ಸಚಿವ ಸಂಪುಟ ರಚನೆಗೆ ಸಿಎಂ ಸರ್ಕಸ್, ವರಿಷ್ಠರ ಬ್ರೇಕ್​ಗೆ ಜಲಪ್ರಳಯ ರಕ್ಷಣೆ

| ಶಿವಾನಂದ ತಗಡೂರು, ಬೆಂಗಳೂರು

ನಾಡಿನ ಜಲಪ್ರಳಯ ಬಿಜೆಪಿ ಸರ್ಕಾರದ ದಿಕ್ಕು ದಿಸೆಯನ್ನೆ ಬದಲಿಸಿದ್ದು, ಸಚಿವ ಸ್ಥಾನ ಆಕಾಂಕ್ಷಿತರ ಧ್ವನಿಯನ್ನು ಮೆತ್ತಗಾಗಿಸಿದೆ.

ಇದು ಒಂದು ರೀತಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವರದಾನವೂ ಹೌದು ಮತ್ತೊಂದು ರೀತಿಯಲ್ಲಿ ಸಮಸ್ಯೆಯೂ ಹೌದು. ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ವಹಿಸಿಕೊಳ್ಳುವುದಕ್ಕೂ, ಉತ್ತರ ಕರ್ನಾಟಕದಲ್ಲಿ ಜಲಪ್ರಳಯ ಸಂಭವಿಸಿದ್ದು ಕಾಕತಾಳೀಯ.

ಮುಖ್ಯಮಂತ್ರಿ ಬಿಎಸ್​ವೈ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗೆ ಮೊದಲ ಹಂತದ ಸಚಿವ ಸಂಪುಟ ರಚನೆಯಾಗಬೇಕಾಗಿತ್ತು. ಆದರೆ ಆಗಿದ್ದೆ ಬೇರೆ. ಈ ಬಾರಿ ವರಿಷ್ಠರ ಒಪ್ಪಿಗೆ ಇಲ್ಲದೆ ಒಂದಡಿ ಹೆಜ್ಜೆ ಮುಂದಿಡುವುದು ಬೇಡ ಎನ್ನುವ ನಿಲುವಿಗೆ ಕಟ್ಟು ಬಿದ್ದ ಬಿಎಸ್​ವೈಗೆ ಯಾಕೋ ಸಚಿವ ಸಂಪುಟ ರಚನೆಗೆ ವಿಘ್ನಗಳೇ ಕಾಡಿವೆ.ಸಚಿವ ಸಂಪುಟ ರಚನೆ ತಯಾರಿಯಲ್ಲಿದ್ದಾಗಲೇ ಉತ್ತರ ಕರ್ನಾಟಕದಲ್ಲಿ ಭೀಕರ ಜಲಪ್ರಳಯ ನಾಡನ್ನು ನಡುಗಿಸಿತು. ತರಾತುರಿಯಲ್ಲಿ ಅಲ್ಲಿಗೂ ಹೋಗಿ ಬಂದ ಸಿಎಂ ಮೂರು ದಿನಗಳ ದಿಲ್ಲಿ ಭೇಟಿಗೆ ಹೊರಟಾಗಲೂ ಸಮಸ್ಯೆಗಳೆಲ್ಲವೂ ಸುಲುಭವಾಗಿ ಬಗೆಹರಿದು, ಸಂಪುಟ ರಚನೆ ಆಗುವುದೆಂದು ನಿರೀಕ್ಷಿಸಲಾಗಿತ್ತು.

