ಕಾಂಗ್ರೆಸ್​ನಲ್ಲೀಗ ಪ್ರೆಷರ್ ಕುಕ್ಕರ್

<< ಸಂಪುಟ ಸೇರಲು ವೀರಾವೇಶ, ಸ್ಥಾನ ತಪ್ಪಿಸಲು ಹರಸಾಹಸ >>

ಬೆಂಗಳೂರು: ಭಿನ್ನಮತದ ಬೆಂಕಿಯನ್ನು ವರಿಷ್ಠರು ತಣ್ಣೀರೆರಚಿ ನಂದಿಸಿದ ಬಳಿಕ ಬೂದಿ ಮುಚ್ಚಿದ ಕೆಂಡದಂತಿದ್ದ ಕಾಂಗ್ರೆಸ್​ನೊಳಗಿನ ತುಮುಲ ಮತ್ತೆ ಕೈ ಸುಡಲಾರಂಭಿಸಿದೆ. ಸರ್ಕಾರದ ಮೇಲಿನ ಒತ್ತಡ ಕಡಿಮೆ ಮಾಡುವುದಕ್ಕಾಗಿ ಸಂಪುಟ ವಿಸ್ತರಣೆಗೆ ಕೈಹಾಕಿರುವ ಕಾಂಗ್ರೆಸ್ ನಾಯಕರ ಕೈಗಳೇ ನಡುಗಲಾರಂಭಿಸಿದೆ. ಬಿಜೆಪಿ ಕಣದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ವಿಧಾನಪರಿಷತ್​ನ ಮೂರು ಸ್ಥಾನಗಳಿಗೆ ಅವಿರೋಧ ಆಯ್ಕೆ ಖಚಿತವಾಗುತ್ತಿದ್ದಂತೆಯೇ ಸಂಪುಟ ವಿಸ್ತರಣೆಯನ್ನು ಅ.10ರೊಳಗೆ ಮಾಡಿ ಮುಗಿಸಲು ಕೈ ನಾಯಕರು ಚರ್ಚೆ ಆರಂಭಿಸಿದ್ದಾರೆ. ಆದರೆ ಎಷ್ಟು ಸ್ಥಾನ ಭರ್ತಿ ಮಾಡಬೇಕೆಂಬುದು ನಿರ್ಧಾರವಾಗಿಲ್ಲ. ಪೂರ್ಣ ಪ್ರಮಾಣದಲ್ಲಿ ವಿಸ್ತರಣೆ ನಡೆಯದಿದ್ದರೆ ಪುನಃ ಗೋಜಲಾಗುತ್ತದೆ ಎಂಬ ಸಿಎಂ ಕುಮಾರಸ್ವಾಮಿ ಸಲಹೆಯನ್ನು ಪರಿಗಣಿಸಿರುವ ಕಾಂಗ್ರೆಸ್ ನಾಯಕರು ಒಟ್ಟಾರೆ ನಿರ್ಧಾರವನ್ನು ಹೈಕಮಾಂಡ್​ಗೆ ಬಿಡಲು ನಿರ್ಧರಿಸಿದ್ದಾರೆ.

ಹೊಸ ಸಂಕಟ: ಜಾತಿ, ಪ್ರದೇಶವಾರು, ಹಿರಿತನ ಹೀಗೆ ಎಲ್ಲಾ ಆಯಾಮಗಳಲ್ಲಿ ಇರುವ ಆರು ಸ್ಥಾನ ಹಂಚಬೇಕೆಂಬ ಕಾಂಗ್ರೆಸ್ ರಾಜ್ಯ ನಾಯಕರ ಆಶಯ ಅಷ್ಟು ಸುಲಭವಾಗಿ ಈಡೇರುವ ಲಕ್ಷಣ ಕಾಣಿಸುತ್ತಿಲ್ಲ.

ಪಕ್ಷಕ್ಕೆ ಲಾಭವಾಗುವವರಿಗೆ ಸಚಿವ ಸ್ಥಾನ ಕೊಡಿ, ಹಳೆಯ ಸಂಪ್ರದಾಯ ಕೈಬಿಡಿ ಎಂಬ ಕೂಗು ಸಹ ಶಾಸಕಾಂಗ ಪಕ್ಷ ಸಭೆಯಲ್ಲಿ ವ್ಯಕ್ತವಾಗಿದೆ. ಈ ಕೂಗಿನ ಹಿಂದೆ ಮಾಜಿ ಸಚಿವರ ದಂಡಿದೆ ಎಂಬುದು ವಿಶೇಷ ಸಂಗತಿ.

ಸಂಪುಟ ಮತ್ತೆ ಮುಂದಕ್ಕೆ?: ಅಕ್ಟೋಬರ್ 3 ಅಥವಾ 4ರಂದೇ ಸಂಪುಟ ವಿಸ್ತರಣೆಯಾಗಬಹುದೆಂಬ ಖುಷಿಯಲ್ಲಿದ್ದ ಸಚಿವಾಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಅ. 2ರಂದು ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ನಿಶ್ಚಯವಾಗಿರುವ ಕಾರಣ ಸಂಪುಟ ವಿಸ್ತರಣೆ ಅಕ್ಟೋಬರ್ ಎರಡನೇ ವಾರಕ್ಕೆ ಮುಂದೂಡಲ್ಪಟ್ಟಿದೆ.

ಈ ಕುರಿತು ಪ್ರಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪಿತೃಪಕ್ಷ ನೋಡಿಕೊಂಡು ಸಂಪುಟ ವಿಸ್ತರಣೆ ಮಾಡಬೇಕಾಗುತ್ತದೆ, ನಮ್ಮ ಪಕ್ಷದಲ್ಲೂ ಜ್ಯೋತಿಷ್ಯ ನೋಡುವವರು ರೇವಣ್ಣನವರಿಗಿಂತ ಹೆಚ್ಚಾಗಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಮಂತ್ರಿ ಸ್ಥಾನಕ್ಕೆ ಲಾಬಿ

ಸಚಿವ ಸ್ಥಾನಾಕಾಂಕ್ಷಿಗಳು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ ಸುತ್ತ ಸುತ್ತಲಾರಂಭಿಸಿದ್ದಾರೆ. ಇನ್ನೊಂದೆಡೆ ಕೆಲವರಿಗೆ ಮಂತ್ರಿಗಿರಿ ತಪ್ಪಿಸುವುದಕ್ಕಾಗಿಯೇ ಮತ್ತೊಂದು ಪಡೆ ಹೊಸ ತಗಾದೆ ತೆಗೆದಿರುವುದು ಮುಖಂಡರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಅದರ ಬಗ್ಗೆ ಸಲಹೆ, ಸೂಚನೆ ನೀಡಿದ್ದೇವೆ. ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡದಂತೆ ತಿಳಿಸಿದ್ದೇವೆ, ಪಕ್ಷದ ವಿರುದ್ಧ ಯಾರೇ ಹೇಳಿಕೆ ನೀಡಿದರೂ ಕ್ರಮಕೈಗೊಳ್ಳುತ್ತೇವೆ.

| ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

 

ಯಾರಿಗೆ ಯಾರು ಬೇಡ?

