ಪೊಲೀಸ್ ಸರ್ಪಗಾವಲಿನಲ್ಲಿ ತೆರವು ಕಾರ್ಯಾಚರಣೆ

ಮೈಸೂರು: ಸರ್ಕಾರಿ ಜಾಗದಲ್ಲಿನ ಅಕ್ರಮ ಕಟ್ಟಡಗಳ ತೆರವು ಪ್ರಕ್ರಿಯೆ ಮುಂದುವರೆಸಿರುವ ಜಿಲ್ಲಾಡಳಿತ, ಬುಧವಾರ ತಾಲೂಕಿನ ಮದ್ದೂರು ಕಲ್ಲಹಳ್ಳಿ ಗ್ರಾಮದಲ್ಲಿ ತೆರವು ಕಾರ್ಯಾಚರಣೆ ನಡೆಸಿತು.

ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದ ಗ್ರಾಮದ ಕೆರೆಯ 25 ಎಕರೆಯಲ್ಲಿ ಅಕ್ರಮವಾಗಿ ವ್ಯವಸಾಯ ಮಾಡಲು ಸುತ್ತ ಹಾಕಿದ್ದ ತಂತಿಬೇಲಿಯನ್ನು ಉಪ ತಹಸೀಲ್ದಾರ್ ಕುಬೇರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಆ ಮೂಲಕ ಕೋಟ್ಯಂತರ ರೂ.ಮೌಲ್ಯದ ಜಾಗವನ್ನು ಉಳಿಸಲಾಯಿತು.

1960ರಲ್ಲಿ ಸಣ್ಣ ನೀರಾವರಿ ಇಲಾಖೆಯು ಗ್ರಾಮದ ಸರ್ವೇ ನಂ.188, 189,190 ಸೇರಿದಂತೆ ಇತರೆ ಸರ್ವೆ ನಂಬರ್‌ಗಳ 121 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಿಸಲು ಮುಂದಾಗಿತ್ತು. ಆದರೆ, ಸರಿಯಾಗಿ ನೀರಿನ ಮೂಲ ಇಲ್ಲದ ಕಾರಣ ಕೆರೆ ನಿರ್ಮಾಣದಿಂದ ಹಿಂದೆ ಸರಿಯಿತು. ಬಳಿಕ ಆ ಸ್ಥಳದಲ್ಲಿ ಅನೇಕರು ಅಕ್ರಮವಾಗಿ ಪ್ರವೇಶಿಸಿ ವ್ಯವಸಾಯ ಮಾಡುತ್ತಿದ್ದರು. ಈ ಸಂಬಂಧ ಜಿಲ್ಲಾಡಳಿತವು ಅವರಿಗೆಲ್ಲ ನೋಟಿಸ್ ನೀಡಿದರೂ, ಪ್ರಯೋಜನವಾಗಿರಲಿಲ್ಲ. ಇನ್ನು ಮೂರು ವರ್ಷದ ಹಿಂದೆ ತೆರವು ಕಾರ್ಯಾಚರಣೆಗೆ ಹೋಗಿದ್ದ ಅಧಿಕಾರಿಗಳಿಗೆ ಅಕ್ರಮ ಒತ್ತುವರಿ ಮಾಡಿಕೊಂಡಿದ್ದವರು ಧಮ್ಕಿ ಹಾಕಿ ಕಳುಹಿಸಿದ್ದರು.

ಹೀಗಾಗಿ, ಬುಧವಾರ ಯಾವುದೇ ಅಹಿತಕರ ಘಟನೆ ನಡೆಯದಂತೆ 100 ಪೊಲೀಸ್ ಸಿಬ್ಬಂದಿಯ ಸರ್ಪಗಾವಲಿನಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಸದರಿ ಜಾಗವನ್ನು ಸಂಬಂಧಪಟ್ಟ ಇಲಾಖೆಗೆ ನೀಡಲಾಗುತ್ತದೆ ಎಂದು ತಹಸೀಲ್ದಾರ್ ರಮೇಶ್ ಬಾಬು ‘ವಿಜಯವಾಣಿ’ಗೆ ತಿಳಿಸಿದರು.

Leave a Reply

Your email address will not be published. Required fields are marked *