ಕಾಶ್ಮೀರ ಸಮಸ್ಯೆಯಲ್ಲಿ ಮುಳುಗಿ ಹೋಗಿದ್ದ ಕೇಂದ್ರದ ನಾಯಕರಿಗೆ ಸಚಿವ ಸಂಪುಟ ಬಗ್ಗೆ ಚರ್ಚೆ ಮಾಡಲು ಸಮಯ ಸಿಗಲಿಲ್ಲ. ಅಷ್ಟೊತ್ತಿಗೆ ಜಲಪ್ರಳಯ ಭೀಕರತೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ದೌಡಾಯಿಸಿ ಬಂದ ಸಿಎಂ, ಪ್ರವಾಸ ಮತ್ತು ಪರಿಹಾರೋಪಾಯ ಕ್ರಮಗಳಲ್ಲಿ ಮುಳುಗಿ ಹೋದರು. ಉತ್ತರ ಕರ್ನಾಟಕ ಪ್ರವಾಸ ಮುಗಿಸುವಷ್ಟರಲ್ಲಿ ದಕ್ಷಿಣ ಕರ್ನಾಟಕದಲ್ಲಿಯೂ ರಣ ಭೀಕರ ಮಳೆ ಆರ್ಭಟದಿಂದ ಜನಜೀವನ ತತ್ತರಿಸಿ ಹೋಗಿದೆ. ಈಗ ಸಿಎಂ ಚಿತ್ತ ದಕ್ಷಿಣದತ್ತ ಹರಿದಿದೆ.

ಏಕಚಕ್ರಾಧಿಪತ್ಯ ನಡೆಸುತ್ತಿರುವ ಆರೋಪ

ಏಕಚಕ್ರಾಧಿಪತ್ಯ ಎನ್ನುವ ಟೀಕೆಗಳಿಗೂ ಗುರಿಯಾದರೂ, ಯಾವುದನ್ನು ತಲೆಗೆ ಹಾಕಿಕೊಳ್ಳದ ಬಿಎಸ್​ವೈ ಒಬ್ಬರೇ ಹಲವಾರು ಸಚಿವ ಸಂಪುಟ ಸಭೆಗಳನ್ನು ನಡೆಸಿ ರೈತರ ಖಾತೆಗಳಿಗೆ ತಲಾ 2 ಸಾವಿರದಂತೆ 4 ಸಾವಿರ ರೂ. ನೆರವು ಮತ್ತು ಮೀನುಗಾರರಿಗೆ ಸಾಲ ಮನ್ನಾ ಯೋಜನೆ ಪ್ರಕಟಿಸಿದ್ದಾರೆ. ಆಯಕಟ್ಟಿನ ಸ್ಥಳಗಳಿಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ತಮ್ಮ ಆಡಳಿತ ಕೋಟೆ ಭದ್ರಪಡಿಸಿಕೊಳ್ಳಲು ತಾಲೀಮು ನಡೆಸಿದ್ದಾರೆ.

ಮಧ್ಯದಲ್ಲಿ ಹೈಕಮಾಂಡ್

ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚನೆಯಾಗಿದ್ದ ಜೋಷ್​ನಲ್ಲಿಯೇ ಒಂದು ವೇಳೆ ಸಚಿವ ಸಂಪುಟ ರಚನೆ ಆಗಿದ್ದರೆ, ಹತ್ತಾರು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗಿತ್ತು. ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು? ಯಾರನ್ನು ಬಿಡುವುದು? ಎನ್ನುವ ತೀವ್ರ ಇಕ್ಕಟ್ಟಿನಲ್ಲಿ ಸಿಲುಕಿದ್ದ ಬಿಎಸ್​ವೈಗೆ ಹೈಕಮಾಂಡ್ ಮಧ್ಯದಲ್ಲಿಟ್ಟುಕೊಂಡು ಸಂಪುಟ ರಚನೆ ಮಾಡುವುದೇ ಸರಿಯಾದ ಪರಿಹಾರ ದಾರಿ ಎನಿಸಿದ್ದರೆ ಅದು ತಪ್ಪೇನಿಲ್ಲ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವಾಗ ಸಂಪುಟ ರಚನೆಗೆ ತಾಳ್ಮೆ ತೋರಿಸಿರುವುದು ಸಿಎಂ ಬುದ್ಧಿವಂತಿಕೆ ನಡೆ ಎನ್ನುವ ವಾದವೂ ಇದೆ. ಇದು ಅಷ್ಟರ ಮಟ್ಟಿಗೆ ಅವರ ಮೇಲಿನ ಸದ್ಯದ ಹೊರೆಯನ್ನು ಕಡಿಮೆ ಮಾಡಿದೆ.

