ಆಂಧ್ರದಲ್ಲಿ 5 ರೂ.ಗೆ ಆಹಾರ ನೀಡುವ ಅಣ್ಣಾ ಕ್ಯಾಂಟೀನ್​ ಜಾರಿಗೆ ತಂದ ಚಂದ್ರಬಾಬು ನಾಯ್ಡು

ಹೈದರಾಬಾದ್​: ಕರ್ನಾಟಕದ ಇಂದಿರಾ ಕ್ಯಾಂಟೀನ್​ ಮಾದರಿಯಲ್ಲೇ ನಾಗರಿಕರಿಗೆ ಕಡಿಮೆ ದರದಲ್ಲಿ ಆಹಾರ ಪೂರೈಸುವ ಅಣ್ಣಾ ಕ್ಯಾಂಟೀನ್​ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್​. ಚಂದ್ರಬಾಬು ನಾಯ್ಡು ಅವರು ಬುಧವಾರ ಚಾಲನೆ ನೀಡಿದ್ದಾರೆ.

ನೂತನವಾಗಿ ಉದ್ಘಾಟನೆಯಾಗಿರುವ ಈ ಕ್ಯಾಂಟೀನ್​ಗಳಲ್ಲಿ ಐದು ರೂಪಾಯಿಗಳಿಗೆ ಉಪಹಾರ ಮತ್ತು ಭೋಜನ ನೀಡಲಾಗುತ್ತದೆ. ಮೂರು ಇಡ್ಲಿ/ ಮೂರು ಪೂರಿ/ ಉಪ್ಪಿಟ್ಟು / ಪೊಂಗಲ್​ ಅನ್ನು ಉಪಹಾರವಾಗಿ ನೀಡಿದರೆ, ಭೋಜನವಾಗಿ ಅನ್ನ ಸಾಂಬಾರ್​, ದಾಲ್​, ಉಪ್ಪಿನಕಾಯಿ, ಕರ್ರಿ ಮತ್ತು ಮೊಸರು ನೀಡಲಾಗುತ್ತದೆ.

ಮೊದಲ ಹಂತದಲ್ಲಿ 203 ಕ್ಯಾಂಟೀನ್​ಗಳನ್ನು 110 ಮುನ್ಸಿಪಾಲಿಟಿಗಳಲ್ಲಿ ತೆರೆಯಲಾಗುತ್ತಿದೆ. ಇನ್ನು 25 ಮುನ್ಸಿಪಾಲಿಟಿಗಳಲ್ಲಿ 60 ಕ್ಯಾಂಟೀನ್​ಗಳನ್ನು ತೆರಯಲಾಗುತ್ತಿದೆ. ಎರಡನೇ ಹಂತದಲ್ಲಿ 143 ಕ್ಯಾಂಟೀನ್​ಗಳನ್ನು 85 ಪ್ರದೇಶಗಳಲ್ಲಿ ತೆರಯಲು ಉದ್ದೇಶಿಸಲಾಗಿದ್ದು ಆಗಸ್ಟ್ ಹೊತ್ತಿಗೆ ಎಲ್ಲ ಕ್ಯಾಂಟೀನ್​ಗಳೂ ಆಹಾರ ವಿತರಣಾ ಕಾರ್ಯದಲ್ಲಿ ನಿರತವಾಗಲಿವೆ. ಇಂದು 60 ಕ್ಯಾಂಟೀನ್​ಗಳನ್ನು ಸಿಎಂ ನಾಯ್ಡು ಉದ್ಘಾಟಿಸಿದ್ದಾರೆ.

ತೆಲುಗು ದೇಶಂ ಪಕ್ಷದ ಸಂಸ್ಥಾಪಕರಾದ ಮೇರು ನಟ, ಮಾಜಿ ಮುಖ್ಯಮಂತ್ರಿ ನಂದಮುರಿ ತಾರಕ ರಾಮರಾವ್​ ಈ ಹಿಂದೆ ಎರಡು ರೂಪಾಯಿಗಳಿಗೆ ಕೆ.ಜಿ. ಅಕ್ಕಿ ನೀಡುವ ಜನಪ್ರಿಯ ಯೋಜನೆಯನ್ನು ಜಾರಿಗೆ ತಂದಿದ್ದರು. ಇದಾದ ನಂತರ ಸದ್ಯ ಚಂದ್ರಬಾಬು ನಾಯ್ಡು ಅವರು ಕಡಿಮೆ ದರದಲ್ಲಿ ಆಹಾರ ಒದಗಿಸುವ ಕಾರ್ಯಕ್ರಮವನ್ನು ರಾಜ್ಯಕ್ಕೆ ಪರಿಚಯಿಸಿದ್ದಾರೆ. ಆರ್ಥಿಕ ದುರ್ಬಲರು, ಬಡವರು ಕೇವಲ 15 ರೂಪಾಯಿಗಳಲ್ಲಿ ದಿನದ ಮೂರು ಹೊತ್ತಿನ ಆಹಾರ ಪಡೆಯಬೇಕು ಎಂಬುದೇ ಈ ಕಾರ್ಯಕ್ರಮದ ಹಿಂದಿನ ಉದ್ದೇಶ ಎಂದು ಆಂಧ್ರಪ್ರದೇಶದ ಸಚಿವ ಪಿ ನಾರಾಯಣ ತಿಳಿಸಿದ್ದಾರೆ.

ಯೋಜನೆಯ ಉಸ್ತುವಾರಿಯನ್ನು ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ನೀಡಲಾಗಿದೆ. ನಿತ್ಯ 2 ಲಕ್ಷ ಮಂದಿಗೆ ಆಹಾರ ಪೂರೈಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.

ಆದರೆ, ಇದು ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾದ ಯೋಜನೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಕಡಿಮೆ ದರದಲ್ಲಿ ಆಹಾರ ಪೂರೈಸುವ ಜನಪ್ರಿಯ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೆ ತಂದ ರಾಜ್ಯ ತಮಿಳುನಾಡು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಕೇವಲ ಐದು ರೂಪಾಯಿಗಳಿಗೆ ಉಪಹಾರ, ಭೋಜನ ನೀಡುವ ಅಮ್ಮಾ ಕ್ಯಾಂಟೀನ್​ ಅನ್ನು ಜಾರಿಗೆ ತಂದಿದ್ದರು.