ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಿಎಸ್​ವೈ

ಬೆಂಗಳೂರು: ಬಹುಮತ ಸಾಬೀತು ಪಡಿಸಲು ಇಂದು ನಡೆದ ವಿಶೇಷ ಅಧಿವೇಶನದಲ್ಲಿ ವಿಶ್ವಾಸ ಮತ ಯಾಚನೆಗೂ ಮುನ್ನ ಸದನವನ್ನುದ್ದೇಶಿಸಿ ಭಾವುಕರಾಗಿ ಭಾಷಣ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ರಾಜೀನಾಮೆ ಘೋಷಿಸಿದರು.

ಇದರಿಂದಾಗಿ ಸದನ ಅನಿರ್ದಿಷ್ಟಾವಧಿಗೆ ಮುಂದೂಡಿತು. ವಿಶ್ವಾಸಮತ ಯಾಚನೆಯ ಪ್ರಮೇಯವೇ ಉದ್ಭವಿಸಲಿಲ್ಲ. ನಂತರ ರಾಜ್ಯಪಾಲರಿಗೆ ರಾಜೀನಾಮೆ ನೀಡಲು ರಾಜಭವನದತ್ತ ತೆರಳಿದರು.

ಮೇ 17ರಂದು ಮುಂಜಾನೆ 9.30ಕ್ಕೆ ರಾಜ್ಯದ ನೂತನ ಸಿಎಂ ಆಗಿ ಬಿ ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ವಿಶ್ವಾಸ ಮತ ಯಾಚನೆಯ ಪ್ರಸ್ತಾಪ ಮಂಡಿಸಿ ಭಾಷಣ ಮಾಡಿದ ಅವರು, ಕೊನೆ ಉಸಿರಿರೋವರೆಗೂ ರೈತರಿಗಾಗಿ ಜೀವನ ಮುಡಿಪಾಗಿಡುತ್ತೇನೆ. ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್​ಗಳಲ್ಲಿನ ಸಾಲಮನ್ನಾ, ನೇಕಾರರ ಸಾಲಮನ್ನಾ ಮಾಡುವ ಬಗ್ಗೆ ಯೋಚಿಸಿದ್ದೆ. ಬೆಂಗಳೂರಿನ ಸ್ಲಂನಲ್ಲಿ ಮಲಗಿ ಅವರ ಮನೆಯಲ್ಲಿ ನಿದ್ದೆ ಮಾಡಿ ಬಂದಿದ್ದೇನೆ. ನನ್ನ ಉಸಿರು ಇರೋವರೆಗೂ ರೈತರ ಪರ ಹೋರಾಟ ಮಾಡುತ್ತೇನೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ರೈತರು ಸ್ವತಂತ್ರರಾಗಿಲ್ಲ ಎಂದು ಹೇಳಿದರು.

ಬೆಂಗಳೂರು ಸೇರಿ ಯಾವುದೇ ನಗರಕ್ಕೂ ನೀರು ಕೊಡಲು ಆಗಲಿಲ್ಲ. ಜನರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ನಾನು ಕಟ್ಟುಬಿದ್ದು ರಾಜಕಾರಣ ಮಾಡಿದವನಲ್ಲ. ಒಬ್ಬರು, ಇಬ್ಬರು ಇದ್ದಾಗ ಪಕ್ಷ ಮುನ್ನಡೆಸಿದವನು. ವಸಂತ ಬಂಗೇರ ಕೈಬಿಟ್ಟಾಗಲೂ ಒಬ್ಬನೇ ಹೋರಾಡಿದೆ. ಜೀತದ ವಿರುದ್ಧ ಹೋರಾಟ ಮಾಡಿದೆ. ಎಂದೂ ಕೈಕಟ್ಟಿ ಕೂತವನು ನಾನಲ್ಲ ಎಂದರು.

ನೊಂದ ರೈತರಿಗೆ ನ್ಯಾಯ ಒದಗಿಸಲು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದೆ. ಮೋದಿ ಆಡಳಿತ ಮತ್ತು ಹಿಂದೆ ಇದ್ದ ರಾಜ್ಯ ಸರ್ಕಾರದ ಆಡಳಿತದ ವಿರುದ್ಧ ಹೇಳಿದ್ದೆ ಎಂದು ಹೇಳಿದರು.

ರಾಜ್ಯದ ಜನರ ಸೇವೆ ಮಾಡಬೇಕು. ರೈತರನ್ನ ಉಳಿಸುವ ಹಂಬಲ ನನಗಿದೆ. ಅವಕಾಶ ವಾದಿ ರಾಜಕಾರಣಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಮುಂದಾಗಿವೆ. ಅತಿದೊಡ್ಡ ಪಕ್ಷವನ್ನು ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿದ್ದರು ಎಂದು ಪ್ರಸ್ತಾಪಿಸಿದರು.

ರಾಜ್ಯದ ಜನರು ನನಗೆ ಪ್ರೀತಿ ತೋರಿಸಿದರು. ರಾಜ್ಯದ ಜನತೆಗೆ ವಿನಯಪೂರ್ವಕ ಅಭಿನಂದನೆ. ಬಿಜೆಪಿ 104 ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿದೆ. 40 ಇದ್ದಿದ್ದು 104 ಸ್ಥಾನಕ್ಕೆ ಬಂದು ನಿಂತಿದ್ದೇವೆ. ಜನರು ಜೆಡಿಎಸ್, ಕಾಂಗ್ರೆಸ್ ಪಕ್ಷಗಳನ್ನು ತಿರಸ್ಕರಿಸಿದ್ದಾರೆ ಎಂದರು.

Leave a Reply

Your email address will not be published. Required fields are marked *