ಶೂಟೌಟ್​ ಮಾಡಿ ಎಂದಿದ್ದದ್ದರ ಬಗ್ಗೆ ಸಿಎಂ ಎಚ್ಡಿಕೆ ಸ್ಪಷ್ಟನೆ ಏನು ಗೊತ್ತಾ?

ಬೆಂಗಳೂರು: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಇಂದು ಮಧ್ಯಾಹ್ನ ನಡೆದಿರುವ ಜೆಡಿಎಸ್​ ಮುಖಂಡ ಪ್ರಕಾಶ್ ಎಂಬುವವರ ಕೊಲೆ ಕುರಿತು ಪೊಲೀಸ್​ ಅಧಿಕಾರಿಗಳೊಂದಿಗೆ ಚರ್ಚಿಸುವಾಗ “ಆರೋಪಿಗಳನ್ನು ಶೂಟೌಟ್​ ಮಾಡಿ,” ಎಂದಿದ್ದ ಸಿಎಂ ಎಚ್​.ಡಿ ಕುಮಾರಸ್ವಾಮಿ ಅವರು ತಮ್ಮ ಮಾತು ವಿವಾದಕ್ಕೆ ಗುರಿಯಾಗುತ್ತಿದ್ದೆ ಎಂಬುದನ್ನು ಅರಿತು ಸ್ಪಷ್ಟೀಕರಣ ನೀಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳ ಕಚೇರಿಯಿಂದ ಮಾಧ್ಯಮಗಳಿಗೆ ಸ್ಪಷ್ಟೀಕರಣ ಬಿಡುಗಡೆಯಾಗಿದೆ. “​ಮದ್ದೂರಿನಲ್ಲಿ ಇಂದು ಹಾಡುಹಗಲೇ ನಡೆದಿರುವ ಕೊಲೆ ನನಗೆ ತೀವ್ರ ಆಘಾತವಾಗಿದೆ. ಕೊಲೆಯಾದ ಪ್ರಕಾಶ್ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಕಾನೂನು ಪ್ರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ . ಈ ಪ್ರಕರಣ ಕುರಿತು ಮಾಹಿತಿ ಪಡೆಯುವ ಸಂದರ್ಭದಲ್ಲಿ ಬಳಸಿದ ಪದ ಭಾವನಾತ್ಮಕ ಪ್ರತಿಕ್ರಿಯೆಯೇ ಹೊರತು, ಆದೇಶವಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ಅದು ನಾನು ಸಿಎಂ ಆಗಿ ಆಡಿದ ಮಾತಲ್ಲ. ಭಾವೋದ್ವೇಗದಲ್ಲಿ ನಾನು ಹಾಗೆ ಹೇಳಿದ್ದೇನೆ. ನಾಳೆ ಮದ್ದೂರಿಗೆ ತೆರಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.