲಾಠಿ ಚಾರ್ಜ್​ ಮಾಡಿಸ್ಬೇಕಾ?: ಸಿಎಂ ಕುಮಾರಸ್ವಾಮಿ ಗರಂ

ರಾಯಚೂರು: ವೋಟ್​​​ ಮೋದಿಗೆ ಹಾಕಿ ನನ್ನ ಮುಂದೆ ಬಂದು ಪ್ರತಿಭಟನೆ ಮಾಡುತ್ತೀರಾ? ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಪ್ರತಿಭಟನಾಕಾರರ ವಿರುದ್ಧ ಸಿಡಿಮಿಡಿಗೊಂಡರು.

ಜಿಲ್ಲೆಯ ಕರೇಗುಡ್ಡ ಗ್ರಾಮಕ್ಕೆ ಗ್ರಾಮ ವಾಸ್ತವ್ಯಕ್ಕೆ ಬಸ್ಸಿನಲ್ಲಿ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ನೂರಾರು ಕಾರ್ಮಿಕರು ಬಸ್ಸನ್ನು ತಡೆದು ಪ್ರತಿಭಟನೆ ಮಾಡಿದರು. ಈ ವೇಳೆ ಕುಮಾರಸ್ವಾಮಿ ಅವರ ಮೇಲೆ ಗರಂ ಆಗಿದ್ದಾರೆ. ವೈಟಿಪಿಎಸ್ ವಲಯದ ಬಾಕಿ ವೇತನ ಮತ್ತು ಕೈಬಿಟ್ಟ ಕಾರ್ಮಿರನ್ನು ಕೆಲಸಕ್ಕೆ ಪಡೆಯುವಂತೆ ಒತ್ತಾಯಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು.

ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಮತ ಹಾಕುವುದು ಮೋದಿಗೆ ಸಮಸ್ಯೆಗಳನ್ನು ನನ್ನ ಹತ್ತಿರ ಕೇಳ್ತಿರಾ, ಅವರಿಗೆ ಹೋಗಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಿ. ನೀವು ಹೀಗೆ ಪ್ರತಿಭಟನೆ ಮಾಡುತ್ತಿದ್ದರೆ ಲಾಠಿ ಚಾರ್ಜ್​ ಮಾಡಿಸುತ್ತೇನೆ ಎಂದು ಗರಂ ಆಗಿದ್ದಾರೆ.

ಜಿಲ್ಲೆಯ ಉಸ್ತುವಾರಿ ಸಚಿವ ನಾಡ ಗೌಡರು ಮುಖ್ಯಮಂತ್ರಿಯನ್ನು ಮನವೊಲಿಸಿದ್ದಾರೆ. ನಾನು ಕಾರ್ಮಿಕರ ಹತ್ತಿರ ಮಾತನಾಡುತ್ತೇನೆ. ನೀವು ಬಸ್ಸಿನಲ್ಲಿಯೇ ಕುಳಿತುಕೊಳ್ಳಿ ಎಂದು ನಾಡ ಗೌಡರು ಅವರಿಗೆ ಸಮಾಧಾನ ಹೇಳಿದ್ದಾರೆ. ಮುಖ್ಯಮಂತ್ರಿಯವರ ಈ ಹೇಳಿಕೆಯಿಂದ ರಾಜ್ಯದ ಅನೇಕ ಬಿಜೆಪಿ ನಾಯಕರು ಅವರ ವಿರುದ್ಧ ಕಿಡಿಕಾರಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *