ಸರ್ಕಾರ ಸ್ಥಿರ ಎಂಬ ಸಂದೇಶ ಸಾರಿದ ಶಾಸಕಾಂಗ ಸಭೆ: ಗೈರಾದ ನಾಲ್ವರು ಶಾಸಕರಿಗೆ ನೋಟಿಸ್

 ಬೆಂಗಳೂರು: ಭಾರಿ ಕುತೂಹಲಕ್ಕೆ ಕಾರಣವಾಗಿದ್ದ, ರಾಜ್ಯ ರಾಜಕಾರಣದಲ್ಲಿ ಅತ್ಯಂತ ಮಹತ್ವದ್ದು ಎನಿಸಿಕೊಂಡಿದ್ದ ಕಾಂಗ್ರೆಸ್​ನ ಶಾಸಕಾಂಗ ಪಕ್ಷದ ಸಭೆ ಇಂದು ವಿಧಾನಸೌಧದಲ್ಲಿ ನಡೆಯಿತು. ಆದರೆ, ಸಭೆಗೆ ನಾಲ್ವರು ಶಾಸಕರು ಗೈರಾದರು.

ಕಾಂಗ್ರೆಸ್​ 80 ಶಾಸಕರನ್ನು ಹೊಂದಿದ್ದರೂ, ಈ ಸಭೆಗೆ ಸ್ಪೀಕರ್​ ಸಹಿತ ಹಾಜರಾಗಿದ್ದು 76 ಶಾಸಕರು. ಭಿನ್ನಮತೀಯ ಶಾಸಕರ ನಾಯಕ ಎಂದೇ ಗುರುತಿಸಿಕೊಂಡಿರುವ ರಮೇಶ್​ ಜಾರಕಿಹೊಳಿ, ಮಹೇಶ್​, ಕುಮಟಳ್ಳಿ, ನಾಗೇಂದ್ರ, ಉಮೇಶ್​ ಜಾದವ್​ ಅವರು ಶಾಸಕಾಂಗ ಸಭೆಗೆ ಗೈರಾದರು.

ಈ ಪೈಕಿ ಉಮೇಶ್​ ಜಾದವ್​ ಮತ್ತು ನಾಗೇಂದ್ರ ಅವರು ಪಕ್ಷದ ನಾಯಕರ ಅನುಮತಿ ಮೇರೆಗೆ ಸಭೆಗೆ ಗೈರಾಗಿದ್ದು, ರಮೇಶ್​ ಜಾರಕಿಹೊಳಿ, ಕುಮಟಳ್ಳಿ ಯಾವುದೇ ಮುನ್ಸೂಚನೆ ಇಲ್ಲದೇ ಗೈರಾದರು. ಈ ಮೂಲಕ ಕಡ್ಡಾಯವಾಗಿ ಹಾಜರಾಗಬೇಕು ಎಂಬ ಪಕ್ಷದ ನೋಟಿಸ್ ​ಅನ್ನು ಈ ಇಬ್ಬರೂ ಶಾಸಕರು ಉಲ್ಲಂಘಿಸಿದರು. ಇದೇ ಹಿನ್ನೆಲೆಯಲ್ಲಿ ನಾಲ್ವರೂ ಶಾಸಕರಿಗೆ ಕಾರಣ ಕೇಳಿ ನೋಟಿಸ್​ ನೀಡಲು ಕಾಂಗ್ರೆಸ್​ ನಿರ್ಧರಿಸಿದೆ.

ಸರ್ಕಾರ ಅಸ್ತಿರವಾಗಿದೆ ಎಂಬ ಬಿಜೆಪಿಯ ವಾದವನ್ನು ಅಲ್ಲಗಳೆಯಲು ಮತ್ತು ಶಕ್ತಿ ಪ್ರದರ್ಶನ ಮಾಡುವ ಉದ್ದೇಶದಿಂದ ಕಾಂಗ್ರೆಸ್​ ಈ ಸಭೆಯನ್ನು ಕರೆದಿತ್ತು. ಕಾಂಗ್ರೆಸ್​ನ ಈ ಉದ್ದೇಶ ಭಾಗಶಃ ಯಶಸ್ವಿಯಾಗಿದೆಯಾದರೂ, ಪಕ್ಷದಲ್ಲಿ ಭಿನ್ನಮತ ಇದೆ ಎಂಬುದಂತೂ ಬಹಿರಂಗಗೊಂಡಿತು. ಆದರೆ, ಗೈರಾದ ಶಾಸಕರಿಂದ ಸರ್ಕಾರಕ್ಕೆ ಸದ್ಯಕ್ಕೆ ಅಪಾಯ ಇಲ್ಲ ಎಂಬ ಸಂದೇಶವನ್ನು ರಾಜ್ಯಕ್ಕೆ ರವಾನಿಸುವಲ್ಲಿ ಕಾಂಗ್ರೆಸ್​ ಯಶಸ್ವಿ ಆಯಿತು.

