ಬಟ್ಟೆಗೆ ದಿಢೀರ್ ಹೊತ್ತಿಕೊಳ್ಳುವ ಬೆಂಕಿ!

ದೊಡ್ಡಕಣಗಾಲು ಗ್ರಾಮದಲ್ಲಿ ವಿಸ್ಮಯ *ಭಾನಾಮತಿ ಶಂಕೆ, ಆತಂಕದಲ್ಲಿ ಕುಟುಂಬ

ಆಲೂರು: ಇಲ್ಲೊಬ್ಬರ ಮನೆಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಇದು ಕುಟುಂಬ ಮಾತ್ರವಲ್ಲದೇ ಗ್ರಾಮಸ್ಥರನ್ನೂ ಆತಂಕಕ್ಕೆ ದೂಡಿದೆ. ಭಾನಾಮತಿ ಕಾಟವಿರಬಹುದೆಂಬ ಶಂಕೆಯೂ ಮೂಡಿದೆ.

ಹೌದು. ತಾಲೂಕಿನ ಕಸಬಾ ಹೋಬಳಿ ದೊಡ್ಡಕಣಗಾಲು ಗ್ರಾಮದ ಮೋಹನ್ ಎಂಬುವರ ಮನೆಯಲ್ಲಿ ಈ ವಿಸ್ಮಯ ಮತ್ತು ಆತಂಕಕಾರಿ ಘಟನೆ ಮರುಕಳಿಸುತ್ತಿದೆ. ಇದ್ದಕ್ಕಿದ್ದಂತೆ ಬಟ್ಟೆಗೆ ಬೆಂಕಿ ಹೊತ್ತಿಕೊಂಡು ಗಾಬರಿ ಹುಟ್ಟಿಸುತ್ತಿದೆ.

ಮಂಗಳವಾರ ಮೋಹನ್ ಅವರ ಮಗಳು ಅಂಕಿತಾ ಎಂದಿನಂತೆ ಶಾಲಾ ಸಮವಸ್ತ್ರವನ್ನು ಧರಿಸುತ್ತಿದ್ದಾಗ ಇದ್ದಕ್ಕಿದಂತೆ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಗಾಬರಿಗೊಂಡ ಅಂಕಿತಾ ಕೂಗಿಕೊಂಡಿದ್ದಾಳೆ. ಮನೆಯವರು ಆಗಮಿಸಿ ಬೆಂಕಿ ನಂದಿಸಿದರು.

ಕೆಲ ಹೊತ್ತಿನಲ್ಲೇ ಅಂಕಿತಾ ಒಬ್ಬಳೇ ಇದ್ದ ವೇಳೆ ಮತ್ತೆ ಬೆಂಕಿ ಹೊತ್ತಿಕೊಂಡಿದೆ. ನಂತರ ಅಂಕಿತಾ ಮನೆಯಲ್ಲಿ ಒಬ್ಬಳೆ ಇದ್ದಾಗ ಹೀಗಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಲು ಆಕೆಯನ್ನು ಒಂದು ಕೊಠಡಿಯಲ್ಲಿ ಬಿಟ್ಟಿದ್ದರು. ಆಗ ಕೊಠಡಿಯಲ್ಲಿದ್ದ ಬಟ್ಟೆಗಳಿಗೆ ಬೆಂಕಿ ಹೊತ್ತಿಕೊಂಡಿತು. ನಂತರ ಆಕೆಯ ದೊಡ್ಡಪ್ಪನ ಮನೆಗೆ ಕರೆದುಕೊಂಡು ಹೋಗಿ ಒಂಟಿಯಾಗಿ ಬಿಟ್ಟರು. ಆ ಸಂದರ್ಭದಲ್ಲಿ ಮನೆಯ ಬಾಗಿಲಿಗೆ ಬೆಂಕಿ ಹೊತ್ತಿಕೊಂಡಿದೆ.

ಘಟನೆಯಿಂದ ಮನೆಯವರು ಹಾಗೂ ಗ್ರಾಮಸ್ಥರು ಆತಂಕಕ್ಕೀಡಾಗಿದ್ದು, ಕೆಲವರು ಭಾನಾಮತಿಯ ಪ್ರಭಾವ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು ದೆವ್ವ, ಪಿಶಾಚಿಗಳ ಕಾಟವಿರಬಹುದೆಂದು ಹೇಳುತ್ತಿದ್ದಾರೆ. ಅಂಕಿತಾ ಭಯಭೀತಳಾಗಿದ್ದು ಪಾಲಕರು ಏನು ಮಾಡಬೇಕೆಂದು ತಿಳಿಯದೆ ಪರದಾಡುತ್ತಿದ್ದಾರೆ.