ಮುಖ್ಯಮಂತ್ರಿಗೆ ಮೂಗುದಾರ

ದಿನಕಳೆದಂತೆ ಆಕಾಂಕ್ಷಿತರ ಉತ್ಸಾಹವೂ ಕುಗ್ಗಿ ಹೋಗಿದೆ. ವರಿಷ್ಠರ ಒಪ್ಪಿಗೆ ಇಲ್ಲದೆ ಇಲ್ಲಿ ಏನೂ ನಡೆಯುವುದಿಲ್ಲ. ಬಿಎಸ್​ವೈ ಮಾತಿಗೂ ಕಿಮ್ಮತ್ತಿಲ್ಲ ಎನ್ನುವ ಚರ್ಚೆಗಳು ನಡೆದಿವೆ. ಈ ರೀತಿಯ ಅಂತರ ಕಾಯ್ದುಕೊಳ್ಳುವ ಮೂಲಕ ಬಿಎಸ್​ವೈಗೆ ಮೂಗುದಾರ ಹಾಕಬೇಕು ಎನ್ನುವ ವರಿಷ್ಠರ ನಿಲುವಿಗೂ, ಈಗಿನ ಬೆಳವಣಿಗೆಗಳೂ ಕಾಕತಾಳೀಯವಾಗಿಯೇ ಇವೆ.

ಮೈತ್ರಿ ಸರ್ಕಾರದಲ್ಲೂ 14 ದಿನ

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿಯಾಗಿ ಜಿ.ಪರಮೇಶ್ವರ ಮಾತ್ರವೇ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಆದರೆ, ಸಚಿವ ಸಂಪುಟ ರಚನೆಗೆ 14 ದಿನಗಳು ಹಿಡಿದಿತ್ತು. ಆದರೆ, ಈಗ ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡು 16 ದಿನ ಕಳೆದಿದೆ. ಆದರೂ ಸಂಪುಟ ರಚನೆ ಆಗಿಲ್ಲ ಎನ್ನುವುದು ಪ್ರತಿಪಕ್ಷಗಳಿಗೆ ಟೀಕಾಸ್ತ್ರವಾಗಿದೆ.

ಇನ್ನೆಷ್ಟು ದಿನ ವಿಳಂಬ?

ಸಂಪುಟವಿಲ್ಲದೆ ಏಕಚಕ್ರಾಧಿಪತ್ಯ ಆಡಳಿತ ನಡೆಯುತ್ತಿದೆ ಎನ್ನುವುದು ಈಗ ರಾಷ್ಟ್ರೀಯ ಮಟ್ಟದಲ್ಲಿಯೂ ಚರ್ಚೆ ನಡೆಯುತ್ತಿದೆ. ಯಾರು ಸಚಿವ ಸಂಪುಟ ರಚನೆ ವಿಳಂಬವಾಗಲಿ ಎಂದು ಬ್ರೇಕ್ ಹಾಕಿದ್ದರೋ, ಅವರೇ ಈಗ ಯಡಿಯೂರಪ್ಪನವರೇ ಆದಷ್ಟು ಬೇಗ ಸಂಪುಟ ರಚನೆ ಮಾಡಿ ಎಂದು ತಾಕೀತು ಮಾಡುವಷ್ಟರ ಮಟ್ಟಿಗೆ ಪರಿಸ್ಥಿತಿ ಬೆಳವಣಿಗೆ ಆಗಿದೆ. ಇನ್ನೆಷ್ಟು ದಿನ ಕಾಯುವುದು ಎನ್ನುತ್ತಿರುವ ಆಕಾಂಕ್ಷಿಗಳು ಗೊಣಗಿಕೊಂಡೇ ವರಿಷ್ಠರತ್ತ ಮುಖ ಮಾಡಿದ್ದಾರೆ.

Leave a Reply

Your email address will not be published. Required fields are marked *