ಕಾಲ್ಗೆಜ್ಜೆ ಸದ್ದು ಹುಡುಗರ ಚಿತ್ತ ಹಾಳು ಮಾಡುತ್ತದೆ ಎಂದೇಳಿ ವಿವಾದಕ್ಕೆ ಸಿಲುಕಿದ ತ.ನಾಡು ಸಚಿವ

ಚೆನ್ನೈ: ಹುಡುಗಿಯರ ಕಾಲ್ಗೆಜ್ಜೆ ಸದ್ದು ಹುಡುಗರ ಚಿತ್ತ ಹಾಳು ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ತಮಿಳುನಾಡಿನ ಸಚಿವ ಕೆ.ಎ. ಸೈಂಗೊಟ್ಟಯ್ಯನ್​ ಅವರು ಈಗ ವಿವಾದಕ್ಕೆ ಗುರಿಯಾಗಿದ್ದಾರೆ.

ತಮಿಳುನಾಡಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಕಾಲ್ಗೆಜ್ಜೆ, ಉಂಗುರ ಧರಿಸುವುದು, ಹೂ ಮುಡಿದು ಬರುವುದನ್ನು ಸರ್ಕಾರ ನಿಷೇಧ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ವಿವರಣೆ ನೀಡಲು ಹೋದ ಸೈಂಗೊಟ್ಟಯನ್​ ಬೇಡದ ಸಮಸ್ಯೆಗೆ ತುತ್ತಾಗಿದ್ದಾರೆ.

ನಿಷೇಧದ ಕುರಿತು ಮಾತನಾಡಿದ ಸಚಿವ ಮೊದಲಿಗೆ “ಅಂಥ ಯಾವುದೇ ಬೆಳವಣಿಗೆ ನನ್ನ ಗಮನಕ್ಕೆ ಬಂದಿಲ್ಲ,” ಎಂದರು. ಅಷ್ಟಕ್ಕೇ ಸಮ್ಮನಾಗದ ಅವರು, “ಉಂಗುರಗಳು ಕಳೆದು ಹೋಗಬಹುದು. ಹೂ ಮುಡಿಯುವುದನ್ನು ನಿಷೇಧ ಮಾಡಬೇಕಿಲ್ಲ. ಆದರೆ, ಹುಡುಗಿಯರ ಕಾಲ್ಗೆಜ್ಜೆ ಸದ್ದಿನಿಂದಾಗಿ ಹುಡುಗರು ವಿಚಲಿತರಾಗುತ್ತಾರೆ. ಇದರಿಂದ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ,” ಎಂದು ಹೇಳಿದರು.