  • ಡಿ.ಕೆ. ಶಿವಕುಮಾರ್​ಗೆ ಬಳ್ಳಾರಿ ಜಿಲ್ಲೆ ಉಸ್ತುವಾರಿ ತಪ್ಪಿಸಬೇಕೆಂಬ ಜಾರಕಿಹೊಳಿ ಸಹೋದರರ ಕೋರಿಕೆಗೆ ಪೂರಕವಾಗಿ ಆ ಜಿಲ್ಲೆಯಿಂದ ಒಬ್ಬರಿಗೆ ಸಚಿವ ಸ್ಥಾನ ಖಚಿತವಾಗಿದೆ.
  • ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಮಂತ್ರಿಯಾಗಲಿ ಎಂದು ಜಾರಕಿಹೊಳಿ ಬ್ರದರ್ಸ್ ಪಟ್ಟು ಹಿಡಿದರೆ, ನಾಗೇಂದ್ರ ವಿರುದ್ಧ ಸಂಡೂರು ಶಾಸಕ ತುಕಾರಾಂ ತಗಾದೆ ತೆಗೆದಿದ್ದಾರೆ.
  • ಸಚಿವಾಕಾಂಕ್ಷಿ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್್ಕ ಅವರು ಸಂಡೂರು ಶಾಸಕ ತುಕಾರಾಂಗೆ ವಿರೋಧ ವ್ಯಕ್ತಪಡಿಸಿದ್ದರೆ, ಪರಮೇಶ್ವರ್ ನಾಯ್್ಕ ವಿರುದ್ಧ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್್ಕ ಆಕ್ಷೇಪ ಎತ್ತಿದ್ದಾರೆ.
  • ಭೀಮಾ ನಾಯಕ್ ಹಾಗೂ ಹೊಸಪೇಟೆ ಶಾಸಕ ಆನಂದ್ ಸಿಂಗ್ ನಡುವೆ ಶಾಸಕಾಂಗ ಪಕ್ಷದ ಸಭೆಯಲ್ಲೇ ವಾಗ್ವಾದ ನಡೆದಿತ್ತು.
  • ವೀರಶೈವ ಲಿಂಗಾಯತ ಕೋಟಾದಲ್ಲಿ ಎಂ.ಬಿ ಪಾಟೀಲ್, ಸಂಗಮೇಶ, ಬಿ.ಸಿ. ಪಾಟೀಲ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಹಿರಿತನದ ಆಧಾರದಲ್ಲಿ ಎಚ್.ಕೆ. ಪಾಟೀಲ್ ಸಹ ಪ್ರಯತ್ನದಲ್ಲಿದ್ದಾರೆ.
  • ಕುರುಬ ಸಮುದಾಯದ ಕೋಟಾದಿಂದ ಕುಂದಗೋಳ ಶಾಸಕ ಸಿಎಸ್ ಶಿವಳ್ಳಿ ಅವರಿಗೆ ಅವಕಾಶ ಕೊಟ್ಟರೆ ತಾನು ಸುಮ್ಮನಿರೆನು ಎಂದು ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಗುಟುರು ಹಾಕಿದ್ದಾರೆ. ಎಂಟಿಬಿ ಪರ ಡಿಕೆಶಿ, ಶಿವಳ್ಳಿ ಪರ ಸಿದ್ದರಾಮಯ್ಯ ಬೆಂಬಲವಾಗಿದ್ದಾರೆ.
  • ಬೆಂಗಳೂರು ಕೋಟಾದಿಂದ ರಾಮಲಿಂಗಾರೆಡ್ಡಿ ಪ್ರಬಲ ಆಕಾಂಕ್ಷಿಯಾಗಿದ್ದು, ಇವರ ಜತೆ ಎಸ್.ಟಿ. ಸೋಮಶೇಖರ್ ಕೂಡ ರೇಸ್​ನಲ್ಲಿದ್ದಾರೆ
  • ಬೆಂಗಳೂರು ಕೋಟಾದಿಂದ ತಮಗೆ ಅವಕಾಶ ನೀಡದಿದ್ದರೆ ಮುಸ್ಲಿಂ ಕೋಟಾದಿಂದ ಅವಕಾಶ ಸಿಗಬೇಕೆಂದು ರೋಷನ್ ಬೇಗ್ ಕಡೆಯಿಂದ ಒತ್ತಡವಿದೆ. ಇದೇ ಕೋಟಾದಲ್ಲಿ ತನ್ವೀರ್ ಸೇಠ್ ಮತ್ತು ಎನ್.ಎ. ಹ್ಯಾರಿಸ್ ಸಹ ಪ್ರಯತ್ನದಲ್ಲಿದ್ದಾರೆ.

 

ಸರ್ಜಿಕಲ್ ಸ್ಟ್ರೈಕ್ ದಿನಾಚರಣೆಗೆ ವಿರೋಧ

ಬೆಂಗಳೂರು: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೆಲಕ್ಕೆ ನುಗ್ಗಿ ಭಾರತೀಯ ಸೇನಾಪಡೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ದಿನವನ್ನು ಕಾಲೇಜುಗಳಲ್ಲಿ ಆಚರಿಸಲು ಆದೇಶ ನೀಡುವ ಮೂಲಕ ಕೇಂದ್ರ ಸರ್ಕಾರ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಲು ಮುಂದಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಕೆ. ಚಂದ್ರಶೇಖರ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ಸೆ.29ರಂದು ಸರ್ಜಿಕಲ್ ಸ್ಟ್ರೈಕ್ ದಿನಾಚರಣೆ ಆಚರಿಸುವುದಾಗಿ ಘೊಷಣೆ ಮಾಡಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಆಚರಿಸಲು ಕರ್ನಾಟಕ ಸರ್ಕಾರ ಅವಕಾಶ ಮಾಡಿಕೊಡಬಾರದು ಎಂದು ಅವರು ಮನವಿ ಮಾಡಿದ್ದಾರೆ.