ಬೆಂಗಳೂರು: ಮಂಡ್ಯದಲ್ಲಿ ನಾನು ಹೈಸ್ಕೂಲ್ನಲ್ಲಿ ಓದುತ್ತಿದ್ದಾಗ ನಿಂಬೆಹಣ್ಣು ಮತ್ತು ತರಕಾರಿ ಮಾರುತ್ತಿದ್ದೆ, ಸಂಕಲ್ಪ ಮಾಡಿದ್ದರಿಂದಲೇ ರಾಜಕೀಯ ಕ್ಷೇತ್ರದಲ್ಲಿ ಈ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಉನ್ನತ ಶಿಕ್ಷಣ ಇಲಾಖೆ ಭಾನುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ, ಉಚಿತ ಲ್ಯಾಪ್ಟಾಪ್ ವಿತರಣೆ ಹಾಗೂ ಯುವ ಸಬಲೀಕರಣ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದರು.
ಬೂಕನಕೆರೆಯಲ್ಲಿ ಹುಟ್ಟಿ ಹಲವು ರಾಜಕೀಯ ನಾಯಕರ ಮಾರ್ಗದರ್ಶನದಿಂದ ಇದೀಗ ಎತ್ತರದ ಸ್ಥಾನಕ್ಕೇರಿದ್ದೇನೆ. ರಾಜ್ಯದ ಜನರ ಆಶೀರ್ವಾದದಿಂದಲೇ ನಾಲ್ಕನೇ ಬಾರಿ ಸಿಎಂ ಆಗಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ನಾನೇ ಸಾಕ್ಷಿ ಎಂದರು.
ಸಾಧನೆ ಮಾಡಿ: ನೀವು ಮನಸ್ಸು ಮಾಡಿದರೆ ಬಯಸಿದ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಿ. ಸಣ್ಣ ಕೈಗಾರಿಕೆ ಪ್ರಾರಂಭಿಸಿ ನೂರಾರು ಜನರಿಗೆ ಉದ್ಯೋಗ ಕೊಡಿ. ಈ ಕಾರ್ಯಕ್ರಮದಲ್ಲಿ ಅನೇಕ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸ ಲಾಗುತ್ತಿದೆ. ಅವರಂತೆ, ನೀವು ಆಗಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ವಿದೇಶಿ ವ್ಯಾಮೋಹ ಬಿಡಿ: ಇಂದಿನ ಯುವಜನತೆ ಆಧುನಿಕತೆಯ ಅಲೆಯಲ್ಲಿ ದೇಶದ ಪರಂಪರೆ ಹಾಗೂ ಆಚಾರ-ವಿಚಾರ ಮರೆಯುತ್ತಿದ್ದಾರೆ. ವಿವೇಕಾನಂದರ ಜೀವನಚರಿತ್ರೆಯನ್ನು ದಿನಕ್ಕೆ ಹತ್ತು ಪುಟವಾದರೂ ಓದಬೇಕು. ಇದರಿಂದ ಸ್ಪೂರ್ತಿ ಸಿಗುತ್ತದೆ. ನೀವೆಲ್ಲರೂ ವಿದೇಶಿ ವ್ಯಾಮೋಹದಿಂದ ಹೊರಬರಬೇಕು. ಇಲ್ಲಿ ಓದಿ ವಿದೇಶಕ್ಕೆ ಹಾರುವ ಬಗೆಗಿನ ಚಿಂತನೆಯನ್ನು ಬಿಡಬೇಕು ಎಂದು ಹೇಳಿದರು.
ರಾಮಕೃಷ್ಣ ಮಠದ ಶ್ರೀ ಸ್ವಾಮಿ ಮಂಗಲನಾಥನಂದಜೀ ಮಹಾರಾಜ್ ಆಶೀರ್ವಚನ ನೀಡಿ, ಜಗತ್ತಿನ ಯಾವ ಭಾಗದಲ್ಲಾದರೂ ಇರಿ. ಸ್ವಾಭಿಮಾನದಿಂದ ಭಾರತೀಯರು ಎಂದು ಹೇಳಿಕೊಳ್ಳಿ ಎಂದರು.
ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಮೇಯರ್ ಗೌತಮ್ ಕುಮಾರ್, ಶಾಸಕ ಎಸ್.ಆರ್. ವಿಶ್ವನಾಥ್, ಬೆಂಗಳೂರು ಕೇಂದ್ರ ವಿವಿ ಕುಲಪತಿ ಎಸ್. ಜಾಫೆಟ್ ಮತ್ತಿತರರು ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ: ಪ್ಯಾರಾಲಿಂಪಿಕ್ ಪದಕ ವಿಜೇತೆ ರಾಧಾ ವೆಂಕಟೇಶ್, ವೆಬ್ಟೆಕ್ನಾಲಜೀಸ್ನ ಪ್ರಣವ್ ನಟಲಪತಿ ಸೇರಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಏಕ್ಭಾರತ ಅಂಗವಾಗಿ ಉತ್ತರಾಖಂಡದ 20 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 2,500 ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡುವ ಕುರಿತು ಐಸಿಐಸಿಐ ಬ್ಯಾಂಕ್ ಜತೆ ಒಪ್ಪಂದಕ್ಕೆ ವಿದ್ಯಾರ್ಥಿಗಳು ಸಹಿ ಹಾಕಿದರು.
ಬೇರೆಯವರಿಗಾಗಿ ಬದುಕಬೇಡಿ. ನಿಮಗಾಗಿ ಬದುಕಿ, ಸಾಧನೆಗೆ ಕೀಳರಿಮೆ ಮತ್ತು ಹಿಂಜರಿಕೆ ಬೇಡ. ಆತ್ಮವಿಶ್ವಾಸದಿಂದ ಗುರಿಯೊಂದಿಗೆ ಮುನ್ನುಗ್ಗಬೇಕು.
| ವೇದಾ ಕೃಷ್ಣಮೂರ್ತಿ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