ಗೈರು ಶಾಸಕರಿಗೆ ನೋಟಿಸ್
ಇನ್ನು ಸಭೆ ನಂತರ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಇಂದಿನ ಸಭೆಗೆ ನಾಲ್ವರು ಹಾಜರಾಗಿಲ್ಲ. ಈ ಪೈಕಿ ಉಮೇಶ್​ ಜಾದವ್​ (ಚಿಂಚೋಳಿ) ಪತ್ರ ಕಳುಹಿಸಿ ಸಭೆಯಿಂದ ವಿನಾಯ್ತಿ ಪಡೆದರೆ, ನಾಗೇಂದ್ರ ಅವರು ವೇಣುಗೋಪಾಲ್​ ಅವರಿಗೆ ಕರೆ ಮಾಡಿ ಗೈರಾಗಲು ಅನುಮತಿ ಪಡೆದಿದ್ದಾರೆ. ನಂತರ ಬಂದು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ಆದರೂ, ನಾಗೇಂದ್ರ ಅವರ ನಡವಳಿಕೆ, ಹೇಳಿಕೆಗಳನ್ನು ಪರಿಶೀಲಿಸುತ್ತೇವೆ. ಅಲ್ಲದೆ, ಈ ನಾಲ್ವರಿಗೆ ಉತ್ತರ ಕೇಳಿ ನೋಟಿಸ್​ ನೀಡುತ್ತೇನೆ. ಅವರಿಂದ ಪ್ರತಿಕ್ರಿಯೆ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು.

ಸರ್ಕಾರ ಪತನವಾಗುತ್ತದೆ ಎಂಬ ಬಿಜೆಪಿಯ ಅಪಪ್ರಚಾರ, ಮಾಧ್ಯಮಗಳ ವರದಿಗಳ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿತ್ತು. ನಮಗೆ ಬೇಕಾದ ಸಂಖ್ಯೆಯ ಶಾಸಕರು ನಮ್ಮೊಂದಿಗಿದ್ದಾರೆ. ಹೀಗಾಗಿ ಸರ್ಕಾರ ಪತನವಾಗುತ್ತದೆ ಎಂಬ ಬಿಜೆಪಿಯ ವಾದ ಸುಳ್ಳು ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿಗೆ ಎರಡು ಮೂರು ಬಾರಿ ಮುಖಭಂಗವಾಗಿದೆ. ಆದರೂ ಸರ್ಕಾರ ಬೀಳಿಸಲು ಪ್ರಜಾಪ್ರಭುತ್ವ ವಿರೋಧಿ ದಾರಿಗಳನ್ನು ಅನುಸರಿಸುತ್ತಿದೆ. ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ಅವರಿಗೆ ನಂಬಿಕೆ ಇಲ್ಲ ಎಂದು ಕಿಡಿ ಕಾರಿದರು.

ಮೋದಿ, ಷಾ ಆದಿಯಾಗಿ ಎಲ್ಲರೂ ಸರ್ಕಾರ ಅಸ್ಥಿರಕ್ಕೆ ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ರಾಜ್ಯ ನಾಯಕರಷ್ಟೇ ಇಲ್ಲ. ಕೇಂದ್ರ ನಾಯಕರೆಲ್ಲರೂ ಭಾಗಿಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಸಲುವಾಗಿ ಹೀಗೆ ಮಾಡುತ್ತಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಕಾಂಗ್ರೆಸ್​-ಜೆಡಿಎಸ್​ ಒಟ್ಟಾಗಿ ಲೋಕಸಭೇ ಚುನಾವಣೆ ಎದುರಿಸಿದರೆ ಬಿಜೆಪಿ ರಾಜ್ಯದಲ್ಲಿ ಮೂರರಿಂದ ನಾಲ್ಕು ಸ್ಥಾನಗಳನ್ನಷ್ಟೇ ಗೆಲ್ಲಲಿದೆ. ಇದು ಬಿಜೆಪಿಯೇ ಮಾಡಿರುವ ರಹಸ್ಯ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಹೀಗಾಗಿ ಲಜ್ಜೆಗೆಟ್ಟು ಸರ್ಕಾರವನ್ನು ಬೀಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.