ತೇರದಾಳ: ಕೃಷ್ಣಾ ತೀರದ ಹಳಿಂಗಳಿ ಗ್ರಾಮಕ್ಕೆ ಬುಧವಾರ ಶಾಸಕ ಸಿದ್ದು ಸವದಿ ಭೇಟಿ ನೀಡಿ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿದರು.
ಗ್ರಾಮದ(ಗುಳ್ಳಿಮಳಿ ಪ್ರದೇಶ ನಿವಾಸಿಗಳು) ಸಂತ್ರಸ್ತರು ಶಾಸಕರ ಮುಂದೆ ಸಮಸ್ಯೆಗಳನ್ನು ತೋಡಿಕೊಂಡು, 19 ವರ್ಷಗಳಿಂದ ಪ್ರವಾಹ ಭೀತಿ ಎದುರಿಸುತ್ತಿದ್ದೇವೆ. ಶಾಶ್ವತ ಪರಿಹಾರಕ್ಕೆ ಜಾಗ ಕೊಡಬೇಕು. ಕಾಳಜಿ ಕೇಂದ್ರಗಳ ಜಾಗದಲ್ಲೇ ಮೇವು ನೀಡಬೇಕೆಂದು ಆಗ್ರಹಿಸಿದರು.
ಮುಖಂಡ ರಾಜು ನಂದೆಪ್ಪನವರ ಮಾತನಾಡಿ, 2005 ರಿಂದ ಪ್ರವಾಹ ಭೀತಿಯಲ್ಲಿರುವ ಹಳಿಂಗಳಿ ಗ್ರಾಮಕ್ಕೆ ಮುಳುಗಡೆ ಘೋಷಣೆಗಾಗಿ ನಿರಂತರ ಒತ್ತಾಯಿಸುತ್ತಿದ್ದೇವೆ. ಕಾರಣ ನೀವೂ ಸರ್ಕಾರ ಮಟ್ಟದಲ್ಲಿ ಧ್ವನಿ ಎತ್ತಿ, ಹಳಿಂಗಳಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಸವದಿ, 2009 ರಿಂದ 2019 ಪ್ರಸ್ತುತವರೆಗೂ ನಾನೇ ಆಡಳಿತದಲ್ಲಿದ್ದು, ಹಳಿಂಗಳಿ ಗ್ರಾಮದ ಪ್ರವಾಹ ಪೀಡಿತ ಗುಳ್ಳಿಮಳ್ಳಿ ವಸತಿ ಜನರಿಗೆ ಗ್ರಾಪಂ ವ್ಯಾಪ್ತಿಯಲ್ಲೇ 32 ಎಕರೆ ಜಾಗವನ್ನು ಅಂದಾಜು 470 ಸಂತ್ರಸ್ತರಿಗೆ ಕೊಡಲಾಗಿತ್ತು. ಆದರೆ, ನೀವು ಬೆನ್ನುಬಿದ್ದು ಲೇಔಟ್ ಹಾಕಿಸಿಕೊಂಡು ಶಾಶ್ವತ ನೆಲ ಕಲ್ಪಿಸಿಕೊಂಡಿಲ್ಲ ಎಂದರು.
ಬಳಿಕ ಸ್ಥಳದಲ್ಲಿದ್ದ ಪಿಡಿಒ ತೇಜಸ್ವಿನಿ ಮರೆಗುದ್ದಿ ಅವರನ್ನು ಕರೆದು, ಸದರಿ ಜಾಗ ಗುರುತಿಸಿ ಲೇಔಟ್ ಹಾಕಿಸಿಕೊಡಬೇಕು. ಅತಿಕ್ರಮಣವಾಗಿದ್ದರೂ ಅದನ್ನು ತೆರವುಗೊಳಿಸಲು ಸೂಚಿಸಿದರು. ಈ ಕುರಿತು ಉಪಮುಖ್ಯಮಂತ್ರಿ ಡಿಕೆಶಿ ಅವರೊಂದಿಗೆ ಸಭೆಯಲ್ಲೂ ಚರ್ಚೆ ಆಗಿದೆ. ಅಸ್ಕಿ, ಕುಲಹಳ್ಳಿ ಗ್ರಾಮಗಳಿಗೂ ಇನ್ನೂ ಜಾಗ ಕೊಟ್ಟಿಲ್ಲ. ತಮದಡ್ಡಿಗೂ(ಆರ್.ಸಿ) ತೊಂದರೆಯಾಗಿದೆ ಎಂದರು.
ಗ್ರಾಮದಲ್ಲಿ ಅಂದಾಜು 2700ರಷ್ಟು ದನಕರುಗಳಿದ್ದು, 51 ಟನ್ ಮೇವಿನ ಅಗತ್ಯವಿದೆ. ಆ ಪೈಕಿ ನಿತ್ಯ ಅಂದಾಜು 30 ಟನ್ ಮೇವು ಪೂರೈಕೆಯಾಗುತ್ತಿದೆ ಎಂದು ನೋಡಲ್ ಅಧಿಕಾರಿ ಚೇತನ ಅಬ್ಬಿಗೇರಿ ತಿಳಿಸಿದರು.
ಗ್ರಾಮದ ಮಹಾವೀರ ಶಾಲೆ ಆವರಣದ ಹಿಂಭಾಗದ ಕಾಳಜಿ ಕೇಂದ್ರದಲ್ಲಿ 40 ಕುಟುಂಬಗಳು ಸ್ಥಳಾಂತರಗೊಂಡಿದ್ದು, 160 ರಷ್ಟು ಜನರು ವಾಸವಾಗಿದ್ದಾರೆ. ಊಟೋಪಚಾರ, ಆರೋಗ್ಯ ಚಿಕಿತ್ಸೆ ಸೇರಿ ಉತ್ತಮ ಸೌಲಭ್ಯವಿದೆ ಎಂದು ಸಂತ್ರಸ್ತರು ತಿಳಿಸಿದರು. ಹಳಿಂಗಳಿ, ತಮದಡ್ಡಿ ಗ್ರಾಮದಲ್ಲಿ ನೆರೆ ಭೀತಿ ಮುಂದುವರಿದಿದ್ದು, ಗುರುವಾರ ಹಿಪ್ಪರಗಿ ಜಲಾಶಯದಲ್ಲಿ 2,91,697 ಕ್ಯೂಸೆಕ್ ನೀರಿನ ಹರಿವಿದೆ. ಬುಧವಾರ 2,96,911 ಕ್ಯೂಸೆಕ್‌ಗೆ ಹೋಲಿಸಿದರೆ 5 ಸಾವಿರ ಕ್ಯೂಸೆಕ್‌ನಷ್ಟು ಒಳಹರಿವು ಕಡಿಮೆಯಾಗಿದೆ. ತಮದಡ್ಡಿ ಗ್ರಾಮದಲ್ಲಿ ಗುರುವಾರ ಮೇವು ವಿತರಣೆಯಾಗಿದ್ದು, ಬುಧವಾರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಈ ಕುರಿತಂತೆ ‘ವಿಜಯವಾಣಿ’ಯಲ್ಲಿ ತಮದಡ್ಡಿ ಗ್ರಾಮದಲ್ಲಿ ಮೇವಿಗಾಗಿ ಆಕ್ರೋಶ’ ಎಂಬ ತಲೆಬರಹದಡಿ ಸುದ್ದಿ ಪ್ರಕಟಿಸಲಾಗಿತ್ತು. ಪತ್ರಿಕೆ ಕಳಕಳಿಗೆ ನೆರೆ ಸಂತ್ರಸ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.