
ಬೆಂಗಳೂರು: ಬಂದ್ ಎಲ್ಲ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ, ಇಂದೇ ಮಾತುಕತೆಗೆ ಬನ್ನಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಭಟನಾಕಾರರಿಗೆ ಆಹ್ವಾನ ನೀಡಿದ್ದಾರೆ.
ಸರೋಜಿನಿ ಮಹಿಷಿ ವರದಿಯ ಅಂಶಗಳ ಅನುಷ್ಠಾನಕ್ಕೆ ಆಗ್ರಹಿಸಿ ಕೆಲವು ಕನ್ನಡಪರ ಸಂಘಟನೆಗಳು ಗುರುವಾರ ಕರ್ನಾಟಕ ಬಂದ್ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ವೈ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ನಾನೂ ಕನ್ನಡ ಪರ ಒಲವು ಇರುವಂಥವನೇ. ಕನ್ನಡಿಗರಿಗೆ ಉದ್ಯೋಗ ದೊರಕಬೇಕು ಎಂಬ ಆಶಯ ನನ್ನದು ಕೂಡ. ಈಗಾಗಲೇ ಮಹಿಷಿ ವರದಿಗೆ ಸಂಬಂಧಿಸಿದ ಹಲವು ಅಂಶಗಳನ್ನು ಜಾರಿಗೊಳಿಸಿದ್ದೇವೆ. ಇನ್ನೇನು ಆಗಬೇಕು ನೋಡೋಣ. ಬಂದ್ ಎಲ್ಲ ಮಾಡಿ ಸಾರ್ವಜನಿಕರಿಗೆ ವಿನಾಕಾರಣ ತೊಂದರೆ ಕೊಡಬೇಡಿ. ಬಂದ್ ಕರೆ ನೀಡಿದವರು ಇಂದೇ ನನ್ನನ್ನು ಭೇಟಿ ಮಾಡಿ. ಮಾತುಕತೆಗೆ ಸದಾ ಸಿದ್ಧನಿದ್ದೇನೆ. ಇವತ್ತೇ ಬೇಕಾದರೆ ನನ್ನ ಮನೆಗೆ ಬರಲಿ. ಯಾವ್ಯಾವ ಸಮಸ್ಯೆಗಳಿವೆ ಎಲ್ಲವನ್ನು ಮಾತುಕತೆ ಮೂಲಕ ಬಗೆಹರಿಸೋಣ. ನಾಳೆಯ ಎಲ್ಲ ಕಾರ್ಯಕ್ರಮವನ್ನೂ ರದ್ದುಮಾಡಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಕಾಂಗ್ರೆಸ್ ಬೆಂಬಲದ ವಿಚಾರ ಪ್ರಶ್ನಿಸಿದಾಗ, ಈ ವಿಷಯದಲ್ಲಿ ರಾಜಕಾರಣ ಬೇಡ. ಪಕ್ಷ ಬೇಧ ಮರೆತು ವ್ಯಾವಹಾರಿಕವಾಗಿ ಏನು ಮಾಡಬಹುದು ನೋಡೋಣ. ಅವರೂ ಅಧಿಕಾರದಲ್ಲಿ ಇದ್ದರಲ್ಲವೆ? ಏನು ಮಾಡಿದರು? ಎಂದು ಸಿಎಂ ಬಿಎಸ್ವೈ ಪ್ರಶ್ನಿಸಿದರು.
ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ, ಇಂದೇ ಮಾತುಕತೆಗೆ ಬನ್ನಿ: ಪ್ರತಿಭಟನಾಕಾರರಿಗೆ ಸಿಎಂ ಬಿಎಸ್ವೈ ಆಹ್ವಾನ pic.twitter.com/ikJMzIII4F
— Vijayavani (@VVani4U) February 12, 2020